Friday, 20th September 2024

ಮೂರನೇ ಅಲೆಯ ಮುನ್ನೆಚ್ಚರಿಕೆ ಇರಲೇಬೇಕು

ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ದೇಶವೇ ನಿರಾಳವಾಗಿತ್ತು. ಇದೀಗ ಮತ್ತೇ ದೇಶದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಮೂರನೇ ಅಲೆ ದೇಶಕ್ಕೆ ಅಪ್ಪಳಿಸುತ್ತಿರುವ ಮುನ್ಸೂಚನೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅದರಲ್ಲೂ ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ದೇಶದ ಅರ್ಧದಷ್ಟು ಪ್ರಕರಣ ಅಂದರೆ ೨೨ ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿರುವುದು ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ರಾಜ್ಯದ ಗಡಿಯನ್ನು ಹಂಚಿ ಕೊಂಡಿರುವ ಕೇರಳದಲ್ಲಿ ಆಗುತ್ತಿರುವ ಕರೋನಾ ಸೋಟ ಸಹಜವಾಗಿ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಮೂರನೇ ಅಲೆಗೆ ಸಜ್ಜಾಗಬೇಕಿದ್ದ ನಮ್ಮ ರಾಜಕಾರಣಿಗಳು ಮುಖ್ಯಮಂತ್ರಿ ಬದಲಾವಣೆ, ಸಂಪುಟ ರಚನೆಯ ಕಸರತ್ತಿನಲ್ಲಿ ಮುಳುಗಿದ್ದು, ಇದೀಗ ಬಂದಿರುವ ಹೊಸ ಮುಖ್ಯಮಂತ್ರಿಗೆ ಮೂರನೇ ಅಲೆಯ ಸ್ವಾಗತ ದೊರೆ ಯುವುದು ಶತಸಿದ್ಧ. ಅದರಲ್ಲೂ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ.

ಇದರ ಜತೆಗೆ ಕರೋನಾ ಮೂರನೇ ಅಲೆಯ ಆರ್ಭಟ ಶುರುವಾದರೆ ರಾಜ್ಯದ ಜನತೆ ಜರ್ಜರಿತರಾಗುವುದು ಶತಸಿದ್ಧ. ಹೀಗಾಗಿ, ಸಂಪುಟ ವಿಸ್ತರಣೆ ಸರ್ಕಸ್‌ಗೆ ಬೇಗ ವಿರಾಮ ಹಾಕಿ, ಮೂರನೇ ಅಲೆಗೆ ಸಜ್ಜಾಗಬೇಕು. ಆಡಳಿತ ವ್ಯವಸ್ಥೆಯನ್ನು, ವೈದ್ಯಕೀಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುವ ಮೂಲಕ ಮುಂಜಾಗ್ರತೆ ವಹಿಸವೇಕು. ಆಗ ಮಾತ್ರ ಕರೋನಾ ಮೂರನೇ ಅಲೆ ಯನ್ನು ತಡೆಯಲು ಸಾಧ್ಯವಾಗುತ್ತದೆ.

ಇಲ್ಲದಿದ್ದರೆ, ಕೇರಳದ ಸ್ಥಿತಿಯೇ ಕರ್ನಾಟಕದಲ್ಲಿ ನಿರ್ಮಾಣ ವಾಗಬಹುದು. ಈಗಾಗಲೇ ಎರಡನೇ ಅಲೆಯ ಭೀಕರತೆಯನ್ನು ಕಂಡಿರುವ ಕರ್ನಾಟಕ, ಮೂರನೇ ಅಲೆಗೆ ಸಜ್ಜಾಗಬೇಕಿದೆ. ಎರಡನೇ ಅಲೆಯ ತನ್ನ ಆಡಳಿತ ವೈಫಲ್ಯ ಅನುಭವಿಸಿದ ರಾಜ್ಯ ಸರಕಾರ ಮೂರನೇ ಅಲೆಯನ್ನಾದರೂ ಸಮರ್ಥವಾಗಿ ನಿಭಾಯಿಸಲು ಮುಂದಾಗಬೇಕಿದೆ.