Monday, 16th September 2024

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ

ಈ ವರ್ಷ ಮುಂಗಾರು ಮಳೆ ನಿರಂತರವಾಗಿ ಸುರಿದ ಕಾರಣ ಬಹುತೇಕ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ರಾಜ್ಯದ ಅತಿ ದೊಡ್ಡ ಜಲಾಶಯ ಎಂಬ ಹಿರಿಮೆಯ ತುಂಗಭದ್ರಾ ಜಲಾಶಯವೂ ತುಂಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿತ್ತು. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ೧೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಬಳ್ಳಾರಿ, ರಾಯಚೂರು, ಗಂಗಾವತಿ, ಸಿರುಗುಪ್ಪ, ಸಿಂಧನೂರು ಅನಂತಪುರ, ಕರ್ನೂಲು, ಮೆಹಬೂಬ್‌ನಗರ ಮುಂತಾದ ಎರಡೂ ರಾಜ್ಯಗಳ ಸುಮಾರು ೧೮ ಲಕ್ಷ ಎಕರೆ ಜಮೀನಿನಲ್ಲಿ ಭತ್ತ, ಕಬ್ಬು, ಬಾಳೆ ಬೆಳೆಯುತ್ತಿದ್ದ ಲಕ್ಷಾಂತರ ರೈತರು ಈ ಬಾರಿ ಮೂರು ಬೆಳೆಗಳಿಗೆ ನೀರು ಸಿಗುವ ಖುಷಿಯಲ್ಲಿದ್ದರು. ಆದರೆ ಇದೀಗ ತುಂಗಭದ್ರಾ ಅಣೆಕಟ್ಟೆಯ ೧೯ನೇ ಗೇಟ್ ಲಿಂಕ್ ಮುರಿದ ಸುದ್ದಿಯಿಂದ ಈ ಭಾಗದ ಜನರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ.

ಕೆಆರ್‌ಎಸ್‌ಗಿಂತ ಸುಮಾರು ಎರಡೂವರೆ ಪಟ್ಟು ದೊಡ್ಡದಾದ ತುಂಗಭದ್ರಾ ಅಣೆಕಟ್ಟೆಯ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ಸುಮಾರು ೧೩೨ ಟಿಎಂಸಿ ಅಡಿ. ಈಗ ಸರಿ ಸುಮಾರು ೩೦ ಅಡಿಗ ಳಷ್ಟು ಹೂಳು ತುಂಬಿರುವುದರಿಂದ ಗರಿಷ್ಠ ಸಾಮರ್ಥ್ಯ ೧೦೫ ಅಡಿಗಳೆಂದು ಅಂದಾಜಿಸಲಾಗಿದೆ. ೬೫ ಟಿಎಂಸಿ ಅಡಿ ನೀರು ಖಾಲಿ ಮಾಡಿದರೆ ಕುಡಿಯುವ ನೀರಿಗೂ ತತ್ವಾರ ಎದುರಾಗಬಹುದು. ಕಳೆದ ವರ್ಷ ಬರದ ನೆರಳಿನಲ್ಲಿ ನರಳಿದ ಭತ್ತದ ಕಣಜಗಳು ತುಂಗ ಭದ್ರಾ ನೀರಾವರಿ ನಿಗಮದ ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯದ ಕಾರಣದಿಂದ ಈ ವರ್ಷವೂ ವರ್ಷಪೂರ್ತಿ ನರಳಬೇಕಾ ಗಿದೆ. ಬೇಸಿಗೆಯಲ್ಲಿ ಜಲಾಶಯದ ಗೇಟುಗಳನ್ನು ಪರೀಕ್ಷಿಸಿ ಸುಸ್ಥಿತಿಯನ್ನು ಖಾತರಿಪಡಿಸಿಕೊಳ್ಳುವುದು ಅಧಿಕಾರಿಗಳ ಕೆಲಸ. ಆದರೆ ರಾಜಕೀಯ ನಾಯಕರ ಆತಿಥ್ಯಕ್ಕೆ ಆತುರ ತೋರುವ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸಲು ಸಮಯ, ವ್ಯವಧಾನ ಇರಲಿಲ್ಲವೇನೋ ? ಈ ಹಿಂದೆಯೂ ಸಹ ಡ್ಯಾಂ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಮುರಿದು ಅಪಾರ ಪ್ರಮಾಣದ ನೀರು ನದಿಪಾತ್ರಕ್ಕೆ ಹರಿದು ಹೋಗಿತ್ತು. ಆಗಲೂ ಸಹ ಗೇಟ್ ದುರಸ್ತಿಗೆ ನೀರಾವರಿ ತಜ್ಞರ ತಂಡ ಹರಸಾಹಸ ಮಾಡಿದ್ದರು.

ಈಗ ಮುಖ್ಯ ಕ್ರಸ್ಟ್‌ಗೇಟ್ ಚೈನ್ ಕಟ್ ಆಗಿರುವುದು ಆತಂಕದ ವಿಚಾರ. ಕ್ರಿಮಿನಲ್ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲ ಜಲಾಶಯಗಳ ೭೦ಕ್ಕೂ ಹೆಚ್ಚು ಹಳೆಯ ಗೇಟು ಬದಲಿಸಲು ಕ್ರಮ ಕೈಗೊಳ್ಳಬೇಕು.

Leave a Reply

Your email address will not be published. Required fields are marked *