Monday, 16th September 2024

ಗಡಿ ವಿಷಯದಲ್ಲಿ ಒಗ್ಗಟ್ಟು ಇರಲಿ

ಕರ್ನಾಟಕದಲ್ಲಿ ಆಗ್ಗಾಗೆ ಕೇಳಿ ಬರುವ ಸಾಮಾನ್ಯ ವಿವಾದಗಳೆಂದರೆ, ತಮಿಳುನಾಡು ಭಾಗದಲ್ಲಿ ಕಾವೇರಿ ನೀರು ಹಂಚಿಕೆ ವಿಚಾರ ಹಾಗೂ ಮಹಾರಾಷ್ಟ್ರದೊಂದಿಗಿನ ಗಡಿ ಹಂಚಿಕೆ.

ತಮಿಳುನಾಡು, ಆಂಧ್ರಪ್ರದೇಶ ಗೋವಾ ಹಾಗೂ ಮಹಾರಾಷ್ಟ್ರದೊಂದಿಗಿನ ನೀರು ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ವಿವಾದ ಪಡೆಯುವುದಿಲ್ಲ. ಆದರೆ ಗಡಿ ವಿಚಾರದಲ್ಲಿ ಅದರಲ್ಲಿಯೂ ಶಿವಸೇನೆ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳಗಾವಿಯಲ್ಲಿ ಕ್ಯಾತೆ ಶುರುವಾಗುತ್ತದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆಯವರು ಭಾನುವಾರ ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಶಕ್ಕೆ ಪಡೆಯಬೇಕು’ ಎನ್ನುವ ಹೇಳಿಕೆ ನಿನ್ನೆ ಮೊನ್ನೆಯದ್ದಲ್ಲ.

ಆದರೆ ಮುಖ್ಯಮಂತ್ರಿಯಾಗಿ ಅವರು ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ. ಈ ವಿಷಯದಲ್ಲಿ ಉದ್ಧವ್ ಠಾಕ್ರೆ ಅವರ ತಪ್ಪು ಎಷ್ಟಿದೆಯೋ ಅಷ್ಟೇ ತಪ್ಪನ್ನು ನಮ್ಮ ರಾಜಕಾರಣಿಗಳು ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವು ಜನಪ್ರತಿನಿಧಿಗಳು ಗಡಿ ವಿವಾದ ಬಂದ ಸಮಯದಲ್ಲಿ ಇಬ್ಬಗೆಯ ನೀತಿ ಅನುಸರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಬೆಂಗಳೂರಿನ ವಿಧಾನಸೌಧದ ಮುಂದೆ ಮಾತನಾಡುವಾಗ ಕನ್ನಡ ಗಡಿ-ಜಲ-ಭಾಷೆ ಎಂದು ಮಾತನಾಡುವವರು, ಬೆಳಗಾವಿಗೆ ಹೋಗುತ್ತಿದ್ದಂತೆ, ಮರಾಠಿ ಭಾಷೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಾರೆ.

ಭಾಷೆಯಾಗಿ ಮರಾಠಿಯನ್ನಾಗಲಿ, ಸಮುದಾಯವಾಗಿ ಮರಾಠಿಗರನ್ನು ಓಲೈಸಿಕೊಳ್ಳುವದರಲ್ಲಿ ಯಾವ ತಪ್ಪಿಲ್ಲ. ಆದರೆ ರಾಜ್ಯದ ಗಡಿ ವಿಷಯದಲ್ಲಿಯೂ ರಾಜಕೀಯ ಬೆರೆಸುವುದು ಸರಿಯಲ್ಲ.ಭಾನುವಾರ ವಿವಾದ ಸೃಷ್ಟಿಯಾದ ಬಳಿಕ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿ ಗೀತೆಯನ್ನು ಹಾಕಿದರೂ, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ
ಶಶಿಕಲಾ ಜೊಲ್ಲೆ ಅವರು, ಇದೊಂದು ಸಾಮಾನ್ಯ ಪ್ರಕ್ರಿಯೆ ಎನ್ನುವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಭಾಷೆಯಾಗಿ ಮರಾಠಿಯಲ್ಲ ಯಾವುದೇ ಭಾಷೆಯನ್ನಾದರೂ ಒಪ್ಪಿಕೊಳ್ಳೋಣ. ಅಂದ ಮಾತ್ರಕ್ಕೆ ಕನ್ನಡ ಭಾಷೆ-ಗಡಿ-ಜಲದ ಹಿತಾಸಕ್ತಿಯನ್ನು ಅದುಮಿಟ್ಟು ಇನ್ನೊಂದು ಭಾಷೆಯನ್ನು ಒಪ್ಪಿಕೊಳ್ಳಬೇಕೆಂದಿಲ್ಲ. ಈ ವಿಷಯದಲ್ಲಿ ರಾಜ್ಯದ ಜನಪ್ರತಿನಿಧಿ ಗಳು ಒಂದಾಗಬೇಕಿದೆ.

Leave a Reply

Your email address will not be published. Required fields are marked *