Monday, 16th September 2024

ಅಸಮಂಜಸ ಹೇಳಿಕೆ

ಮಹಾರಾಷ್ಟ್ರದ ಶಿವಸೇನಾ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ನೀಡಿರುವ ಹೇಳಿಕೆಯಿಂದ ಇದೀಗ
ಮತ್ತೊಮ್ಮೆ ವಿವಾದ ಸೃಷ್ಟಿಯಾಗಿದೆ.

ಜೈಶ್ರೀರಾಮ್ ಎಂಬುದು ರಾಜಕೀಯ ಪದವಲ್ಲ ಎಂಬ ಇವರ ಹೇಳಿಕೆ ವಾದ – ವಿವಾದಗಳಿಗೆ ಕಾರಣವಾಗಿದೆ. ಈ ಹೇಳಿಕೆ
ಅವಹೇಳನಕಾರಿಯಲ್ಲದಿದ್ದರೂ, ರಾಜಕೀಯ ಕಾರಣಗಳಿಗಾಗಿ ದೇವರ ಹೆಸರನ್ನು ಬಳಸಿಕೊಳ್ಳುವ ನಡೆ ಸರಿಯಲ್ಲ. ಕಾರ್ಯಕ್ರಮ ವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡುವ ವೇಳೆ ಕೆಲವರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.

ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಕಾರಣದಿಂದಾಗಿ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ. ಜೈ ಶ್ರೀರಾಮ್ ಎಂಬ ಘೋಷಣೆ ಕೂಗುವುದನ್ನು ತಪ್ಪೆನ್ನಲಾಗದು. ಆದರೆ ಇಂಥ ಘಟನೆಗಳ ಹೆಸರಿನಲ್ಲಿ ಮತ್ತಷ್ಟು ಹೇಳಿಕೆಗಳನ್ನು ನೀಡಿ ವಿವಾದ ಗಳನ್ನು ಸೃಷ್ಟಿಸುವ ಬೆಳವಣಿಗೆ ಸಮಂಜಸವಲ್ಲ. ದೇಶದ ಅಸಂಖ್ಯಾತ ಹಿಂದುಗಳ ಭಾವನಾತ್ಮಕ ಸಂಗತಿಯಾಗಿದ್ದ ರಾಮ ಜನ್ಮಭೂಮಿ ವಿವಾದ ಈಗಷ್ಟೇ ಬಗೆಹರಿದಿದೆ. ಹಲವಾರು ವರ್ಷಗಳಿಂದ ವಿವಾದಿತ ಸ್ಥಳವಾಗಿ ಎರಡು ಧರ್ಮಗಳ ನಡುವೆ ಬಿರುಕು ಉಂಟುಮಾಡಿದ್ದ ಅಯೋಧ್ಯೆ ವಿವಾದ ಶಾಂತಿಯುತವಾಗಿ ಬಗೆಹರಿದದ್ದು ಇಡೀ ದೇಶದ ಪಾಲಿಗೆ ಉತ್ತಮವಾದ ಬೆಳವಣಿಗೆ.

ಹಲವಾರು ಅಡೆತಡೆಗಳಿಂದ ಮುಕ್ತವಾಗಿ ಮಂದಿರ ನಿರ್ಮಾಣದ ಪ್ರಕ್ರಿಯೆ ಮೊದಲ ಹಂತವನ್ನು ಪೂರ್ಣಗೊಳಿಸಿದೆ. ನಿರ್ಮಾಣ ಕಾರ್ಯ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದೆ. ಇಂಥ ವೇಳೆಯಲ್ಲಿ ಪದೇ ಪದೆ ಶ್ರೀರಾಮ ದೇವರ ಹೆಸರನ್ನು ರಾಜಕೀಯ ಕಾರಣ ಗಳಿಗಾಗಿ ಪ್ರಸ್ತಾಪಿಸುವ ನಡೆ ಅಸಮಂಜಸವಾದದ್ದು

Leave a Reply

Your email address will not be published. Required fields are marked *