ಬರೋಬ್ಬರಿ ೨೩ ವರ್ಷಗಳ ಕಾಲ ಟೆನಿಸ್ ಅಭಿಮಾನಿಗಳಿಗೆ ಆಕ್ರಮಣಕಾರಿ ಆಟದ ರಸದೌತಣ ಬಡಿಸಿದ, ಕೋಟ್ಯಂತರ ಟೆನಿಸ್
ಪ್ರಿಯರ ಹೃದಯ ಗೆದ್ದ ಸ್ಪೇನ್ನ ಟೆನಿಸ್ ದೊರೆ, ರಾಫೆಲ್ ನಡಾಲ್ ತಮ್ಮ ವರ್ಣರಂಜಿತ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಡೇವಿಡ್ ಕಪ್
ಕ್ವಾರ್ಟರ್ ಫೈನಲಿನ ವಿದಾಯ ಪಂದ್ಯದಲ್ಲಿ ಗೆಲುವಿನೊಂದಿಗೆ ವಿದಾಯ ಹೇಳುವ ಅವರ ಬಯಕೆ ಕೊನೆಗೂ ಈಡೇರಲಿಲ್ಲ. ಇದು ಅವರ ಅಸಂಖ್ಯಾತ ಅಭಿಮಾನಿಗಳಿಗೂ ನೋವು ತಂದಿದೆ. ಆದರೆ ಈ ಪಂದ್ಯ ಟೆನಿಸ್ ದಂತಕಥೆಯ ಸಾಧನೆಯನ್ನು ಮಸುಕಾಗಿಸಲು ಸಾಧ್ಯವಿಲ್ಲ. ತಮ್ಮ ವೃತ್ತಿ ಜೀವನದ ಉತ್ತುಂಗದ ದಿನಗಳಲ್ಲಿ ನಡಾಲ್ ಗೆದ್ದ ಪಂದ್ಯಗಳು, ಜಯಿಸಿದ ಟ್ರೋಫಿಗಳು ಟೆನಿಸ್ ಪ್ರಿಯರ ಮನದಲ್ಲಿ ಸದಾ ಹಚ್ಚ ಹಸುರಾಗಿ ಉಳಿಯಲಿವೆ.
ಅದರಲ್ಲೂ ರೋಜರ್ ಫೆಡರರ್ ಜತೆ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಿದ ರೋಚಕ ಕ್ಷಣಗಳನ್ನು ಟೆನಿಸ್ ಪ್ರಿಯರು ಸದಾ ನೆನಪಿಸಿ ಕೊಳ್ಳುತ್ತಾರೆ. ಕಳೆದ ಎರಡು ದಶಕಗಳಲ್ಲಿ ಟೆನಿಸ್ ತ್ರಿವಳಿಗಳಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಟೆನಿಸ್ ಪ್ರಿಯರಿಗೆ ನೀಡಿದ ರಸದೌತಣದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ತಮ್ಮ ಹದಿಹರೆಯದಲ್ಲೇ ಎಟಿಪಿ ಟೂರ್ನಿ ಗೆದ್ದ ನಡಾಲ್, 2010 ರಲ್ಲಿ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದ ನಂತರ ಕೆರಿಯರ್ ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರು. ಬಳಿಕ ಫ್ರೆಂಚ್ ಓಪನ್ ಕ್ಲೇ ಕೋಟ್ ನಲ್ಲಿ 14 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ‘ದಿ ಕಿಂಗ್ ಆಫ್ ಕ್ಲೇ ಕೋರ್ಟ್’ ಆಗಿ ಇತಿಹಾಸ ನಿರ್ಮಿಸಿದ್ದರು. ಜೊಕೊವಿಚ್ (24) ನಂತರ ಅತ್ಯಧಿಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ (22)ಆಟಗಾರ ಎಂಬ ದಾಖಲೆ ಕೂಡ ನಡಾಲ್ ಹೆಸರಿನಲ್ಲಿದೆ.
ಇದರ ಜೊತೆಗೆ 4 ಬಾರಿ ಯುಎಸ್ ಓಪನ್, 2 ಬಾರಿ ವಿಂಬಲ್ಡನ್ ಮತ್ತು 2 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಮುಡಿಗೇ
ರಿಸಿಕೊಂಡಿದ್ದಾರೆ. ಆಂಡ್ರೆ ಅಗಾಸ್ಸಿ ಮತ್ತು ರೋಜರ್ ಫೆಡರರ್ ಬಳಿಕ ಪುರುಷರ ಸಿಂಗಲ್ಸ್ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲ್ಯಾಮ್ ಪೂರ್ಣಗೊಳಿಸಿದ ಮೂವರು ಆಟಗಾರರಲ್ಲಿ ನಡಾಲ್ ಒಬ್ಬರಾಗಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿ. ಗಾಯದ ಸಮಸ್ಯೆಗಳ ಕಾರಣ ಕಳೆದ ಕೆಲ ವರ್ಷಗಳಲ್ಲಿ ಟ್ರೋಫಿಗಳ ಬರ ಎದುರಿಸಿದ್ದರು. 2022ರಲ್ಲಿ ನೆಚ್ಚಿನ ಫ್ರೆಂಚ್ ಓಪನ್ ಅಂಗಣದಲ್ಲಿ ತಮ್ಮ ವೃತ್ತಿ ಬದುಕಿನ ಕೊನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯನ್ನು ಗೆದ್ದಿದ್ದರು. “ ಎಲ್ಲದಕ್ಕೂ ಆರಂಭ ಎನ್ನುವುದೊಂದಿದ್ದರೆ, ಅಂತ್ಯ ಕೂಡ ಇದ್ದೇ ಇರುತ್ತದೆ. ಇದೇ ಜೀವನ” ಎಂದು ನಡಾಲ್ ಹೇಳಿಕೊಂಡಿದ್ದಾರೆ. ನಡಾಲ್ ಟೆನಿಸ್ ಬದುಕು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಲಿದೆ.