ನಮ್ಮ ರಾಜಕಾರಣಿಗಳಿಗೆ ಮಿಕ್ಕೆಲ್ಲ ವಿಷಯಗಳಿಗಿಂತಲೂ ಸ್ವಪ್ರತಿಷ್ಠೆಯೇ ಮುಖ್ಯವಾದಾಗ ಸಮಷ್ಟಿಯ ಹಿತವು ಹೇಗೆ ಮೂಲೆಗುಂಪಾಗುತ್ತದೆ ಎಂಬುದಕ್ಕೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ವಿಷಯದಲ್ಲಿ ಮುಗುಮ್ಮಾಗಿ ನಡೆಯುತ್ತಿರುವ ‘ಹೊಯ್-ಕೈ’ ಪ್ರಸಂಗಗಳೇ ಸಾಕ್ಷಿ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಜೆಡಿಎಸ್ ನಡುವೆ ರೂಪುಗೊಂಡ ‘ಕೂಡಿಕೆ’ಯ ನೇಪಥ್ಯದಲ್ಲಿ ಏನೆಲ್ಲಾ ಮಾತುಕತೆಗಳು ನಡೆದಿವೆ ಎಂಬುದು ಜನಸಾಮಾನ್ಯರವರೆಗೆ ತಲುಪುವುದಿಲ್ಲ.
‘ಇಂಥ ವಿಷಯಗಳಲ್ಲಿ ಮತದಾರರು ವ್ಯಾಪ್ತಿ ಪ್ರದೇಶದಿಂದ ಆಚೆಗೆ’ ಎಂಬ ಚಿತ್ತಸ್ಥಿತಿ ನಮ್ಮ ರಾಜಕೀಯ ಪಕ್ಷಗಳಲ್ಲಿ ಕೆನೆಗಟ್ಟಿರುವುದೇ ಇದಕ್ಕೆ ಕಾರಣ. ಕೂಡಿಕೆಯ ಷರತ್ತುಗಳು ಏನಾದರೂ ಆಗಿರಲಿ, ಕನಿಷ್ಠ ಪಕ್ಷ ಒಮ್ಮತದ ಅಭ್ಯರ್ಥಿ ಯನ್ನು ಆಯ್ಕೆಮಾಡುವಾಗಲಾದರೂ ಈ ಮೈತ್ರಿಪಕ್ಷಗಳು ಪ್ರೌಢತೆ ಮೆರೆಯದೆ, ಅದನ್ನೊಂದು ‘ಹಾದಿರಂಪ-ಬೀದಿರಂಪ’ದ ಮಟ್ಟಕ್ಕೆ ತಂದು ನಿಲ್ಲಿಸುವುದಾದರೂ ಏಕೆ? ಇಂಥ ಒಳಜಗಳಗಳೇ ಮತದಾರರಲ್ಲಿ ಹೇವರಿಕೆ ಹುಟ್ಟಿಸುವುದಿಲ್ಲವೇ? ಎಂಬುದು ಜನಸಾಮಾನ್ಯರ ಪ್ರಶ್ನೆ.
‘ಜೆಡಿಎಸ್‌ಗೆ ಪುನರ್ಜನ್ಮ ಕೊಟ್ಟಿದ್ದೇ ಬಿಜೆಪಿ; ಕುಮಾರಸ್ವಾಮಿ ಅವರು ಚನ್ನಪಟ್ಟಣದ ಟಿಕೆಟ್ ತ್ಯಾಗಮಾಡಲಿ’ ಎಂಬ ಕಮಲಪಾಳಯದ ನಾಯಕರೊಬ್ಬರ ಮಾತಿಗೆ, ‘ತ್ಯಾಗದ ಬಗ್ಗೆ ಮಾತಾಡುವವರು ತಮ್ಮ ಆತ್ಮಕ್ಕೆ ಕೇಳಿಕೊಳ್ಳಲಿ’ ಎಂಬುದಾಗಿ ‘ದಳಪತಿ’ ತಿರುಗುಬಾಣ ಬಿಟ್ಟಿರುವುದು ಜನರ ಈ ಪ್ರಶ್ನೆಗೆ ಪುಷ್ಟಿ ನೀಡುತ್ತದೆ.
‘ಚನ್ನಪಟ್ಟಣ ಕ್ಷೇತ್ರದಲ್ಲಿ ನಿಲ್ಲಬೇಕಾದ ಅಭ್ಯರ್ಥಿ ಬಿಜೆಪಿಯವರಾಗಿರಬೇಕೋ ಅಥವಾ ಜೆಡಿಎಸ್‌ನವ ರಾಗಿರಬೇಕೋ?’ ಎಂಬ ಕಿತ್ತಾಟಕ್ಕಿಂತ, ‘ಜನಹಿತದ ರಕ್ಷಣೆಯೇ ಇಲ್ಲಿ ಮೂಲಮಂತ್ರವಾಗಬೇಕು’ ಎಂಬ ಗ್ರಹಿಕೆಯನ್ನು ಅಪ್ಪಿದರೆ, ಅಭ್ಯರ್ಥಿಯ ಆಯ್ಕೆ ಕಷ್ಟವೇನೂ ಆಗುವುದಿಲ್ಲ.
ಆದರೆ, ಇಲ್ಲೂ ತಂತಮ್ಮ ಪ್ರತಿಷ್ಠೆ ಮೆರೆಯಲು ಮೇಲಾಟ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಎಂಬ ‘ಅಪ್ಪ-ಅಮ್ಮ’ ತಮ್ಮ ಈ ತರವಲ್ಲದ ಜಗಳದಿಂದ ಮತದಾರನೆಂಬ ಕೂಸು ಬಡವಾಗುತ್ತದೆ, ಜನಕಲ್ಯಾಣದ ಹಿತಾಸಕ್ತಿಗೆ ಅದು ಮಾರಕವಾಗುತ್ತದೆ ಎಂಬ ಸೂಕ್ಷ್ಮವನ್ನು ಇನ್ನೂ ಗ್ರಹಿಸಿದಂತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಎಂಬ ಈ ಜೋಡೆತ್ತುಗಳಿಗೆ ಇನ್ನಾದರೂ ಜ್ಞಾನೋದಯವಾಗಲಿ. ಏಕೆಂದರೆ, ‘ಎತ್ತು ಏರಿಗೆಳೆದರೆ, ಕೋಣ ನೀರಿಗಿಳಿಯಿತು’ ಎಂಬ ಸಾಕಷ್ಟು ಪ್ರಸಂಗಗಳನ್ನು ನೋಡಿ ಜನ ರೋಸತ್ತಿದ್ದಾರೆ.
ಇದನ್ನೂ ಓದಿ: Vishwavani Editorial: ಬಹುದಿನಗಳ ಕನಸು ಸಾಕಾರ