Tuesday, 3rd December 2024

Vishwavani Editorial: ಜನಪ್ರತಿನಿಧಿಗಳ ಆಡಳಿತ ಅಗತ್ಯ

ವಾಯುಭಾರ ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯದ ಎಲ್ಲೆಡೆ ವ್ಯಾಪಕ ಮಳೆಯಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಜನರು ತತ್ತರಿಸಿದ್ದಾರೆ. ಇಂತಹ ಸಮಸ್ಯೆಗಳು ತಲೆದೋರಿದಾಗ ಜನರಿಗೆ ತಕ್ಷಣಕ್ಕೆ ಸ್ಪಂದಿಸು ವವರು ಅಗತ್ಯ. ಸೀಮಿತ ಸಂಖ್ಯೆಯಲ್ಲಿರುವ ಅಧಿಕಾರಿಗಳು ಲಕ್ಷಾಂತರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಿಲ್ಲ.

ದುರದೃಷ್ಟವಶಾತ್ ಇಡೀ ರಾಜ್ಯದಲ್ಲಿ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಲ್ಲ. ಬೆರಳೆಣಿಕೆಯ ಪುರಸಭೆ, ನಗರಸಭೆ ಗಳನ್ನು ಬಿಟ್ಟರೆ ಉಳಿದ ಸ್ಥಳೀಯಾಡಳಿತಗಳು ಆಡಳಿತಾಧಿಕಾರಿಗಳ ಪಾರುಪತ್ಯದಲ್ಲಿ ನಡೆಯುತ್ತಿದೆ. ನಾಗರಿಕರು ಆಯಾ ಭಾಗದ ಜನಪ್ರತಿನಿಧಿಗಳ ಜತೆ ನಿಕಟ ಸಂಪರ್ಕ ಹೊಂದಿರುತ್ತಾರೆ.

ಅಧಿಕಾರಿಗಳ ಸಂಪರ್ಕ ಇರುವವರು ಕಡಿಮೆ. ಜನಪ್ರತಿನಿಧಿಗಳಿಗೆ ಆಯಾ ಗ್ರಾಮ ಇಲ್ಲವೇ ವಾರ್ಡ್‌ನ ಸಮಸ್ಯೆಗಳ ಬಗ್ಗೆ ಮೊದಲೇ ಅರಿವಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸುಲಭ. ದಿಢೀರನೇ
ಮನೆಗೆ ನೀರು ನುಗ್ಗಿದಾಗ, ಮನೆ ಗೋಡೆ ಕುಸಿದಾಗ ತಕ್ಷಣಕ್ಕೆ ನೆನಪಾಗುವುದು ಅಲ್ಲಿನ ಕಾಪೋರೇಟರ್, ಜಿ.ಪಂ, ಗ್ರಾಪಂ ಸದಸ್ಯರು. ಆದರೆ ಜನಪ್ರತಿನಿಧಿಗಳಿಲ್ಲದ ರಾಜ್ಯದಲ್ಲಿ ಸ್ಥಳಿಯಾಡಳಿತವನ್ನು ಬಹುತೇಕ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ.

ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳ ಸರಿಯಾದ ಅರಿವಿಲ್ಲದ ಇಲ್ಲವೇ ಮುಂಜಾಗ್ರತಾ ಕ್ರಮದ ಕೊರತೆಯ ಕಾರಣ ದಿಂದ ನಾನಾ ಕಡೆ ಸಮಸ್ಯೆಗಳು ತಲೆದೋರುತ್ತಿವೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೌನ್ಸಿಲ್ ಮತ್ತು ಕೌನ್ಸಿಲ ರ್‌ಗಳ ಅನುಪಸ್ಥಿತಿಯಿಂದ ನಗರದ ಒಂದೂವರೆ ಕೋಟಿ ಜನರು ನಾಗರಿಕ ಸಮಸ್ಯೆಗಳನ್ನು, ಅಹವಾಲುಗಳನ್ನು ಯಾರೊಂದಿಗೆ ಹೇಳಿಕೊಳ್ಳಬೇಕೆಂದು ಗೊತ್ತಾಗದೇ ಪರಿತಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 198 ವಾರ್ಡ್‌ ಗಳಿದ್ದು, ಸರಕಾರದ ಯೋಚನೆಯಂತೆ ಬಿಬಿಎಂಪಿ ವಿಭಜನೆಯಾದರೆ 500ಕ್ಕೂ ಹೆಚ್ಚು ವಾರ್ಡ್‌ಗಳು ರಚನೆ ಯಾಗಲಿವೆ. ಆದರೆ ಸದ್ಯ ಹತ್ತಾರು ನಾಗರಿಕ ಸಮಸ್ಯೆಗಳ ನಡುವೆ ಬೆಂಗಳೂರು ಮಹಾನಗರಪಾಲಿಕೆ ಚುನಾಯಿತ ಜನಪ್ರತಿನಿಧಿ ಗಳಲ್ಲದೆ ಕಾರ್ಯನಿರ್ವಹಿಸುತ್ತಿದೆ.

ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಶೇ. 89ರಷ್ಟು ಹೆಚ್ಚಾಗಿದೆ. ಕಾರ್ಪೋರೇಟರ್‌ಗಳು ಇರುತ್ತಿದ್ದರೆ ತುರ್ತು ಪರಿಸ್ಥಿತಿ ಎದುರಿಸಲು ಅನುಕೂಲವಾಗುತ್ತಿತ್ತು. ರಾಜ್ಯ ಸರಕಾರವು ಸಬೂಬುಗಳನ್ನು ಹೇಳದೆ ಆದಷ್ಟು ಬೇಗ ಸ್ಥಳೀಯಾಡಳಿತಗಳಿಗೆ ಚುನಾವಣೆ ನಡೆಸಲು ಮುಂದಾಗಬೇಕು.

ಇದನ್ನೂ ಓದಿ: Vishwavani Editorial: ಪುಢಾರಿಗಳ ‘ಕುಟುಂಬ’ ಯೋಜನೆ!