Tuesday, 22nd October 2024

Vishwavani Editorial: ಪುಢಾರಿಗಳ ‘ಕುಟುಂಬ’ ಯೋಜನೆ!

ಅದು ಲೋಕಸಭಾ ಚುನಾವಣೆಯೇ ಇರಲಿ, ರಾಜ್ಯಗಳ ವಿಧಾನಸಭಾ ಚುನಾವಣೆಗಳೇ ಇರಲಿ, ‘ಅಖಾಡದಲ್ಲಿ ರಾಜಕೀಯ ಎದುರಾಳಿಗಳನ್ನು ಹಣಿಯುವುದು ಹೇಗೆ?’ ಎಂಬ ಪ್ರಶ್ನೆಗಿಂತ, ‘ನಮ್ಮ ಕುಟುಂಬಿಕರಿಗೆ ಟಿಕೆಟ್ ಕೊಡಿಸುವುದು ಹೇಗೆ?’ ಎಂಬ ಪ್ರಶ್ನೆಯೇ ಕೆಲವರನ್ನು ಬೃಹದಾಕಾರವಾಗಿ ಕಾಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಇದು ‘ಆ ಪಕ್ಷ ಈ ಪಕ್ಷ’ ಅಥವಾ ‘ಆ ರಾಜ್ಯ ಈ ರಾಜ್ಯ’ ಎಂಬ ಭೇದವಿಲ್ಲದೆ ಬಹುತೇಕವಾಗಿ ಭಾರತದಾದ್ಯಂತ ಕಂಡುಬರುವ ಸಾಂಕ್ರಾಮಿಕ ಸಮಸ್ಯೆಯೂ ಹೌದು.

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಬಾರದು ಎಂದೇನಿಲ್ಲ; ಆದರೆ, ಪಕ್ಷಕ್ಕಾಗಿ ಅಹರ್ನಿಶಿ ದುಡಿದ ಕಾರ್ಯ ಕರ್ತರನ್ನು ಕಡೆಗಣಿಸಿ, ತಮ್ಮ ‘ರಾಜಕೀಯ ಜಹಗೀರಿನ’ ಮೇಲಿನ ಹಿಡಿತವನ್ನು ಮುಂದುವರಿಸಲು ಕುಟುಂಬದ ಸದಸ್ಯರನ್ನೇ ಗದ್ದುಗೆಯಲ್ಲಿ ಕೂರಿಸಲು ಹವಣಿಸುವ ಕೆಲ ಪುಢಾರಿಗಳ ಚಾಳಿಯನ್ನು ಮಾತ್ರ ಸಹಿಸಲಾಗದು. ಇಂಥ ಸಜ್ಜಿಕೆಯು ಹಿಂಬಾಗಿಲಿನಿಂದ ಪ್ರವೇಶಿಸಿದ ‘ರಾಜಪ್ರಭುತ್ವ’ ಎನಿಸಿಕೊಳ್ಳುತ್ತದೆಯೇ ಹೊರತು ನಿಜಾರ್ಥದ ‘ಪ್ರಜಾಪ್ರಭುತ್ವ’ ಆಗುವುದಿಲ್ಲ.

ರಾಜಕೀಯ ಅಧಿಕಾರ ಎಂಬುದು ಯಾರೊಬ್ಬರ ಉತ್ತರಾಧಿಕಾರ ಆಗಬಾರದು. ಅದು ಜನಸಮೂಹದ ನಡುವಿ ನಿಂದ ಉದ್ಭವಿಸಿದ ಸಮರ್ಥ ನಾಯಕನ ಹೆಗಲೇರುವ ಹೊಣೆಗಾರಿಕೆಯ ನೊಗವಾಗಬೇಕೇ ಹೊರತು, ಒಂದೇ ಕುಟುಂಬದವರು ಮೇಲ್ತುದಿಯಿಂದ ಪ್ರಾರಂಭಿಸಿ ಬೇರನ್ನೂ ಬಿಡದೆ ಹಿಂಡಿ ಹಿಪ್ಪೆಮಾಡುವಂಥ ‘ರಾಜಕೀಯದ ರಸಕಬ್ಬು’ ಆಗಬಾರದು. ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿ ಟಿಕೆಟ್ ಹಂಚಿಕೆಯ ಹೆಸರಲ್ಲಿ ನಡೆಯುತ್ತಿರುವ ‘ನವರಂಗಿ’ ನಾಟಕಗಳನ್ನೂ, ಅದರಿಂದ ಸ್ವಜನ ಪಕ್ಷಪಾತದ ಘಾಟು ಢಾಳಾಗೇ ಅಡರುತ್ತಿರುವುದನ್ನೂ ಕಂಡು ಈ ಮಾತುಗಳನ್ನು ವಿಷಾದದಿಂದಲೇ ಹೇಳಬೇಕಾಗಿ ಬಂದಿದೆ.

‘ಪ್ರಜಾಪ್ರಭುತ್ವ ಎಂದರೆ ಯಾವುದೇ ವರ್ಗ, ಗುಂಪು ಅಥವಾ ವ್ಯಕ್ತಿಯ ವಶದಲ್ಲಿ ಇಲ್ಲದೆ, ಜನತೆಯ ಅಧೀನದಲ್ಲಿ ರುವ ಸರಕಾರ’ ಎಂಬುದು ಸ್ಥಾಪಿತ-ಸರ್ವಸಮ್ಮತ ವ್ಯಾಖ್ಯಾನ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಕೂಡ, ‘ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರಕಾರವೇ ಪ್ರಜಾಪ್ರಭುತ್ವ’ ಎಂದು
ವ್ಯಾಖ್ಯಾನಿಸಿದ್ದು ಈ ನೆಲೆಯಲ್ಲೇ, ಈ ಗ್ರಹಿಕೆಯಲ್ಲೇ. ಆದರೆ ನಮ್ಮ ಈಗಿನ ರಾಜಕೀಯ ವ್ಯವಸ್ಥೆಯನ್ನು ಈ ವ್ಯಾಖ್ಯಾನಕ್ಕೆ ಸಮೀಕರಿಸಲಾದೀತೇ?!

ಇದನ್ನೂ ಓದಿ: Jharkhand Assembly Election: ಸೀಟು ಹಂಚಿಕೆ ಬಗ್ಗೆ ಅಸಮಾಧಾನ; ಜಾರ್ಖಂಡ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಆರ್‌ಜೆಡಿ ನಿರ್ಧಾರ