Saturday, 27th July 2024

ಕರೋನಾದಲ್ಲಿ ಬಯಲಾದ ಧರ್ಮ ಗುರುಗಳ ಬಂಡವಾಳ

ಜಯವೀರ ವಿಕ್ರಮ ಸಂಪತ್ ಗೌಡ

ಒಂದು ಕ್ಷಣ ಕಣ್ಮುಚ್ಚಿ ಕುಳಿತಿದ್ದೇನೆ. ಇಡೀ ಜಗತ್ತು ನಿಶ್ಚಲವಾಗಿದೆ. ಯಾರಿಗೂ ಮುಂದೇನು ಎಂಬುದು ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಭವಿಷ್ಯದ ಬಗ್ಗೆ ನಿರಾಶಾವಾದಿಗಳಾಗಿದ್ದಾರೆ. ಯಾರಲ್ಲೂ ಉತ್ಸಾಹ, ಚೇತನ, ಹುರುಪು ಇಲ್ಲ. ಎಲ್ಲರಲ್ಲೂ ಸೂತಕದ ಛಾಯೆ. ಇಡೀ ಜಗತ್ತೇ ಮಂಕು ಹಿಡಿದು, ಗರ ಬಡಿದು ಕುಳಿತುಕೊಂಡಿದೆ. ಮಹಾ ಆರ್ಥಿಕ ಕುಸಿತ ಅಥವಾ ಗ್ರೇಟ್ ಡಿಪ್ರೆಶನ್ ಕಾಲದಲ್ಲೂ ಜನ ಈ ರೀತಿ ಜಂಘಾಬಲವೇ ಉಡುಗಿಹೋದವರಂತೆ ಕುಳಿತಿರಲಿಲ್ಲ. ಎಲ್ಲರೂ ಮುಂದೇನು ಗತಿಯೋ ಈ ಭಗವಂತನೇ ಬಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಪ್ರಾಯಶಃ ಇಂಥ ದುಸ್ಥಿತಿ ಈ ಜಗತ್ತಿನ ಮುಂದೆ ಹಿಂದೆಂದೂ ಎದುರಾಗಿರಲಿಲ್ಲ. ಎರಡನೆಯ ಮಹಾಯುದ್ಧದಿಂದ ಕೆಲವು ದೇಶಗಳು ಮಾತ್ರ ಬಿಸಿ ಅನುಭವಿಸಿದ್ದವು. ಆದರೆ ಅದರ ಬಿಸಿ ಇಡೀ ಜಗತ್ತಿನ ಮೇಲೆ ಏಕ ಕಾಲಕ್ಕೆ ತಟ್ಟಿರಲಿಲ್ಲ. ಜನ ಈ ರೀತಿ ಕಂಗೆಟ್ಟಿರಲಿಲ್ಲ. ಆದರೆ ಕರೋನಾವೈರಸ್ ಬುಗುರಿಯಂತೆ ತಿರುಗುತ್ತಿದ್ದ ಇಡೀ ಜಗತ್ತನ್ನು ತನ್ನ ಮುಷ್ಠಿಯೊಳಗೆ ಸೆಳೆದುಕೊಂಡು, ಜೋಳಿಗೆ ಚೀಲದಲ್ಲಿ ಹಾಕಿಟ್ಟುಕೊಂಡುಬಿಟ್ಟಿದೆ. ಹೀಗಾಗಿ ಇಡೀ ಜಗತ್ತಿಗೆ ಕತ್ತಲು ಆವರಿಸಿದ ಅನುಭವ.

ನಾನಂತೂ ಕಣ್ಣು ಮುಚ್ಚಿ ಕುಳಿತಿದ್ದೇನೆ. ಕಳೆದ ಇಪ್ಪತ್ತು ದಿನಗಳ ಅವಧಿಯಲ್ಲಿ ಇಲ್ಲಿ ತನಕ ನೋಡದ, ನೋಡಬಾರದ ದೃಶ್ಯಗಳನ್ನೆಲ್ಲ ನೋಡುತ್ತಿದ್ದೇನೆ. ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ಭಣಗುಟ್ಟಿದ್ದನ್ನು ಯಾರೂ ನೋಡಿಯೇ ಇಲ್ಲವಂತೆ. ಅಲ್ಲಿ ದಿನದ ಯಾವ ಕ್ಷಣದಲ್ಲಿ ಹೋದರೂ ಮೂರ್ನಾಲ್ಕು ಸಾವಿರ ಜನ ಇರುತ್ತಾರೆ. ಅಲ್ಲಿ ಈಗ ಒಬ್ಬ ನರಪಿಳ್ಳೆಯೂ ಇಲ್ಲ. ಅಲ್ಲಿ ಕತ್ತಲು ಆವರಿಸಿದ್ದನ್ನು ನೋಡಿದವರೇ ಇಲ್ಲ. ಮುಂಬೈಯ ವಿಕ್ಟೋರಿಯಾ ಟರ್ಮಿನಸ್ ಬಿಕೋ ಅನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಲೋಕಲ್ ಟ್ರೈನ್ ನಿಂತಿದ್ದು ಇಲ್ಲವೇ ಇಲ್ಲ. ದಿನದ ಯಾವ ಹೊತ್ತಿನಲ್ಲಾದರೂ ಕನಿಷ್ಠ ಐವತ್ತು ವಿಮಾನಗಳು ಹಾರುತ್ತಿದ್ದ ಲಂಡನ್ ನಗರ ಸ್ತಬ್ಧ. ಸಿಂಗಾಪುರ, ಹಾಂಗ್ ಕಾಂಗ್, ಸಿಡ್ನಿ, ಮೆಲ್ಬೋರ್ನ್, ಫ್ರಾಂಕ್ ಫರ್ಟ್, ಪ್ಯಾರಿಸ್ ನಗರಗಳಿಗೆಲ್ಲ ಪ್ರೇತಕಳೆ. ಜಗತ್ತಿನ ಶೇಕಡಾ ಅರವತ್ತಕ್ಕೂ ಹೆಚ್ಚು ದೇಶಗಳು ಲಾಕ್ ಡೌನ್. ಜನಜೀವನ ನಿಂತ ನೀರು. ಮನಸ್ಸು ಬಗ್ಗಡ.

ಮನುಷ್ಯನ ಅಬ್ಬರ, ಆಟಾಟೋಪ ಅತಿಯಾಗಿ ಹೋಗಿತ್ತು. ತನ್ನನ್ನು ನಿಯಂತ್ರಿಸುವವರು ಯಾರೂ ಇಲ್ಲ ಎಂದು ಮೆರೆಯುತ್ತಿದ್ದ. ತಾನೇ ಸರ್ವಶ್ರೇಷ್ಠ ಎಂಬ ಅಹಂಭಾವದಲ್ಲಿ ತೇಲುತ್ತಿದ್ದ. ಈ ಜಗತ್ತನ್ನು ನಿಯಂತ್ರಿಸುವವ ನಾನೇ ಎಂಬ ದರ್ಪ, ಮದದಲ್ಲಿ ಆರ್ಭಟಿಸುತ್ತಿದ್ದ. ಆದರೆ ಕಣ್ಣಿಗೆ ಕಾಣದ, ಒಂದು ರಾಗಿ ಕಾಳನ್ನು ಐದು ಸಾವಿರ ಭಾಗಗಳನ್ನಾಗಿ ಮಾಡಿದರೆ ಎಷ್ಟು ಚಿಕ್ಕದಾಗುವುದೋ, ಅಷ್ಟು ಸಣ್ಣ ಮತ್ತು ಸೂಕ್ಷ್ಮ ಜೀವಿಯೊಂದರ ಮುಂದೆ ಮನುಷ್ಯ ದೈನೇಸಿಯಾಗಿ ಕುಳಿತಿದ್ದಾನೆ, ಕಣ್ಣೀರಿಡುತ್ತಿದ್ದಾನೆ. ಕ್ಷಿಪಣಿ, ಅಣುಬಾಂಬ್ ಗೆ ಹೆದರದ ಮನುಷ್ಯ ಕಾಣದ ಜೀವಿಯ ಮುಂದೆ ಮಂಡಿಯೂರಿ ಶರಣಾಗತನಾಗುತ್ತಿದ್ದಾನೆ. ಕಣ್ಣಿಗೆ ಕಾಣದ ವೈರಾಣುಗಳನ್ನು ಈಗ ನಂಬುವ ಮನುಷ್ಯ, ಕಣ್ಣಿಗೆ ಕಾಣದ ದೇವರ ಅಸ್ತಿತ್ವವನ್ನು ಇಂದಿಗೂ ಪ್ರಶ್ನಿಸುತ್ತಲೇ ಬಂದಿದ್ದಾನೆ. ಅಂಥವರಿಗೂ ಸಹ ತಮ್ಮ ಸಿದ್ಧಾಂತವನ್ನು ಕಿತ್ತು ಬಿಸಾಡುವ ಸಮಯ.

ಅರವತ್ತು ವರ್ಷ ಒಟ್ಟಿಗೇ ಬಾಳಿದ ಗಂಡ ಸತ್ತರೆ ಅವನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮಣ್ಣು ಮಾಡಲಾಗುತ್ತಿಲ್ಲ. ‘ಅವರನ್ನು ನೀವೇ ಮಣ್ಣು ಮಾಡಿಬಿಡಿ’ ಎಂದು ವೈದ್ಯರಿಗೆ ಹೇಳುತ್ತಿದ್ದಾರೆ. ಕಾಣದ ಲೋಕಕ್ಕೆ ಹೋದ ಗಂಡನಿಗೆ ಮನೆಯಲ್ಲೇ ಕುಳಿತು ತನ್ನನ್ನು ಕ್ಷಮಿಸಿ ಎಂದು ಬಿಕ್ಕುತ್ತಿದ್ದಾರೆ. ತನ್ನ ಕಣ್ಣ ಮುಂದೆಯೇ ಮಗ, ಮಗಳು, ಹೆಂಡತಿ ಸತ್ತರೂ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಗಂಡನಿಗೆ ಭಯ. ಅವರ ಫೋಟೋಕ್ಕೆ ನಮಸ್ಕಾರ ಮಾಡಿ ಹೋಗಿ ಬನ್ನಿ ಎಂದು ರೋದಿಸುತ್ತಿದ್ದಾನೆ. ಒಂದೇ ಮನೆಯವರೆಲ್ಲರೂ ಸತ್ತರೆ ಅವರೆಲ್ಲರನ್ನು ಅನಾಥ ಶವಗಳೆಂದು ಸಾಮೂಹಿಕವಾಗಿ ಹೂಳುತ್ತಿದ್ದಾರೆ. ಮನೆಯ ಒಡೆಯನ ಅಂತ್ಯಕ್ರಿಯೆಗೆ ಹೆಂಡತಿ ಹೋಗಲು ಹೆದರಿದರೆ, ಮನೆಯ ನಾಯಿ ಹೋಗಿ ಅಂತಿಮ ವಿದಾಯ ಹೇಳಿ ಬಂದಿದೆ. ವಿದೇಶದಲ್ಲಿದ್ದ ಮಗ ಹೆತ್ತ ತಂದೆ-ತಾಯಿಗೆ ಸಹ ಗೊತ್ತಾಗದೆ ಅಬ್ಬೇಪಾರಿಯಾಗಿ ಸತ್ತು ಹೋಗಿದ್ದಾನೆ. ಒಂದೊಂದು ಸಾವು ಮಾನವ ಅಂತಃಕರಣದ ಭಾವನೆಗಳನ್ನೇ ಸಾಯಿಸುತ್ತಿದೆ.

ಮನುಷ್ಯ ಪ್ರಯತ್ನಗಳೆಲ್ಲ ಕೆಲಸಕ್ಕೆ ಬಾರದೇ ಕುಕ್ಕರಗಾಲಿನಲ್ಲಿ ಕುಳಿತುಕೊಂಡಿವೆ. ಮನುಷ್ಯ ಮನೆಯಿಂದ ಹೊರಬರಲಾಗದೇ, ತನ್ನ ಗೋಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಲಾಗದೇ, ತನ್ನ ಮನೆಯಲ್ಲಿ ಹೇಡಿಯಂತೆ ಅಡಗಿ ಕುಳಿತುಕೊಂಡಿದ್ದಾನೆ. ಹೊರಗೆ ಬಂದರೆ ಕರೋನಾ ಅಮರಿಕೊಳ್ಳಬಹುದೆಂಬ ಭಯ. ಇದಕ್ಕೆ ಬೇಕಾದ ಔಷಧವನ್ನು ಸಹ ಅವನಿಗೆ ಇನ್ನೂ ಕಂಡುಹಿಡಿಯಲು ಆಗಿಲ್ಲ. ತನ್ನ ಮುಂದೆ ಮನೆ-ಮಠ ಕುಸಿಯುತ್ತಿದೆ, ತನ್ನ ತಂದೆ- ತಾಯಿ, ಮಗ – ಮಗಳು, ಹೆಂಡತಿ, ಬಂಧು-ಬಳಗ ಸಾಯುತ್ತಿದ್ದಾರೆ, ತಾನು ಕಟ್ಟಿದ ಸಾಮ್ರಾಜ್ಯ, ವ್ಯವಸ್ಥೆ ಕಣ್ಣಾರೆ ಶಿಥಿಲವಾಗುತ್ತಿದೆ. ತನ್ನ ಕಣ್ಣ ಮುಂದೆಯೇ ಎಲ್ಲವೂ ಅಕ್ಷರಶಃ ನಿಂತು ಹೋಗಿದೆ. ಮೊದಲ ಬಾರಿಗೆ ಮನುಷ್ಯನ ಅಹಂ ಗೆ ಇನ್ನಿಲ್ಲದ ಭಾರಿ ಪೆಟ್ಟುಬಿದ್ದಿದೆ.

ನೋಟ್ ಬಂದಿ ಆದಾಗ ಜನರ ಹಣದ ದೌಲತ್ತು ಅರ್ಧಕ್ಕರ್ಧ ಕಡಿಮೆ ಆಗಿತ್ತು. ಈಗ ಅದು ಪೂರ್ತಿ ಅಡಗಿಹೋಗಿದೆ. ಪಂಚತಾರಾ ಹೋಟೆಲ್ಲಿಗೆ ಹೋಗಿ ಐನೂರು ರುಪಾಯಿ ಟಿಪ್ಸ್ ಇಟ್ಟು ಬರುತ್ತಿದ್ದವರು ಐವತ್ತು ರುಪಾಯಿಗೆ ಬಂದಿದ್ದರು. ಅಲ್ಲಿ ಕಾರು ಬಾಗಿಲು ತೆಗೆದು ಸೆಲ್ಯೂಟ್ ಹೊಡೆಯುತ್ತಿದ್ದ ಮೀಸೆ ಮಾಮಂದಿರಿಗೆ ಹತ್ತು ರುಪಾಯಿ ಕೊಡುವ ತನಕ ಬಂದಿದ್ದರು. ಇನ್ನು ಮುಂದೆ, ಈಗಾಗಲೇ ಕೊಟ್ಟಿದ್ದೆನಲ್ಲಾ ಅದರಲ್ಲಿಯೇ ಮುರಿದುಕೋ ಎಂದು ಹೇಳಬಹುದು. ರಾಜಕಾರಣಿಗಳು ಮೆರೆದಿದ್ದೇನು, ಆಡಿದ ಆಟಗಳೇನು ? ಅವರು ಇಲ್ಲಿಯ ತನಕ ಮಾಡುತ್ತಿದ್ದ ಮದುವೆಗಳನ್ನು ನೋಡಬೇಕಿತ್ತು. ಅರಮನೆ ಮೈದಾನದಲ್ಲಿ ಹತ್ತಾರು ಸಾವಿರ ಜನರನ್ನು ಕರೆದು ಹತ್ತಾರು ಕೋಟಿ ಖರ್ಚು ಮಾಡುತ್ತಿದ್ದರು. ಇನ್ನು ಮುಂದೆ ಅಂಥ ಮದುವೆ ಮಾಡಲಿ ನೋಡೋಣ. ಜನರೇ ಬರುವುದಿಲ್ಲ.

ಕುಮಾರಸ್ವಾಮಿ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ರಾಮನಗರ ಚನ್ನಪಟ್ಟಣದ ಮಧ್ಯೆ ನೂರು ಎಕರೆ ಜಾಗದಲ್ಲಿ ಕೆಂಪುಗಂಬಳಿ ಹಾಸಿ, ಶಾಮಿಯಾನ ಹಾಕಿ ಲಕ್ಷಾಂತರ ಜನರನ್ನು ಆಮಂತ್ರಿಸಿ ಹಿಂದೆಂದೂ ಮಾಡಿರಬಾರದು, ಮುಂದೆಂದೂ ಯಾರೂ ಮಾಡಬಾರದು ಆ ರೀತಿ ಮದುವೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು. ಅದಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಕರೋನಾವೈರಸ್, ಲಾಕ್ ಡೌನ್ ನಿಂದಾಗಿ ಮನೆ – ಮಂದಿಯಷ್ಟೇ ಸೇರಿ ಮದುವೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ಕುಮಾರಸ್ವಾಮಿ ಅಹಂ ಕಿತ್ತುಕೊಂಡು ಹೋಗುವಂತಾಗಿದೆ. ’ನನ್ನ ಮಗನ ಮದುವೆಗೆ ಬನ್ರಪ್ಪಾ ಬನ್ರೋ’ ಎಂದು ಗೋಗರೆದರೂ ಯಾರೂ ಹೋಗುವುದಿಲ್ಲ. ಅವರ ದುಡ್ಡು, ಪ್ರದರ್ಶನ, ದೌಲತ್ತು, ಅಹಂ ಎಲ್ಲವನ್ನೂ ಯಾರೂ ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. ಇನ್ನು ಮುಂದೆ ಇಂಥ ಮದುವೆಗಳಿಗೆ ಯಾರೂ ಬರುವುದಿಲ್ಲ. ಕುಮಾರಸ್ವಾಮಿ ಕರೆದರೇನು, ಸ್ವಾಮಿ ಕುಮಾರ ಕರೆದರೇನು.. ನಿನ್ನ ದೌಲತ್ತು ನಿನಗಿರಲಿ, ನನ್ನ ಪ್ರಾಣ ನನಗಿರಲಿ ಎಂದು ಇಂಥ ಜಂಗುಳಿಯಿಂದ ದೂರವೇ ಉಳಿಯುತ್ತಾರೆ.

ಇಂದು ಎಂಥಾ ಸ್ಥಿತಿ ಬಂದಿದೆ ನೋಡಿ. ಜನರ ಹತ್ತಿರ ಹಣವಿದೆ, ಆದರೆ ಖರ್ಚು ಮಾಡುವಂತಿಲ್ಲ. ಮೂರು – ನಾಲ್ಕು ಕಾರುಗಳಿವೆ, ಅದನ್ನು ಹೊರಕ್ಕೆ ತೆಗೆಯುವಂತಿಲ್ಲ. ಒಳ್ಳೊಳ್ಳೆ ಡ್ರೆಸ್ ಗಳಿವೆ, ಆದರೆ ಅವನ್ನು ಧರಿಸುವಂತಿಲ್ಲ. ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿ ಶೋಕಿ ಮಾಡೋಣ ಅಂದ್ರೆ ಅವೆಲ್ಲ ಬಂದ್ ಆಗಿವೆ. ಆತ್ಮೀಯರನ್ನು ಭೇಟಿ ಮಾಡಲೂ ಆಗುವುದಿಲ್ಲ. ಗರ್ಲ್ ಫ್ರೆಂಡ್ ನೋಡಲೂ ಆಗುವುದಿಲ್ಲ. ಒಂದು ವೇಳೆ ಸಿಕ್ಕರೂ ಬರಿ ನೋಡಬೇಕಷ್ಟೆ. ಎಲ್ಲರಿಗೂ ಸಮಯವಿದೆ, ಆದರೆ ಮನೆಯಲ್ಲಿ ಸಣ್ಣ ಮಜಾ ಮಾಡೋಣ ಅಂದ್ರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಅಗತ್ಯ ಮತ್ತು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ, ಭಯ. ಪಾರ್ಟಿ ಮಾಡೋಣ ಅಂದರೆ ಒಂದು ಗುಟುಕು ಗುಂಡು ಸಿಗುತ್ತಿಲ್ಲ. ಬಾಯಿಚಪಲ ತೀರಿಸಿಕೊಳ್ಳಲು ದಾರಿ ಬದಿ ಪಾನಿಪುರಿ ಅಂಗಡಿಯೂ ಕ್ಲೋಸ್.

ಎಲ್ಲರೂ ಕೆಜಿಎಫ್ ಸಿನಿಮಾದ ಯಶ್ ಗೆಟಪ್ಪಿನಲ್ಲಿದ್ದಾರೆ. ಮನೆಯಿಂದ ಹೊರಗಡೆ ಬರಲು ಎಲ್ಲರಿಗೂ ಭಯ. ಒಬ್ಬರೊಬ್ಬರನ್ನು ಮುಟ್ಟಿಸಿಕೊಳ್ಳಲು ಭಯ. ಬ್ರಾಹ್ಮಣರು ಕೆಳ ಜಾತಿಯವರನ್ನು ಮುಟ್ಟಿಸಿಕೊಳ್ಳುವುದಿಲ್ಲ ಎಂದು ಎಲ್ಲರೂ ಬ್ರಾಹ್ಮಣರನ್ನು ಬೈಯುತ್ತಿದ್ದರು. ಈಗ ಎಲ್ಲರೂ ಬ್ರಾಹ್ಮಣರೇ. ಯಾರೂ ಯಾರನ್ನು ಮುಟ್ಟಿಸಿಕೊಳ್ಳುತ್ತಿಲ್ಲ. ಇಷ್ಟು ದಿನ ಬ್ರಾಹ್ಮಣರನ್ನು ಬೈದಿದ್ದೇಕೆ ಎಂದು ಅವರಿಗೆ ಯಾರೂ ಹೇಳದಿದ್ದರೂ ಗೊತ್ತಾಗುತ್ತಿದೆ. ಪ್ರಕೃತಿಯೇ ಎಲ್ಲದಕ್ಕೂ ಉತ್ತರ ನೀಡುತ್ತಾ ಹೋಗುತ್ತಿದೆ. ಎಲ್ಲರ ಮುಖವಾಡಗಳೂ ಕಳಚಿಬೀಳುತ್ತಾ ಹೋಗುತ್ತಿದೆ.

ಪ್ರತಿಯೊಂದು ಉದ್ಯಮವೂ ಹಳ್ಳ ಹಿಡಿದಿದೆ. ಇಂಥ ಒಂದು ಉದ್ಯಮದಲ್ಲಿದ್ದವರು ಹಣ ಮಾಡುತ್ತಿದ್ದಾರೆ ಎನ್ನುವ ಹಾಗಿಲ್ಲ. ಲಾಕ್ ಡೌನ್ ಮುಗಿದ ನಂತರ ಪರಿಸ್ಥಿತಿ ಇನ್ನೂ ಭಯಾನಕ ಆಗಲಿದೆ. ಇಡೀ ಜಗತ್ತಿಗೆ ಉಪದೇಶ ಕೊಟ್ಟು ಬುದ್ಧಿ ಹೇಳುತ್ತಿದ್ದ ಪತ್ರಿಕೆಗಳೂ ಸೊರಗಿವೆ. ಹತ್ತು ಪುಟಗಳ ಜಾಹೀರಾತಿನ ನಂತರ, ಸುದ್ದಿ ಪ್ರಕಟಿಸುತ್ತಿದ್ದ ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದೂಸ್ತಾನ್ ಟೈಮ್ಸ್ ನಂಥ ಪತ್ರಿಕೆಗಳು ಈಗ ಕೇವಲ ಬಿಂಗಲಾಟಿ ಹತ್ತು ಪುಟ ಪ್ರಕಟಿಸುತ್ತಿವೆ. ಟೈಮ್ಸ್ ಆಫ್ ಇಂಡಿಯಾದಂಥ ಪತ್ರಿಕೆ ಉದ್ಯೋಗಿಗಳಿಗೆ ಬಾಗಿಲು ತೋರಿಸುತ್ತಿದೆ. ಟಿವಿ ಚಾನೆಲ್ಲುಗಳು ಟಿಆರ್ಪಿಯನ್ನು ಹೆಚ್ಚಿಸಿಕೊಂಡರೂ, ಸುಮೋ ಪಟುವಿನಂತೆ ಕೊಬ್ಬಿದರೂ, ರೆವಿನ್ಯೂ ಇಲ್ಲದೇ ಪರದಾಡುತ್ತಿವೆ. ಹಾರಬೇಕಾದ ವಿಮಾನ ಭೂಮಿಗೆ ಕಚ್ಚಿಕೊಂಡಿದೆ. ಮನುಷ್ಯ ಮಾಡುವ ಎಲ್ಲಾ ಉದ್ಯಮಗಳೂ ನೆಲಕಚ್ಚಿವೆ. ಮನುಷ್ಯ ಪ್ರಯತ್ನಗಳೆಲ್ಲ ಅವನ ಕಣ್ಣೆದುರೇ ನಿಷ್ಪ್ರಯೋಜಕ ಎಂದೆನಿಸಿಕೊಂಡಿದೆ. ಮನುಷ್ಯನಾದವನು ಪ್ರವಾಹದಲ್ಲಿ ಕೊಚ್ಚಿ ಹೋಗುವ ಹುಲ್ಲುಕಡ್ಡಿಯಂತಾಗಿದ್ದಾನೆ.

ಇಷ್ಟು ದಿನ ನಿಮ್ಮ ಉದ್ಧಾರ ಮಾಡುವವರು ನಾವು, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವವರು ನಾವು, ನಿಮ್ಮ ಪಾಪಗಳನ್ನೆಲ್ಲ ತೊಳೆದು ನಿಮಗೆ ಪುಣ್ಯಗಳನ್ನು ದಯಪಾಲಿಸುವವರೇ ನಾವು ಎಂದು ಜನರನ್ನು ನಂಬಿಸುತ್ತಿದ್ದ ಸ್ವಾಮೀಜಿಗಳು, ಜಗದ್ಗುರುಗಳು, ಅರ್ಚಕರು, ಪುರೋಹಿತರು, ಮುಲ್ಲಾಗಳು, ಮೌಲ್ವಿಗಳು, ಫಾದರುಗಳು, ಬಿಷಪ್ ಗಳು, ಆರ್ಚ್ ಬಿಷಪ್ ಗಳು ತಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಎಂದು ಅಡಗಿ ಕುಳಿತಿದ್ದಾರೆ. ಪೋಪ್ ಹೊರ ಬಂದು ಭಾಷಣ ಮಾಡಿದರೆ ಒಬ್ಬೇ ಒಬ್ಬ ಬಂದು ಕೇಳುತ್ತಿಲ್ಲ. ನಿಮ್ಮ ಭಾಷಣ ಯಾರಿಗೆ ಬೇಕಾಗಿದೆ ಎಂದು ಮುಸುಕೆಳೆದು ಮಲಗಿಬಿಡುತ್ತಿದ್ದಾರೆ. ಯಾವಾಗ ಇವರೆಲ್ಲ ದೇವಸ್ಥಾನ, ಮಠ, ಮಸೀದಿ, ಚರ್ಚ್ ಗಳಿಗೆ ಬರಬೇಡಿ ಎಂದು ಹೇಳಿದರೋ ಆಗಲೇ ಇವರೆಲ್ಲರ ಬಂಡವಾಳ ಮಕಾಡೆ ಮಲಗಿಬಿಟ್ಟವು. ಕಷ್ಟ ಬಂದಾಗಲೇ ಜನರಿಗೆ ದೇವರು ಬೇಕಾಗಿದ್ದು. ಹಿಂದೆಂದೂ ಕಾಣದ ಕಷ್ಟ ಬಂದಾಗ ದೇವಸ್ಥಾನ, ಮಸೀದಿ, ಮಠ, ಆಶ್ರಮ, ಚರ್ಚ್ ಗಳಿಗೆ ಬರಬೇಡಿ ಅಂದರೆ, ಜನರು ಇನ್ನ್ಯಾವಾಗ ಅಲ್ಲಿಗೆ ಹೋಗಬೇಕು? ಭಕ್ತರನ್ನು ಕಾಪಾಡುವ ಗುತ್ತಿಗೆ ಪಡೆದಿದ್ದ ಇವರೆಲ್ಲ expose ಆಗಿದ್ದಾರೆ.

ಹಾಗೆ ಆಗಿದ್ದೇ ಒಳ್ಳೆಯದಾಯಿತೇನೋ ? ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಮಠ, ಆಶ್ರಮ, ದೇವಸ್ಥಾನ, ಮಸೀದಿ, ಚರ್ಚುಗಳನ್ನು ಮಾಲ್ ಗಳಂತೆ ಕಮರ್ಷಿಯಲ್ ಸೆಂಟರನ್ನಾಗಿ ಮಾಡಿಕೊಂಡಿದ್ದರು. ಮಾಲ್ ಗಳಂತೆ ಈ ಎಲ್ಲಾ ಪೂಜಾ ಸ್ಥಾನಗಳನ್ನು ಮುಚ್ಚಿ ಎಂದು ಸರಕಾರ ಹೇಳದಿದ್ದರೆ, ಈ ಎಲ್ಲಾ ಧರ್ಮಗಳ ಧರ್ಮಗುರುಗಳು ಈ ಟೈಮಿನಲ್ಲಿ ಸಕತ್ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಕರೋನಾದಿಂದ ನಿಮ್ಮನ್ನು ನಾವು ಬಚಾವ್ ಮಾಡುತ್ತೇವೆ ಎಂದು ಮುಗ್ಧ ಜನರಿಗೆ ಮಂಕುಬೂದಿ ಎರಚಿ ಹಣ ದೋಚುತ್ತಿದ್ದರು. ಈ ಸಂದರ್ಭವನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದರು. ಈಗ ಒಬ್ಬನೇ ಒಬ್ಬ ಧರ್ಮಗುರು ಕರೋನಾದಿಂದ ನಿಮ್ಮನ್ನು ಕಾಪಾಡುತ್ತೇನೆ ಎಂದು ಹೇಳುವ ಸ್ಥಿತಿಯಲ್ಲಿ ಇದ್ದಾನಾ ? ಅವರಿಗೆ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕೋ ಸಾಕಾಗಿ ಹೋಗಿದೆ.

ಲಾಕ್ ಡೌನ್ ಮುಗಿದ ನಂತರ ನಿಮ್ಮಲ್ಲರ ಒಳಿತಿಗೆ ಜಪ ಮಾಡುತ್ತಿದ್ದೆ, ಹೋಮ ಮಾಡುತ್ತಿದ್ದೆ, ಪ್ರೇಯರ್ ಮಾಡುತ್ತಿದ್ದೆ ಎಂದು ಬೊಗಳೆ ಬಿಟ್ಟರೆ ಯಾರೂ ನಂಬುವುದಿಲ್ಲ. ಯಾವಾಗ ನೀವು ಇಲ್ಲಿಗೆ ಬರಬೇಡಿ ಎಂದು ಈ ಎಲ್ಲಾ ಧರ್ಮಗಳ ಗುರುಗಳು ಹೇಳಿದರೋ ಆಗಲೇ ಇವರ ಅಸಲಿಯತ್ತು ದಬಕ್ಕೆಂದು ಬಿದ್ದೋಯ್ತು ! ಇಲ್ಲಿ ತನಕ ಮಾಡಿದ್ದು ಬರೀ ವ್ಯಾಪಾರ ಎಂಬುದು ಸಾಬೀತಾಗಿ ಹೋಯಿತು. ಈಗ ಜನರಿಗೆ ತಾವು ನಂಬಿದ ದೇವರ ಹೊರತಾಗಿ ಮತ್ಯಾರೂ ಇಲ್ಲ. ಈ ಧರ್ಮಗುರುಗಳು, ದೇವಮಾನವರೆಲ್ಲ ಶುದ್ಧ ಕಪಟ ಎಂಬುದು ರುಜುವಾತಾಗಿ ಹೋಯಿತು. ಭಕ್ತರು ಹತ್ತಿರ ಬಂದರೆ ಇವರೆಲ್ಲ ದೂರ ದೂರ ಓಡಿಹೋಗುತ್ತಿದ್ದಾರೆ. ಕುಷ್ಠರೋಗಿಗಳನ್ನೂ ಆಲಂಗಿಸಿಕೊಳ್ಳುತ್ತಿದ್ದ ಪೋಪ್, ಜನರಿಗೆ ಕೈಕುಲುಕಲು ಭಯಪಡುತ್ತಿದ್ದಾರೆ. ಕರ್ನಾಟಕದ ಮಠಾಧಿಪತಿಗಳೆಲ್ಲಾ ಬ್ರಹ್ಮಕುಮಾರಿ ಕಾರ್ಯಕರ್ತರಂತೆ ಬಾಯಿಗೆ ಬಟ್ಟೆ ಕಟ್ಟಿಕೊಂಡು, ಗರ್ಭಗುಡಿಯಂಥ ಭದ್ರಕೋಟೆಗಳಾಗಿರುವ ತಮ್ಮ ತಮ್ಮ ರೂಮುಗಳನ್ನು ಸೇರಿಬಿಟ್ಟಿದ್ದಾರೆ. ಕರೋನಾದಿಂದ ಬಚಾವ್ ಆಗಲು ಮೂರೂ ಹೊತ್ತು ತಿನ್ನುತ್ತಿದ್ದ ದ್ರಾಕ್ಷಿ, ಗೋಡಂಬಿ, ಬಾದಾಮಿ ಬದಲು, ಎಗ್ ಬುರ್ಜಿ, ಉಳ್ಳಾಗಡ್ಡೆ, ಬೆಳ್ಳುಳ್ಳಿ, ಪಾನಿಪೂರಿ, ಪಿಜ್ಜಾ ತಿನ್ನಬೇಕು, ಅದೇ ದಿವ್ಯಔಷಧ ಎಂದರೆ ಇವರೆಲ್ಲಾ ಅದನ್ನೇ ತಿನ್ನುತ್ತಾರೆ. ಅಷ್ಟರಮಟ್ಟಿಗೆ ಧರ್ಮಗುರುಗಳ ಬಂಡವಾಳ ಬಯಲಾಗಿದೆ.

ಇನ್ನು ಜ್ಯೋತಿಷಿಗಳ ಪಾಡನ್ನಂತೂ ಹೇಳತೀರದು. ಮರ್ಯಾದೆ ಇದ್ದರೆ, ಇನ್ನು ಮುಂದೆ ಅವರು ತರಕಾರಿ, ಹಾಲನ್ನು ಮಾರಿಕೊಂಡು ಮಾನ ಉಳಿಸಿಕೊಳ್ಳಬೇಕು. ಸಂಪಾದಕರಾದ ಭಟ್ ಅವರು ಮೊನ್ನೆ ಒಂದು ಪ್ರಸಂಗ ಹೇಳುತ್ತಿದ್ದರು . ಮೊನ್ನೆ ಪತ್ರಿಕೆಯೊಂದರ ದಿನಭವಿಷ್ಯದಲ್ಲಿ ‘ಈ ವಾರ ನಿಮಗೆ ವಿದೇಶ ಪ್ರವಾಸ ಯೋಗ’ ಎಂದು ಜ್ಯೋತಿಷಿಯೊಬ್ಬರು ಬರೆದಿದ್ದರಂತೆ. ಅದು ಎರಡು ತಿಂಗಳ ಹಿಂದೆ ಬರೆದ ಭವಿಷ್ಯವಾಣಿ. ಈ ಜ್ಯೋತಿಷಿಗಳು ಹಣಕ್ಕಾಗಿ ಮೂರ್ನಾಲ್ಕು ತಿಂಗಳ ಭವಿಷ್ಯವನ್ನು ಸಮಯ ಸಿಕ್ಕಾಗ ಒಂದೇ ಸಲ ಬರೆದು ಕಳಿಸಿಕೊಟ್ಟಿದ್ದರ ಪರಿಣಾಮವಿದು. ಕರೋನಾ ಇವರ ಭವಿಷ್ಯವನ್ನೇ ಬರೆದು ಹಾಕಿದೆ.

ಕಣ್ಣು ಮುಚ್ಚಿ ಕುಳಿತು ಯೋಚಿಸಿದರೆ, ದೇವರೊಂದೇ ಸತ್ಯ, ಉಳಿದುದೆಲ್ಲ ಮೋಸ ಎಂಬುದು ಗೊತ್ತಾಗುತ್ತಿದೆ. ಪ್ರಕೃತಿ ಎಲ್ಲರನ್ನೂ ಲೆವೆಲ್ ಮಾಡುತ್ತಿದೆ. ಹಾಗೆ ಆಗುತ್ತಿರುವುದು ಒಳ್ಳೆಯದೇ !

Leave a Reply

Your email address will not be published. Required fields are marked *

error: Content is protected !!