Tuesday, 27th February 2024

ಜಾಣ ಮರೆವಿನ ಮರೆಯಲ್ಲಿ ದಲಿತ ಸಿಎಂ

ಅಶ್ವತ್ಥಕಟ್ಟೆ

ranjith.hoskere@gmail.com

ಕಾಂ ಗ್ರೆಸ್ ನಾಯಕರಿರುವ ಧಾರ್ಮಿಕ ಸಮಾವೇಶಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ಆಗಾಗ್ಗೆ ಕೇಳಿಬರುವ ಸರ್ವೇ ಸಾಮಾನ್ಯ ಮಾತೆಂದರೆ ‘ದಲಿತ ಮುಖ್ಯಮಂತ್ರಿ’ಯ ಆಗ್ರಹ. ಈ ಆಗ್ರಹವನ್ನು ಕಾಂಗ್ರೆಸ್ ಹೈಕಮಾಂಡ್ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದಕ್ಕಿಂತ ಮುಖ್ಯವಾಗಿ
ಹಲವು ದಲಿತ ಸಂಘಟನೆಗಳಿಗೆ, ದಲಿತ ಮಠಾಧೀಶರಿಗೆ ಹಾಗೂ ಕಾಂಗ್ರೆಸ್‌ನ ದಲಿತ ಮುಖಂಡರಿಗೆ ಈ ಹೇಳಿಕೆ ತಮ್ಮ ಸಮುದಾಯದ ಜನರನ್ನು ಮೆಚ್ಚಿಸಲಿರುವ ‘ಸುಲಭ’ ಮಾರ್ಗ ಎನ್ನುವಂತಾಗಿದೆ.

ದಲಿತ ಮುಖ್ಯಮಂತ್ರಿಯ ಕೂಗು ಬಂದಾಗಲೆಲ್ಲ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಒಂದು ವಾರದ ಮಟ್ಟಿಗೆ ಸುದ್ದಿಯಲ್ಲಿದ್ದು ಬಳಿಕ ‘ತಣ್ಣಗೆ’ ಮಲಗುತ್ತಾರೆ. ಕಳೆದ ವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ಬಳಿಕ ರಾಜ್ಯದಲ್ಲಿ ಎದ್ದ ‘ದಲಿತ ಸಿಎಂ’ ಕೂಗು ಅದರ ಮುಂದುವರಿದ ಭಾಗವೆಂದರೆ ತಪ್ಪಾಗುವುದಿಲ್ಲ. ರಾಜ್ಯದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿಯ ಕೂಗು ಮುನ್ನಲೆಗೆ ಬಂದಿತ್ತು. ಆದರೆ ಈ ಬಾರಿ ಈ ಕೂಗಿಗೆ ನೇರವಾಗಿ ಎಷ್ಟು ಬೆಂಬಲವಿತ್ತೋ, ಅಷ್ಟೇ ಬೆಂಬಲ ಅವರ ವರ ರಾಜಕೀಯ ಲಾಭಕ್ಕೆ ಪರೋಕ್ಷ ಬೆಂಬಲವನ್ನು ನಾಯಕರು ನೀಡಿದ್ದರು. ಇಂದಿನ ಪರಿಸ್ಥಿತಿಯಲ್ಲಿ ದಲಿತ ನಾಯಕರ ಈ ಕೂಗನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಇಲ್ಲದಿದ್ದರೂ, ಬಹುತೇಕರು ನಮ್ಮದೊಂದಿರಲಿ ಎನ್ನುವ ಮನಃಸ್ಥಿತಿಯಲ್ಲಿ ಹೇಳಿಕೆ ನೀಡಿದರು.

ಅದರಲ್ಲಿಯೂ ಈ ಬಾರಿ ದಲಿತ ಮುಖ್ಯಮಂತ್ರಿ ಮಾತನ್ನು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿರುವ ರಾಜಣ್ಣ, ಜಮೀರ್ ಅಹ್ಮದ್ ಸೇರಿದಂತೆ ಅನೇಕರು ಹೇಳಿದ್ದು ಅಚ್ಚರಿಗೆ ಕಾರಣವಾಗಿತ್ತು. ಈ ರೀತಿ ಸಿದ್ದರಾಮಯ್ಯ ಅವರು ಬಣದಿಂದ ಹೇಳಿಕೆ ಬರುತ್ತಿದ್ದರೂ, ಮೌನವಾಗಿರುವ ‘ಅಹಿಂದ’ ನಾಯಕ ಎನ್ನುವ ವರ್ಚಸ್ಸನ್ನು ಗಟ್ಟಿಗೊಳಿಸಿ ಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ಅವರಿಗೂ ಗೊತ್ತಿತ್ತು, ಸದ್ಯಕ್ಕೆ ‘ದಲಿತ ಮುಖ್ಯಮಂತ್ರಿ’ ಎನ್ನುವುದೇ ಅಪ್ರಸ್ತುತ ಎಂದು!

ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರಕಾರ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ ದಲಿತ ಮುಖ್ಯಮಂತ್ರಿಯ ಕೂಗು ಮುಂದಿನ ಐದು ವರ್ಷ ಮುನ್ನಲೆಗೆ ಬರುವುದಿಲ್ಲ ಎನ್ನುವ ಮಾತುಗಳಿದ್ದವು. ಏಕೆಂದರೆ ಬಹುಮತದ ಸರಕಾರವಿರುವುದರಿಂದ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ರುತ್ತಾರೆ ಅಥವಾ ಕಾಂಗ್ರೆಸ್‌ನಲ್ಲಿ ಆಗಾಗ್ಗೆ ಕೇಳಿಬರುವ ಅಧಿಕಾರ ಹಂಚಿಕೆಯ ಸೂತ್ರದಂತೆ ಎರಡುವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನದ ಒಲಿಯುತ್ತದೆ. ಈ ಎರಡರಲ್ಲಿ ಯಾವುದು ನಡೆದರೂ, ದಲಿತ ಮುಖ್ಯಮಂತ್ರಿ ಬೇಡಿಕೆ ಈಡೇರುವುದಿಲ್ಲ ಎನ್ನುವುದು ಸ್ಪಷ್ಟವಾಗಿತ್ತು.

ಆದರೆ, ಕಾಂಗ್ರೆಸ್ ಹೈಕಮಾಂಡ್‌ಗೆ ಅಚ್ಚರಿಯಾಗುವ ರೀತಿ ಯಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳು ಕಳೆಯುವ ಮೊದಲೇ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಅಽಕಾರ ಹಂಚಿಕೆಯ ಸೂತ್ರದ ಮಾತುಗಳು ಪದೇಪದೆ ಕೇಳಿಬಂದ ಬೆನ್ನಲ್ಲೇ, ದಲಿಯ ಮುಖ್ಯಮಂತ್ರಿ ಎನ್ನುವ ಮಾತು ಜೋರಾಗಿ ಇನ್ನಷ್ಟು ಗೊಂದಲವನ್ನು ಸೃಷ್ಟಿಸಿತ್ತು. ಆ ಸಮಯದಲ್ಲಿ ಪರಮೇಶ್ವರ್ ಮುಖ್ಯಮಂತ್ರಿಯಾದರೆ ಅಡ್ಡಿಯಿಲ್ಲವೆಂದು ಕೆಲ ನಾಯಕರು ಹೇಳಿದರೆ, ಪ್ರಿಯಾಂಕ್ ಖರ್ಗೆ ಆದರೆ ತಪ್ಪೇನು ಎನ್ನುವ ಮಾತನ್ನು ಕೆಲವರು ಹೇಳಿದರು. ಈ ಎಲ್ಲ ಗೊಂದಲಗಳನ್ನು ನಾಲ್ಕು ದಿನಗಳ ಹಿಂದೆ ನಡೆದ ‘ಬ್ರೇಕ್-ಸ್ಟ್ ಮೀಟಿಂಗ್’ ಇತಿಶ್ರೀ ಹಾಡಿದರೂ, ದಲಿತ ಮುಖ್ಯಮಂತ್ರಿಯ ಕೂಗು ಬಂದು ಹೋಗಿದೆ. ಅದಕ್ಕೆ ಪೂರಕವಾಗಿ ಭಾನುವಾರ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎನ್ನುವ ಮೂಲಕ ಮತ್ತೆ ದಲಿತ ಮುಖ್ಯಮಂತ್ರಿಯ ಕೂಗನ್ನು ಮುನ್ನಲೆಗೆ ತಂದಿದ್ದಾರೆ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯ ಮಾತು ಮುನ್ನೆಲೆಗೆ ಬಂದಾಗಲೆಲ್ಲ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ
ಅವರ ಹೆಸರು ಬರುತ್ತಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯ ವೇಳೆಯೂ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟು, ಕರ್ನಾಟಕದ ಮುಖ್ಯಮಂತ್ರಿಯಾಗುವ ಸಾಧ್ಯತೆ ಯಿದೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಅವರನ್ನು ಬಿಟ್ಟರೆ ಅತಿಹೆಚ್ಚು ಬಾರಿ ಕೇಳಿಬಂದಿರುವ ಹೆಸರೆಂದರೆ ಡಾ.ಜಿ. ಪರಮೇಶ್ವರ್ ಅವರದ್ದಾಗಿದೆ. ಕೆಪಿಸಿಸಿ ಇತಿಹಾಸದಲ್ಲಿ ಸುದೀರ್ಘ ಕಾಲ ಅಧ್ಯಕ್ಷರಾಗಿದ್ದ ಅವರ ಹೆಸರನ್ನು ಬಿಟ್ಟರೆ, ಇತ್ತೀಚಿಗೆ ಕೇಳಿಬಂದಿದ್ದು ಪ್ರಿಯಾಂಕ್ ಖರ್ಗೆ ಅವರದ್ದು. ಸುಭದ್ರ ಸರಕಾರವಿರುವಾಗ, ಮುಖ್ಯಮಂತ್ರಿ ಬದಲಾವಣೆಯೇ ಇಲ್ಲ ಎನ್ನುವಾಗ ದಲಿತ ಮುಖ್ಯಮಂತ್ರಿ ಕೂಗಿಗೆ ಪಕ್ಷದಲ್ಲಿರುವ ಹೊಂದಾಣಿಕೆ ಕೊರತೆಯೇ ಕಾರಣ ಎನ್ನುವ ಮಾತುಗಳು ಕೇಳಿಬಂದಿದ್ದವು. ಸಿದ್ದರಾಮಯ್ಯ ಆಪ್ತರು ಪರಮೇಶ್ವರ್ ಹೆಸರನ್ನು ತೇಲಿಬಿಟ್ಟರು ಎನ್ನುವ ಕಾರಣಕ್ಕೆ, ಡಿ.ಕೆ.ಶಿವಕುಮಾರ್ ಹಾಗೂ ತಟಸ್ಥ ಬಣದಿಂದ ಪ್ರಿಯಾಂಕ್ ಖರ್ಗೆ ಅವರನ್ನು ಹೆಸರನ್ನು ಮುನ್ನಲೆಗೆ ತರಲಾಗಿತ್ತು. ಆದರೆ ಇದ್ಯಾವುದು ಸಾಧ್ಯವಿಲ್ಲ ಎನ್ನುವುದು ಹೆಸರು ತೇಲಿಬಿಟ್ಟವರಿಗೂ ತಿಳಿದಿತ್ತು ಎನ್ನುವುದು ಬೇರೆ ವಿಷಯ.

ಹಾಗೇ ನೋಡಿದರೆ ಕರ್ನಾಟಕದಲ್ಲಿ ಎದ್ದಿರುವ ‘ದಲಿತ ಮುಖ್ಯಮಂತ್ರಿ’ಯ ಕೂಗು ಇಂದು ಮೊನ್ನೆಯದಲ್ಲ. ದಲಿತ ಮುಖ್ಯಮಂತ್ರಿ ಕೂಗು ಬಲವಾಗಿ ೨೦೧೩ರಲ್ಲಿಯೇ ಕೇಳಿ ಬಂದಿತ್ತು. ಇಂದಿನ ಗೃಹ ಸಚಿವ ಡಾ.ಜಿ. ಪರಮೇಶ್ವರ್ ೨೦೧೩ರ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗಲೇ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎನ್ನುವ ಒತ್ತಡಗಳು ಕಾಂಗ್ರೆಸ್ ಹೈಕಮಾಂಡ್ ಮೇಲೆ ಬಂದಿತ್ತು. ಆದರೆ ಆ ಚುನಾವಣೆಯಲ್ಲಿ ಡಾ.ಜಿ. ಪರಮೇ ಶ್ವರ್ ಸೋಲನುಭವಿಸಿದ್ದರಿಂದ ದಲಿತ ಮುಖ್ಯಮಂತ್ರಿಯ ಕೂಗು ಅಲ್ಲಿಯೇ ಕಮರಿ ಹೋಗಿತ್ತು. ಅದಾದ ಬಳಿಕ ೨೦೧೮ ರಲ್ಲಿಯೂ ಕೇಳಿಬಂದಿತ್ತಾದರೂ, ಕಾಂಗ್ರೆಸ್‌ಗೆ ಮ್ಯಾಜಿಕ್ ನಂಬರ್ ಸಿಗದೇ ಇದಿದ್ದರಿಂದ ಅನಿವಾರ್ಯವಾಗಿ ‘ಹೊಂದಾಣಿಕೆ’ ರಾಜಕೀಯ ಮಾಡಬೇಕಾಗಿದೆ ಎನ್ನುವ ಸಬೂಬಿನ ಮೂಲಕ ದಲಿತರಿಗೆ ಮುಖ್ಯಮಂತ್ರಿ ಪಟ್ಟದ ಬದಲಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಿ ‘ಸಂತೈಸುವ’ ಪ್ರಯತ್ನವನ್ನು ಕಾಂಗ್ರೆಸ್ ವರಿಷ್ಠರು ಮಾಡಿ ಕೈತೊಳೆದು ಕೊಂಡರು.

ಕರ್ನಾಟಕದಲ್ಲಿ ಪ್ರತಿ ಚುನಾವಣೆಯ ಸಮಯದಲ್ಲಿ ಅಥವಾ ರಾಜಕೀಯ ಅಸ್ಥಿರತೆಯ ಸಮಯದಲ್ಲಿ ಕೇಳಿ ಬರುವ ದಲಿತ ಮುಖ್ಯಮಂತ್ರಿಯ ಕೂಗು ಕೇವಲ ಕಾಂಗ್ರೆಸ್ ನಲ್ಲಿ ಮಾತ್ರ ಕೇಳಿಬರುವುದಿಲ್ಲ. ಬದಲಿಗೆ ಬಿಜೆಪಿ, ಜೆಡಿಎಸ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಕೇಳಿಬರುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಕೇಳಿಬರುವಷ್ಟು ದೊಡ್ಡಮಟ್ಟದಲ್ಲಿ ಈ ಎರಡೂ ಪಕ್ಷದಲ್ಲಿ ಕೇಳಿಬರುವುದಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ಹೊರತಾದ ಮುಖ್ಯಮಂತ್ರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅದೇ ರೀತಿ ಬಿಜೆಪಿಯಲ್ಲಿ ಮೇಲ್ವರ್ಗ, ಅದರಲ್ಲಿಯೂ ಲಿಂಗಾಯತ ಸಮುದಾಯದವರೇ ಪ್ರಧಾನ ‘ವೋಟ್ ಬ್ಯಾಂಕ್’ ಆಗಿರುವುದರಿಂದ ಅಲ್ಲಿಯೂ ದೊಡ್ಡ ಮಟ್ಟದಲ್ಲಿ ಕೇಳಿಬರುವುದಿಲ್ಲ.

ಬಿಜೆಪಿ-ಜೆಡಿಎಸ್‌ಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಮಾತು ಕೇಳಿಬರುವುದಕ್ಕೆ ಮುಖ್ಯಕಾರಣವೇ ದಶಕಗಳಿಂದ ಕಾಂಗ್ರೆಸ್‌ ನೊಂದಿಗೆ ಗಟ್ಟಿಯಾಗಿ ರುವ ನಿಂತಿರುವ ದಲಿತ ಮತಗಳು. ಕರ್ನಾಟಕದಲ್ಲಿ ಜನತಾ ದಳ ಉತ್ತುಂಗ ಸ್ಥಿತಿಯಲ್ಲಿದ್ದಾಗಲೂ, ದಲಿತ ಸಮುದಾಯ ಗಳು ಕಾಂಗ್ರೆಸ್ ಅನ್ನು ಕೈಬಿಟ್ಟಿರಲಿಲ್ಲ. ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದಿದ್ದು, ಅದರಲ್ಲಿ ಅರ್ಧಕ್ಕೂ ಹೆಚ್ಚು ಅವಧಿ ಕಾಂಗ್ರೆಸ್ ಆಡಳಿತ ನಡೆಸಿದ್ದರೆ ಅದಕ್ಕೆ ಕಾಂಗ್ರೆಸ್‌ನೊಂದಿಗೆ ಗಟ್ಟಿಯಾಗಿ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯ ಗಳು ನಿಂತಿರುವುದು ಒಂದು ಕಾರಣ.

ಇಷ್ಟು ಗಟ್ಟಿಯಾಗಿ ದಲಿತ, ಅಲ್ಪಸಂಖ್ಯಾತರು ನಿಂತಿದ್ದರೂ ಇಲ್ಲಿಯವರೆಗೆ ಒಬ್ಬ ದಲಿತ ಅಥವಾ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಮಾಡಿಲ್ಲ. ಅಲ್ಪಸಂಖ್ಯಾತ ಸಮುದಾಯದಲ್ಲಿ ನಾಯಕತ್ವದ ಕೊರತೆಯಿರುವುದರಿಂದ, ‘ಸಚಿವ ಸ್ಥಾನಕ್ಕೆ’ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಆದರೆ ದಲಿತರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ ಸೇರಿದಂತೆ ಹಲವು ನಾಯಕರು ಬೆಳೆದಿದ್ದಾರೆ. ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರೂ, ಅವರು ಎಂದಿಗೂ ಮುಖ್ಯಮಂತ್ರಿಯಾಗಲಿಲ್ಲ. ೨೦೦೪ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ವಿದ್ದರೂ, ಜೆಡಿಎಸ್‌ನ ಮಾತಿಗೆ ಕಟ್ಟುಬಿದ್ದು ಅದನ್ನು ಧರ್ಮ ಸಿಂಗ್ ಅವರಿಗೆ ನೀಡಲಾಯಿತು.

ಅಲ್ಲಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಕೇಳಿಬರುತ್ತಲೇ ಇದೆ. ೨೦೧೩ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಾ.ಜಿ. ಪರಮೇಶ್ವರ್ ಇಬ್ಬರೂ ಮುಖ್ಯಮಂತ್ರಿಯ ರೇಸ್‌ನಲ್ಲಿದ್ದರು. ಇಡೀ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವ ಗುಟ್ಟನ್ನು ಬಿಟ್ಟುಕೊಡದೇ ‘ಸಾಮೂಹಿಕ ನಾಯಕತ್ವ’ ದಲ್ಲಿ ಚುನಾವಣೆ ಎದುರಿಸಿದ್ದರಿಂದ, ಪರಮೇಶ್ವರ್ ಅವರಿಗೆ ಸಿಎಂ ಗಾದಿ ಸಿಗುವ ಸಾಧ್ಯತೆಯಿದೆ ಎನ್ನುವ ವಿಶ್ವಾಸದಲ್ಲಿ ದಲಿತರಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ಆಗಲೂ ‘ಭ್ರಮ ನಿರಸನ’ವಾಗಿದ್ದು ಸುಳ್ಳಲ್ಲ.

ಈ ಎಲ್ಲವನ್ನು ಮೀರಿ ಈ ಬಾರಿ ವಿಧಾನಸಭಾ ಚುನಾವಣೆಗೂ ಮೊದಲು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುವ ಮೂಲಕ ‘ದಲಿತರಿಗೆ ಪಕ್ಷದ ಅತ್ಯುನ್ನತ್ತ ಹುದ್ದೆ’ ಎನ್ನುವ ಸಂದೇಶವನ್ನು ಕಾಂಗ್ರೆಸ್ ರವಾನಿಸಿತ್ತು. ಒಂದು ಹಂತದಲ್ಲಿ ದಲಿತ ಸಮುದಾಯಗಳು
ಈ ‘ಮರ್ಜಿ’ಗೆ ಬಿದ್ದು, ಮತವನ್ನು ಕೊಟ್ಟಿದ್ದವು. ಆದರೆ ಮುಖ್ಯಮಂತ್ರಿ ಸ್ಥಾನ ಮಾತ್ರ ದಲಿತರಿಗೆ ಖಾಲಿಯಿಲ್ಲ ಎನ್ನುವುದು ಚುನಾವಣಾ ಸಮಯದಲ್ಲಿಯೇ ಸ್ಪಷ್ಟವಾಗಿತ್ತು.

ಹಾಗೇ ನೋಡಿದರೆ, ದಲಿತ ಮುಖ್ಯಮಂತ್ರಿಯ ಕೂಗು ಬಿಜೆಪಿಯಲ್ಲಿ ಈ ಪ್ರಮಾಣದಲ್ಲಿ ಬರುವುದಿಲ್ಲ. ಏಕೆಂದರೆ, ಈ ಸಮುದಾಯಗಳ ಮತಗಳ ಮೇಲೆ ಕಾಂಗ್ರೆಸ್ ‘ಅವಲಂಬಿಸಿದಷ್ಟು’ ಬಿಜೆಪಿ ಅವಲಂಬಿತವಾಗಿಲ್ಲ. ಬಿಜೆಪಿ ಯೊಂದಿಗಿರುವ ದಲಿತರೂ, ‘ಅವಕಾಶ’ ಸಿಕ್ಕರೆ ಸಾಕುವ ಎನ್ನುವ ಮನಃಸ್ಥಿತಿಯಲ್ಲಿರುವುದರಿಂದ, ಕಾಂಗ್ರೆಸ್‌ನಲ್ಲಿ ಆಗುವಂತಹ ಗೊಂದಲ ಬಿಜೆಪಿಯಲ್ಲಿ ಆಗುವುದಿಲ್ಲ ಎನ್ನುವುದು ಸ್ಪಷ್ಟ. ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೀಸಲಿನೊಂದಿಗೆ ರಾಜಕೀಯ ಮೀಸಲು ಅಗತ್ಯ. ಆದರೆ ರಾಜಕೀಯ ಮೀಸಲು ಕೇವಲ ಪಂಚಾಯಿತಿ
ಮಟ್ಟಕ್ಕೆ ಅಥವಾ ಶಾಸಕ ಸ್ಥಾನಕ್ಕೆ ಸೀಮಿತವಾಗಬಾರದು. ಬದಲಿಗೆ, ಆಯಕಟ್ಟಿ, ಪ್ರಮುಖ ಹುದ್ದೆಗಳಿಗೆ ಸಿಗುವಂತಾಗಬೇಕು. ಆದರೆ ಬಹುತೇಕ ರಾಜಕೀಯ ಪಕ್ಷಗಳು, ದಲಿತ ಮತಗಳನ್ನು ಬಯಸುತ್ತಿದ್ದಾರೆ ಹೊರತು ಅಧಿಕಾರ ನೀಡುವ ಸಮಯದಲ್ಲಿ ದಲಿತರನ್ನು ‘ಮರೆಯುವ’ ಜಾಣ ಮರೆವು
ಎಲ್ಲ ಪಕ್ಷದಲ್ಲಿಯೂ ಸರ್ವೇಸಾಮಾನ್ಯವಾಗಿದೆ. ಈ ಜಾಣ ಮರೆವು ಮರೆಯಾಗುವ ತನಕ ‘ದಲಿತ ಮುಖ್ಯಮಂತ್ರಿ’ ಎನ್ನುವ ಕೂಗು ಕನಸಾಗಿರಲಿದೆ ಹೊರತು, ನನಸಾಗುವುದು ಕಷ್ಟದ ವಿಷಯ.

Leave a Reply

Your email address will not be published. Required fields are marked *

error: Content is protected !!