Tuesday, 27th February 2024

ಮುಷ್ಟಿ ಪದ ಎಷ್ಟು ಸಲ ಬಂತೆಂದು ಮುಷ್ಟಿಯಲ್ಲೇ ಎಣಿಸಿ !

ತಿಳಿರು ತೋರಣ

srivathsajoshi@yahoo.com

ಮುಷ್ಟಿಯ ಬಗೆಗೆ ಮುಷ್ಟಿ ತುಂಬ ಮಾಹಿತಿ-ಮನೋರಂಜನೆ ಬೆರೆಸಿದ ಹರಟೆ. ಇಷ್ಟವಾದರೆ ಮುಷ್ಟಿಯಿಂದ ಹೆಬ್ಬೆರಳನ್ನಷ್ಟೇ ಮೇಲಕ್ಕೆತ್ತಿ ದಾಗಿನ ಮುದ್ರೆ ತೋರಿಸಿ. ಇಷ್ಟವಾಗದಿದ್ದರೆ… ಮನಸ್ಸಿನಲ್ಲೇ ನನ್ನತ್ತ ಬಲವಾದೊಂದು ಮುಷ್ಟಿಪ್ರಹಾರ ಮಾಡಿಬಿಡಿ, ಅದಕ್ಕೇನಂತೆ!

‘ಅಬ್ಬರಿಸಿ ಬಲುಮುಷ್ಟಿಗಳ ನಭ| ಕೆಬ್ಬಿಸುತ ಕೆಯ್ದುಡುಕಿದರು ಸುರ| ರುಬ್ಬಿರಿಯೆ ಸುಳಿಸಿದರು ಮುಷ್ಟಿಯ ಸೂಳುಪಾಳಿನಲಿ… ಸಾಮಾನ್ಯವಾಗಿ ನಾನು
ಕುಮಾರವ್ಯಾಸನಿಂದ ಅಲ್ಲೊಂದು ಇಲ್ಲೊಂದು ಷಟ್ಪದಿಯನ್ನು ಸಂದರ್ಭೋಚಿತವಾಗಿ ಕಡ ತೆಗೆದುಕೊಂಡು ಅಂಕಣಬರಹವೆಂಬ ರವೆಉಂಡೆಗೆ ದ್ರಾಕ್ಷಿ ಲವಂಗ ಗೋಡಂಬಿಗಳಂತೆ ಬಳಸಿಕೊಳ್ಳುತ್ತೇನೆ. ಹಾಗಂತ, ಇಡೀ ಕರ್ಣಾಟ ಭಾರತ ಕಥಾಮಂಜರಿಯನ್ನು ಅರೆದು ಕುಡಿದಿದ್ದೇನೆ ಎಂದಲ್ಲ! ಆ ತಪ್ಪು ಕಲ್ಪನೆ ದಯವಿಟ್ಟು ಮಾಡಬೇಡಿ.

ಏನೋ ಚೂರುಪಾರು ಆಸಕ್ತಿ ಇದೆಯೇ ಹೊರತು ಪಾಂಡಿತ್ಯ ಇಲ್ಲ. ಭಾಮಿನಿ ಷಟ್ಪದಿಗಳೆಂದರೆ ನನಗೆ ತುಂಬ ಇಷ್ಟ ಎನ್ನುವ ಕಾರಣವನ್ನಷ್ಟೇ ಹೇಳಬಲ್ಲೆ. ಹಾಗೆ ಇಂದಿನ ಲೇಖನದ ಆರಂಭಿಕ ಅಲಂಕಾರಕ್ಕೆ ಒಂದು ಭಾಮಿನಿ ಭಾಗವನ್ನು ಆಯ್ದುಕೊಂಡಿದ್ದೇನೆ. ಆದರೆ ಇದು ಕುಮಾರವ್ಯಾಸ ನದಲ್ಲ; ಪ್ರಸಿದ್ಧಿಯಲ್ಲಿ ಆತನಿಗಿಂತ ತುಸು ಕಡಿಮೆ ಆದರೆ ಪ್ರತಿಭೆಯಲ್ಲಿ ಅಷ್ಟೇ ಶ್ರೇಷ್ಠನಾದ ಕುಮಾರವಾಲ್ಮೀಕಿ ಬರೆದದ್ದು. ತೊರವೆ ರಾಮಾಯಣ ಗ್ರಂಥದಿಂದ ಆಯ್ದುಕೊಂಡದ್ದು.

ಇಲ್ಲೂ ಅಷ್ಟೇ, ತೊರವೆ ರಾಮಾಯಣದಲ್ಲಿ ಬರುತ್ತದೆಂದು ಒಂದು ಪರಾಮರ್ಶನ ಗ್ರಂಥದಲ್ಲಿ ನಮೂದಿಸಿದ್ದಿತ್ತು, ನಾನು ಅಲ್ಲಿಂದ ಎತ್ತಿಕೊಂಡೆ. ತೊರವೆ ರಾಮಾಯಣವನ್ನು ಉರು ಹೊಡೆದಿರುವವನು ಎಂದು ಪೋಸು ಕೊಡಲಿಕ್ಕೆ ಖಂಡಿತ ಅಲ್ಲ. ಈ ಷಟ್ಪದಿಯಲ್ಲಿ, ಮುಷ್ಟಿಗಳನ್ನು ನಭಕ್ಕೆಬ್ಬಿಸುತ
ಕೈದುಡುಕಿದರು… ಎಂಬ ಚಿತ್ರಣ ನನಗೆ ಬಹಳ ಹಿಡಿಸಿತು. ಯೋಧ ಸಮೂಹವು ಮುಷ್ಟಿಗಳನ್ನು ಆಕಾಶದೆಡೆಗೆ ತೂರುತ್ತ ಆವೇಶದಿಂದ ನಡೆಯುತ್ತಿರುವ ದೃಶ್ಯ. ಜನ ಗುಂಪು ಕಟ್ಟಿಕೊಂಡು ಜೈಕಾರ ಹಾಕುವಾಗ, ಚಳವಳಿಗಳಲ್ಲಿ ಘೋಷಣೆ ಕೂಗುವಾಗ ಹಾಗೆಯೇ ತಾನೆ ಮಾಡುವುದು? ಅಂತಹ ಜೈಕಾರಗಳಾಗಲೀ ಘೋಷಣೆ ಹರತಾಳಗಳಾಗಲೀ ಅಲ್ಲವಾದರೂ ಮುಷ್ಟಿಯನ್ನೇ ಇಂದಿನ ವಿಷಯವಾಗಿ ಎತ್ತಿಕೊಂಡರೆ ಹೇಗೆ? ಎಂಬ ಆಲೋಚನೆ ಬಂತು.

ಮುಷ್ಟಿಯ ಬಗೆಗೆ ಮುಷ್ಟಿ ತುಂಬ ಮಾಹಿತಿ-ಮನೋರಂಜನೆ ಬೆರೆಸಿದ ಹರಟೆ. ಇಷ್ಟವಾದರೆ ಮುಷ್ಟಿಯಿಂದ ಹೆಬ್ಬೆರಳನ್ನಷ್ಟೇ ಮೇಲಕ್ಕೆತ್ತಿದಾಗಿನ
ಮುದ್ರೆ ತೋರಿಸಿ. ಇಷ್ಟವಾಗದಿದ್ದರೆ… ಮನಸ್ಸಿನಲ್ಲೇ ನನ್ನತ್ತ ಬಲವಾದೊಂದು ಮುಷ್ಟಿಪ್ರಹಾರ ಮಾಡಿಬಿಡಿ, ಅದಕ್ಕೇನಂತೆ! ಮೊದಲಿಗೆ ಪಾವೆಂ ಆಚಾರ್ಯರು ಪದಾರ್ಥ ಚಿಂತಾಮಣಿಯಲ್ಲಿ ಮುಷ್ಟಿಯನ್ನು ಹೇಗೆ ಹಿಡಿದಿಟ್ಟಿದ್ದಾರೆ ಅಥವಾ ಬಿಡಿಸಿಟ್ಟಿದ್ದಾರೆ ನೋಡೋಣ: ಮುಷ್ಟಿ ಪದ ಸಂಸ್ಕೃತ ಮೂಲದ್ದು. ಅರ್ಥ ಎಲ್ಲರಿಗೂ ಗೊತ್ತಿರುವುದೇ. ಒಂದು ಹಿಡಿಯಷ್ಟು, ಅಥವಾ ಒಂದು ಹಿಡಿಯೊಳಗೆ ಅಡಗುವಂಥದ್ದು. ಕೈಬೆರಳುಗಳನ್ನೆಲ್ಲ ಮಡಚಿ
ಕೊಂಡಾಗ ರೂಪುಗೊಳ್ಳುವಂಥದ್ದು. ಉದಾ: ಒಂದು ಮುಷ್ಟಿ ಅಕ್ಕಿ ಭಿಕ್ಷೆ ಹಾಕಿ ಕಳುಹಿಸಿದಳು, ಮುಷ್ಟಿ ತೋರಿಸಿ ಹೆದರಿಸುವುದು, ಮುಷ್ಟಿಯಿಂದ ಗುದ್ದುವುದು ಇತ್ಯಾದಿ. ಕೃಷ್ಣ-ಬಲರಾಮರೊಡನೆ ಮುಷ್ಟಿಯುದ್ಧ ಮಾಡಿದ ಪುಂಡನಿಗೆ ಮುಷ್ಟಿಕನೆಂದೇ ಹೆಸರು.

ಮುಷ್ಟಿಯನ್ನು ನಾವು ಸಾಹಿತ್ಯಾಲಂಕಾರವಾಗಿಯೂ ಬಳಸುತ್ತೇವೆ. ಎಲ್ಲ ಅಧಿಕಾರವನ್ನೂ ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿದ್ದಾನೆ ಎನ್ನುತ್ತೇವೆ. ಮುಷ್ಟಿ ಬಿಚ್ಚುವವನಲ್ಲ ಎನ್ನುತ್ತೇವೆ. ಮೊದಲನೆಯವ ಅಧಿಕಾರದಾಹಿ, ಇನ್ನೊಬ್ಬ ಜಿಪುಣ. ಕಪಿ(ಕೋತಿ)ಯು ಮುಷ್ಟಿಯಲ್ಲೇನನ್ನಾದರೂ ಬಚ್ಚಿಟ್ಟುಕೊಂಡರೆ ಅದರ ಬಿಗಿಯಾದ ಮುಷ್ಟಿಯಿಂದ ಬಿಡಿಸಿ ತೆಗೆಯುವುದು ಕಷ್ಟವಿದೆ. ಆದ್ದರಿಂದಲೇ ಕಪಿಮುಷ್ಟಿ ಎಂದರೆ ಬಿಗಿಯಾದ ಹಿಡಿತ ಎಂದು ಅರ್ಥ. ಮುಷ್ಟಿಕ ಅಂದರೆ ಅಕ್ಕಸಾಲಿಗ ಎಂಬರ್ಥವೂ ಇದೆ. ಸಂಕ್ಷೇಪಿಸಿದ ಗ್ರಂಥಕ್ಕೂ ಮುಷ್ಟಿ ಎಂಬ ಅಭಿಧಾನವಿದೆ.

ಒಂದು ಹಿಡಿಯೊಳಗೆ ಕೂಡುವಷ್ಟು ಚಿಕ್ಕದು ಎಂಬ ಭಾವ. ಬಹುಶಃ ಇಂಗ್ಲಿಷ್‌ನಲ್ಲಿ ಡೈಜೆಸ್ಟ್ (ರೀಡರ್ಸ್ ಡೈಜೆಸ್ಟ್ ಇದ್ದಂತೆ) ಎನ್ನುವುದನ್ನು ಮುಷ್ಟಿ ಎನ್ನಬಹುದೇನೋ. ಮುಷ್ಟಿಯ ವ್ಯಾಪ್ತಿ ಇಷ್ಟೆಲ್ಲ ಇದ್ದರೂ ಈ ಶಬ್ದದ ಮೂಲಕ್ಕೆ ಹೋದರೆ ಸ್ವಲ್ಪ ಕೌತುಕವಾಗುತ್ತದೆ. ಏಕೆಂದರೆ ಅದು ಸಂಸ್ಕೃತದ ಬಹಳ ಪ್ರಾಚೀನ ಧಾತುವಾದ ಮುಷ್ ಎಂಬುದರಿಂದ ಹುಟ್ಟಿದ್ದು. ಅದರ ಅರ್ಥ ಋಗ್ವೇದದಲ್ಲೇ ಬರುತ್ತದೆ- ಕದಿ, ಕಸಿದುಕೊಳ್ಳು, ಸೂರೆ ಮಾಡು,
ಬಲಾತ್ಕಾರ ಮಾಡು ಇತ್ಯಾದಿ. ಕದ್ದದ್ದನ್ನು ಬಚ್ಚಿಟ್ಟು ಕೊಳ್ಳುವುದೂ ಮುಷ್ಟಿಯಲ್ಲೇ ಅನ್ನಿ. ಇಲಿ ಮೂಷಿಕ ಆದದ್ದು ಅದು ಕದಿಯುವುದರಿಂದಲೋ ಅಡಗಿಕೊಳ್ಳುವುದರಿಂದಲೋ ಹೇಳುವುದು ಕಷ್ಟ.

ಅಕ್ಕಸಾಲಿಗ ಮುಷ್ಟಿಕನಾಗುವುದು ಬಹುಶಃ ಆಭರಣ ಮಾಡಲು ಕೊಟ್ಟ ಚಿನ್ನದಲ್ಲಿ ಆತ ಒಂದಿಷ್ಟು ಕದಿಯದೇ ಬಿಡ ಎಂಬ ಜಾನಪದ ಪ್ರತೀತಿಯಿಂದಿರ ಬೇಕು. ಅಕ್ಕಸಾಲಿಗ ಆಪ್ತನಲ್ಲ, ಅಕ್ಕನ ಚಿನ್ನವಾದರೂ ಅಕ್ಕಸಾಲಿಗ ಬಿಡ ಅಂತೆಲ್ಲ ಗಾದೆಗಳೇ ಇವೆಯಲ್ಲ!’ ಅದು ಪಾವೆಂ  ಅಕ್ಷರಮುಷ್ಟಿ. ಒಂದು ಪ್ಯಾರಗ್ರಾಫ್‌ನಲ್ಲೇ ಪಿಎಚ್‌ಡಿ ಪ್ರಬಂಧದಷ್ಟು ಜ್ಞಾನವನ್ನು ಹಿಡಿದಿಡಬಲ್ಲ ಸಾಮರ್ಥ್ಯ ಅವರದು. ವಿವರಣೆಯ ಒಂದೊಂದು ವಾಕ್ಯ, ಒಂದೊಂದು ಪದ
ಸಹ ನಮ್ಮನ್ನು ಚಿಂತನೆಗೆ ಹಚ್ಚಬಲ್ಲದು. ಹೊಸ ಹೊಳಹುಗಳನ್ನು ಕೊಡಬಲ್ಲದು. ಉದಾಹರಣೆಗೆ ಕಪಿಮುಷ್ಟಿ. ಮಂಗನಿಂದ ಮಾನವ ಎಂದು ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸ ಸಿದ್ಧಾಂತ ನಮಗೆಲ್ಲ ಗೊತ್ತಿದೆ.

ಮುಷ್ಟಿಯ ವಿಷಯದಲ್ಲೂ ಮಂಗನನ್ನೇ ನಾವು ಈಗಲೂ ಅನುಸರಿಸುತ್ತೇವೆಯೇ? ಕಪಿಮುಷ್ಟಿ ಎಂಬ ಬಳಕೆ ಹೇಗೆ ಮತ್ತು ಏಕೆ ಶುರುವಾಯಿತೋ ತಿಳಿಯದು. ಕೈಗೆ ಸಿಕ್ಕಿದ್ದನ್ನು ಬಿಗಿಯಾದ ಮುಷ್ಟಿಯಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು ಮಂಗಗಳ ಅಭ್ಯಾಸ. ಇದನ್ನು ಗಮನಿಸಿದವರು ಬಹುಶಃ ಬಿಡಿಸಲಾಗದ ಗಂಟು ಎಂಬರ್ಥದಲ್ಲಿ ಕಪಿಮುಷ್ಟಿ ಎಂಬ ಪದಪ್ರಯೋಗವನ್ನು ಸೃಷ್ಟಿಸಿರಬಹುದು. ಅಥವಾ, ಕನ್ಯಾಪಿತೃವನ್ನು ತಮಾಷೆಗೆ ಕ.ಪಿ ಎಂದು
ಹೇಳುವುದರಿಂದ ಅಂಥವನೊಬ್ಬನ ಮುಷ್ಟಿಗೆ ಸಿಕ್ಕಿದ ಯಾವನೋ ಒಬ್ಬ ಅಳಿಯ ಮಹಾಶಯ ತನ್ನ ಪರಿಸ್ಥಿತಿಯನ್ನು ಕಪಿಮುಷ್ಟಿಯಲ್ಲಿ ಸಿಲುಕಿದಂತಿದ್ದೇನೆ… ಎಂದು ಬಣ್ಣಿಸಿದ್ದೂ ಇರಬಹುದು. ಅಂತೂ ಕಪಿಮುಷ್ಟಿ ಎನ್ನುವುದೊಂದು ಜನಜನಿತ ನುಡಿಗಟ್ಟು ಆಗಿರುವುದು ಹೌದು.

ಬಹಳ ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು, ಏನನ್ನೂ ಬಿಟ್ಟುಕೊಡದಿರುವುದು, ಜಿಪುಣತನ ತೋರುವುದು, ಅತಿ ಆಸೆ ಮತ್ತು ಧನಲೋಭದ ಸ್ವಭಾವವನ್ನೂ ಕಪಿಮುಷ್ಟಿ ಎನ್ನುತ್ತೇವೆ. ‘ನೀಡುವುದೇನನು ಕೊಳ್ಳುವುದೇನನು ಕಪಿಮುಷ್ಟಿಯಾದರೆ ನೀನು| ಸರಳ ಸೌಜನ್ಯದೊಳೊಡವೆರೆದಿರೆ ಬಗೆ ಕೊಳುಕೊಡೆ ಸುಗಮವು ನಿನಗೆ’ ಎಂದಿದ್ದಾರೆ ಎಸ್.ವಿ. ಪರಮೇಶ್ವರ ಭಟ್ಟರು. ಕಪಿಮುಷ್ಟಿ ಅಕ್ಷರಶಃ ಬಿಗಿಯಾಗಿಯೇ ಇರುತ್ತದಂತೆ. ಡಿಸ್ಕವರಿ ಚಾನೆಲ್‌ ನಲ್ಲೋ ನ್ಯಾಷನಲ್ ಜಿಯೊಗ್ರಾಫಿಯಲ್ಲೋ ಒಂದು ಡಾಕ್ಯುಮೆಂಟರಿಯಲ್ಲಿ ನೋಡಿದ ನೆನಪು- ಆಫ್ರಿಕಾದ ಒಂದು ಬುಡಕಟ್ಟು ಜನಾಂಗದವರು ಮಂಗಗಳನ್ನು ಹಿಡಿಯುವ ಉಪಾಯವಾಗಿ ಕಪಿಮುಷ್ಟಿಯನ್ನೇ ಬಳಸುತ್ತಾರಂತೆ.

ಹೇಗೆಂದರೆ, ಚಿಪ್ಪಿನ ಸಮೇತ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಒಂದು ಕಣ್ಣನ್ನಷ್ಟೇ ದೊಡ್ಡ ರಂಧ್ರವನ್ನಾಗಿ ಮಾಡಿ ಅದರಲ್ಲಿ
ಕಡ್ಲೆಬೀಜ, ಬಾಳೆಹಣ್ಣು ಅಥವಾ ಮಂಗನಿಗೆ ಆಸೆಹುಟ್ಟಿಸುವ ಯಾವುದೇ ತಿನಿಸನ್ನು ಹಾಕಿಡುತ್ತಾರೆ. ಕಾಯಿಯನ್ನು ಉದ್ದದ ಹಗ್ಗ ವೊಂದರ ತುದಿಗೆ ಕಟ್ಟಿ ನೆಲದಲ್ಲಿಡುತ್ತಾರೆ. ಕಾಯಿಯ ತೂತಿನೊಳಗೆ ಕೈಹಾಕುವ ಮಂಗ ತಿಂಡಿ ಸಿಕ್ಕಿದೊಡನೆ ತನ್ನ ಮಾಮೂಲಿ ಅಭ್ಯಾಸದಂತೆ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿಯುತ್ತದೆ. ಮುಷ್ಟಿ ಬಿಗಿದ ಕೈಯನ್ನು ಕಾಯಿಯ ತೂತಿನಿಂದ ಹೊರತೆಗೆಯಲಾಗದೆ ಒದ್ದಾಡುತ್ತದೆ. ಕಾಯಿಗೆ ಕಟ್ಟಿರುವ ಹಗ್ಗವನ್ನು ಎಳೆದಾಗ ಕಾಯಿ, ಕಾಯಿಯೊಂದಿಗೆ ಮಂಗನ ಕೈ, ಮತ್ತು ಕೈಯೊಂದಿಗೆ ಮಂಗ- ಎಲ್ಲವೂ ಈಚೆ ಬರುತ್ತವೆ!

ಹೇಗಿದೆ ಉಪಾಯ? ಕಪಿಯನ್ನು ಹಿಡಿಯುವವನ ಮುಷ್ಟಿಯಲ್ಲಿ ಕಪಿ! ಅಳಿಯ ಬಣ್ಣಿಸುವ ಕಪಿಮುಷ್ಟಿ ಬಹುಶಃ ಇದೇ ರೀತಿಯದು. ಮಾಸ್ಟರ್ ಹಿರಣ್ಣಯ್ಯನವರ ಒಂದು ನಾಟಕದ ಹೆಸರು ಕಪಿಮುಷ್ಟಿ ಅಂತ ಇತ್ತು. ಅದು ಸಾಮಾಜಿಕ ಸಮಸ್ಯೆಗಳ ಕಪಿಮುಷ್ಟಿ ಯಲ್ಲಿ ಸಿಲುಕಿ ನರಳುವ ಶ್ರೀಸಾಮಾನ್ಯನ ಚಿತ್ರಣ. ಹಿಂದೊಮ್ಮೆ ದೇವೇಗೌಡರು ಒಂದು ಸಂದರ್ಭದಲ್ಲಿ (ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ) ತನ್ನ ಮಗ ಕುಮಾರಸ್ವಾಮಿ ಯ ಪರಿಸ್ಥಿತಿ ಒಂಥರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಂತಿದೆ ಎಂದಿದ್ದರು. ಕಪಿಮುಷ್ಟಿ ಎಂದರೆ ಬಿಡಿಸಲಾಗದ ಗಂಟು ಎಂಬರ್ಥದಲ್ಲಿ ಅವರು
ಹಾಗೆಂದರೋ, ಅಥವಾ ಅಯೋಧ್ಯಾ ಮಂದಿರಕ್ಕಾಗಿ ಕರಸೇವೆ ಮಾಡಿದ ರಾಮಭಕ್ತರನ್ನೂ ತ್ರೇತಾಯುಗದ ರಾಮಸೇತು ನಿರ್ಮಾತೃಗಳನ್ನೂ ಹೋಲಿಸಿ ಹಾಗೆಂದರೋ ಗೊತ್ತಿಲ್ಲ.

ನಿಜವಾಗಿಯಾದರೆ ಕಪಿಮುಷ್ಟಿಯಲ್ಲಿ ಸಿಲುಕುವುದು ಕುಮಾರಸ್ವಾಮಿಯಂಥ ಚಾಲಾಕಿನ ರಾಜಕಾರಣಿಗಳಲ್ಲ; ರಾಜಕೀಯ ಡೊಂಬರಾಟಗಳನ್ನು, ರಾಜಕಾರಣಿಗಳ ಊಸರವಳ್ಳಿ ನಾಟಕಗಳನ್ನು ಅನಿವಾರ್ಯವಾಗಿ ಸಹಿಸಿಕೊಂಡು ತಾವು ಏನೂ ಮಾಡಲಾಗದ ಸ್ಥಿತಿಯಲ್ಲಿ ಚಡಪಡಿಸುತ್ತಿರುವ ಬಡಪಾಯಿ ಪ್ರಜೆಗಳು. ಎಲ್ಲ ಕಾಲದಲ್ಲೂ ಇದೇ ಹಣೆಬರಹ. ಕಪಿಮುಷ್ಟಿ ಎಂಬ ನುಡಿಗಟ್ಟು ಕನ್ನಡದಲ್ಲಷ್ಟೇ ಸಾಹಿತ್ಯಾಲಂಕಾರವಾಗಿ ಬಳಕೆ ಯಲ್ಲಿರುವುದಲ್ಲ.

ಇಂಗ್ಲಿಷ್‌ನಲ್ಲೂ Monkey’s fist ಎಂದರೆ ಬಿಡಿಸಲಾಗದ ಗಂಟು ಅಂತಲೇ ಅರ್ಥವಿದೆ. ಹಗ್ಗಕ್ಕೆ ಹಾಕುವ ಗಂಟಿನ (knot) ಒಂದು ಮಾದರಿಗೆ ಆ ಹೆಸರಿದೆ.
ನಾವಿಕರು ತಮ್ಮ ಹಡಗುಗಳನ್ನು ಲಂಗರು ಹಾಕುವ ಮೊದಲು ಉದ್ದದ ಹಗ್ಗಕ್ಕೆ ಒಂದು ಕೊನೆಯಲ್ಲಿ ದೊಡ್ಡದಾದ ಗಟ್ಟಿಯಾದ ಗಂಟು ಬಿಗಿದು ಆ ತುದಿಯನ್ನು ಬಂದರಿನ ತೀರದಲ್ಲಿ ನಿಂತಿರುವ ಸಹಾಯಕನತ್ತ ಎಸೆಯುತ್ತಾರೆ. ಗಂಟಿನ ಭಾರದಿಂದಾಗಿ ಹಗ್ಗವನ್ನು ನಿರ್ದಿಷ್ಟ ಗುರಿಯತ್ತ ಎಸೆಯುವುದು ಸುಲಭವಾಗುತ್ತದೆ. ಗಂಟು ನಿಜವಾಗಿಯೂ ಭಾರವಾಗಿರುವಂತೆ ಅದನ್ನು ಕಟ್ಟುವಾಗ ಸಣ್ಣದೊಂದು ಕಲ್ಲನ್ನೋ, ಮರದ ತುಂಡನ್ನೋ, ರದ್ದಿಕಾಗದದ
ಮುದ್ದೆಯನ್ನೋ ಒಳಗಿಟ್ಟು ಕಟ್ಟುತ್ತಾರೆ. ಆ ತರಹದ ಗಂಟಿಗೆ Monkey’s fist knot ಎಂದು ಹೆಸರು. ನೋಡುವುದಕ್ಕೂ ಅದು ಮುಷ್ಟಿ ಬಿಗಿದ ಮಂಗನ ಕೈಯಂತೆಯೇ ಇರುತ್ತದೆ.

ಇರಲಿ, ಕಪಿಮುಷ್ಟಿಯಿಂದ ಬಿಡಿಸಿಕೊಂಡು ಈಗ ಮಾನವ ಮುಷ್ಟಿಯನ್ನು ಚರ್ಚಿಸೋಣ. ಅದರಲ್ಲೂ ಕಲಾಪ್ರಕಾರಗಳಲ್ಲಿ ಮುಷ್ಟಿಯ ಮಹತ್ತ್ವವನ್ನು ಗಮನಿಸೋಣ. ಭರತನಾಟ್ಯ, ಕಥಕ್ಕಳಿ, ಕಥಕ್, ಯಕ್ಷಗಾನ ಮೊದಲಾದ ನಾಟ್ಯವಿಧಾನಗಳೆಲ್ಲದರಲ್ಲೂ ಮುಷ್ಟಿ ಒಂದು ಪ್ರಮುಖ ಹಸ್ತಮುದ್ರೆ ಎನಿಸಿಕೊಂಡಿದೆ. ಭರತನ ನಾಟ್ಯಶಾಸ್ತ್ರದಲ್ಲಿ ತಿಳಿಸಿರುವ ೨೪ ಅಸಂಯುತ ಹಸ್ತಮುದ್ರೆಗಳಲ್ಲಿ- ಪಾತಕ, ತ್ರಿಪಾತಕ, ಕರ್ತರೀಮುಖ, ಅರ್ಧಚಂದ್ರ, ಅರಾಳ, ಶುಕತುಂಡಗಳ ಬಳಿಕ ಏಳನೆಯದೇ ಮುಷ್ಟಿ. ಸಂಭಾಷಣೆಯಿಲ್ಲದೆ ಎಲ್ಲವೂ ಮುಖ ಮತ್ತು ಕೈಗಳ ಹಾವಭಾವಗಳಿಂದಲೇ ವ್ಯಕ್ತವಾಗಬೇಕಾದ ಕಥಕ್ಕಳಿಯಲ್ಲಂತೂ ಒಂದು ಅಥವಾ ಎರಡೂ ಕೈಗಳ ಮುಷ್ಟಿಯಾಕಾರದಿಂದಲೇ ನಲ್ವತ್ತು ವಿವಿಧ ಭಾವಗಳನ್ನು ಸೂಚಿಸಬಹುದಂತೆ!

ನಾಟ್ಯಶಾಸ್ತ್ರದಂತೆಯೇ ಆಯುರ್ವೇದದಲ್ಲಿ ಮತ್ತು ಯೋಗಾಸನ ವಿಧಾನಗಳಲ್ಲೂ ಮುಷ್ಟಿಮುದ್ರೆಯ ಪ್ರಸ್ತಾವ ಇದೆ. ಆಯುರ್ವೇದದ ಪ್ರಕಾರ ಮುಷ್ಟಿಮುದ್ರೆಯ ವ್ಯಾಯಾಮವು ಜೀರ್ಣಶಕ್ತಿಯ ನಿಯಂತ್ರಣಕ್ಕೆ ಬಹಳ ಒಳ್ಳೆಯದಂತೆ. ಆತ್ಮರಕ್ಷಣಾ ಕಲೆಯಲ್ಲಿಯೂ ಮುಷ್ಟಿಯ ಪಾತ್ರ ಪ್ರಮುಖ
ವಾದುದು. ಯಾವುದೇ ಆಯುಧಗಳಿಲ್ಲದೆ ಬರೀ ಮುಷ್ಟಿ ಪ್ರಹಾರ ದಿಂದ, ಮಾರಣಾಂತಿಕ ಮರ್ಮಾಘಾತಗಳಿಂದ ಎದುರಾಳಿಯನ್ನು ಮಟಾಷ್ ಮಾಡಿಬಿಡುವ ವಿಧಾನಗಳಿವೆ. ವಜ್ರಮುಷ್ಟಿ ಅಂತಹ ಒಂದು ಯುದ್ಧಕಲೆ. ಈಗಿನ ಕರಾಟೆ, ಜುಡೋ, ಬಾಕ್ಸಿಂಗ್ ಇತ್ಯಾದಿಗಳೂ ಒಂದು ರೀತಿಯಲ್ಲಿ ವಜ್ರಮುಷ್ಟಿಯ ರೂಪಗಳೇ.

ಭರತ-ಬಾಹುಬಲಿಯರ ಅತಿಭಯಂಕರ ಸೆಣಸಾಟದಲ್ಲಿ ಮುಷ್ಟಿ ಯುದ್ಧವೂ ಇತ್ತು. ಅವರಿಬ್ಬರೂ ವಜ್ರಮುಷ್ಟಿವೀರರೇ ಆಗಿದ್ದರು. ಭಾಗವತದ ಕಥೆಯಲ್ಲಿ ಕೃಷ್ಣ-ಬಲರಾಮರೊಡನೆ ಮಲ್ಲಯುದ್ಧಕ್ಕೆ ಬರುವ ಮುಷ್ಟಿಕನಿಗಂತೂ ಅವನ ಮುಷ್ಟಿಬಲದಿಂದಲೇ ಆ ಹೆಸರು. ಮುಷ್ಟಿಯನ್ನು ಕುರಿತಂತೆ ಯೇ ಇನ್ನೂ ಮುಖ್ಯವಾದ ಅಂಶ ವೊಂದಿದೆ- ಪದಾರ್ಥಗಳ ಅಳತೆಗೆ ಮುಷ್ಟಿಯ ಉಪಯೋಗ. ಈಗಿನಂತೆ measuring cup ಆಗಲಿ, ಸೇರು-ಪಾವು ಸಹ ಇಲ್ಲದ ಕಾಲದಲ್ಲಿ ಚಿಟಿಕೆ-ಮುಷ್ಟಿ-ಬೊಗಸೆಗಳೇ ಧಾನ್ಯದ ಅಳತೆಗೆ ಉಪಯೋಗವಾಗುತ್ತಿದ್ದದ್ದು. ಬೇಕಿದ್ದರೆ ನೋಡಿ, ಅಜ್ಜಿಯಂದಿರು ಹೇಳುವ ರೆಸಿಪಿಗಳಲ್ಲಿ ಪ್ರಮಾಣಗಳೆಲ್ಲ ಹೆಚ್ಚಾಗಿ ‘ಒಂದು ಮುಷ್ಟಿ ಮೆಂತ್ಯದ ಕಾಳು, ಒಂದು ಮುಷ್ಟಿ ಕರಿಮೆಣಸು…’ ಅಂತಲೇ ಇರುತ್ತವೆ.

ಕೊಂಕಣಿ ಮಾತನಾಡುವ ಗೌಡಸಾರಸ್ವತ ಸಮುದಾಯ ದಲ್ಲಿ ಮುಷ್ಟಿಪೋಳೆ ಎಂದು ದೋಸೆಯ ಒಂದು ವಿಧವಿದೆ. ಅದಕ್ಕೆ ಅಕ್ಕಿಬೇಳೆಗಳ ಪ್ರಮಾಣವು ಮುಷ್ಟಿ ಲೆಕ್ಕದಲ್ಲಿ ಇರುವುದರಿಂದ ಆ ಹೆಸರು ಬಂದದ್ದಿರಬಹುದು. ಹಾಗೆಯೇ ಮುಷ್ಟಿ ಕಡಬು ಅಂತಲೂ ಒಂದು ಕರಾವಳಿ ಸ್ಪೆಷಲ್ ತಿಂಡಿಯಿದೆ. ನಮ್ಮ ಚಿತ್ಪಾವನ ಮರಾಠಿ ಭಾಷೆಯಲ್ಲಿ ಅದನ್ನು ಮುಠ್ಯೆ ಎನ್ನುತ್ತೇವೆ. ಆಕಾರ ಮುಷ್ಟಿಯಂತೆ ಇರುವುದರಿಂದ ಆ ಹೆಸರು. ತುಳು ಭಾಷೆಯಲ್ಲಾದರೆ ಪುಂಡಿ. ಕರಾವಳಿ ತಿಂಡಿಗಳಾದ ನೀರುದೋಸೆ, ಬನ್ಸ್, ಪತ್ರೊಡೆ ಮುಂತಾದುವು ಸಿಗುವ ಬೆಂಗಳೂರಿನ ರೆಸ್ಟೊರೆಂಟ್‌ಗಳಲ್ಲಿ ಮುಷ್ಟಿ ಕಡಬು ಸಹ ಸಿಗುತ್ತದೆಂದುಕೊಂಡಿದ್ದೇನೆ.

ಸಂಸ್ಕೃತದ ಮುಷ್ಟಿ, ಹಿಂದಿಯಲ್ಲಿ ಮುಟ್ಠೀ ಆಗಿದೆ. ‘ನನ್ಹೇ ಮುನ್ನೇ ಬಚ್ಚೇ ತೇರೀ ಮುಟ್ಠೀ ಮೇ ಕ್ಯಾ ಹೈ… ಮುಟ್ಠೀ ಮೇ ಹೈ ತಕ್‌ದೀರ್ ಹಮಾರೀ…’ ಎಂದು ರಾಜ್‌ಕಪೂರ್ ನಿರ್ಮಾಣದ ಬೂಟ್ ಪಾಲಿಷ್ ಚಿತ್ರದ ಪ್ರಖ್ಯಾತ ಗೀತೆಯನ್ನು ನೆನಪಿಸಿಕೊಳ್ಳಿ. ಅದೇ ಧಾಟಿಯಲ್ಲಿ ‘ಮುಟ್ಠೀ ಮೇ ಹೈ ಮೇರಾ ನನ್ಹಾ ಮುನ್ನಾ ರಸನಾ…’ ಎಂದು ರಸ್ನಾ ತಂಪು ಪಾನೀಯದ ಜಾಹಿರಾತನ್ನೂ ನೆನಪಿಸಿಕೊಳ್ಳಿ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ‘ಏಕ್ ಮುಟ್ಠೀ ಚಾವಲ್’ ಅಭಿಯಾನ ಆರಂಭಿಸಿದಾಗ, Ek Mutthi Chava ಎಂದು ಇಂಗ್ಲಿಷ್‌ನಲ್ಲಿ ವರದಿ ಮಾಡಿದ ವಾರ್ತಾಸಂಸ್ಥೆ ಗಳನ್ನಾಧರಿಸಿ ಕನ್ನಡ ಪತ್ರಕರ್ತರು ಅದನ್ನು ‘ಏಕ್ ಮೂತಿ ಚಾವಲ್’ ಎಂದು ಕನ್ನಡೀಕರಿಸಿದ್ದನ್ನೂ ಬೇಕಿದ್ದರೆ ನೆನಪಿಸಿಕೊಳ್ಳಿ.

ಅಂದಹಾಗೆ ಬಂಗಾಲಿ ಭಾಷೆಯಲ್ಲಿ (ನಮ್ಮ ಕನ್ನಡದಂತೆಯೇ) ಮೂಲ ಸಂಸ್ಕೃತದ ಮುಷ್ಟಿಯನ್ನೇ ಉಳಿಸಿಕೊಂಡಿದ್ದಾರಂತೆ. ಪಂಜಾಬಿ ಯಲ್ಲಿ ಅದು ಮುಠೀ, ಮತ್ತು ಮರಾಠಿಯಲ್ಲಿ ಮೂಠ ಅಥವಾ ಮೂಠಿ ಆಗಿದೆ. ಚಿತ್ಪಾವನರಲ್ಲಿ ಆಚರಣೆಯಿರುವ ಸಂಪ್ರದಾಯ ಗಳಲ್ಲಿ ಶಿವಾಮೂಠಿ ಅಂತೊಂದು
ವ್ರತೋಪಾಸನೆ ಇದೆ. ಮಂಗಳಾಗೌರಿ ವ್ರತ ಇದ್ದಂತೆಯೇ, ಮದುವೆಯಾದ ಹೆಣ್ಣು ಐದು ವರ್ಷಗಳವರೆಗೆ ಶ್ರಾವಣ ಮಾಸದ ಪ್ರತಿ ಸೋಮವಾರದಂದು ಶಿವನ ಆರಾಧನೆಗಾಗಿ ಮಾಡುವ ವ್ರತ.

ಒಂದೊಂದು ವಾರ ಒಂದೊಂದು ನಮೂನೆಯ ಧಾನ್ಯ- ಮೊದಲ ವಾರ ಅಕ್ಕಿ, ಎರಡನೆಯ ವಾರ ಎಳ್ಳು, ಮೂರನೆಯ ವಾರ ಹೆಸರುಕಾಳು, ನಾಲ್ಕನೆಯ ವಾರ ಗೋಧಿ, ಮತ್ತು ಐದನೆಯ ಸೋಮವಾರ ಬಂದರೆ ಬಾರ್ಲಿ- ಹೀಗೆ ಒಂದು ಮುಷ್ಟಿ ಪ್ರಮಾಣದಲ್ಲಿ ಶಿವನಿಗೆ ಅರ್ಪಿಸುವ ಕ್ರಮ. ಭಯಭಕ್ತಿಯಿಂದ
ಅರ್ಪಿಸಿದ ಒಂದು ಮುಷ್ಟಿ ಧಾನ್ಯದಿಂದ ಸಂಪ್ರೀತನಾಗುವ ಶಿವನು ವ್ರತವನ್ನಾಚರಿಸುವ ಸುಮಂಗಲಿಗೆ ಅಖಂಡ ಸೌಭಾಗ್ಯವನ್ನು ಬರೀ ಮುಷ್ಟಿತುಂಬ ಅಲ್ಲ ಬೊಗಸೆಗಳಲ್ಲಿ ಮೊಗೆಮೊಗೆದು ಕರುಣಿಸುತ್ತಾನೆಂಬ ನಂಬಿಕೆ.

ಅಳತೆ ಕೋಷ್ಟಕದಲ್ಲಿ ಮುಷ್ಟಿ ಪ್ರಮಾಣದ ಅಪವರ್ತ್ಯ ಅಪವರ್ತನಗಳ ವಿಷಯವೂ ಸ್ವಾರಸ್ಯಕರವಾಗಿದೆ. ಉದ್ದವನ್ನು ಅಳೆಯುವ ಒಂದು ಅಳತೆಯಾಗಿಯೂ ಮುಷ್ಟಿ ಬಳಕೆಯಾಗುತ್ತದೆ. ನಾಲ್ಕು ಅಂಗುಲಗಳು ಕೂಡಿದರೆ ಒಂದು ಮುಷ್ಟಿ ಉದ್ದ. ಕುಮಾರವ್ಯಾಸ ಒಂದು ಪದ್ಯದಲ್ಲಿ ಈ ಅಳತೆಯನ್ನು ಬಳಸಿದ್ದಾನೆ. ‘ಹೊದರುಗಿಡಿಗಳ ಕೇಸುರಿಯ ಹಾ| ರದಲಿ ಹರಿತಂದಹಿತ ದಳಪತಿ| ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ…’ ಎಂದಿದ್ದಾನೆ.

ಧರ್ಮರಾಯನ ಬಾಣದ ತೀವ್ರತೆಯ ಬಣ್ಣನೆ. ಗಿಡಪೊದೆಗಳ ನಡುವೆ ಕೆಂಪನೆಯ ಉರಿಯ ಹಾರವನ್ನು ತೊಟ್ಟ ಅದರ ಶಕ್ತಿಯು ಶಲ್ಯನ ಎದೆಗೆ ಹೊಡೆದು, ಭೇದಿಸಿ, ಬೆನ್ನಿನಿಂದ ಹೊರಟು ನಾಲ್ಕು ಮುಷ್ಟಿಗಳಷ್ಟು ದೂರದಲ್ಲಿ ನೆಲಕ್ಕೆ ನೆಟ್ಟಿತಂತೆ! ಆದರೆ ಉದ್ದಕ್ಕಿಂತ ಗಾತ್ರದ ಮಾಪನಕ್ಕೆ ಹೆಚ್ಚಾಗಿ ಮುಷ್ಟಿ ಬಳಕೆಯಾಗುತ್ತದೆ. ಎರಡು ಮುಷ್ಟಿ ಪ್ರಮಾಣಕ್ಕೆ ಒಂದು ಪ್ರಸೃತ ಎನ್ನುತ್ತಾರೆ. ಪ್ರಸೃತ ಎಂಬ ಶಬ್ದದ ಅರ್ಥ ನೀರು ನಿಲ್ಲುವಂತೆ ಗುಳಿಯಾಗಿ ಮಾಡಿದ ಅಂಗೈ. ಅದರಲ್ಲಿ ಎರಡು ಮುಷ್ಟಿಗಳಷ್ಟು ಧಾನ್ಯ ಹಿಡಿಯುತ್ತದೆ. ಎರಡು ಪ್ರಸೃತಗಳು ಸೇರಿದಾಗ, ಅಂದರೆ ಅಂಗೈಗಳನ್ನು ಜೋಡಿಸಿದಾಗ ಆಗುವುದು ಬೊಗಸೆ (ಸಂಸ್ಕೃತ ಶಬ್ದ ಅಂಜಲಿ). ೨೫೬ ಮುಷ್ಟಿಗಳಷ್ಟು ಅಳತೆಗೆ ಪೂರ್ಣಪಾತ್ರ ಎಂದು ಹೆಸರು. ಯಜ್ಞಯಾಗಾದಿಗಳು ಸಮಾಪ್ತಿಯಾದ ಮೇಲೆ ಕೊಡುವ ದಕ್ಷಿಣೆ ಒಂದು ಪೂರ್ಣಪಾತ್ರದಷ್ಟು ಅಂದರೆ ೨೫೬ ಮುಷ್ಟಿಗಳಷ್ಟು ಇರಬೇಕು ಎಂದು ಲೆಕ್ಕ. ಈ ೨, ೪, ೨೫೬ ಸಂಖ್ಯೆಗಳೆಲ್ಲ ೨ರ ಘಾತಗಳೇ ಆಗಿರುವುದು ಮತ್ತು ನಮ್ಮ ಪೂರ್ವಜರೂ ದ್ವಿಮಾನ ಸಂಖ್ಯಾಪದ್ಧತಿಯನ್ನು ಉಪಯೋಗಿಸುತ್ತಿದ್ದರೆಂಬ ಸಂಗತಿಯು ಈ ಸ್ವಾರಸ್ಯವನ್ನು ಎರಡರಷ್ಟಾಗಿಸುತ್ತದೆ!

ನೋಡಿದಿರಾ! ಕೇವಲ ಒಂದು ಮುಷ್ಟಿಯಲ್ಲಿ ಇಷ್ಟೆಲ್ಲ ವಿಚಾರಗಳು ಅಡಗಿವೆಯೆಂದು ನಿಮಗೆ ಕಲ್ಪನೆ ಇತ್ತೇ? ಇದೊಂಥರ ಮುಷ್ಟಿ ವೃಷ್ಟಿಯೇ ಸೃಷ್ಟಿ ಆಯ್ತು ಅಂತೀರಾ?

Leave a Reply

Your email address will not be published. Required fields are marked *

error: Content is protected !!