Sunday, 23rd June 2024

ವಾಷಿಂಗ್ಟನ್ನಲ್ಲಿ ಮೋದಿಯವರಿಗೆ ಸಸ್ಯಾಹಾರ ಒದಗಿಸುವ ಆನಂದ

ತಿಳಿರು ತೋರಣ

srivathsajoshi@yahoo.com

ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ಅನಿವಾಸಿ ಭಾರತೀಯರ- ಮುಖ್ಯವಾಗಿ ಕನ್ನಡಿಗರ- ಅಭಿಮಾನಕ್ಕೆ ಪಾತ್ರರಾದ ‘ವರ್ಲ್ಡ್ ಫೇಮಸ್’ ಅಡುಗೆಯವರು ಒಬ್ಬರಿದ್ದಾರೆ. ಅವರ ಹೆಸರು ಆನಂದ್ ಪೂಜಾರಿ. ಮೂಲತಃ ಕುಂದಾಪು ರದವರು. ಹೆಸರೇ ಆನಂದ ಎಂದಮೇಲೆ ಅವರ ಅಡುಗೆಯ ಬಗ್ಗೆ ಮಾತನಾಡುವುದು, ಅದರ ರುಚಿಯನ್ನು ಮೆಲುಕು ಹಾಕಿ ಚಪ್ಪರಿಸುವುದು ನಮಗೆಲ್ಲ ಅದೆಂಥ ಪರಮಾನಂದ ಇರಬಹುದೆಂದು ಊಹಿಸಿ.

‘ಅಡುಗೆ ಯಾರದು?’ ಅಥವಾ, ‘ಈವತ್ತಿನ ಭೋಜನಕ್ಕೆ ಅಡುಗೆಭಟ್ಟರು ಯಾರು?’ – ಊರಲ್ಲಿ ಮದುವೆ ಮುಂಜಿ ಗೃಹಪ್ರವೇಶವೇ ಮೊದಲಾದ ಖಾಸಗಿ ಸಮಾರಂಭಗಳಲ್ಲಿ, ಬ್ರಹ್ಮಕಲಶ ಚಂಡಿಕಾ ಹೋಮ ರಥೋತ್ಸವ ಜಾತ್ರೆಗಳ ವೇಳೆ ದೇವಸ್ಥಾನಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆಗಳಲ್ಲಿ, ಈ ಸಮಾಚಾರವನ್ನು ಜನರು ಮಾತನಾಡಿಕೊಳ್ಳುವುದಿದೆ. ಅದು ಸ್ವಾದಿಷ್ಟ ಭೋಜನದ ನಿರೀಕ್ಷೆಯಲ್ಲಿರುವಾಗಲೂ ಆದೀತು, ಅಥವಾ ಷಡ್ರ ಸೋಪೇತ ಔತಣವನ್ನು ಸವಿದ ಮೇಲೆ ಡರ್ರೆಂದು ತೃಪ್ತಿಯ ತೇಗಿನೊಡನೆಯೂ ಆಗಬಹುದು.

ಒಟ್ಟಿನಲ್ಲಿ ಪಾಕಪರಿಣತನಿಗೊಂದು ಭಾವಪೂರ್ಣ ಪರಾಕು. ಆತ ನಮಗೆ ಗೊತ್ತಿದ್ದವನೇ ಆಗಿದ್ದರೆ, ಆತನ ಕೈಗುಣದ ರುಚಿಶ್ರೇಷ್ಠತೆಯು ಊರು-
ಪರವೂರುಗಳಲ್ಲಿ ಪ್ರಖ್ಯಾತವಾಗಿರುವುದೇ ಆದರೆ ಏನೋ ಒಂದು ವಿಶೇಷ ಆನಂದ. ಸಾಮಾನ್ಯವಾಗಿ ಪ್ರತಿ ಊರಿನಲ್ಲಿ ಅಥವಾ ನಾಲ್ಕಾರು ಹಳ್ಳಿಗಳ ವ್ಯಾಪ್ತಿಯಲ್ಲಿ ಅಂಥವರೊಬ್ಬರು ‘ಟಾಪ್ ಸೀಡೆಡ್ ವರ್ಲ್ಡ್ ಫೇಮಸ್’ ಅಡುಗೆಯವರು ಇದ್ದೇಇರುತ್ತಾರೆ.

ಊರಿನಲ್ಲಿ ನಡೆಯುವ ದೊಡ್ಡದೊಡ್ಡ ಸಮಾರಂಭಗಳಿಗೆ ಹೆಚ್ಚಾಗಿ ಅವರಿಂದಲೇ ಅಡುಗೆ ಇರುತ್ತದೆ. ಅಕಸ್ಮಾತ್ ಒಂದೇ ದಿನ ಎರಡೆರಡು ಕಡೆ ಸಮಾರಂಭಗಳಿದ್ದರೆ ಒಬ್ಬರೇ ನಿಭಾಯಿಸಲಿಕ್ಕಾಗದೆ, ಅಥವಾ ಬೇರೇನೋ ಅನಿವಾರ್ಯ ಕಾರಣಗಳಿಂದ ಅವರ ಲಭ್ಯತೆ ಇಲ್ಲದೆ, ಅಂತಹ ಸಂದರ್ಭಗಳಲ್ಲಿ ಮಾತ್ರ ಆ ಬಹುಖ್ಯಾತಿಯ ಬಾಣಸಿಗನ ಬದಲಿಯಾಗಿ ಬೇರೆ ಯಾರಾದರೂ ನಿಭಾಯಿಸುತ್ತಾರೆ; ಅಷ್ಟರಮಟ್ಟಿಗೆ ಮಹಾಜನತೆಯೂ ನಿರಾಶರಾಗುತ್ತಾರೆ. ಈಗ ಆಧುನಿಕ ಹಳ್ಳಿಗಳಲ್ಲೂ ಕ್ಯಾಟರಿಂಗ್ ಆರಂಭವಾಗಿರುವುದರಿಂದ, ಯಾರೋ ಬೇಯಿಸಿದ ಅಡುಗೆಯನ್ನು ಇನ್ನ್ಯಾರೋ ವಾಹನದಲ್ಲಿ ತಂದು ಮೇಜಿನ ಮೇಲೆ ಜೋಡಿಸಿಟ್ಟು ಹೋಗುವುದರಿಂದ, ಅಡುಗೆ ಯಾರದೆಂಬ ಆಪ್ತ ವಿಚಾರಣೆ, ಅಭಿಮಾನದ ಮಾತುಕತೆ ಇರಲಿಕ್ಕಿಲ್ಲ. ಅಥವಾ, ಕೇಟರರ‍್ಸ್ ಗುಣಗಾನವೂ ಶುರುವಾಗಿರಬಹುದು ಎನ್ನಿ.

ಯಾಕಿದನ್ನು ಹೇಳುತ್ತಿದ್ದೇನೆಂದರೆ, ಇಲ್ಲಿ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ಅನಿವಾಸಿ ಭಾರತೀಯರ- ಮುಖ್ಯವಾಗಿ ಕನ್ನಡಿಗರ- ಅಭಿಮಾನಕ್ಕೆ ಪಾತ್ರರಾದ ‘ಟಾಪ್ ಸೀಡೆಡ್ ವರ್ಲ್ಡ್ ಫೇಮಸ್’ ಅಡುಗೆಯವರು ಒಬ್ಬರಿದ್ದಾರೆ. ಅವರ ಹೆಸರು ಆನಂದ್ ಪೂಜಾರಿ. ಮೂಲತಃ ಕುಂದಾಪುರದವರು. ಹೆಸರೇ ಆನಂದ ಎಂದಮೇಲೆ ಅವರ ಅಡುಗೆಯ ಬಗ್ಗೆ ಮಾತನಾಡುವುದು, ಅದರ ರುಚಿಯನ್ನು ಮೆಲುಕು ಹಾಕಿ ಚಪ್ಪರಿಸುವುದು
ನಮಗೆಲ್ಲ ಅದೆಂಥ ಪರಮಾನಂದ ಇರಬಹುದೆಂದು ಊಹಿಸಿ.

ಇತ್ತೀಚಿನ ವರ್ಷಗಳಲ್ಲಿ ಈ ಅಭಿಮಾನಕ್ಕೆ ಇನ್ನೂ ಒಂದು ಕಾರಣವೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಾಷಿಂಗ್ಟನ್ ಡಿಸಿ.ಗೆ ಭೇಟಿ ನೀಡಿದಾಗೆಲ್ಲ ಅವರಿಗೆ ಶುದ್ಧ ಸರಳ ಸಸ್ಯಾಹಾರ ತಯಾರಿಸಿಕೊಡುವ ಜವಾಬ್ದಾರಿ ಆನಂದ್ ಹೆಗಲಿಗೇರುವುದು. ಮೊನ್ನೆ ಜೂನ್ ೨೧ರಿಂದ ೨೩ರವರೆಗೆ ಮೋದಿಜೀ ಮೂರು ದಿನ ಇಲ್ಲಿ ವಾಸ್ತವ್ಯ ಹೂಡಿದ್ದಾಗಲೂ ಹಾಗೆಯೇ. ಅವರು ಉಳಿದುಕೊಂಡಿದ್ದ ಅತಿಥಿಗೃಹದಲ್ಲಷ್ಟೇ ಅಲ್ಲ, ಶ್ವೇತಭವನ ದಲ್ಲಿ ಆಯೋಜಿಸಿದ್ದ ವಿಶೇಷ ಡಿನ್ನರ್‌ನಲ್ಲೂ. ಆತಿಥೇಯರು ಬೈಡನ್ ದಂಪತಿಯೇ ಆದರೂ, ಬಾಣಸಿಗರು ವ್ಹೈಟ್‌ಹೌಸ್‌ನವರೇ ಆದರೂ, ಆವತ್ತಿನ ವೆಜಿಟೇರಿಯನ್ ಮೆನು ನಿರ್ದೇಶನ ಆನಂದ್ ಪೂಜಾರಿಯವರದೇ!

ಇದು ಸತತ ಐದನೆಯ ಬಾರಿ ಅಂತೆ ವಾಷಿಂಗ್ಟನ್ನಲ್ಲಿ ಮೋದಿಯವರ ಊಟ- ತಿಂಡಿ ವ್ಯವಸ್ಥೆಯನ್ನು ಆನಂದ್ ಪೂಜಾರಿ ನೋಡಿಕೊಂಡಿರುವುದು. ಆ ಅನುಭವ ಹೇಗಿರುತ್ತದೆಂದು ಅವರಿಂದಲೇ ಕೇಳಿತಿಳಿದಿದ್ದನ್ನು ಆಮೇಲೆ ಬರೆಯುತ್ತೇನೆ. ಮೊದಲಿಗೆ ಆನಂದ್ ಪೂಜಾರಿ ಅಮೆರಿಕಕ್ಕೆ ವಲಸೆ ಬಂದು ಕಳೆದ ೨೫ ವರ್ಷಗಳಲ್ಲಿ ಇಲ್ಲಿ ದಕ್ಷಿಣ ಭಾರತೀಯ ಸಸ್ಯಾಹಾರಿ ರೆಸ್ಟೊರೆಂಟ್ ಮತ್ತು ಕ್ಯಾಟರಿಂಗ್ ಉದ್ಯಮದಲ್ಲಿ ಒಂದೊಂದೇ ಹೆಜ್ಜೆಯಿಡುತ್ತ ಯಶಸ್ಸಿನ ಈ ಮಟ್ಟಕ್ಕೇರಿದ, ವಿಶ್ವಾಸಾರ್ಹತೆಯನ್ನು ಗಳಿಸಿ ಉಳಿಸಿ ಬೆಳೆಸಿಕೊಂಡ, ರೀತಿಯನ್ನು ಸಂಕ್ಷಿಪ್ತವಾಗಿ ದಾಖಲಿಸುತ್ತೇನೆ.

ಆನಂದ್ ಹುಟ್ಟಿದ್ದು ೧೯೬೪ರಲ್ಲಿ ಆಲೂರು ಎಂಬ ಹಳ್ಳಿಯಲ್ಲಿ- ಆಗ ಅದು ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿತ್ತಾದರೆ ಈಗ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿದೆ ಎನ್ನಬೇಕು. ತಂದೆ ಬದ್ಯ ಪೂಜಾರಿ, ತಾಯಿ ಗಿರಿಜಾ. ಬಡತನದಲ್ಲಿ ಕಳೆದ ಬಾಲ್ಯ, ಹೊಲ-ಗದ್ದೆ ಕೆಲಸ, ಶಾಲೆಯಲ್ಲಿ ಅಷ್ಟಿಷ್ಟು ವಿದ್ಯಾಭ್ಯಾಸ. ಅದೃಷ್ಟದ ಬಾಗಿಲು ತೆರೆದು ಅಮೆರಿಕಕ್ಕೆ ಬಂದಿಳಿದದ್ದು ೧೯೯೦ರ ದಶಕದಲ್ಲಿ, ನ್ಯೂಯಾರ್ಕ್‌ನ ಒಂದು ಪ್ರತಿಷ್ಠಿತ ಇಂಡಿಯನ್ ರೆಸ್ಟೊರೆಂಟ್‌ನಲ್ಲಿ ನೌಕರನಾಗಿ. ವಹಿವಾಟಿನ ಮಟ್ಟುಗಳನ್ನು ಕಲಿತಮೇಲೆ ಸ್ವಂತ ರೆಸ್ಟೊರೆಂಟ್ ಆರಂಭಿಸುವ ಕನಸು ಹೊತ್ತು
ರಾಜಧಾನಿ ವಾಷಿಂಗ್ಟನ್ ಡಿಸಿ.ಗೆ. ಲಾಂಗ್ಲೆ ಪಾರ್ಕ್ ಎಂಬ ಉಪ ನಗರದಲ್ಲಿ ‘ವುಡ್‌ಲ್ಯಾಂಡ್ಸ್ ಪ್ಯೂರ್ ವೆಜಿಟೇರಿಯನ್ ಇಂಡಿಯನ್ ಕ್ಯುಸಿನ್’ ಹೆಸರಿನ ರೆಸ್ಟೊರೆಂಟ್ ಸ್ಥಾಪನೆ. ಅಡುಗೆಭಟ್ಟನಂತೆ ಭಾಸವಾಗುವ ಮುದ್ದುಮುಖವೊಂದು ಅದರ ಲಾಂಛನ.

ಆಗಿನ್ನೂ ಇಲ್ಲಿ ಭಾರತೀಯರು/ಕನ್ನಡಿಗರು, ಭಾರತೀಯ ರೆಸ್ಟೊರೆಂಟ್‌ಗಳು, ದಿನಸಿ ಅಂಗಡಿಗಳು, ದೇವಸ್ಥಾನಗಳೆಲ್ಲ ಈಗಿನಷ್ಟು ಸಂಖ್ಯೆ ಯಲ್ಲಿರಲಿಲ್ಲ. ಆದರೆ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಹತ್ತಿರದಲ್ಲೇ ಇದ್ದುದರಿಂದ, ಭಾರತೀಯ ಮೂಲದ ವಿದ್ಯಾರ್ಥಿಗಳೂ ಬರುತ್ತಿದ್ದುದರಿಂದ ವುಡ್‌ಲ್ಯಾಂಡ್ಸ್‌ಗೆ ವ್ಯಾಪಾರ ಚೆನ್ನಾಗಿಯೇ ಇತ್ತು. ಶುಚಿತ್ವ ಗುಣಮಟ್ಟ ಉತ್ತಮವಿದ್ದುದರಿಂದ ರುಚಿಹತ್ತಿದವರು ರೆಗ್ಯುಲರ್ ಗಿರಾಕಿಗಳಾದರು. ಅವರೇ ಪ್ರಚಾರ ಕೊಟ್ಟರು.

ಏಷ್ಯಾ ಆಫ್ರಿಕಾ ಮೂಲದವರು, ವೆಜಿಟೇರಿಯನಿಸಂ ಹಚ್ಚಿಕೊಂಡ ಅಮೆರಿಕನ್ನರೂ ವುಡ್‌ಲ್ಯಾಂಡ್ಸ್‌ನಲ್ಲಿ ಇಡ್ಲಿ ವಡೆ ದೋಸೆ ಚಿತ್ರಾನ್ನ ಪೊಂಗಲ್ ಪುಳಿಯೊಗರೆ ಸವಿದರು. ಸ್ಪೂನು-ಫೋರ್ಕುಗಳನ್ನು ಬದಿಗಿಟ್ಟು ಕೈಯಿಂದಲೇ ಮುರಿದು ಮಸಾಲೆದೋಸೆ ಮೆಲ್ಲತೊಡಗಿದರು. ರೆಸ್ಟೊರೆಂಟ್ ಒಂದರಿಂದಲೇ ಆದಾಯ-ವೆಚ್ಚ ಸರಿದೂಗಿಸು ವುದು ಕಷ್ಟವೆಂದರಿತ ಆನಂದ್ ಪೂಜಾರಿಯವರು ಕೇಟರಿಂಗ್ ಉದ್ಯಮ ಆರಂಭಿಸಿದರು. ಮೊದಮೊದಲಿಗೆ ಪರಿಚಿತ ಸ್ನೇಹಿತರ ಚಿಕ್ಕಪುಟ್ಟ ಸಮಾರಂಭಗಳಿಗೆ- ಬರ್ತ್‌ಡೇ, ಗ್ರಾಜ್ಯುವೇಷನ್, ಪ್ರಮೋಷನ್ ಸೆಲೆಬ್ರೇಷನ್ ಪಾರ್ಟಿ ಮೊದಲಾಗಿ- ಆರಂಭವಾದದ್ದು ಆಮೇಲೆ ಸತ್ಯನಾರಾಯಣ ಪೂಜೆ, ಗೃಹಪ್ರವೇಶಗಳು, ವೈಭವೋಪೇತ ವಿವಾಹಗಳಂಥ ಫಂಕ್ಷನ್‌ಗಳಿಗೂ ವಿಸ್ತರಿಸಿತು.

ಉತ್ತಮ ಗುಣಮಟ್ಟ, ಶುಚಿ-ರುಚಿ ತಾಜಾತನದ ಭರವಸೆ, ಕ್ಲಪ್ತ ಸಮಯಕ್ಕೆ ತಂದುಕೊಡುವ ವಿಶ್ವಾಸಾರ್ಹ ಸೇವೆಗಳಿಂದಾಗಿ ಇದು ಕೂಡ ಮನೆಮಾತಾಯಿತು. ಆನಂದ್ ಪೂಜಾರಿ ಸದಾ ನಗುಮುಖದ ಸ್ನೇಹಪರ ವ್ಯಕ್ತಿತ್ವ. ಅವರ ಸ್ಟಾಫ್ ಸಹ ಅಷ್ಟೇ. ಅವರೇನೂ ಎಲ್ಲರೂ ಕನ್ನಡಿಗರು ಭಾರತೀಯರು ಅಂತೇನಲ್ಲ ಮೆಕ್ಸಿಕನ್ನರೂ ಇದ್ದಾರೆ ತಂಡದಲ್ಲಿ. ಆದರೆ ಭಾರತೀಯ ಊಟ-ತಿಂಡಿ ಪದ್ಧತಿ ಪರಂಪರೆಗಳು ಅವರಿಗೀಗ ಚೆನ್ನಾಗಿ
ಗೊತ್ತಿವೆ. ಹಾಗೆ ನೋಡಿದರೆ ವುಡ್‌ಲ್ಯಾಂಡ್ಸ್ ರೆಸ್ಟೊರೆಂಟಿನ ಮುಖ್ಯ ಬಾಣಸಿಗರೂ ಉಡುಪಿಭಟ್ಟರೇ ಆಗಿರುವುದೇನಲ್ಲ.

ಬಿಜು ಪೌತಮಕುಂಡ್ಲಿ, ಸಂಜಯ ಮಹಾರಾಜನ್ ಮುಂತಾದವರೆಲ್ಲ ದಕ್ಷಿಣೋತ್ತರ ಸ್ವಾದಗಳ ಪರಿಣತ ಚೆಫ್‌ಗಳು. ಉತ್ತರ ಭಾರತೀಯ ತಿಂಡಿತಿನಿಸುಗಳನ್ನೂ ರುಚಿಕರವಾಗಿ ತಯಾರಿಸಿ ಕೊಡಬಲ್ಲವರಾದ್ದರಿಂದಲೇ ಉತ್ತರ ಭಾರತೀಯ ಕುಟುಂಬಗಳೂ ಆನಂದ್ ಪೂಜಾರಿಯವರ ಕೇಟರಿಂಗ್ ಸೇವೆಯನ್ನು ಮೆಚ್ಚತೊಡಗಿದುವು. ಹಾಗಂತ, ವಾಷಿಂಗ್ಟನ್ ಪ್ರದೇಶದಲ್ಲಿ ಬೇರೆ ಇಂಡಿಯನ್ ರೆಸ್ಟೊರೆಂಟ್‌ಗಳು ಕೇಟರರ‍್ಸು ಇಲ್ಲವೆಂದಲ್ಲ. ಬೆಲೆಗೆ ತಕ್ಕ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಮುಖ್ಯವಾಗುತ್ತದಲ್ಲ? ಆ ವಿಶ್ವಾಸಾರ್ಹತೆಯೇ ಆನಂದ್‌ರನ್ನು ಗೆಲ್ಲಿಸಿತು.

ವಾಷಿಂಗ್ಟನ್ ಡಿಸಿ.ಯಲ್ಲಿರುವ ಭಾರತೀಯ ದೂತಾವಾಸ ಕಚೇರಿಯೂ ಅವರ ರೆಗ್ಯುಲರ್ ಗ್ರಾಹಕರ ಪಟ್ಟಿಗೆ ಸೇರಲಿಕ್ಕೆ ಕಾರಣವಾಯಿತು.
ಭಾರತದಿಂದ ಪ್ರವಾಸ ಬರುವ ಸಂಸದರು, ಸಚಿವರು, ಉನ್ನತ ಅಧಿಕಾರಿಗಳು ಮತ್ತಿತರ ಗಣ್ಯರು ಇಂಡಿಯನ್ ಎಂಬೆಸ್ಸಿಗೆ ಭೇಟಿ ಕೊಡುವಾಗ ಅವರ ಊಟ-ತಿಂಡಿ ವ್ಯವಸ್ಥೆಗೆ ಮೊದಲ ಪ್ರಾಶಸ್ತ್ಯ ವಾಗಿ ಆನಂದ್ ಪೂಜಾರಿಯವರ ಕೇಟರಿಂಗ್, ಅವರಿಗೆ ಸಾಧ್ಯವಾಗದಿದ್ದರಷ್ಟೇ ಬೇರೆ ಪರ್ಯಾಯ ವ್ಯವಸ್ಥೆ- ಎನ್ನುವಷ್ಟರ ಮಟ್ಟಿಗೆ ಆನಂದ್ ಜನಮನ ಗೆದ್ದರು.

ಮುಂದೆ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದಾಗ, ಅವರು ಅಮೆರಿಕ ರಾಜಧಾನಿಗೆ ಭೇಟಿ ನೀಡಿದಾಗ, ಅಪ್ಪಟ ಸಸ್ಯಾಹಾರಿ
ಆಗಿರುವ ಅವರಿಗೆ ಶುಚಿ ರುಚಿ ಸಾತ್ತ್ವಿಕ ಆಹಾರ ಒದಗಿಸುವುದಕ್ಕೆ ಒಂದೇ ಆಯ್ಕೆ: ಆನಂದ್ ಪೂಜಾರಿ! ಇತ್ತ ವುಡ್‌ಲ್ಯಾಂಡ್ಸ್‌ನ ಜನಪ್ರಿಯತೆ ಬಹುಶಃ ಅಮೆರಿಕನ್ನರ ಮೂಲಕವೇ ‘ವಾಷಿಂಗ್ಟೋನಿಯನ್’ ಎಂಬ ಸ್ಥಳೀಯ ಇಂಗ್ಲಿಷ್ ಪತ್ರಿಕೆ, ಮತ್ತು ಜಗತ್ಪ್ರಸಿದ್ಧ ‘ದ ವಾಷಿಂಗ್ಟನ್ ಪೋಸ್ಟ್’ ರಾಷ್ಟ್ರೀಯ
ಪತ್ರಿಕೆಯನ್ನೂ ತಲುಪಿತು. ಅವೆರಡರಲ್ಲೂ ವುಡ್‌ಲ್ಯಾಂಡ್ಸ್ ಬಗ್ಗೆ ಒಳ್ಳೆಯ ರಿವ್ಯೂ ಪ್ರಕಟವಾದುವು. ಅಷ್ಟರಲ್ಲಿ ಆನಂದ್ ಪೂಜಾರಿ ಯವರು ‘ಜೆವೆಲ್ ಆಫ್ ಇಂಡಿಯಾ’ ಎಂಬ ಇನ್ನೊಂದು ರೆಸ್ಟೊರೆಂಟನ್ನೂ ಆರಂಭಿಸಿದರು.

ಅಲ್ಲಿ ಉತ್ತರಭಾರತೀಯ ಖಾದ್ಯಗಳೂ ಮಾಂಸಾಹಾರವೂ ಲಭ್ಯವಾದ್ದರಿಂದ ಅದನ್ನು ಬಯಸುವ ಗ್ರಾಹಕರು ಜೆವೆಲ್ ಅಂದರೆ ವಾಷಿಂಗ್ಟನ್ ಪ್ರದೇಶದ ರೆಸ್ಟೊರೆಂಟ್ ಗಳ ಮಾಲೆಯಲ್ಲಿ ಒಂದು ಅನರ್ಘ್ಯ ರತ್ನವೇ ಸರಿ ಎಂದು ಒಕ್ಕೊರಲಿನಿಂದ ಅನುಮೋದಿಸಿದರು. ವಾಷಿಂಗ್ಟೋನಿಯನ್
ಪತ್ರಿಕೆಯ ಖಾದ್ಯವಿಶ್ಲೇಷಕನಂತೂ ಅಲ್ಲಿ ಮಂಗಳೂರು ಸ್ಪೆಷಲ್ ಚಿಕನ್-ಸುಕ್ಕಾ (ಕಾಂತಾರ ಸಿನೆಮಾ ನೋಡಿದವರಿಗೆ ಗೊತ್ತಿರುತ್ತದೆ) ಮತ್ತಿತರ ಮಾಂಸಾಹಾರಗಳನ್ನಷ್ಟೇ ಅಲ್ಲದೆ ಮಲಾಯ್‌ಕೋಫ್ತಾ, ಭಿಂಡಿ ದೋಪ್ಯಾಜಾ, ಪಾಲಕ್‌ಪನೀರ್ ಮುಂತಾದುವನ್ನೂ ಹೆಸರಿಸಿ ತನ್ನ ಸಂತೃಪ್ತಿಯನ್ನು ದಾಖಲಿಸಿದ್ದಾನೆ.

`A smiling waiter is yet another reason to cherish this unexpected jewel’ ಎಂದು ವಿಮರ್ಶೆಗೆ ಷರಾ ಬರೆದಿದ್ದಾನೆ. ಏತನ್ಮಧ್ಯೇ ೨೦೨೦ರಲ್ಲಿ ಕೋವಿಡ್ ಮಹಾಮಾರಿಯು ಜಗತ್ತನ್ನೆಲ್ಲ ಅಡಿಮೇಲು ಮಾಡಿದಾಗ ಬೇರೆಲ್ಲದರಂತೆ ವುಡ್‌ಲ್ಯಾಂಡ್ಸ್ ಮತ್ತು ಜೆವೆಲ್‌ ಗಳನ್ನೂ ಮುಚ್ಚಬೇಕಾಯಿತು. ಜೆವೆಲನ್ನಾದರೂ ಕೆಲ ತಿಂಗಳ ಬಳಿಕ ‘ಪಾರ್ಸೆಲ್ ಸೌಕರ್ಯ ಮಾತ್ರ’ ಎಂಬಂತೆ ತೆರೆಯಲಾಯಿತು. ವುಡ್‌ಲ್ಯಾಂಡ್ಸ್ ಇದ್ದ ಕಟ್ಟಡದ ಲೀಸ್ ಆ ವರ್ಷ ಡಿಸೆಂಬರ್ ೩೧ಕ್ಕೆ ಮುಗಿಯಿತಾದ್ದರಿಂದ ಮತ್ತು ಹೊಸ ಲೀಸ್‌ನದು ದುಸ್ತರ ಮೊತ್ತವಾಗಿದ್ದರಿಂದ ಆನಂದ್ ಪೂಜಾರಿಯವರ ೨೩ ವರ್ಷಗಳ ಶ್ರಮದ ಪ್ರೀತಿಯ ‘ಕೂಸು’ ಕಣ್ಮುಚ್ಚಬೇಕಾಯಿತು.

ಜೆವೆಲ್‌ನಲ್ಲೇ ಹಿಂಬದಿಯ ಬಾಗಿಲಿನಿಂದ ಸರ್ವಿಸ್ ಎಂಬಂತೆ, ವುಡ್‌ಲ್ಯಾಂಡ್ಸ್‌ನ ಫೇಮಸ್ ದಕ್ಷಿಣ ಭಾರತೀಯ ಸಸ್ಯಾಹಾರ ತಿಂಡಿತಿನಸಿನ ಪಾರ್ಸೆಲ್ ಸೇವೆ ಆರಂಭಿಸುವ ಅನಿವಾರ್ಯತೆ ಉಂಟಾಯಿತು. ವುಡ್‌ಲ್ಯಾಂಡ್ಸ್ ಕಣ್ಮುಚ್ಚಿದ್ದು ಆನಂದ್‌ಗೆ ಎಷ್ಟು ದುಃಖವಾಯ್ತೋ, ಅವರ ರೆಗ್ಯುಲರ್ ಗ್ರಾಹಕರಿಗೆ ಎಷ್ಟು ದುಃಖವೆನಿಸಿತೋ, ಅದಕ್ಕಿಂತ ದುಪ್ಪಟ್ಟು ದುಃಖವನ್ನು ವಾಷಿಂಗ್ಟನ್ ಪೋಸ್ಟ್‌ನ ಖಾದ್ಯವಿಶ್ಲೇಷಕ ಟಿಮ್ ಕಾರ್ಮನ್ ತೋಡಿಕೊಂಡನು.

ಪತ್ರಿಕೆಯ ೨೯ಮಾರ್ಚ್ ೨೦೨೧ರ ಸಂಚಿಕೆಯಲ್ಲಿ ಆತ ಪ್ರಕಟಿಸಿದ್ದ ಸಚಿತ್ರ ಸುದೀರ್ಘ ಲೇಖನದ ಶೀರ್ಷಿಕೆಯಲ್ಲೇ- Woodlands
Indian restaurant is without a home, but its vegetarian menu remains close to my heart- ಆತನ  ಹೃದಯಾಂತರಾಳದ ದುಃಖ ವ್ಯಕ್ತವಾಗಿತ್ತು. ಆದರೂ `I just love Woodlands and can’t wait for its return to a place near me. Poojary wants that to happen almost as badly as I do.’ ಎಂದು ಶುಭ ಹಾರೈಸಲಿಕ್ಕೆ ಆತ ಮರೆತಿರಲಿಲ್ಲ.

ಆತನ ಹಾರೈಕೆ ಮತ್ತು ಆನಂದ್ ಪೂಜಾರಿಯವರ ಛಲ ಎರಡೂ ಸೇರಿ ಫಲ ಕೊಟ್ಟವು! ವಾಷಿಂಗ್ಟನ್ ಡಿಸಿ.ಯದೇ ಇನ್ನೊಂದು ಉಪನಗರ ಗೈಥರ್ಸ್‌ಬರ್ಗ್ ಎಂಬಲ್ಲಿ ಕಟ್ಟಡವೊಂದರ ಗ್ರೌಂಡ್‌ಫ್ಲೋರ್ ಜಾಗವನ್ನು ಲೀಸ್‌ಗೆ ಪಡೆದು ಆನಂದ್ ಹೊಸದೊಂದು ವುಡ್‌ಲ್ಯಾಂಡ್ಸ್‌ಗೆ ಜನ್ಮವಿತ್ತರು. ಒಳಗಿನ ಇಂಟೀರಿಯರ್ಸ್‌ಅನ್ನು ಸುಂದರ ಕೆತ್ತನೆಗಳಿಂದ, ತೈಲವರ್ಣಚಿತ್ರಗಳಿಂದ, ನಡುಗೋಡೆಯ ಎರಡೂ ಬದಿಗಳಿಗೆ ತಲಾ ೬೦ ಸೀರೆಗಳಂತೆ
ಬಣ್ಣಬಣ್ಣದ ರೇಷ್ಮೆಸೀರೆಗಳನ್ನು ಮಡಚಿ ಮಾಡಿದ ಮೊಸಾಯಿಕ್ ವಿನ್ಯಾಸದಿಂದ ಸಿಂಗರಿಸಿದರು.

ಪ್ರವೇಶದ್ವಾರದಲ್ಲಿ ಅದೇ- ಜುಟ್ಟು ನಾಮ ಅಂಗವಸ್ತ್ರದ ಅಡುಗೆಭಟ್ಟನ ಮುಖವುಳ್ಳ ಲಾಂಛನ ಮತ್ತೊಮ್ಮೆ ರಾರಾಜಿಸಿತು. ವಾಷಿಂಗ್ಟನ್ ಪೋಸ್ಟ್‌ನ ಟಿಮ್ ಕಾರ್ಮನ್ ಮತ್ತೆ ಖುಷ್! ೨೦೨೧ರ ಡಿಸೆಂಬರ್ ಕೊನೆಯ ವಾರದಲ್ಲಿ ಪತ್ರಿಕೆಯಲ್ಲಿ ಆತ ಬರೆದ The best 10 casual restaurants of 2021 ಪಟ್ಟಿಯಲ್ಲಿ ಈ ಹೊಸ ವುಡ್‌ಲ್ಯಾಂಡ್ಸ್‌ಗೆ ನಾಲ್ಕನೆಯ ಸ್ಥಾನದ ಗೌರವ. When I’m stressed, I turn, almost reflexively, to Woodlands, as if seeking the kind of solace found only at the bottom of a bowl of curried chickpeas. It’s a striking space, with walls adorned with carved objects and saris transformed into a mosaic of vibrant panels.Decor and cooking have now aligned into one brilliant starburst of a restaurant’ ಎಂದು ಆತ
ಬರೆದಿರುವು ದನ್ನು ಓದಿದವರಿಗೆ ಅಲ್ಲಿಗೊಮ್ಮೆ ಭೇಟಿ ನೀಡುವಾ ಎಂದು ಅನಿಸದಿರುವುದು ಸಾಧ್ಯವೇ ಇಲ್ಲ.

ಹಾಗಾಗಿಯೇ, ಎರಡು ವಾರಗಳ ಹಿಂದೆ ವಿಶ್ವೇಶ್ವರ ಭಟ್ ಮತ್ತು ಅವರ ಸ್ನೇಹಿತ ರಾಮ ನಾರಾಯಣ ಜೊಯ್ಸ್ ಅವರು ಅಮೆರಿಕ ಪ್ರವಾಸದಲ್ಲಿ ವಾಷಿಂಗ್ಟನ್‌ಗೂ ಬಂದಿದ್ದಾಗ ನಾವೊಂದಿಷ್ಟು ಜನ ಸ್ನೇಹಿತರು ಅವರನ್ನು ಭೋಜನಸತ್ಕಾರದಿಂದ ಭೇಟಿಮಾಡುವುದಕ್ಕೆ ವುಡ್‌ಲ್ಯಾಂಡ್ಸನ್ನೇ
ಆಯ್ದುಕೊಂಡೆವು. ಆವತ್ತು ಅಲ್ಲಿ ಆನಂದ್ ಪೂಜಾರಿಯವರೂ ಹಾಜರಿದ್ದರು. ನಮ್ಮ ಲಂಚ್ ಮೆನು- ಮೊದಲಿಗೆ ರಸಂವಡಾ, ಆಮೇಲೆ ಪಾಲಕ್ ಚಾಟ್, ತದನಂತರ ರವಾದೋಸೆ, ಸ್ವಲ್ಪಸ್ವಲ್ಪವೇ ಬಿಸಿಬೇಳೆಭಾತ್ ಮತ್ತು ಅವಲಕ್ಕಿಯ ಮೊಸರನ್ನ, ಅನಾನಸು ಹಾಕಿದ ರವಾಕೇಸರಿ- ಇದಿಷ್ಟನ್ನು ಅವರೇ ನಿಶ್ಚಯಿಸಿದರು.

ಒಂದೆರಡು ಐಟಮ್‌ಗಳನ್ನಂತೂ ಖುದ್ದಾಗಿ ಅವರೇ ಪ್ರೀತಿಯಿಂದ ಬಡಿಸಿದರು. ಮೈ.ಶ್ರೀ.ನಟರಾಜ್, ಸಂಜಯ ರಾವ್, ರವಿ ಹರಪ್ಪನಹಳ್ಳಿ, ಮತ್ತು ನಾಟಕೋತ್ಸವವೊಂದಕ್ಕಾಗಿ ಕರ್ನಾಟಕದಿಂದ ಬಂದಿದ್ದ ಮಂಡ್ಯ ರಮೇಶ್- ಇಷ್ಟು ಜನ ರಸಿಕರ ಆ ಸ್ನೇಹಕೂಟ ಎಲ್ಲ ರೀತಿಯಲ್ಲೂ ರಸವತ್ತಾಗಿ ನೆನಪಲ್ಲುಳಿಯುವಂತೆ ಆದದ್ದು ವುಡ್‌ಲ್ಯಾಂಡ್ಸ್‌ನ ಗರಿಮೆಯಿಂದಲೇ. ಕಳೆದ ವರ್ಷ ನಮ್ಮ ‘ಕಾವೇರಿ’ ಕನ್ನಡ ಸಂಘದ ಸುವರ್ಣಮಹೋತ್ಸವದ ವೈಭವವನ್ನು ವಿಶ್ವೇಶ್ವರ ಭಟ್ಟರಿಗೆ ವಿವರಿಸುತ್ತ, ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಆ ಉತ್ಸವದಲ್ಲಿ ಊಟ-ತಿಂಡಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಅಡುಗೆಯವರನ್ನು ಅವರಿಗೆ ಪರಿಚಯಿಸುತ್ತ, ‘ಇವರೇ ನಮ್ಮ ನೆಚ್ಚಿನ ಆನಂದ್ ಪೂಜಾರಿ.

ಪ್ರಧಾನಿ ಮೋದಿಯವರು ವಾಷಿಂಗ್ಟನ್ನಿಗೆ ಬಂದಾಗೆಲ್ಲ ಅವರ ಊಟ-ತಿಂಡಿ ವ್ಯವಸ್ಥೆ ನೋಡಿಕೊಳ್ಳುವ ಪ್ರೇಮಮಯಿ ಪಾಕ ಪ್ರವೀಣ!’ ಎಂದು ಎದೆಯುಬ್ಬಿಸಿ ಹೇಳುವುದು ಅಲ್ಲಿ ನಮಗೆಲ್ಲ ಅತ್ಯಂತ ಹೆಮ್ಮೆಯ ಸಂಗತಿಯಾಗಿತ್ತು. ಈ ಸಲ ಮೋದಿಯವರ ಭೇಟಿಯ ವೇಳೆ ಮೂರು ದಿನಗಳಲ್ಲಿ
ವಾಷಿಂಗ್ಟನ್ ಡಿಸಿ.ಯ ಬೇರೆಬೇರೆ ಕಡೆಗಳಲ್ಲಿ ಅವರ ಕಾರ್ಯಕ್ರಮಗಳಿದ್ದುದರಿಂದ ಆನಂದ್ ಪೂಜಾರಿ ತುಂಬ ಚಾಕಚಕ್ಯತೆಯಿಂದ ಜವಾಬ್ದಾರಿ ಯನ್ನು ನಿಭಾಯಿಸಬೇಕಾಯಿತು. ಚಿಕ್ಕದೊಂದು ತಂಡವನ್ನು ಮೋದಿ ಉಳಿದುಕೊಂಡಿದ್ದ ಅತಿಥಿಗೃಹದಲ್ಲಿ ನಿರಂತರ ಲಭ್ಯತೆಗೆಂದು, ಯಾವುದೇ ಸಮಯದಲ್ಲಿ ಏನನ್ನೇ ಕೇಳಿ ದರೂ ಮಾಡಿಕೊಡಲಿಕ್ಕಾಗುತ್ತದೆಂದು, ಅಲ್ಲೇ ಸ್ಥಾಪಿಸಿದರು.

ಇನ್ನೊಂದು ತಂಡವು ಮೋದಿಯವರ ಕಾರ್ಯಕ್ರಮ ನಡೆಯುವಲ್ಲಿ ಅವರಿಗೆ ಮತ್ತು ಇತರ ಗಣ್ಯರಿಗೆ ಊಟ-ತಿಂಡಿ ಸರಬರಾಜು ಮಾಡಿತು. ೨೦೨೩ನೆಯ ಇಸವಿಯು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಆದ್ದರಿಂದ ಮೊದಲ ದಿನ ರಾತ್ರಿಯೂಟಕ್ಕೆ ಸಿರಿಧಾನ್ಯಗಳದೇ ಬಿಸಿಬೇಳೆಭಾತ್ ಮಾಡಿದ್ದರು. ಉಳಿದಂತೆ ಮೋದಿಯವರು ಗುಜರಾತಿ ಶೈಲಿಯಲ್ಲಿ ಕಿಚಡಿ, ಢೋಕ್ಲಾ, ಹಸಿ ಅಥವಾ ಬೇಯಿಸಿದ ತಾಜಾ ತರಕಾರಿಗಳು, ಹಣ್ಣುಗಳು ಇತ್ಯಾದಿಯನ್ನಷ್ಟೇ ಬಯಸುವುದರಿಂದ, ಮತ್ತು ದಕ್ಷಿಣಭಾರತೀಯ ವಿಶೇಷಗಳಾದ ಇಡ್ಲಿ-ಚಟ್ನಿ, ವಡೆ-ಸಾಂಬಾರ್ ಸಹ ಅವರಿಗೆ ಇಷ್ಟವೇ ಆದ್ದರಿಂದ,
ಪುನರಾವರ್ತನೆ ಆಗದಂತೆ ನೋಡಿಕೊಂಡು ಶುದ್ಧ ಸಾತ್ತ್ವಿಕ ಆಹಾರ ಒದಗಿಸಿದರು.

‘ತರಕಾರಿಗಳೆಲ್ಲ ಭಾರತದವೇ ಆಗಬೇಕೆಂದು ಎಲ್ಲೆಲ್ಲಿಂದ ಹುಡುಕಿತರುವ ಕಷ್ಟ ತಗೋಬೇಡಿ. ಸ್ಥಳೀಯವಾಗಿ ಬೆಳೆದ, ಇದುವರೆಗೆ ನನಗೆ ಅಪರಿಚಿತ ತರಕಾರಿಗಳಿದ್ದರೆ ದಯವಿಟ್ಟು ಅವುಗಳನ್ನೇ ಬಳಸಿ’ ಎಂದು ಮೋದಿಯವರು ಸೂಚನೆ ಕೊಟ್ಟಿದ್ದರಂತೆ. ೨೦೨೧ರಲ್ಲಿ ಮೋದಿಯವರು ವಾಷಿಂಗ್ಟನ್ನಿಗೆ
ಬಂದಿದ್ದಾಗ- ಆಗಿನ್ನೂ ಕೋವಿಡ್ ರಿಸ್ಟ್ರಿಕ್ಷನ್ಸ್ ಇದ್ದುವು, ಮುಖಕ್ಕೆ ಮಾಸ್ಕ್ ತೊಟ್ಟುಕೊಂಡೇ ಆದರೂ- ಆನಂದ್ ಪೂಜಾರಿಯವರು ಪತ್ನಿ ಸುಮಿತಾ ಅವರನ್ನೂ ಮೋದಿಯವರಿಗೆ ಪರಿಚಯಿಸಿದ್ದರು.

ಉಭಯಕುಶಲೋಪರಿ ಮಾತನಾಡುತ್ತ, ಉದ್ಯಮದಲ್ಲಿ ಪತಿಯ ಹೆಗಲಿಗೆ ಹೆಗಲುಕೊಟ್ಟು ನಿಂತಿರುವ ಅವರನ್ನು ಮೋದಿ ಬಾಯ್ತುಂಬ ಪ್ರಶಂಸಿಸಿದ್ದರು. ಈ ಸಲದ ಭೇಟಿಯಲ್ಲೂ ‘ಹೆಂಡತಿ ಮಕ್ಕಳು ಆರೋಗ್ಯದಿಂದಿದ್ದಾರಷ್ಟೆ? ಅವರಿಗೆ ನನ್ನ ನಮಸ್ಕಾರ ತಿಳಿಸಿ’ ಎಂದು ಯೋಗಕ್ಷೇಮ ವಿಚಾರಿಸಲಿಕ್ಕೆ ಮೋದಿಯವರು ಮರೆಯಲಿಲ್ಲವಂತೆ. ಹೀಗೆನ್ನುವಾಗ ಆನಂದ್ ಪೂಜಾರಿಯವರ ಮುಖದಲ್ಲೂ ಮಾತಿನಲ್ಲೂ ವಿಶೇಷವಾದೊಂದು ಧನ್ಯತೆ. ನೋಡಿ! ‘ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ’ – ಮೋದಿಯವರನ್ನು ಅಷ್ಟು ಹತ್ತಿರದಿಂದ ಆತ್ಮೀಯತೆಯಿಂದ ಮಾತನಾಡಿಸುವ ಮತ್ತು ಅವರ ಆಶೀರ್ವಾದ ಪಡೆಯುವ ಭಾಗ್ಯವು, ಉದ್ಯಮವೊಂದನ್ನು ದಣಿವರಿಯದೆ ಏಕಾಗ್ರತೆಯಿಂದ ಮುನ್ನಡೆಸಿ ಒಳ್ಳೆಯ ಹೆಸರು ಗಳಿಸಿದ್ದರಿಂದ ಆನಂದ್ ಪೂಜಾರಿಯವರಿಗೆ ಸಾಧ್ಯವಾಯಿತು. ನಮಗೆಲ್ಲ ಅದೊಂದು ಮನೋರಥವಾಗಿಯೇ ಉಳಿಯಿತು.

Leave a Reply

Your email address will not be published. Required fields are marked *

error: Content is protected !!