Tuesday, 23rd April 2024

ಹಬ್ಬ ಬಂತೆಂದು ಹಿಗ್ಗುವ ದಿನಗಳಲ್ಲ ಇವು!

ಗಣಪತಿ ಹಬ್ಬವೆಂದರೆ, ಹಬ್ಬ ಬಂತೆಂದರೆ ಗಣಪತಿ ವಿಗ್ರಹಗಳಿಗಿಂತಲೂ ಮೊದಲು ಎಲ್ಲರ ಗಮನ ಸೆಳೆದು ಭಯ ಹುಟ್ಟಿಸುವದು ಗಣಪತಿ ಕೂರಿಸುವವರ ಚಂದಾ ವಸೂಲಿಯ ರಸೀತಿ ಪುಸ್ತಕಗಳು. ಒಬ್ಬರಾದ ಮೇಲೆ ಒಬ್ಬರು ಗುಂಪು ಗುಂಪಾಗಿ ಮನೆ ಮುಂದೆ ನಿಂತು ಕಲ ಕಲ ಮಾಡುವದು, ಕೊಡದಿದ್ದಾಗ ಗೇಟು, ಬಾಗಿಲುಗಳನ್ನು ಬಾರಿಸುವದು, ತೀರಾ ಕೊಡುವದೇ ಇಲ್ಲ ಹೋಗಿ ಎಂದಾಗ ಅವಾಚ್ಯ ಶಬ್ದಗಳಿಂದ ಬೈಯ್ಯುವದು, ಕಡಿಮೆ ಕೊಟ್ಟರೆ ಹಂಗಿಸುವದು, ಜರೆಯುವದು. ಒಂದೇ ಏರಿಯಾದಲ್ಲಿ ಮೂರ್ನಾಲ್ಕು ಕಡೆ ಗಣಪತಿ ಕೂರಿಸುವವರ ಗುಂಪುಗಳು ಹತ್ತು, ಹದಿನೈದು ನಿಮಿಷಕ್ಕೊಮ್ಮೆ ಬೇರೆ ಬೇರೆ ದಿಕ್ಕಿನಿಂದ ಬಂದು ಮನೆ ಮುಂದೆ ನಿಂತು ಹುಯಿಲೆಬ್ಬಿಸಿದರೆ, ಗಣಪತಿ ಹಬ್ಬ ಬಂತೆಂಬ ಖುಷಿಗಿಂತ, ಯಾಕಾದರೂ ಬಂತೆಂದು ಆಕ್ರೋಶವೇ ಹೆಚ್ಚುತ್ತಿದೆ.

ಜಾತಿಗೊಬ್ಬ ಗಣಪತಿ ಕೂರಿಸುವದು, ಗಣಪತಿ ಒಬ್ಬನಾದರೂ ಒಂದೊಂದು ಏರಿಯಾದಲ್ಲಿ ಆತನ ಜಾತಿಯೇ ಬೇರೆ, ಧರ್ಮವೇ ಬೇರೆ, ಅಲಂಕಾರವೇ ಬೇರೆ, ನೈವೇದ್ಯಕ್ಕಿಟ್ಟ ತಿನಿಸುಗಳೇ ಬೇರೆ, ಇದೆಲ್ಲವನ್ನು ಗಣಪ ಹೇಗೆ ನಿಭಾಯಿಸುತ್ತಾನೋ ಎಂಬ ಕೌತುಕ ನನಗೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಆತ ಹಬ್ಬಗಳಲ್ಲಿ ಮೂರ್ತಿಗಳಲ್ಲಿ ಇರುವದೇ ಇಲ್ಲವೇನೋ ಎಂದೂ ಎನಿಸಿಬಿಟ್ಟಿದೆ. ಗಣಪತಿ ಪಟ್ಟಿ ಕೊಡ್ರಿ ಎಂಬ ಗುಂಪಿನ ಸಾಮೂಹಿಕ ಕೂಗು ಕೇಳಿದರೆ, `ಯಾವ ಜಾತಿ ಗಣಪತಿ?’ ಎಂದೇ ಕೇಳುತ್ತಾ ಜನ ಹೊರಬರುತ್ತಾರೆ. ಹತ್ತೋ, ಇಪ್ಪತ್ತೋ ಹೋಗಲಿ, ಐವತ್ತು ರುಪಾಯಿ ಕೊಟ್ಟರೂ ನಮ್ಮನ್ನು ಅಸಡ್ಡೆಯಿಂದ ನೋಡುವ, ತಿರಸ್ಕಾರದ ಮಾತನಾಡುವ, `ಏ ಇನ್ನ ಕೊಡ್ರಿ ನಿಮಗೇನು ಕಮ್ಮಿಯಾಗೈತಿ? ಎಂದೇ ಮೂದಲಿಸುತ್ತಾರೆ. ಐದು ನೂರು, ಸಾವಿರವೇ ಕೊಡ್ರಿ ಎಂದು ಮನೆ ಮುಂದೆ ಧರಣಿ ಕೂರುತ್ತಾರೆ. ಸದ್ಯ ಕೂತವರು ಹೋಳಿ ಹಬ್ಬದಂತೆ ಬಾಯಿ ಬಡಿದು ಕೊಳ್ಳುವದಿಲ್ಲವೆಂಬುದೇ ಒಂದು ಸಮಾಧಾನದ ಸಂಗತಿ. ಆದರೆ ಮಾತಿನ ಜಟಾಪಟಿಗೆ ಮೂಡ್ ಕೆಡುತ್ತದೆ, ಬಿ.ಪಿ.ಏರುತ್ತದೆ.

ಹಬ್ಬಗಳು ಮೂಡ್‍ಗಳನ್ನು ಉಲ್ಲಸಿತಗೊಳಿಸಬೇಕಾಗಲಿ, ಕೆಡಿಸಬಾರದು. ಚಂದಾ ಕೊಟ್ಟು ಕಳಿಸಿದ ಮೇಲೆ ಶುರುವಾಗುವ ಎರಡನೇ ಘಟ್ಟದಲ್ಲಿ ಇರುವ ಚಿಕ್ಕ ಬಡಾವಣೆಗೆ ಇರುವ ಒಂದೇ ರಸ್ತೆಯಲ್ಲಿ, ಅದೂ ರಸ್ತೆ ಮಧ್ಯದಲ್ಲೇ ಗಣಪತಿ ಪೆಂಡಾಲು ಹಾಕಿ ಬಿಡುವರು, ಐದು ದಿನವೋ, ಹನ್ನೊಂದು ದಿನವೋ ಆ ರಸ್ತೆ ಬಂದ್. ಅಷ್ಟು ದಿನ ಎಂಥ ಕೆಲಸವಿರಲಿ, ರೋಗಿಗಳಿರಲಿ, ವೃದ್ಧರಿರಲಿ ಸುತ್ತು ಹಾಕಿ, ಯಾರ್ಯಾರ ಮನೆ ಮುಂದೆ ಹಾಯ್ದೋ, ಬೈಸಿಕೊಂಡೋ, ಬಿದ್ದೋ ತಮ್ಮ ಕೆಲಸ ಮಾಡಿಕೊಳ್ಳಬೇಕೋ ಎಂಬುದು ಆ ವಿಘ್ನೇಶ್ವರನಿಗೇ ತಿಳಿಯಬೇಕು. ಸಂಚಾರಕ್ಕೆ, ಮೈಕುಗಳ ಕೂಗಾಟಕ್ಕೆ, ಚಂದಾ ವಸೂಲಿ ಕಿರಿಕಿರಿಯಿಂದಾಗಿಯೋ ಏನೋ, ಗಣಪ ಹನ್ನೊಂದೋ, ಇಪ್ಪತ್ತೊಂದೋ ದಿನಗಳು ಸುಗಮ ಸಂಚಾರಕ್ಕೆ , ಶಬ್ದಮಾಲಿನ್ಯಕ್ಕೆ, ಅಲ್ಲಲ್ಲಿ ನಡೆಯೋ ಕೋಮುಗಲಭೆಗಳಿಗೆ ಕಾರಣವಾಗುತ್ತಿರುವದು.

ಆತನ ಗ್ರಹಗತಿಯೋ, ನಮ್ಮ ಗ್ರಹಚಾರವೋ ತಿಳಿಯದಾಗುತ್ತಿದೆ. ಈ ದೇಶದಲ್ಲಿ ಶಾಂತಿ ಸೌಹಾರ್ದಗಳಿಗಾಗಿ ಇರುವ ಎಲ್ಲ ಹಬ್ಬ ಉತ್ಸವಗಳೂ ಶಾಂತಿ ಸೌಹಾರ್ದಗಳನ್ನು ಕದಡುವದಕ್ಕೇ ಕಾರಣವಾಗುತ್ತಿರುವದು ಹೆಚ್ಚುತ್ತಿರುವ ಜನಸಂಖ್ಯೆ, ಆ ಜನರ ಉನ್ಮತ್ತತೆಗಳೇ ಅನಿಸುತ್ತಿದೆ.

ಒಂದಾನೊಂದು ಕಾಲವಿತ್ತು ಎಂದರೆ ಎಷ್ಟೋ ಯುಗಗಳ ಹಿಂದಲ್ಲ. ಕೇವಲ ಐದೋ, ಹತ್ತೋ ವರ್ಷಗಳ ಹಿಂದೆ ಗಣಪತಿ ಹಬ್ಬದಲ್ಲಿ ಹರಿಕಥೆ, ಭರತನಾಟ್ಯ, ಸಣ್ಣ ಸಣ್ಣ ನಾಟಕಗಳು, ಪ್ರಹಸನಗಳು, ಸಾಹಿತಿ, ಕಲಾವಿದರಿಗೆ ಸನ್ಮಾನಗಳು ನಡೆಯುತ್ತಿದ್ದವು, ಈಗಲೂ ನಡೆಯುತ್ತಿವೆ ಆದರೂ, ಕಿವಿಗಡಚಿಕ್ಕುವ ಸಂಗೀತ, ಅರೆ ಬೆತ್ತಲೆ ನೃತ್ಯ, ಕೆಲವು ಕಡೆ ಗಣಪತಿ ಮುಂದೆ ಕ್ಯಾಬರೆಗಳೂ ನಡೆಯುತ್ತವೆ. ಮಣ್ಣಿನ ಗಣಪತಿಗೆ ಯಂತ್ರಗಳನ್ನು ಬಳಸಿ, ಸೊಂಡಿಲಿನಿಂದ ಪ್ರಸಾದ ಕೊಡುವ, ಸೊಂಡಿಲಿನಿಂದ ಆಶೀರ್ವದಿಸುವ, ಎದ್ದುನಿಂತು ಕಾಲು ಮುಗಿಸಿಕೊಳ್ಳುವ ಗಣಪತಿಗಳನ್ನು ಮಾಡಿ ಅದಕ್ಕೆ ಟಿಕೇಟು ಇಟ್ಟು ಹಣ ಸಂಗ್ರಹಿಸುತ್ತಾರೆ. ಲಾಟರಿ ಸ್ಕೀಂಗಳಂತೂ ಸರ್ವೇಸಾಮಾನ್ಯ. ಆಗೆಲ್ಲ ನಾವು, ಆಗೆಲ್ಲ ಎಂದರೆ 8-10 ವರ್ಷಗಳ ಹಿಂದೆ, ಊರಲ್ಲಿ ಕೂರಿಸಿದ ಎಲ್ಲ ಗಣಪತಿಗಳನ್ನು, ಅವುಗಳ ಅಲಂಕಾರಗಳನ್ನು ನೋಡಲು ರಾತ್ರಿ ಊಟವಾದ ಮೇಲೆ ಇಡೀ ಊರಿನ ಜನ ಗುಂಪು ಗುಂಪಾಗಿ ಗಾಂಧಿಚೌಕ್‍ನಿಂದ ಹಿಡಿದು ಗಂಜ್‍ಗಳವರೆಗೂ ರಾತ್ರಿ 12 ರವರೆಗೆ ಸುತ್ತಾಡಿ ನೋಡುತ್ತಿದ್ದರು. ಈಗ ಆ ಪರಿಸ್ಥಿತಿ ಯಾವ ಊರಲ್ಲಿಯೂ ಉಳಿದಿಲ್ಲವೆನಿಸುತ್ತದೆ. ಏಕೆಂದರೆ ಯಾವ ಗಣಪತಿ ಟೆಂಟ್‍ಗಳ ಮುಂದೆ ಹೋದರೂ ಲಕ್ಕೀ ಸ್ಕೀಂ ಟಿಕೇಟು ಹಿಡಿದ ಯುವಕರು, ಐದು ನೂರು ರುಪಾಯಿಗೆ ಮೋಟಾರು ಸೈಕಲ್, ಸಾವಿರ ರುಪಾಯಿಗೆ ಕಾರು, ಎರಡು ಸಾವಿರಕ್ಕೆ ಗೋಲ್ಡನ್ ಚೈನ್‍ಗಳ ಪ್ರದರ್ಶನ, ಬೆನ್ನು ಹತ್ತಿ ಅವುಗಳ ಟಿಕೇಟ್ ಮಾರಾಟ.

ಒಟ್ಟಿನಲ್ಲಿ ಗಣೇಶ ಉತ್ಸವೆಂಬುದು ಸಾರ್ವಜನಿಕರ ಹಣ ಎತ್ತುವ ದಂಧೆ ಎನಿಸಿಬಿಟ್ಟಿದೆ. ನನಗೆ ಭಾಷಣದ ಕಾರ್ಯಕ್ರಮಗಳ ರುಚಿ ಹತ್ತಿಸಿz್ದÉೀ ಈ ಗಣೇಶೋತ್ಸವಗಳು. ಆಗ ನಾನು ಬ್ರಾಹ್ಮಣ ಗಜಾನನ ಯುವಕ ಸಂಘದ ಸದಸ್ಯನಾಗಿದ್ದೆ, ರಾಘವೇಂದ್ರ ಸ್ವಾಮಿಗಳ ಮೂರು ದಿನದ ಆರಾಧನೆಯ ಕೊನೆಯ ದಿನವೇ ಗಣೇಶೋತ್ಸವದ ಪೂರ್ವ ತಯಾರಿ ಸಭೆ ಕರೆಯಲಾಗುತ್ತಿತ್ತು
ದಿ|| ರಾಘವೇಂದ್ರರಾವ್ ವಕೀಲರೇ ಅಧ್ಯಕ್ಷರು, ಗುರುರಾಜ ವೈದ್ಯ, ಎಲ್.ಐ.ಸಿ. ಭೋಗೇಶ, ಸತ್ಯನಾರಾಯಣರಾವ್ ದೇಶಪಾಂಡೆ, ದೇಶಪಾಂಡೆ ಕೃಷ್ಣ ವಕೀಲರು, ಸುದರ್ಶನ ಜೋಶಿ,

ಟಿಕೋಟಿಕರ್ ಸುರೇಶ್ ಮುಂತಾದ ನಮಗಿಂತ ನಾಲ್ಕೈದು ವರ್ಷ ದೊಡ್ಡವರ ನೇತೃತ್ವದಲ್ಲಿ ಐದು ದಿನಗಳ ಗಣೇಶೋತ್ಸವ ರೂಪುಗೊಳ್ಳುತ್ತಿತ್ತು. ಐದೂ ದಿನ ನನ್ನದೇ ಸಾಂಸ್ಕøತಿಕ ಕಾರ್ಯಕ್ರಮಗಳ ಹೊಣೆ, ಹುಡುಗರ ನೃತ್ಯ, ನಮ್ಮ ನಾಟಕಗಳು, ಓಹ್! ಧಾವಂತ, ಒತ್ತಡಗಳಿಲ್ಲದ ಸುಂದರ ದಿನಗಳವು.

ಈ ಐದೂ ದಿನಗಳ ಕಾರ್ಯಕ್ರಮಕ್ಕೆ ಹಣ ಬೇಕಲ್ಲವೆ? ಮೊದಲೇ ಬಡ ಬ್ರಾಹ್ಮಣರ ಸಂಘ ನಮ್ಮ ಜನಗಳ ಬಳಿಯೇ ರಸೀದಿ ಹಿಡಿದು ಗುಂಪಾಗಿ ಚಂದಾ ವಸೂಲಿಗೆ ಇದ್ದುದರಲ್ಲಿಯೇ ಶ್ರೀಮಂತರ ಮನೆಗಳಿಗೆ ನುಗ್ಗುತ್ತಿದ್ದೆವು. ಹಾಗೇ ಒಂದು ಶ್ರೀಮಂತರ ಮನೆ ಹೊಕ್ಕೆವು. ನೀರಾವರಿ ಗದ್ದೆಗಳು, ಹತ್ತಾರು ಬಾಡಿಗೆ ಮನೆಗಳ ಮಾಲೀಕರು ಅವರು. ಎಂಟ್ಹತ್ತು ಎಮ್ಮೆ, ಆಕಳುಗಳು, ಹುಲಿಯಂಥ ನಾಯಿಯನ್ನೂ ಸಾಕಿದ್ದರು, ಆದರೆ, ನೋಡಲು ಹುಲಿ, ನಮ್ಮ ಗುಂಪನ್ನು ನೋಡಿದ ಕೂಡಲೇ ಒಳಗೆ ಓಡಿ ಹೋಗಿ ಟಿವಿ ಎದುರಿನ ಸೋಫಾ ಕೆಳಗೆ ನಾವೇ ಎಲ್ಲಿ ಕಚ್ಚುತ್ತೇವೆಯೋ ಎನ್ನುವಂತೆ ಮಲಗಿ ಬಿಟ್ಟು ನಮ್ಮಕಡೆ ದೀನವಾಗಿ ನೋಡಲಾರಂಭಿಸಿತು.

ಗಣ್ಯರು ಹೊರಬಂದು ಚೆನ್ನಾಗಿ ಮಾತನಾಡಿದರು, ಹೋಗಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಮನೆಯಲ್ಲಿ ಯಥೇಚ್ಛ ಆಕಳು ಎಮ್ಮೆ ಇದ್ದುದರಿಂದಲೋ ಏನೋ ಎಲ್ಲರಿಗೂ ಚಹಾ, ಚಹಾ ಒಲ್ಲೆಯೆಂದವರಿಗೆ ಹಾಲು ನೀಡಿ ಸತ್ಕರಿಸಿ ಬ್ರಾಹ್ಮಣ ಸಂಘಟನೆ ಬಗ್ಗೆ ಮಾತನಾಡಿದರು. ಬಂದ ವಿಷಯ ಕೇಳಿದರು- ನಮಗಿಂತ ಹಿರಿಯರು ಐದು ದಿನಗಳ ಕಾರ್ಯಕ್ರಮ, ತಗಲುವ ವೆಚ್ಚ ಇತ್ಯಾದಿ ಹೇಳಿ ರಸೀದಿ ಪುಸ್ತಕ ಮುಂದಿಟ್ಟರು, ಗಣ್ಯರ ಮುಖಚರ್ಯೆ ಬದಲಾಯಿತು `ಬೇಡುವವನು ಬ್ರಾಹ್ಮಣನಲ್ಲ, ಬೇಡುವಿಕೆಯೇ ನಮ್ಮ ದೌರ್ಬಲ್ಯ, ಬೇಡಬಾರದು, ನಾನು ಇದೆಲ್ಲವನ್ನು ದುಡಿದೇ ಗಳಿಸಿದೆ. ಗದ್ದೆ, ಈ ಮನೆ, ಈ ಹೈನು ಇದೆಲ್ಲ ನನ್ನ ಕಷ್ಟಾರ್ಜಿತ’ ಎಂದೆಲ್ಲ ಬಿರುಸು ಮಾತುಗಳನ್ನಾಡಿದರು, ಅದುವರೆಗೂ ಸುಮ್ಮನೆ ಮಲಗಿದ್ದ ಅವರ ನಾಯಿಯೂ ಯಜಮಾನರನ್ನು ಇವರು ಸಿಟ್ಟಿಗೆಬ್ಬಿಸಿದರು ಎಂದು ಅರ್ಥ ಮಾಡಿಕೊಂಡು ಬೊಗಳಲಾರಂಭಿಸಿತು. ಗಣ್ಯರು ಬಡ್ಡಿ ವ್ಯವಹಾರವನ್ನು ಮಾಡುತ್ತಿದ್ದು, ಅವರ ಗಿರಾಕಿಗಳು ಯಜಮಾನರಿಗೆ ಬಂದವರೇ ಹಣ ಕೊಡುವದನ್ನು ನೋಡಿದರೆ ಸುಮ್ಮನಿರುತ್ತಿದ್ದ ನಾಯಿ, ಯಜಮಾನರು ಬೇರೆಯವರಿಗೆ ಕೊಟ್ಟರೆ, ಕೊಡುವದನ್ನು ನೋಡಿದರೆ ಸಿಕ್ಕಪಟ್ಟೆ ಒದರುತ್ತಿತ್ತು ಎಂದು ಆ ಮೇಲೆ ಅವರ ಬಳಿ ಸಾಲ ತೆಗೆದು ಕೊಂಡವರೊಬ್ಬರು ಹೇಳಿದ್ದು ನೆನಪಾಯಿತು.

ಕಡೆಗೂ ಅಖಂಡ ಚರ್ಚೆ, ಹೋರಾಟಗಳ ಪರಿಣಾಮವಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ಬೆಡ್ ರೂಂ ಒಳಗೆ ಹೋದ ಗಣ್ಯರು ಹಲವಾರು ಗಾದ್ರೇಜ್ ಬೀರುಗಳ ಶಬ್ದ, ಬಾಗಿಲು ತೆರೆಯುವದು, ಹಾಕುವದು ಹೊರಗೆ ಕೂತವರಿಗೆ ಕೇಳುತ್ತಿತ್ತು. ದೊಡ್ಡ ಗಂಟೇ ಸಿಗುವ ನಿರೀಕ್ಷೆಯಲ್ಲಿದ್ದ ನಮ್ಮ ತಂಡ ಇಡೀ ಐದು ದಿನಗಳ ಖರ್ಚನ್ನು ಇವರೇ ಕೊಡುವ ಲಕ್ಷಣಗಳಿವೆಯೆಂದು ಊಹಿಸಿ, ಪ್ರಾಯೋಜಕರು ಇವರೇ ಎಂದು ಬೋರ್ಡ ಬರೆಸಲೂ ಪೇಂಟರ್‍ಗೆ ಅಲ್ಲಿಂದಲೇ ಪೆÇೀನು ಹಚ್ಚಿದರು. ಇವರ ತಂದೆಯ ಹೆಸರನ್ನೆ ಗಣೇಶ ಮಂಪಟದ ಕಮಾನಿಗೆ ಇಡಲು ನಿರ್ಧರಿಸಿದರು, ಕಡೆಗೂ ಹೊರಬಂದ ಗಣ್ಯರು ಐವತ್ತೊಂದು ರೂಪಾಯಿಯನ್ನು ಮುಂದಿಟ್ಟಾಗ ಇಡೀ ತಂಡ , ಥಂಡಾ ಹೊಡೆಯಿತು, ಯಜಮಾನ ಹಣ ಕೊಟ್ಟಿದ್ದು ನೋಡಿದ ನಾಯಿ ಇನ್ನು ಜೋರಾಗಿ ಬೊಗಳಲಾರಂಭಿಸಿತು, ನಮ್ಮ ತಂಡದಲ್ಲಿ ಏಟು ಮಾತಿಗೆ ಹೆಸರಾಗಿದ್ದ ಭೋಗೇಶ `ಏನ್ರಿ, ಸಾವಕಾರ್ರ, ನಮ್ಮ ಸಮಾಜದಾಗ ಶ್ರೀಮಂತರಾದ ನೀವೇ ಇಷ್ಟು ಕಮ್ಮಿ ಕೊಟ್ಟರ, ಉಳಿದವರು ಹೆಂಗ ಕೊಡ್ತಾರ ಹೇಳ್ರೀ? ಮನಿತುಂಬಾ ಹೈನಾ, ಹಾಲಿನ ಹೊಳಿನ ಹರಿತಿದೆ, ಇಲ್ಲಿ ನೋಡ್ರಿ ಸಾವಕಾರ್ರ ಹಂಗ ಮಾಡಬಾಡ್ರಿ ಎಂದ. ಸಾವ್ಕಾರು `ಯಾರವರು ಅಂದವರು?’ ಎಂದು ಹುಬ್ಬೇರಿಸಿದರು. ಯಾರ ಮಗ ತಮ್ಮ ನೀನು, ಇನ್ನೂ ಓದ್ತಿಯೋ, ಕೆಲ್ಸಮಾಡ್ತಿಯೋ ಎಂದು ಪ್ರಶ್ನಿಸುತ್ತಾ, `ನೀ ಹೇಳಿದಂಗ ಮನ್ಯಾಗ ಆಕಳ, ಎಮ್ಮೆ, ಹೈನು, ಮೊಸರು, ಬೆಂಣಿ, ಹಾಲು ಎಲ್ಲ ಅವ ಖರೆ, ಹಂಗಂತ ನಾನು ನನ್ನ ಕುಂಡಿನ ಹಾಲಿನ್ಯಾಗ ತೊಳಕೊಳ್ಳೋದಿಲ್ಲ, ನೀರಿನ್ಯಾಗ ತೊಳಕೋತಿನಿ, ಯಾರಿಗೆ, ಯಾವದಕ್ಕ ಎಷ್ಟು ಕೊಡಬೇಕು ಅಂತ ನನಗ ಗೊತ್ತದ ಬೇಕಾದ್ರ ತಗೊಳ್ರಿ, ಬ್ಯಾಡಂದ್ರ ನಡೀರಿ, ನನಗ ಕೆಲ್ಸ ಕಾಯಲಿಕ್ಕ ಹತ್ಯಾವ, ನನಗೇನು ಇದಕ್ಕ ರಸೀತಿ ಬ್ಯಾಡ’ ಎಂದು ಧಸಕ್ಕನೆ ಸೋಫಾದಲ್ಲಿ ಕೂತು ಟೈಗರ್ ಎಂದು ತಮ್ಮ ನಾಯಿಯನ್ನ ಕೂಗಿದರು. ಅದು ಓಡುತ್ತಾ ಬಂದ ರಭಸಕ್ಕೆ ನಾವೆಲ್ಲ ಧಡಕ್ಕನೆ ಎದ್ದು ನಿಂತೆವು, ಒಬ್ಬೊಬರೇ ಜಾಗ ಖಾಲಿಮಾಡಿದೆವು.

ಯಾರಾದರೂ, `ನಿಮಗೇನು ಕಮ್ಮಿಯಾಗೇದರಿ, ನಮಗಿಷ್ಟು ಕೊಡ್ರಿ’ ಎಂದಾಗ ನನಗೆ ಆ ಗಣ್ಯರು ಆಡಿದ ಮಾತೇ ನೆನಪಾಗತ್ತದೆ. ಅದು ಆಡುವ ಮಾತಲ್ಲ ನಿಜ, ಆದರೂ ಬೇರೊಬ್ಬರು ಕೊಟ್ಟರೆ ನಾವು ಬದುಕುತ್ತೀವಿ ಎಂದು ತಿಳಿದವರಿಗೆ ಈ ಮಾತೇ ತಕ್ಕ ಉತ್ತರವೂ ಹೌದು ಎನಿಸುತ್ತದೆ. ಗಣೇಶ ಚೌತಿ ಬಂತೆಂದರೆ ರಸೀತಿ ಬುಕ್ಕು ಹಿಡಿದು ಬಂದವರನ್ನ ನೋಡಿದ ಕೂಡಲೇ ಇಂಥವೆಲ್ಲ ನೆನಪಾಗುತ್ತವೆ. ಹೈವೇ, ಮೇನ್ ರೋಡ್‍ಗಳಲ್ಲಿ ಬರುವ ವಾಹನಗಳಿಗೆ ಹಗ್ಗ ಅಡ್ಡ ಹಾಕಿ ವಾಹನ ನಿಲ್ಲಿಸಿ ಹಣ ಕೇಳುವದು ಅತಿರೇಕವೆನಿಸುತಿದೆ. ನೀವು ಕಾರ್‍ನಾಗೆ ಅಡ್ಡಾಡ್ತಿರಿ ನಮಗೆ ಹಣ ಕೊಡಲು ನೀವ್ಯಾಕೆ ಹಿಂದೆ ಮುಂದೆ ನೋಡ್ತಿರಿ, ಸಾವಿರಗಟ್ಲೆ ಪೆಟ್ರೋಲ್ ಹಾಕಿಸ್ತಿರಿ, ನಮಗ್ಯಾಕೆ ಕೊಡೋಕೆ ನಿಮಗೆ ಮನಸ್ಸು ಬರಲ್ಲವಾ? ಎಂದು ನುಡಿಯುವವರಿಗೆ ಏನು ಹೇಳಬೇಕೆಂಬುದೇ ತಿಳಿಯದಂತಾಗುತ್ತದೆ.

ಹಬ್ಬ ಬಂತೆಂದು ಹಿಗ್ಗುವ ದಿನಗಳು ಹೋಗಿ ಬಿಟ್ಟವೇನೋ ಎನಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!