Sunday, 23rd June 2024

ಪರಪ್ಪನ ಅಗ್ರಹಾರ ವಿಐಪಿ ಪ್ಯಾರಡೈಸ್ !

ಜೈಲಿನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳು

ನಿರ್ವಹಣೆಯೇ ದೊಡ್ಡ ಸವಾಲು

ವಿಶೇಷ ವರದಿ: ಮಂಜುನಾಥ್ ಕೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಇದೀಗ ಗಣ್ಯ, ಅತಿಗಣ್ಯರ ಅತಿಥಿ ಕೇಂದ್ರವಾಗಿ ಮಾರ್ಪಾಡು ತ್ತಿದೆಯೇ…!

ಪರಪ್ಪನ ಅಗ್ರಹಾರವನ್ನು ವಿಐಪಿಗಳ ಪ್ಯಾರಡೈಸ್ ಎಂದು ಕರೆಯುವಂತಾಗಿದೆ. ಹೌದು, ವಂಚನೆ ಪ್ರಕರಣದಲ್ಲಿ ರಾಜಕಾರಣಿಗಳು, ಡ್ರಗ್ಸ್ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಮಣಿಯರು ಕಂಬಿ ಹಿಂದೆ ಸೇರಿದ್ದು, ಭದ್ರತೆ ಕೈಗೊಳ್ಳುವುದೇ ಜೈಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪ್ರಭಾವಿ ರಾಜಕಾರಣಿ ಮಾಜಿ ಸಚಿವ ರೋಷನ್ ಬೇಗ್, ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ನಟಿ ಮಣಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಮಾಡೆಲ್ ಆ್ಯಡಂ ಪಾಷಾ ಜೈಲಿನ ಆತಿಥ್ಯ ಸ್ವೀಕರಿಸುತ್ತಿರುವ ವಿಐಪಿ ವಿಚಾರಣಾಧೀನ ಕೈದಿಗಳಾದರೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜ್ ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದಾರೆ.

ನಿತ್ಯ ಬ್ಯಾರಕ್‌ಗಳಲ್ಲಿ ರೌಡಿ, ದರೋಡೆಕೋರರ ಗಲಾಟೆಯೇ ಹೆಚ್ಚು. ಈ ಮಧ್ಯೆ ಈಗಾಗಲೇ ಜೈಲಿನಲ್ಲಿ ರುವ ಬಂಧಿತ ನಟಿಮಣಿ ಯರು ಸೇರಿ ಪ್ರಭಾವಿ ವಿಐಪಿ ರಾಜಕಾರಣಿಗಳನ್ನು ನೋಡಿ ಮಾತನಾಡಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ ಗಣ್ಯ ಆರೋಪಿಗಳಿಗೆ ಭದ್ರತೆ ಒದಗಿಸುವುದೇ ಒಂದು ರೀತಿಯಲ್ಲಿ ತಲೆ ನೋವಾಗಿದೆ ಎನ್ನುತ್ತವೆ ಜೈಲು ಮೂಲಗಳು.

ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ರಾಜ್ಯದಲ್ಲಿಯೇ ಹೆಚ್ಚು ಸುದ್ದಿಯಾದ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿ, ಸುಮಾರು ಎರಡು ತಿಂಗಳಿಂದ ಒಂದೇ ಬ್ಯಾರಕ್‌ನಲ್ಲಿದ್ದಾರೆ. ಇನ್ನು ಮಾಜಿ ಮೇಯರ್ ಸಂಪತ್‌ರಾಜ್ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಾಕಿಸಿದ ಸೂತ್ರಧಾರ ಎಂಬ ಆರೋಪಕ್ಕೆ ಗುರಿಯಾಗಿ ಜೈಲು ಸೇರಿದ್ದಾರೆ. ಉಳಿದಂತೆ ಪ್ರಭಾವಿ ರಾಜಕಾರಣಿ ರೋಷನ್ ಬೇಗ್ ವಂಚನೆ ಕೇಸ್‌ನಲ್ಲಿ ಸಿಬಿಐನಿಂದ ಮೂರು ದಿನಗಳ ಹಿಂದೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ.

ಇನ್ನು ಇದೇ ಜೈಲಿನಲ್ಲಿ ಇವರಿಗೆಲ್ಲಾ ಸೀನಿಯರ್ ಎಂದು ಹೇಳಬಹುದಾದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಈ ಸಾಲಿನಲ್ಲಿ ಮೊದಲಿಗ ರಾಗಿದ್ದಾರೆ. ಬಂಧಿತರೆಲ್ಲರು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದವರು. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಸೇರಿರುವ ವಿಐಪಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಜೈಲಿನಲ್ಲಿ ನೀಡುವ ಸಾಮಾನ್ಯ ಉಡುಪು ಮತ್ತು ಆಹಾರ ಸೇವಿಸಬೇಕಾಗಿದೆ. ಸಾಮಾನ್ಯವಾಗಿ ನಟಿಮಣಿಯರು ಮತ್ತು ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಿದ್ದವರು.

ಕೈ-ಕಾಲಿಗೆ ಒಬ್ಬರಂತೆ ಆಳು-ಕಾಳು ಹೊಂದಿದ್ದವರು ಇದೀಗ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ. ಸಮಾಜ, ಇಲ್ಲಿನ ನ್ಯಾಯಾಂಗ ಎಲ್ಲರಿಗೂ ಒಂದೇ. ಒಟ್ಟಾರೆ ಮಾಡಿದ್ದೋಣ ಮಾರಾಯ ಎಂಬ ಗಾದೆ ಇವರಿಗೆ ಹೇಳಿ ಮಾಡಿಸಿದಂತಿದೆ.

ಬಂಧಿತ ವಿಐಪಿಗಳು
*ಅಕ್ರಮ ಆಸ್ತಿ ಗಳಿಕೆ ಪ್ರಕರಣ:ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್
*ಡ್ರಗ್ಸ್ ಪ್ರಕರಣ: ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ, ಮಾಡೆಲ್ ಆ್ಯಡಂ ಪಾಷಾ ಹಾಗೂ ಮಾಜಿ ಸಚಿವರ ರುದ್ರಪ್ಪಲಮಾಣಿ ಪುತ್ರ ದರ್ಶನ್ ಲಮಾಣಿ
*ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್
*ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್
*ಐಎಂಎ ವಂಚನೆ ಪ್ರಕರಣ: ಉದ್ಯಮಿ ಮನ್ಸೂರ್ ಖಾನ್

ಹೈರಾಣಾಗಿರುವ ಜೈಲು ಸಿಬ್ಬಂದಿ
ಬಂಧಿತ ವಿಐಪಿ ಆರೋಪಿಗಳನ್ನು ನಿಭಾಯಿಸುವುದು ಪರಪ್ಪನ ಅಗ್ರಹಾರದಲ್ಲಿರುವ ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಬಂಧಿತರು ಹಲವು ಬೇಡಿಕೆಗಳನ್ನು ಜೈಲಿನ ಸಿಬ್ಬಂದಿಯ ಮುಂದೆ ಇಡುತ್ತಿದ್ದಾರೆ. ಇತ್ತೀಚೆಗೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ದೀಪಾವಳಿಗೆ ಹೊಸ ಬಟ್ಟೆೆ ಕೊಡಿ, ಇಲ್ಲ ನಮ್ಮ ಮನೆಯ ವರನ್ನು ಕರೆಸಿ ಎಂದು ರಂಪಾಟ ಮಾಡಿದ್ದರು.
ಜೈಲಿನಲ್ಲಿರುವ ಸಂಜನಾ ಮತ್ತು ರಾಗಿಣಿ ಎರಡು ತಿಂಗಳಿನಿಂದ ಪೋಷಕರನ್ನು ನೋಡಿರಲಿಲ್ಲ. ದೀಪಾವಳಿ ಹಬ್ಬ ನೆಪ ಮಾಡಿಕೊಂಡು ಹೊಸ ಬಟ್ಟೆ ಕೊಡಿ ಇಲ್ಲಾ ನಮ್ಮ ಮನೆಯವರನ್ನು ಕರೆಸಿ ಎಂದು ಬೇಡಿಕೆ ಇಟ್ಟಿದರು. ಇವರನ್ನು ಸಮಾಧಾನ ಪಡಿಸಲು ಜೈಲಿನ ಅಧಿಕಾರಿಗಳು ಹೈರಾಣಾಗಿ ಹೋಗಿದ್ದರು. ಇದರೊಂದಿಗೆ ಜೈಲಿನಲ್ಲಿರುವ ಬಂಧಿಗಳು ಈ ಗಣ್ಯರನ್ನು ನೋಡಲು ಬ್ಯಾರಕ್ ಬಳಿ ಬರಲು ಯತ್ನಿಸುವುದು ನಿತ್ಯ ಹದ್ದಿನ ಕಣ್ಣಿಟ್ಟು ಭದ್ರತೆ ನೀಡುವಂತಾಗಿದೆ ಎನ್ನುತ್ತಾರೆ ಜೈಲು ಸಿಬ್ಬಂದಿಯೊಬ್ಬರು.

Leave a Reply

Your email address will not be published. Required fields are marked *

error: Content is protected !!