Sunday, 23rd June 2024

ಕರ್ನಾಟಕದ ಜನರ ಬದುಕಿಗಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಕಲಬುರ್ಗಿ: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಇದಕ್ಕಾಗಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ಕೊಡದೆ ಹೋದರು, ಕರ್ನಾಟಕದ ಜನರ ಬದುಕಿಗಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿಯವರು ಜನ್ ಧನ್ ಖಾತೆ ಮಾಡಿಸಿ 15 ಲಕ್ಷ ಕೊಡುತ್ತೇವೆ ಎಂದರು ಆದರೆ ಒಂದೇ ಒಂದು ರೂಪಾಯಿ ಕೊಡಲಿಲ್ಲ. 2 ಕೋಟಿ ಉದ್ಯೋಗ ಕೊಡಲಿಲ್ಲ. ನಮ್ಮ ಸರ್ಕಾರ 15 ಸಾವಿರ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲು ಕ್ರಮವಹಿಸುತ್ತದೆ. ಸುಮಾರು 50 ಸಾವಿರ ಉದ್ಯೋಗ ಸೃಷ್ಟಿ ನಮ್ಮ ಗುರಿ.

ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಗೋದಾಮುಗಳಲ್ಲಿ ಅಕ್ಕಿಯನ್ನು ಕೊಳೆಸುತ್ತಿದೆ. ನಮಗೆ ಕೊಡಿ ಎಂದರೂ ಕೊಡುತ್ತಿಲ್ಲ. ಅದಕ್ಕೆ ನಾವು ಕೆಜಿಗೆ 34 ರೂ. ಕೊಡುತ್ತಿದ್ದೇವೆ. ಮಹಿಳೆಯರ ಖಾತೆಗೆ ಎರಡು ಸಾವಿರ ಹಣ ನೀಡುತ್ತಿದ್ದೇವೆ. ಯಾವುದೇ ಲಂಚವಿಲ್ಲದೇ ಎಲ್ಲ ಮಹಿಳೆಯರ ಖಾತೆಗೆ ಹಣ ಹೋಗುತ್ತಿದೆ.

ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ನೆಲವನ್ನು ತೊಳೆದು. ಈ ರಾಜ್ಯದಲ್ಲಿ ಇದ್ದಂತಹ ದರಿದ್ರ ಸರ್ಕಾರವನ್ನು ಕಿತ್ತೊಗೆಯುತ್ತೇವೆ, ಜನರ ಕಷ್ಟಗಳನ್ನು ದೂರ ಮಾಡುತ್ತೇವೆ ಎಂದು ಸಂಕಲ್ಪ ಮಾಡಿದ್ದೆವು. ಅದರಂತೆ ನುಡಿದಂತೆ ನಡೆದಿದ್ದೇವೆ. ಪ್ರಿಯಾಂಕ ಗಾಂಧಿ ಅವರ ಸಮ್ಮುಖದಲ್ಲಿ ನಾನು ಮತ್ತು ಸಿದ್ದರಾಮಯ್ಯ ಅವರು ಗ್ಯಾರಂಟಿ ಚೆಕ್ಕಿಗೆ ಸಹಿ ಹಾಕಿದೆವು. ಐವತ್ತು ಸಾವಿರಕ್ಕು ಹೆಚ್ಚು ಮಹಿಳೆಯರ ಸಮ್ಮುಖದಲ್ಲಿ ಗೃಹಲಕ್ಷ್ಮೀ ಯೋಜನೆ ಘೋಷಣೆ ಮಾಡಿದೆವು. ನಮ್ಮ ಕಾರ್ಯಕರ್ತರು ಮನೆ, ಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ತಲುಪಿಸಿದರು.

ಚುನಾವಣೆ ವೇಳೆ ನಾನು ಒಂದು ಮಾತನ್ನು ಹೇಳುತ್ತಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಿಮ್ಮ ಆಶೀರ್ವಾದದಿಂದ ಕೈ ಅಧಿಕಾರಕ್ಕೆ ಬಂದು ಜನರ ಬದುಕಿಗೆ ದಾರಿ ತೋರಿಸುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಿ: ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಕುಳಿತಂತಹ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕನ್ನಡಿಗ, ಮಣ್ಣಿನ ಮಗನಾದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಇಡೀ ರಾಷ್ಟ್ರ ಚುಕ್ಕಾಣಿ ಹಿಡಿದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆಯನ್ನು ಇವರು ಉದ್ಘಾಟನೆ ಮಾಡಿದರು. ದೆಹಲಿಯಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ನಡೆಸಿದೆವು.

ಬುದ್ದ, ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಶಿಲುಬೆ ಏರಿದ ಗಳಿಗೆಯಲ್ಲಿ, ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ ಗಳಿಗೆ, ಸೋನಿಯಾ ಗಾಂಧಿ ಅವರು ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿದ ಗಳಿಗೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ತಂದು, ಈ ಭಾಗದ ಜನರ ಕಲ್ಯಾಣಕ್ಕೆ ಸಂಕಲ್ಪ ಮಾಡಿದ್ದೇವೆ. ಈ ಭಾಗದ ಜನರ ಬದುಕಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಶಾಶ್ವತವಾದ ಯೋಜನೆ ಗಳನ್ನು ತಂದಿದ್ದಾರೆ.

ಕಲಬುರ್ಗಿ ಯಾವ ಬೆಂಗಳೂರಿಗೆ ಕಡಿಮೆ ಇಲ್ಲ

ಕಲಬುರ್ಗಿಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ಅನೇಕ ಉತ್ತಮ ಸಂಸ್ಥೆಗಳು ಇಲ್ಲಿವೆ. ಈ ಶಕ್ತಿ ನೀಡಿದವರು ಮಲ್ಲಿಕಾರ್ಜುನ ಖರ್ಗೆ ಅವರು. ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತನ್ನು ಮರೆಯಬಾರದು. 371 ಜೆ ಕಾರಣದಿಂದ ಕಲ್ಯಾಣ ಕರ್ನಾಟಕ ಭಾಗದ ಅಧಿಕಾರಿಗಳು ಇಂದು ಅನೇಕ ಇಲಾಖೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕುಳಿತಿದ್ದಾರೆ.

ಬಸವಣ್ಣನವರ ವಚನ ಹೇಳಿದ ಡಿಸಿಎಂ

“ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮದೇವ”.

ಬಿಜೆಪಿಯದ್ದು ಭಾವನಾತ್ಮಕ ರಾಜಕಾರಣ

ಕಾಂಗ್ರೆಸ್ ಪಕ್ಷ ಮಕ್ಕಳಿಗೆ ಬಿಸಿಯೂಟ, ಉಳುವವನಿಗೆ ಭೂಮಿ, ಸ್ತ್ರೀ ಶಕ್ತಿ, ಬ್ಯಾಂಕ್ಗಳ ರಾಷ್ಟ್ರೀಕರಣ, ಆಹಾರ ಭದ್ರತೆ ಕಾಯ್ದೆ, ಅನ್ನಭಾಗ್ಯ ಸೇರಿದಂತೆ ಸಾವಿರಾರು ಯೋಜನೆಗಳನ್ನು ನೀಡಿದೆ.
ಸಿಎಎ ಸೇರಿದಂತೆ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಜನರ ಬದುಕನ್ನು ಕಟ್ಟುವ ಒಂದೇ ಒಂದು ಯೋಜನೆ ತಂದಿಲ್ಲ.

ಅರ್ಚಕರ, ಸಣ್ಣ, ಪುಟ್ಟ ದೇವಾಲಯಗಳ ವಿರೋಧಿ ಬಿಜೆಪಿ

ಮುಜರಾಯಿ ಇಲಾಖೆಯ ವ್ಯಾಪ್ತಿಯ 1 ಕೋಟಿಗೂ ಹೆಚ್ಚು ಆದಾಯ ಇರುವ ದೇವಸ್ಥಾನಗಳ ಆದಾಯದಲ್ಲಿ ಶೇ 10 ರಷ್ಟು ಹಣ ತೆಗೆದು ಸಣ್ಣ ಪುಟ್ಟ ದೇವಾಸ್ಥಾನಗಳಿಗೆ, ಪುರೋಹಿತರಿಗೆ ನೀಡುವ ಯೋಜನೆ ತಂದಿದ್ದೆವು. ಇದಕ್ಕೆ ಬಿಜೆಪಿ ಬೆಂಬಲ ನೀಡಲಿಲ್ಲ. ಹಳ್ಳಿಗಳಲ್ಲಿ ಇರುವ ಬಡ ದೇವಾಸ್ಥಾನಗಳಿಗೆ ನೀಡುವುದನ್ನು ತಪ್ಪಿಸಿತು.

ಗ್ಯಾರಂಟಿ ಕವನಕ್ಕೆ ಚಪ್ಪಾಳೆ. ಶಿಳ್ಳೆ

ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು.
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.
ಇದನ್ನು ನೋಡಿದ ಕಮಲ ಉದುರಿ ಹೋಯಿತು.
ತೆನೆಯೊತ್ತ ಮಹಿಳೆಯನ್ನ ಕುಮಾರಣ್ಣ ನೂಕಿ ಹೋದರು.
ಕರ್ನಾಟಕ ಪ್ರಬುದ್ಧವಾಯಿತು.
ಕರ್ನಾಟಕ ಸಮೃದ್ಧವಾಯಿತು.

ಕಲಬುರ್ಗಿ ಸರ್ವಧರ್ಮಗಳ ಸಂಗಮದ ಊರು. ರಾಮ ಮಂದಿರ, ಬಂದೇ ನವಾಜ್ ದರ್ಗಾ, ಗುರುದ್ವಾರ, ಶರಣ ಬಸವೇಶ್ವರ ದೇವಸ್ಥಾನ, ಬೌದ್ದ ಮಂದಿರ ಹೀಗೆ ಎಲ್ಲರೂ ಸಹೋದರತ್ವದಿಂದ ಇಲ್ಲಿ ಬಾಳುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಜನರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದಂತೆ ಮುಂಬರುವ ಲೋಕಸಭಾ ಚುನಾಚಣೆಯಲ್ಲಿ ಕೈ ಬಲಪಡಿಸಬೇಕು.

Leave a Reply

Your email address will not be published. Required fields are marked *

error: Content is protected !!