Tuesday, 23rd April 2024

ಎನ್ ಡಿಆರ್’ಎಫ್ ತಂಡದಿಂದ ಕಟ್ಟಡ ಕುಸಿತ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ

ಧಾರವಾಡ: ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತ್‌ಕ್ಷಣ ಸ್ಪಂದಿಸುವು ದರಿಂದ ಮತ್ತು ಎನ್‍ಡಿಆರ್‌ಎಫ್ ಅಂತಹ ರಕ್ಷಣಾ ತಂಡಗಳು ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಾಗ ಸಾರ್ವಜನಿಕರಿಗೆ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಿಸಲು ಅನುಕೂಲವಾಗುವಂತೆ ಕಟ್ಟಡ ಕುಸಿತ ರಕ್ಷಣಾ ಕಾರ್ಯದ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಶುಕ್ರವಾರ ದಕ್ಷಿಣ ಭಾರತೀಯ ಹಿಂದಿ ಪ್ರಚಾರ ಸಭಾ ಕಟ್ಟಡದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಎನ್ ಡಿಆರ್ಎಫ್ ತಂಡದಿಂದ ಆಯೋಜಿಸಿದ್ದ ಕುಸಿತಗೊಂಡ ಕಟ್ಟಡದ ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಟ್ಟಡ ಕುಸಿತ, ಪ್ರವಾಹ, ಬೆಂಕಿ ಆಕಸ್ಮಿಕ ದಂತಹ ಪ್ರಕೃತಿ ವಿಕೋಪದ ಘಟನೆಗಳು ಜರುಗಿದಾಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ರಾಜ್ಯ ವಿಪತ್ತು ನಿರ್ವಹಣಾ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಜಂಟಿಯಾಗಿ ರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತಾರೆ.ಸಾರ್ವಜನಿಕರು ಅಥವಾ ಆಪತ್ತಿಗೆ ಸಿಲುಕಿದ ವ್ಯಕ್ತಿಗಳು ಭಯ ಮತ್ತು ಅಧೈರ್ಯರಾಗಿ ವರ್ತಿಸುತ್ತಾರೆ. ಅವರಿಗೆ ರಕ್ಷಣಾ ಕಾರ್ಯದ ಕ್ರಮಗಳ ಬಗ್ಗೆ ಅರಿವು ಇದ್ದರೆ ಉತ್ತಮವಾಗಿ ಸ್ಪಂದಿಸುತ್ತಾರೆ. ಇದರಿಂದ ರಕ್ಷಣಾ ಕಾರ್ಯ ಸುಗಮ ಮತ್ತು ಯಶಸ್ವಿಯಾಗಲು ಸಹಾಯವಾಗುತ್ತದೆ ಎಂದು ಹೇಳಿದರು.

ಮಾರ್ಚ್ 2019 ರಲ್ಲಿ ಧಾರವಾಡದಲ್ಲಿ ಸಂಭವಿಸಿದ ಕಟ್ಟಡ ದುರಂತ ಅನೇಕ ಪಾಠಗಳನ್ನು ಕಲಿಸಿದೆ. ಜಿಲ್ಲಾಡಳಿತವು ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿರುವ ಹಳೆಯ, ಶೀತಲ ಕಟ್ಟಡ ಹಾಗೂ ವಾಸ ಯೊಗ್ಯವಲ್ಲದ ಕಟ್ಟಡಗಳನ್ನು ಗುರುತಿಸಿ ಅವುಗಳ ಮಾಲಿಕರಿಗೆ ನೋಟಿಸ್ ನೀಡಲು ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಗಳಿಗೆ ಸೂಚನೆ ನೀಡ ಲಿದೆ. ಸಮೀಕ್ಷೆ ನಂತರ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿ, ಕಟ್ಟಡ ಸುರಕ್ಷತೆಯ ಬಗ್ಗೆ ತಜ್ಞರಿಂದ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

ಅಣಕು ಪ್ರದರ್ಶನದಲ್ಲಿ ಬೆಂಗಳೂರಿನ 40 ಕ್ಕೂ ಹೆಚ್ಚು ಎನ್‍ಡಿಆರ್‌ಎಫ್ ತಂಡದ ಸಿಬ್ಬಂದಿಗಳು ಭಾಗವಹಿಸಿ, ಕಟ್ಟಡ ಕುಸಿದ ಸಂದರ್ಭದಲ್ಲಿ ಕಟ್ಟಡದಲ್ಲಿ ಸಿಲುಕಿಕೊಂಡು ಗಾಯಾಳುಗಳನ್ನು ರಕ್ಷಣೆ ಮಾಡುವುದು. ಜೊತೆಗೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, ಡಾಗ್ ಸ್ಕ್ಯಾಡ್ ಸೇರಿದಂತೆ ಕಟ್ಟಡದಲ್ಲಿ ಸಿಲುಕಿಕೊಂಡ ಜನರನ್ನ ರಕ್ಷಣೆ ಮಾಡುವ ರೀತಿ, ಕಟ್ಟಡದಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಿ ಅಲ್ಲಿಂದ ರೂಪ್ ಮೂಲಕ ಹೇಗೆ ರಕ್ಷಣೆ ಮಾಡುತ್ತಾರೆ ಎಂಬುವುದರ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಅಣಕು ಪ್ರದರ್ಶನ ಮಾಡಿದರು.

ಅದೇ ರೀತಿ ಕೆಲ ಸಂದರ್ಭದಲ್ಲಿ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೊರ ತೆಗೆಯುವ ವಿಧಾನ ಗಾಯಾಳುಗಳನ್ನು ಹೇಗೆ ಹೊರ ತೆಗೆಯಬೇಕು. ಅವರಿಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ತೆ ಇತ್ಯಾದಿ ಕಾರ್ಯಾಚರಣೆಯ ಅಣಕು ಪ್ರದರ್ಶನ ಮಾಡಿ ಜನರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿ ಕಾರಿ ಡಾ.ಬಿ.ಗೋಪಾಲಕೃಷ್ಣ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಎನ್‍ಡಿಆರ್‌ಎಫ್ 10ನೇ ಬಟಾಲಿಯನ್ ನ ಡೆಪ್ಯೂಟಿ ಕಮಾಂಡರ್ ಸುಖೇಂದ್ರ ದತ್ತಾ, ಟಿಮ್ ಕಂಮಾಡರ್ ಸಂತೋಷ ಕುಮಾರ್ ಮತ್ತು ಆರ್ ಪಿ.ಚೌಧರಿ, ಜಾವೀದ ಖಾಜಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡನ್ನವರ, ಪೊಲೀಸ್ ಇನ್ಸಪೆಕ್ಟರ್ ಭರತ ರೆಡ್ಡಿ, ಹುಬ್ಬಳ್ಳಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೆಕರ್, ಚಂದ್ರಶೇಖರ ಭಂಡಾರಿ, ಪಿಆರ್‍ಇಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮನೋಹರ ಮಂಡೊಲಿ, ಜಿಲ್ಲಾ ಗೃಹರಕ್ಷದಳದ ಕಮಾಂಡೆಟ್ ಸತೀಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್.ಪುರಷೊತ್ತಮ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ಪ್ರಕಾಶ ವಾಯ್ ಎಸ್. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯಕಾರಿ ಮಂಡಳಿಯ ಸದ್ಯಸರು, ಸಾರ್ವಜನಿಕರು ಉಪಸ್ಥಿತರಿದ್ದರು.

ಅಣಕು ಪ್ರದರ್ಶನ ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿತು.ಸಭೆಯಲ್ಲಿ ಪ್ರಾಧಿಕಾರದ ಸದ್ಯಸರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!