Friday, 21st June 2024

ಶುರುವಾಯ್ತು ಹೊಸ ದಿನಚರಿ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಹೊಸ ಪ್ರಯತ್ನ ನಡೆಯುತ್ತಿರುತ್ತದೆ. ಹೊಸಬರ ಹಲವು ಚಿತ್ರಗಳನ್ನು ಪ್ರೇಕ್ಷಕರು  ಮೆಚ್ಚಿದ್ದಾರೆ.

ಈಗ ಮತ್ತೊಂದು ಹೊಸ ತಂಡದಿಂದ ಹೊಸ ದಿನಚರಿ ಎಂಬ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರದ ಪೋಸ್ಟರನ್ನು ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಬಿಡುಗಡೆ ಮಾಡಿದರು. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕ್ಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ.

ಎಂಭತ್ತರಲ್ಲಿ, ಎರಡು ಸಾವಿರದಲ್ಲಿ ಈಗ ಎರಡು ಸಾವಿರದ ಇಪ್ಪತ್ತರಲ್ಲಿ ಬದಲಾವಣೆ ಕಂಡುಬರುತ್ತಿದೆ. ಅದಕ್ಕೆ ಪೂರಕವೆಂಬಂತೆ ಹೊಸಬರ ತಂಡಗಳು ಹೊಸ ಪ್ರಯತ್ನಕ್ಕೆ ಮುಂದಾಗಿವೆ.

ಅದರಲ್ಲಿ ಹೊಸ ದಿನಚರಿಯೂ ಒಂದು. ಚಿತ್ರದ ಟ್ರೇಲರ್ ನಿರೀಕ್ಷೆ ಮೂಡಿಸಿದೆ ಎಂದು ನಾಗಾಭರಣ ಹೇಳಿದರು. ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ. ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ ಎಂಬುದೆ ಹೊಸ ದಿನಚರಿಯ ಕಥಾಸಾರಾಂಶವಾಗಿದೆ.

ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜಂಟಿಯಾಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ಒಟ್ಟಾಗಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ದೀಪಕ್ ಸುಬ್ರಹ್ಮಣ್ಯ ಹಾಗೂ ಚೇತನ್ ವಿಕ್ಕಿ ನಾಯಕರಾಗಿ ನಟಿಸಿದ್ದಾರೆ.

ಮಂದಾರಾ ಹಾಗೂ ವರ್ಷಾ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ವಿವೇಕ್ ದೇವ್, ಶ್ರೀಪ್ರಿಯಾ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!