Saturday, 27th July 2024

ಹ್ಯಾಪಿ ಕಪಲ್ಸ್ ಎಂಬ ಭ್ರಮಾಲೋಕ !

ಸಂಸಾರಿ ಬಾಬ

ತಾವು ‘ಹ್ಯಾಪಿ ಕಪಲ್ಸ್’ ಅಲ್ಲ ಎನ್ನುವ ಖಿನ್ನತೆಗೆ ಒಳಗಾದ ಸಂಸಾರಗಳೆಷ್ಟೋ! ಇದಕ್ಕೆಲ್ಲ ಮೂಲ ಕಾರಣ ಸೋಷಿ ಯಲ್ ಮೀಡಿಯಾ.

ಅದಿತಿ ಹಾಗೂ ಸುಶೀಲ್ ನವದಂಪತಿಗಳು. ಮದುವೆಯಾಗಿ ಮೂರು ಸವಂತ್ಸರ ಕಳೆದಿವೆ. ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಮದುವೆಗೂ ಮುನ್ನ ಪರಿಚಯ ಇತ್ತು. ಪರಿಚಯವು ಪ್ರೇಮವಾಗಿ, ಪ್ರೇಮವು ಫ್ಯಾಮಿಲಿಯಾಗಿ
ಬದಲಾಗಿದೆ. ಇವರದ್ದೇ ಅಂತಲ್ಲ, ಎಲ್ಲರಂತೆ ಇಲ್ಲೂ ಪ್ರೇಮದ ದಿನಗಳು ಮತ್ತು ಮದುವೆಯಾದ ನಂತರದ ದಿನಗಳಲ್ಲಿ ಆಗಸ ಭುವಿಯ ಅಂತರ. ಆ ಗಳಿಗೆಯಲ್ಲಿ ಕೆಲವೊಮ್ಮೆ ಪ್ರೇಮದ ದಿನಗಳು ಮಾಯಾಲೋಕವೇ ಆಗಿತ್ತು ಎಂದು ಮನಸ್ಸಿಗೆ ಅನಿಸಿಬಿಡುತ್ತದೆ. ಎಲ್ಲರಂತೆ ಇವರಿಬ್ಬರಿಗೂ ಮದುವೆಯಾದ ಹೊಸತರಲ್ಲಿ ಖುಷಿಯಿಂದಲೇ ಇದ್ದರು.

ಆದರೆ ದಿನಗಳೆದಂತೆ ಮನಸ್ಸು ಮನಸ್ಸುಗಳ ನಡುವೆ ಬಿರುಕು ಹೆಚ್ಚುತ್ತಾ ಬಂತು. ಸಣ್ಣ ಪುಟ್ಟ ವಿಷಯಗಳಲ್ಲೂ ಮನಸ್ತಾಪ. ಬದುಕೇ ನರಕ ಎಂಬಂತೆ ದಿನವೂ ಜಾರುತ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ದಿನವಿಡೀ ಹರಿದಾಡುವ ಪಟಗಳು ಗಾಯದ ಮೇಲೆ ಬರೆ ಎಳೆದಂತೆ. ಗಾಯವನ್ನು ಮಾಡಿದ್ದೂ ಅವು, ಈಗ ಅದರ ಮೇಲೆ ಬರೆ ಕೂಡ ಹಾಕುತ್ತಿವೆ. ‘ತಮ್ಮ ಜತೆಗೇ ಮದುವೆ ಆದವರು ಎಷ್ಟು ಸಂತಸದಲ್ಲಿzರೆ’ ಎನ್ನುವ ಕೊರಗು ಮನದೊಳಗೆ ಬೂದಿ ಮುಚ್ಚಿದ ಕೆಂಡ. ‘ಅವಳು ಎಷ್ಟು ರುಚಿಯಾದ ತಿಂಡಿ ತಿನಿಸು ಮಾಡಿ, ಚೆಂದದ ಫೋಟೋ ಹಾಕಿದ್ದಾಳೆ’.

‘ಆತ ಅವಳಿಗೆ ವಜ್ರದ ನೆಕ್ಲೇಸ್ ಉಡುಗೊರೆ ಕೊಟ್ಟಿದ್ದ ಸುದ್ದಿ ವಾಟ್ಸಾಪ್ ಗ್ರುಪ್ ನಲ್ಲಿ ಕಂಡೆ’. ‘ಬೆಂಗಳೂರಿನ ಒಂದೂ ಮಾಲ್ ಮಿಸ್ ಮಾಡಿಲ್ಲ, ನಾವೋ ವೀಕೆಂಡ್ ಎಲ್ಲಿಗೂ ಹೋಗುವುದಿಲ್ಲ’- ಇವೆಲ್ಲ ಹಲವುದರಲ್ಲಿ ಒಂದಿಷ್ಟು ದೂರುಗಳು. ಅವರಿಬ್ಬ ರಿಗೂ ತಾವೊಂದೇ ಹೀಗೆ, ಉಳಿದವರೆಲ್ಲ ಖುಷಿ ಖುಷಿಯಾಗಿದ್ದಾರೆ ಅನಿಸಿದೆ. ಮನಸ್ತಾಪ ವಿಪರೀತವಾಗಿ ಇನ್ನೇನು ವಿಚ್ಛೇದನ ಪಡೆಯುವ ದಿನಗಳು ಹತ್ತಿರ ಬಂದಂತಿದೆ.

ಹಾಗಿದ್ದರೆ ಇವರ ಕಲ್ಪನೆ ಸರಿಯೇ? ಇವರೊಬ್ಬರೇ ಇಷ್ಟು ದುಃಖಿಗಳೇ? ಸೋಷಿಯಲ್ ಮೀಡಿಯಾ ತೋರಿಸುವುದೆಲ್ಲವೂ ಸತ್ಯವೇ? ಬನ್ನಿ ಇನ್ನೊಂದು ಸಂಸಾರವನ್ನು ನೋಡೋಣ.

ವಾಟ್ಸಾಪ್ ಫೋಟೋಗಳು!
ಇಲ್ಲೇ ಪಕ್ಕದ ರಸ್ತೆಯ ಮೂಲೆಯಲ್ಲಿ ಸುಗೇಶ್ ಹಾಗೂ ರೀಮಾ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಮದುವೆಯಾಗಿ ಎರಡು ಮಕ್ಕಳು – ಮಗ ಮತ್ತೆ ಮಗಳು. ಇಬ್ಬರೂ ಪ್ರೌಢಶಾಲೆಯಲ್ಲಿ ಓದುತ್ತಿರುವ ಬುದ್ಧಿವಂತ ವಿಧ್ಯಾರ್ಥಿಗಳು. ಕೆಲಸ, ಮನೆ ಇದೆ, ಸಕಲ ಸೌಲಭ್ಯಗಳಿವೆ. ತೊಂದರೆ ಇಲ್ಲದ ಸಂಸಾರವಿಲ್ಲ,ಇಲ್ಲೂ ಅದೇ. ಆದರೆ ಇತ್ತೀಚೆಗೆ ಮನೆಯಲ್ಲಿ ಅಶಾಂತಿಯ ಮೋಡ ಕರಗಿಯೇ ಇಲ್ಲ. ಇಬ್ಬರಿಗೂ ತಾವು ’ಹ್ಯಾಪಿ’ ಯಾಗಿಲ್ಲ ಎನ್ನುವ ಭಯ ಶುರುವಾಗಿದೆ.

ವಾಟ್ಸಾಪ್ ಗ್ರುಪ್ ನಲ್ಲಿಯ ಮಾತುಕತೆ, ತಮ್ಮ ಫೇಸ್ಬುಕ್ ಸ್ಟೇಟಸ್ ಗೆ ಬರುವ ಪ್ರತಿಕ್ರಿಯೆ, ನೆಂಟರು ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಫಾರಿನ್ ಟ್ರಿಪ್ ಗಳ ಪಟಗಳು, ಅವರಿವರ ಮಕ್ಕಳು ಅಪ್ಲೋಡ್ ಮಾಡುವ ಯೂಟ್ಯೂಬ್ ವಿಡಿಯೋ ಇವೆಲ್ಲ ತಲೆಯನ್ನು ಕೆಡಿಸಿದೆ.

ಮಕ್ಕಳ ಭವಿಷ್ಯದ ಬಗ್ಗೆ ಚಿಂತ ಮಾಡದೇ ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಹ್ಯಾಪಿನೆಸ್ ಎಲ್ಲಿದೆ ಎಂದು ಹುಡುಕುವುದರ ದಿನ ಕಳೆಯುತ್ತಿದೆ! ಇಷ್ಟು ದಿನದ ಬದುಕು ಒಮ್ಮೆಲೇ ಯಾಕೆ ದುರಂತವಾಗಿದೆ? ಏನಾಗುತ್ತಿದೆ ಇವರ ಮನದೊಳಗೆ? ಭ್ರಮಾ ಲೋಕದ ಮುಂದೆ ನೈಜ ಭಾವನೆಯ ಅಲ ಕಲ?

ಮೇಲಿನ ಎರಡೂ ಸನ್ನಿವೇಶಗಳು ಕೇವಲ ಉದಾಹರಣೆಗೆ ಅಷ್ಟೇ. ಒಂದೇ ಸಂಸಾರದಲ್ಲಲ್ಲ, ಕೆಲವು ಪ್ರಾಂತ್ಯಗಳಲ್ಲಿ ಮಾತ್ರವಲ್ಲ ಅಥವಾ ಬಡವ ಸಿರಿವಂತರ ನಡುವಿನ ಭೇದವಲ್ಲ. ಇಂದು ಇದು ನಮ್ಮ ಸಮಾಜದಲ್ಲಿ ಎಲ್ಲಾ ಕಡೆ ಕಾಣಿಸುತ್ತದೆ. ತಾವು ‘ಹ್ಯಾಪಿ ಕಪಲ್ಸ’ ಅಲ್ಲ ಎನ್ನುವ ಖಿನ್ನತೆಗೆ ಒಳಗಾದ ಸಂಸಾರಗಳೆಷ್ಟೋ, ಅದಕ್ಕೆ ಕಾರಣಗಳು ಅಷ್ಟೇ. ಇದಕ್ಕೆಲ್ಲ ಮೂಲ ಸೋಷಿಯಲ್ ಮೀಡಿಯಾ.

ಜಗಳ ಇದ್ದದ್ದೇ!
‘ಜಗತ್ತೇ ಖುಷಿಯಲ್ಲಿದೆ, ನಮ್ಮ ಬದುಕು ಮಾತ್ರ ನರಕ’ ಎನ್ನುವ ಚಿತ್ರಣ ಬಹಳಷ್ಟು ದಂಪತಿಗಳ ಮನದಲ್ಲಿ ಮೂಡುತ್ತಿದೆ. ಯಾವ ದಂಪತಿಗಳೂ ಜಗಳ ಆಡುವುದಿಲ್ಲವೇ? ಭಿನ್ನಾಭಿಪ್ರಾಯ ಬರುವುದಿಲ್ಲವೇ? ಬಡತನ ಬಂದಿಲ್ಲವೇ? ನೋವು-ನಲಿವಿನ ತಾಳ ಮದ್ದಳೆ ನಮಗೆ ಮಾತ್ರವೇ? ಸೋಷಿಯಲ್ ಮೀಡಿಯ ಎನ್ನುವುದು ನಮ್ಮ ಒಂದೇ ಮುಖವನ್ನು ತೋರಿಸುವ ಕನ್ನಡಿಯಾಗಿದೆ.

ಯಾರೂ ತಮ್ಮ ದುಃಖವನ್ನು ತೋರಿಸಲು ಬಯಸುವುದಿಲ್ಲ. ಮನೆಯಲ್ಲಿ ಜಗಳ ನಡೆಯುವುದನ್ನು ಯಾರೂ ವಿಡಿಯೋ ಮಾಡಿ ಹಾಕುವುದಿಲ್ಲ ಅಥವಾ ಇಬ್ಬರೂ ಜ್ವರ ಬಂದು ಮಲಗಿರುವ ಪುಟವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವುದಿಲ್ಲ.
ಒಳ್ಳೆಯದನ್ನು ಮಾತ್ರ ಜನ ತೋರಿಸುತ್ತಾರೆ, ಕೆಲವೊಮ್ಮೆ ನಮಗೆ ಕಾಣುವ ಖುಷಿ – ಕೃತಕವೂ ಆಗಿರಬಹುದು! ಒಬ್ಬ ವ್ಯಕ್ತಿ
ನೋಡಲು ಪುಟದಲ್ಲಿ ಒಂದು ತರಹ ಕಂಡರೆ ಎದುರಿಗೆ ಸಿಕ್ಕಾಗ ಬೇರೆಯೇ. ಸಂಸಾರ, ಸಂಬಂಧಗಳೂ ಹಾಗೆ. ಜನರು ಕೇವಲ
ಪಟಕ್ಕಷ್ಟೇ ಅಲ್ಲ, ಸುಖ ದುಃಖಗಳಿಗೂ ಫಿಲ್ಟರ್ ಹಾಕುತ್ತಾರೆ.

ನಿಮಗೆ ಯಾವಾಗ ನಮ್ಮ ಬದುಕಷ್ಟೇ ಕಷ್ಟ ಅನಿಸಿದಾಗ – ದಯವಿಟ್ಟು ಹೋಲಿಕೆ ಮಾಡುವ ಚಿತ್ರಣದಲ್ಲಿ ಫಿಲ್ಟರ್ ಇದೆ
ಎನ್ನುವ ಅರಿವಿರಲಿ. ಹ್ಯಾಪಿ ಕಪಲ್ ಎನ್ನುವುದು ಒಂದು ಭ್ರಮೆ ಅಷ್ಟೇ. ಸಂಸಾರ ಅಂದಾಕ್ಷಣ ಅಲ್ಲಿ ಸರಸ ವಿರಸ ಇದ್ದೇ ಇರುತ್ತದೆ. ಯಾವ ಸಂಸಾರದಲ್ಲಿ ವಿರಸ ಇಲ್ಲವೋ ಅಲ್ಲಿ ಸರಸವೇ ಇಲ್ಲ ಎಂದರ್ಥ.

ಊಟದಲ್ಲಿ ಬರೀ ಸಿಹಿ ಇದ್ದರೆ? ಉಪ್ಪು, ಕಾರ, ಸಿಹಿ ಇದ್ದರೇ ಊಟ, ಹಾಗೆಯೇ ಜಗಳ, ರಂಪ, ಹಠ, ನಗು, ಖುಷಿಯೇ ಸಂಸಾರ. ಖುಷಿಯ ತೋರಿಕೆಯ ಹಿಂದಿನ ಕತೆ ಯಾರಿಗೆ ಗೊತ್ತು? ಕಾರು, ಮನೆ, ವಜ್ರ ವೈಡೂರ್ಯ ಎಲ್ಲವೂ ಪುಕ್ಕಟೆ ಬರುವುದಲ್ಲ. ಯಾರಿಗೂ ಯಾವುದೂ ಫ್ರೀ ಆಗಿ ಸಿಗುವುದಿಲ್ಲ. ಅದರ ಬೆಲೆ ತೆತ್ತೇ ಪಡೆದಿರುತ್ತಾರೆ. ಆದರೆ ನಮಗೆ ಅದು ಅವರಿಗೆ ಫ್ರೀಯಾಗಿ ಸಿಕ್ಕಂತೆ ಕಾಣಿಸುತ್ತದೆ, ನಮಗೂ ಸಿಕ್ಕರೆ ಅನಿಸುತ್ತದೆ. ಹೀಗಾಗಿ ಯಾರಾದರೂ ಯಶಸ್ಸಿನ ವಿಷಯ ಹಂಚಿಕೊಂಡಾಗ ಹಿಂದಿರುವ ತ್ಯಾಗದ, ನೋವಿನ ವಿಷಯದ ಬಗ್ಗೆಯೂ ಗಮನ ಕೊಡಿ.

ಯಾವುದೇ ಒಂದು ನಿರ್ಧಾರ ಮನಸ್ಸಿಗೆ ಮುಟ್ಟುವ ಮೊದಲು ಕಾಣದ ಚಿತ್ರವನ್ನೂ ನೋಡಲು ಪ್ರಯತ್ನಿಸಿ. ನಮ್ಮೆದುರು ಕಾಣುವ ಭ್ರಮಾಲೋಕದ ಹೊರಬಂದು ಸಹಜವಾದ ಸರಸ-ವಿರಸದ ಸಂಸಾರವನ್ನು ಸಂತೃಪ್ತಿಯಿಂದ ಬಾಳಿ!

error: Content is protected !!