Saturday, 27th July 2024

ನನ್ನೊಳಗಿನ ಆ ಒಂದು ಸಂಜೆ

ಒಮ್ಮೊಮ್ಮೆ ನೀನು ಖುಷಿಯಾಗಿದ್ದೀಯ ಬೇಸರಗಳೆಲ್ಲಾ ನಂದು ಮಾತ್ರ ಅಂತನ್ನೋ ಅವಳೆಡೆಗೆ ನನ್ನದು ಕೂಡ ಅರ್ಥವಾಗದ ನೋಟ.

ಲಕ್ಷ್ಮೀಕಾಂತ್ ಎಲ್. ವಿ.

ಮುಸ್ಸಂಜೆ ಸಮಯದಲ್ಲಿ ದಣಿದ ಮನಸ್ಸಿಗೆ ತಂಪೆರೆವ ತಂಗಾಳಿಗೆ ಸೋತ ಮನಸು. ಗಾಳಿಯ ರೆಕ್ಕೆ ಕಟ್ಟಿಕೊಂಡು ಆಗಸಕ್ಕೆ ಹಾರುವ, ಕಡಲಂಚಿನ ಕೆಂಪು ಸೂರ್ಯನನ್ನು ನೋಡುತ್ತಾ ಇಳಿಸಂಜೆಗಿಷ್ಟು ಖುಷಿ ಯನ್ನು ಕೊಡುವ, ಮರಳ ಮನೆ ಕಟ್ಟಿ ಕನಸುಗಳನ್ನೆಲ್ಲಾ ಅದರೊಳಗೆ ಜೋಪಾನ ಮಾಡ್ತಿದ್ದ ದಿನಗಳವು. ಬೇಸರಗಳನ್ನೆಲ್ಲಾ ಮೂಟೆ ಕಟ್ಟಿ ಯಾರೂ ಇಲ್ಲದ ಏಕಾಂತ ದಲ್ಲಿ ಒಬ್ಬನೇ ಅನುಭವಿಸೋ ಖುಷಿ ಸಿಕ್ಕಾಗಿನಿಂದ ಅವಳ ಮಾತಿಲ್ಲದ ಸಂಜೆಗಳ್ಯಾಕೋ ಹಿತ ಅನ್ನಿಸೋಕೆ ಶುರು ವಾಗಿತ್ತು.

ಆದರವತ್ತು ಯಾವತ್ತೂ ಜತೆ ಬರದ ಅವಳು ಕೈ ಹಿಡಿದು ಬಂದಿದ್ದು ನನ್ನ ಅದೇ ಇಷ್ಟದ ಕೆಂಪು ಕೆಂಪು ಕಡಲ ತೀರಕ್ಕೆ. ಅವಳ ಒಂದೆಳೆಯ ಕಾಡಿಗೆ ಕಂಗಳೊಳಗೆ ಇಣುಕಿದ್ದೆ ಸುಮ್ಮನೆ. ಅಲ್ಲಿರೋ ಭಾವಗಳೆಲ್ಲವೂ ಅದ್ಯಾಕೋ ಅರೆಕ್ಷಣ ಅಲ್ಲಿಯೇ ನಿಲ್ಲಿಸಿ ಬಿಟ್ಟಿದ್ದವು. ಅವಳೇ ಮಾತು ಶುರುವಿಡಲಿ ಅಂತ ಕುಳಿತಿದ್ದವನನ್ನು ಕೇಳಿಯೇ ಬಿಟ್ಟಳು ‘ನಿನ್ನಲ್ಲೊಂದು ಸಂಜೆಯಿರಲಿಲ್ವಾ ನನ್ನೊಟ್ಟಿಗೆ ಕಳೆಯೋಕೆ?’ ಸದ್ದಿಲ್ಲದೇ ಗದ್ದಲ ಎಬ್ಬಿಸಿದ್ದ ಅವಳ ಮನದ ಭಾವಗಳ ಅರಿವಿದ್ದಿದ್ದಕ್ಕೋ ಅಥವಾ ಅಲ್ಲವಳ ಮಾತು ಗಳು ನನಗೆ ಸಂಬಂಧಿಸಿದ್ದಲ್ಲ ಅಂತ ಮನಕ್ಕೊಂದು ಬೇಲಿ ಹಾಕಿಕೊಂಡು ನನ್ನ ಪಾಡಿಗೆ ನಾನಿದ್ದಕ್ಕೋ ಏನೋ ಅವಳ ಪ್ರಶ್ನೆಗೆ ಉತ್ತರಿಸೋ ಮನಸ್ಸಾಗಿರಲಿಲ್ಲ.

ಭಾವಗಳೇ ತುಂಬಿದ ಕನಸಿನ ತೇರು ಹೊರಡುವ ಅದೇ ಹೊತ್ತಲ್ಲೇ ಕೇಳಿದ್ದೆ ನಾನವಳಿಗೆ; ನಿಂಗ್ಯಾವ ತರಹದ ಹುಡುಗ ಬೇಕೆಂದು..? ತೀರಾ ಇಷ್ಟಪಡೋ ಹುಡುಗ ಸಿಕ್ಕಿದ್ರೆ ಸಾಕು ಅಂತಂದ ಅವಳ ಕನಸ ರಾಜಕುಮಾರನ ಬಗ್ಗೆ ಹೇಳೋವಾಗ
ಕಂಗಳಲ್ಲಿ ನಾನು ರಿಜೆಕ್ಟೆಡ್ ಅನ್ನೋ ಅದೆಷ್ಟೋ ಭಾವಗಳು ಅಲುಗಾಡದೇ ಕುಳಿತಿರುವಾಗ ಮಾತು ಬರದೆ ನಾ ಮೌನಿಯಾಗಿದ್ದೆ.

ಕಾರಣ ಹೇಳಿ ಹೋದವಳು
ಕಾರಣವನ್ನೇ ಹೇಳದೆ ತಿರಸ್ಕರಿಸಿಬಿಡೋ ಈ ಹುಡುಗಿಯರೆಡೆಗೆ ತೀರಾ ಅನ್ನೋವಷ್ಟು ಬೇಸರ ಎಂದಾಗ ಕಾರಣವ ಹೇಳಿ ಎದ್ದು ಹೋದ ಅವಳು ನೆನಪಾಗಿಬಿಡ್ತಾಳೆ. ಆದರೂ ಚಂದದ ಖುಷಿಗಳ ನೆನಪಾಗಿಸುವ ಬದುಕಿನ ಒಂದು ಹಂತವನ್ನು ಹತ್ತಿ ಯಾರ ಜೊತೆಗೂ ದೊಡ್ಡದೊಂದು ಮಾತೂ ಆಡದಿರೋ ತೀರಾ ಮೃದು ಅನ್ನಿಸೋ ಅವಳನ್ನ ನೋಡುವಾಗ ಹೊಸದೊಂದು ಭಾವಲಾಸ್ಯ ಶುರುವಾಗುತ್ತದೆ.

ಪ್ರತಿ ಬಾರಿಯೂ ಹೇಳಬೇಕೆಂದುಕೊಳ್ತೀನಿ ತಲೆತಗ್ಗಿಸಿ ನಿಲ್ಲೋದನ್ನ ಬಿಟ್ಟು ತಲೆಯೆತ್ತಿ ಮಾತಾಡೋದನ್ನ ಕಲಿತುಬಿಡೆ
ನಿನ್ನಿಷ್ಟದ ಬದುಕಾದರೂ ದಕ್ಕೀತು ಅಂತ. ಆದರೆ ನಾ ಮಾತು ಜೋಡಿಸೋಕೂ ಮುಂಚೆಯೇ ಅವಳು ಕಾರಣ ಹೇಳಿ ಹೋದಾಗ ಮತ್ತದೇ ನೆಪವಾಗುವ ನೆನಪಿನ ಮೌನ ಕಾಡುತ್ತದೆ. ಮೊದಲಿನಿಂದಲೂ ಹಾಗೆಯೇ ನಾ ಯಾವಾಗಲೂ ಗುಡುಗೋ ಗುಡುಗಾದ್ರೆ, ಅವಳು ಆಗೀಗ ಸುರಿಯೋ ತುಂತುರು ಮಳೆ.

ನಂಗೆ ಭೋರ್ಗರೆಯೋ ಸಮುದ್ರ ಇಷ್ಟವಾಗ್ತಿದ್ರೆ ಅವಳಿಗೆ ಪ್ರಶಾಂತ ನದಿ ಇಷ್ಟ. ಅವಳು ಯಾವಾಗಲೂ ಮನೆಯಲ್ಲೇ ಇರೋ ಪ್ರೀತಿಯಾದ್ರೆ ನಾ ವರ್ಷಕ್ಕೊಮ್ಮೆ ಮನೆಗೆ ಹೋಗೋ ಅತಿಥಿ. ಬದುಕ ನಿರ್ಧಾರಗಳನ್ನೆಲ್ಲಾ ಅಪ್ಪ ಅಮ್ಮಂದಿರ ಕೈಗಿತ್ತು
ಸುಮ್ಮ ನಿರೋ ಅವಳೆಡೆಗೆ ನಂಗಷ್ಟು ಸಿಟ್ಟು ಕೂಡಾ.

ಆದರೂ ಯಾಕೋ ಅವಳೆನ್ನ ಭಾವಗಳ ಪ್ರತಿಬಿಂಬ. ಅವಳೆಲ್ಲಾ ತಲ್ಲಣಗಳಿಗೆ ನಾ ಅಕ್ಷರವಾಗಿಬಿಟ್ರೆ ನನ್ನೆಲ್ಲಾ ಬೇಸರಗಳಿಗೆ ಅವಳು ಕಿವಿಯಾಗಿಬಿಡ್ತಾಳೆ. ಅವಳ ಕನಸುಗಳನ್ನೆಲ್ಲಾ ಜಗಳ ಮಾಡಿಯಾದರೂ ಅವಳ ಕೈಗಿತ್ತು ಹೋಗುವ ಆಸೆಯಿದೆ. ಆದರೆ ಮತ್ತೆ ವಾಪಸ್ಸಾದರೆ ಅವಳ ನಿರ್ಧಾರಗಳೆಲ್ಲ ಅರ್ಥವಾಗದಂತಾಗಿರುತ್ತವೆ.

ಒಮ್ಮೊಮ್ಮೆ ನೀನು ಖುಷಿಯಾಗಿದ್ದೀಯ ಬೇಸರಗಳೆಲ್ಲಾ ನಂದು ಮಾತ್ರ ಅಂತನ್ನೋ ಅವಳೆಡೆಗೆ ನನ್ನದು ಕೂಡ ಅರ್ಥವಾಗದ
ನೋಟವಿರುತ್ತದೆ. ಎಲ್ಲಿ ನಾನವಳ ಭಾವಲೋಕದ ಪ್ರಶ್ನೆಗಳಿಗೆ ತೀರಾ ಪ್ರಾಕ್ಟಿಕಲ್ ಉತ್ತರ ಕೊಟ್ಟುಬಿಡ್ತೀನೇನೋ ಅನ್ನೋ ಭಯ ಈಗೀಗ ಶುರುವಾಗಿದೆ.

ಅವಳ ಗೊಂದಲಗಳು ನನ್ನ ಸೋಕದಿರಲಿ ಅನ್ನೋ ಕಾರಣಕ್ಕೋ ಏನೋ ನಾನವಳ ಜತೆ ಮಾತಾಡದೇ ಇದ್ದಿದ್ದು. ಆದರವತ್ತು ನನ್ನಿಷ್ಟದ ಕಡಲ ಅಂಚಿನಲ್ಲಿ ಅವಳು ಕೇಳಿದ್ದ ಪ್ರಶ್ನೆಯಿದೆಯಲ್ಲ ನನ್ನೆಡೆಗೆ ತೀರಾ ಅನ್ನೋವಷ್ಟು ಬೇಸರದ ಭಾವವೊಂ ದನ್ನು ಅಚ್ಚೊತ್ತಿ ಮರೆಯಾಗಿ ಬಿಡ್ತು. ನನ್ನಲ್ಲೂ ಒಂದು ಸಂಜೆಯಿತ್ತಾ ಅವಳ ಜೊತೆ ಕಳೆಯೋಕೆ? ಆದರೂ ಯಾಕೋ ಕನಸಿನ ತೇರು ಇನ್ನೇನು ಹೊರಡ ಬೇಕೆನ್ನುವ ಹೊತ್ತಿಗೆ ಕೆನ್ನೆಯ ಮೇಲೆ ಜಾರಿದ ಹನಿಗಳು ಅಚ್ಚಾಗಿದ್ದವು.

error: Content is protected !!