Friday, 21st June 2024

ನೆನಪಿನ ಗಾಲಿಯ ಮೇಲೆ ಪ್ರೀತಿ

ಕರಗದ ಹೊತ್ತಿನಲ್ಲಿ ಏಕಾಂತವೇ ತುಂಬಿರುವಾಗ ಕಗ್ಗತಲ ಸಂದಿಯಲ್ಲಿ ಇಬ್ಬನಿಯು ಸಂಧಿಸಲು ಏತಕೋ ಎದೆ ಬಡಿತ ಮತ್ತೆ ಕದ ಬಡಿದು ತೋರುತ್ತಿದೆ ಕಣೆ.

ಲಕ್ಷ್ಮೀಕಾಂತ್ ಎಲ್. ವಿ.

ಕಂಡಂತಹ ಕನಸುಗಳೆಲ್ಲವೂ ನನಸಾಗಿ ಬಿಟ್ಟಿರೆ ಕಾಣುವ ಕನಸಿಗೇನು ಅರ್ಥ? ಕನಸುಗಳು ಒಮ್ಮೊಮ್ಮೆ ನನಸಾಗದೇ ಹೋದರೂ ಕೂಡ ಖುಷಿ ಅಂತೂ ಕೊಡಬಲ್ಲವು. ಹೀಗೆ ಕನಸುಗಳೆಲ್ಲವೂ ಒಮ್ಮೊಮ್ಮೆ ನೆನಪಾಗತೊಡಗಿದರೆ ವಾಸ್ತವದ ಬದುಕಿನಲ್ಲಿ ಎಲ್ಲವೂ ನೆಪವಾಗಿಬಿಡುತ್ತವೆ. ಈ ನೆನಪು ನೆಪದ ಮಧ್ಯೆ ಒಲವೊಂದು ಸುಳಿದರೆ ಆ ಒಲವಿನ ನೆನಪು ಮಧುರ ಅನುಭೂತಿ ನೀಡುತ್ತದೆ.

ಈ ಬದುಕಿನ ಟ್ರಾಫಿಕ್ ನಡುವೆ ಕಳೆದು ಹೋಗಿರುವ ಮನಸ್ಸಿನ ಭಾವನೆಗಳನ್ನು ಮತ್ತೆ ಹೆಕ್ಕಿ ತೆಗೆದರೆ ಬೆಳದಿಂಗಳೊಂದು ಸುಳಿದುಬಿಡುತ್ತದೆ. ಹೊಳೆ ದಂಡೆಯಲ್ಲಿ ಮತ್ತೆ ಪಾದ ತೋಯ್ದುಬಿಡುತ್ತದೆ. ಆ ನೆನಪಿನ ಮಧ್ಯೆ ಮತ್ತೆ ನಾವೇ ಕಳೆದು ಹೋಗುತ್ತೇವೆ. ಹೀಗೆ ನೆನಪಿನ ಹೊತ್ತಿಗೆಯಿಂದ ಕಳೆದು ಹೋಗಿದ್ದ ಪುಟದೊಳಗಿನ ಆ ಕಾಡುವ ನೆನಪಿನ ಸಾಲೊಂದನ್ನು ತೆರೆದಿಟ್ಟಿರುವೆ.

ಕರಗುತಿರುವ ನೇಸರ ಸಂಜೆಯ ಹೊತ್ತಿನಲ್ಲಿ ಶಶಿಯ ತಂಬೆಲರಕೆ ಮನ ಸೋತು ನನ್ನೆದೆಗೆ ತಾಕಿ ಕುಳಿತು ಉಲಿದ ಆ ಮೆಲುದನಿ ಮಾತಿಂದ ಅಂದಿನ ತಿಳಿಸಂಜೆ ರಂಗೇರಿದ್ದೇ ಮರೆತು ಹೋಗಿತ್ತು. ಗೆಳತಿ, ನೀನಿರದ ನನ್ನ ನಾಳೆಗಳು ಬಂಜರು ಭೂಮಿಯಲ್ಲಿ ಬೆಳೆಯದ ಪೈರುಗಳಂತಾಗಿದೆ ಕಣೆ. ಜೊತೆಯಲ್ಲಿ ಕೈ ಹಿಡಿದು ನಡೆದ ಆ ದಿನಗಳು ನಾಳಿನ ಚಿಂತೆಗೆ ನೆಪವೊಡ್ಡಿ ಉಳಿಯುವ ನೆನಪುಗಳು, ಮನಸ್ಸಿನೊಳಗೆ ಮನೆ ಮಾಡಿಕೊಂಡು ತೆರೆಗಳಾಗಿ ಹೃದಯ ತೀರಕ್ಕೆ ಅಪ್ಪಳಿಸುತ್ತಿವೆ.

ಕಡಲೆದೆಯ ಮೇಲೆ ನಿನ್ನಂದವ ಚಿತ್ರಿಸಿ ದೃಷ್ಟಿ ಬೊಟ್ಟಿಡುವಷ್ಟರಲ್ಲಿ ಹೊಟ್ಟೆಕಿಚ್ಚಿನ ಕಡಲು, ಚಿತ್ರವನ್ನು ಬರಸೆಳೆದು ಅಲೆಗಳ ಒಳಗೆ ಸೆಳೆದುಕೊಳ್ಳುತ್ತಿದೆ. ಅದೇಕೋ ಏನೋ ಗೆಳತಿ, ಆ ತುಸು ಪ್ರೀತಿಯ ಹುಸಿ ಉತ್ತರಕೆ ನನ್ನೀ ಹೃದಯ ಮೂರ್ಛೆ ಹೋಗಿದೆ ಕಣೆ. ಯಾಕೆ, ಏನಾಯಿತೆಂಬ ಚರ್ಚೆಯ ನಡುವೆ ನನ್ನೀ ಪ್ರೀತಿಯ ಪರಿಶೀಲನೆ ನಡೆಯುತ್ತಲೇ ಇದೆ. ಸುಖಾಂತ್ಯವಿಲ್ಲವೆಂದು ಅರಿತಿದ್ದರೂ ಈ ಪ್ರೇಮ ಕಥೆಗೆ ಚಾಲನೆ ನೀಡಿರುವೆ ಕಣೆ.

ನಿತ್ಯವೂ ನೆನಪಿನ ಗಾಲಿಯ ಮೇಲೆ ಪ್ರೀತಿಯ ಭಾರವನ್ನು ಹೊತ್ತು ತಿರುಗುತ್ತಿರುವೆ. ಏನನ್ನೋ ಏತಕೋ ಹುಡುಕುವ ಭರದಲ್ಲಿ
ಏನೆಂದು ತಿಳಿಯದೆ ನಾನಂತೂ ಕಳೆದೇ ಹೋಗಿರುವೆ. ಈ ಕಾಡುವ ಮೌನದ ಏಕಾಂತದ ಏರಿಳಿತ ಏಕೆಂದು ತಿಳಿಯದೆ ಸಮ್ಮನಾ ಗಿರುವೆ ಕಣೆ. ನಿತ್ಯವೂ ಕಾಡುವ ಪ್ರಶ್ನೆಗೆ ಉತ್ತರ ಏನೆಂಬ ಸ್ಪಷ್ಟತೆ ಇನ್ನಾದರೂ ಬೇಕಿದೆ. ಬಿಟ್ಟ ಸ್ಥಳ ಮತ್ತೆ ತುಂಬಬೇಕಿದೆ. ಗೆಳತಿ, ನಿಂತ ಬದುಕಿದು, ಹಾಗೆ ನೋಡಿ ಹೀಗೆ ಮೂಡುವಷ್ಟರಲ್ಲಿ ಸಾಗಿ ಹೋಗುವ ಜೀವನವಿದು, ಸಿಕ್ಕಷ್ಟು ಪ್ರೀತಿ ಸಿಗಲಿ; ಮರೆಯ ಲಾರದ ಹಾದಿಯಿದು, ನೀನೊಮ್ಮೆ ಮೌನ ಮುರಿದು ಈ ಹೃದಯವನ್ನು ಹಗುರಾಗಿಸು.

ಮನಸ್ಸಿನೊಳಗಿನ ಬಿಡಾರದಲ್ಲಿ ನಿನಗಾಗಿ ಕಾಯುತ್ತಿರುವೆ. ಈ ಕಗ್ಗಂಟಿನ ಪ್ರೀತಿಗೆ ಪರಿಹಾರ ಪಡೆಯುವ ಸಲುವಾಗಿ ಅಂತರಾಳ ದಲ್ಲಿ ದಿನನಿತ್ಯ ಚಳುವಳಿ ನಡೆಯುತ್ತಿದೆ ಕಣೆ. ನೀನೊಮ್ಮೆ ಪ್ರೀತಿಯ ಬಳುವಳಿ ನನಗಾಗಿ ಕೊಡಬಾರದೆ..? ಕರಗದ ಹೊತ್ತಿನಲ್ಲಿ ಏಕಾಂತವೇ ತುಂಬಿರುವಾಗ ಕಗ್ಗತಲ ಸಂದಿಯಲ್ಲಿ ಇಬ್ಬನಿಯು ಸಂಧಿಸಲು ಏತಕೋ ಎದೆ ಬಡಿತ ಮತ್ತೆ ಕದ ಬಡಿದು ತೋರು ತ್ತಿದೆ ಕಣೆ. ನಿಂತ ಒಲವ ಕಾದಂಬರಿಯ ಮತ್ತೊಂದು ಅಧ್ಯಾಯ ಶುರುವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ನೀ ಬಿಟ್ಟು ಹೋದ ಜಾಗದಲ್ಲೇ ನಿಂತಿರುವೆ. ಮರಳಿ ಒಲವ ಹನಿಯೊಂದನ್ನು ಕೊಡುವೆಯಾ..?

error: Content is protected !!