Saturday, 27th July 2024

ಮಂಗಳಮುಖಿಯರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ: ಐಸಿಸಿ

ಹಮದಾಬಾದ್: ಲಿಂಗ ಪರಿವರ್ತನೆ ಆದವರು ಅಥವಾ ಮಂಗಳಮುಖಿಯರು ಇನ್ನು ಮುಂದೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ ಎಂದು ಐಸಿಸಿ ಮಂಗಳವಾರ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಮೊದಲ ಮಂಗಳಮುಖಿ ಎನಿಸಿದ್ದ ಕೆನಡದ ಡೇನಿಯಲ್​ ಮೆಕ್​ಗಹೇಗೆ ಇನ್ನು ಮಹಿಳಾ ಕ್ರಿಕೆಟ್​ನಲ್ಲಿ ಮುಂದು ವರಿಯಲು ಅವಕಾಶವಿರುವುದಿಲ್ಲ. ಮೆಕ್​ಗಹೇ ಮಹಿಳಾ ಕ್ರಿಕೆಟ್​ನಲ್ಲಿ ಇದುವರೆಗೆ 6 ಪಂದ್ಯ ಆಡಿದ್ದು, 118 ರನ್​ ಬಾರಿಸಿದ್ದಾರೆ.

ಪುರುಷರಾಗಿ ಪ್ರೌಢಾವಸ್ಥೆಗೆ ಬಂದವರು ಲಿಂಗ ಪರಿವರ್ತನೆಯಾಗಿದ್ದರೂ ಮಹಿಳೆಯರೊಂದಿಗೆ ಕ್ರಿಕೆಟ್​ ಆಡುವಂತಿಲ್ಲ.ಆಟಗಾರ್ತಿಯರ ಸುರಕ್ಷತೆ ಮತ್ತು ಮಹಿಳಾ ಕ್ರಿಕೆಟ್​ ಸಮಗ್ರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.

ಕ್ರೀಡೆಗೆ ಸಂಬಂಧಿಸಿದ ವಿವಿಧ ವ್ಯಕ್ತಿ&ಸಂಸ್ಥೆಗಳ ಜತೆಗೆ 9 ತಿಂಗಳ ಕಾಲ ಸಮಗ್ರ ಚರ್ಚೆ ನಡೆಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಹೊಸ ಲಿಂಗ ಅರ್ಹತೆಯ ನಿಯಮಾವಳಿಯನ್ನು ಜಾರಿಗೆ ತರಲು ಐಸಿಸಿ ಮಂಡಳಿ ಸಮ್ಮತಿಸಿದೆ.

2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಟಿ20 ಕ್ರಿಕೆಟ್​ ಸೇರ್ಪಡೆಗೊಂಡಿರುವುದು ಕೂಡ ಐಸಿಸಿ ಶೀಘ್ರವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

ಆದರೆ ದೇಶೀಯ ಕ್ರಿಕೆಟ್​ನಲ್ಲಿ ಲಿಂಗ ಪರಿವರ್ತಿತರಿಗೆ ಆಡಲು ಅವಕಾಶ ನೀಡುವ ಅಧಿಕಾರವನ್ನು ಐಸಿಸಿ, ಆಯಾ ದೇಶಗಳಿಗೆ ಬಿಟ್ಟಿದೆ.

 

Leave a Reply

Your email address will not be published. Required fields are marked *

error: Content is protected !!