Saturday, 27th July 2024

ಸಂತೋಷದಿಂದ ಬಾಳುವುದೇ ಜೀವನ: ಡಾ.ಕೆ.ಪಿ.ಪುತ್ತೂರಾಯ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ -83

ಬೆಂಗಳೂರು: ಜೀವನ ಸಂತೋಷದಿಂದ ಕೂಡಿರಬೇಕು. ಸಂತೋಷ, ಸಾರ್ಥಕ ಜೀವನ ಪ್ರತಿಯೊಬ್ಬರ ಆಸೆ. ಸಂತೋಷ ವಾಗಿರಲು ಮೊದಲು ಆರೋಗ್ಯ ಇರಬೇಕು. ಸಾವು, ಮುಪ್ಪು ಮುಂದೂಡಬೇಕು ಎಂದರೆ ಆರೋಗ್ಯ ಮುಖ್ಯ. ಉತ್ತಮ ಆಹಾರ, ನಿಯಮಿತ ವ್ಯಾಯಾಮ, ದುಶ್ಚಟಗಳಿಂದ ದೂರವಿರಿ ಎಂದು ಸಾಹಿತಿ, ಸಂಶೋಧಕ ಡಾ.ಕೆ.ಪಿ. ಪುತ್ತೂರಾಯ ಅವರು ತಿಳಿಸಿದರು.

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಗಳಾಗಿ ಮಾತನಾಡಿದ ಅವರು, ಒಂದೊಂದು ಮನೆಯಲ್ಲೂ ಕಥೆ ಇದೆ. ವ್ಯಥೆಯೂ ಇದೆ. ಕೆಲ ವಿಷಯಗಳಿಗೆ ಪರಿಹಾರ ಇವೆ. ಕೆಲ ವಿಷಯಕ್ಕಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಕೆಲವರು ತಿಳಿದು ಕೊಳ್ಳುತ್ತಾರೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ವಿಲ್ಲದೇ ಬದುಕಿದರೆ ಬದುಕಿಗೆ ಅವಮಾನ. ನಮ್ಮ ಜೀವನ ಸತ್ ಕಾರ್ಯಗಳಿಂದ ಕೂಡಿರಬೇಕು. ಮೊದಲು ಕಣ್ಣರೆಪ್ಪೆ ತೆರೆದರೆ ಜನನ, ಕೊನೆಯದಾಗಿ ಮುಚ್ಚಿದರೆ ಮರಣ. ಜನನ ಆಕಸ್ಮಿಕ, ಮರಣ ನಿಶ್ಚಿತ. ಬಾಳಲೇ ಬೇಕಿರುವುದು ಜೀವನ ಎಂದರು.

ದೇಹ ಮನೆ ಇದ್ದಹಾಗೆ: ಸಕಲ ಸೌಭಾಗ್ಯ ಇದ್ದು, ಆರೋಗ್ಯ ಭಾಗ್ಯ ಇಲ್ಲದಿದ್ದರೆ ಏನು ಪ್ರಯೋಜನ? ದೇಹ ಮನೆ ಇದ್ದಹಾಗೆ. ಅತಿಥಿಗಳು (ರೋಗಗಳು) ಬಂದು ಹೋಗುತ್ತಾರೆ. ಆಗಾಗ, ನಾವೇ ಬರಿಸಿಕೊಳ್ಳುವ ಅತಿಥಿಗಳು, ಒಮ್ಮೆ ಬಂದರೆ ಹೋಗು ಎಂದರೂ ಹೋಗಲ್ಲ. ನಮ್ಮನ್ನು ಕೇಳದೆ ಉಸಿರು ನಿಲ್ಲಿಸಿ ಹೋಗುವುದು ಕರೋನಾ. ನಾವು ಯೋಗ ಕಲಿಸಿದೆವು ಅವರು ರೋಗ ಕಲಿಸಿದರು ಚೀನಾದವರು. ಅತಿಯಾಗಿ ತಿಂದರೆ ಗತಿ ಕಾಣಬೇ ಕಾಗುತ್ತದೆ.

ಶ್ರೀ ರವಿಶಂಕರ್ ಗುರೂಜಿ ಹೇಳಿಕೆಯಂತೆ ಆರೋಗ್ಯ ಎಂದರೆ ಕಣ್ಣಿಗೆ ಕಾಣುವ ರೋಗ ರುಜಿನಗಳಿಂದ ದೂರ ವಿರುವುದಲ್ಲ, ಶಾರೀರಕ ಮಾನಸಿಕ ಲವಲವಿಕೆ ಕೂಡಿರು ವುದೇ ಆರೋಗ್ಯ. ರೋಗ ರಹಿತ ಶರೀರ, ದುಗುಡ ರಹಿತ ಮನಸ್ಸು ದುಃಖ ರಹಿತ ಜೀವನ ಮುಖ್ಯ ಎಂಬುದನ್ನು ಪುತ್ತೂರಾಯರು ವಿವರಿಸಿದರು.

ಮನೆ ಸ್ಥಿತಿ, ಮನಸ್ಥಿತಿ: ಸಂತೋಷ ಎಂದರೆ ಆತಂಕ, ಅತೃಪ್ತಿ, ಅಸಮಾಧಾನ ಹಾಗೂ ದುಃಖ ರಹಿತ ಆನಂದಮಯ ಮನಸ್ಥಿತಿ. ಮನೆ ಸ್ಥಿತಿ, ಮನಸ್ಥಿತಿ ಚೆನ್ನಾಗಿರ ಬೇಕು. ಸಂತೋಷ ವ್ಯಕ್ತಿಗೆ ಹಾಗೂ ವಯಸ್ಸಿಗೆ ಅನುಗುಣವಾಗಿ ಭಿನ್ನ. ಸಂತೋಷ ನಮ್ಮೊಳಗೆ ಸೃಷ್ಟಿಯಾಗುವ ಮನಸ್ಥಿತಿ. ಸಂತೋಷ ದೇಹಾನಂದ, ಚಿದಾ ನಂದ, ಆತ್ಮಾನಂದ ಪ್ರಾಪ್ತವಾಗುವುದು ಎಂದರು.

ಮಹಾತ್ಮ ಗಾಂಧೀಜಿ ಹೇಳಿದಂತೆ: ಎಲ್ಲಾ ಸಂಸ್ಕೃತಿಗಳನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾರತದ ಸಂಸ್ಕೃತಿ ನಮ್ಮ ಹೆಮ್ಮೆ. ಎರಡು ಸೂತ್ರಗಳೆಂದರೆ ಯಾವಾಗಲಾದರೂ, ಯಾರಿಗಾದರೂ ಉಪಕಾರ ಮಾಡುವುದು. ಮನುಷ್ಯ ಪರೋಪಕಾರಿ ಯಾಗಿರಬೇಕು. ಇತರರು ನಿನಗೆ ಮಾಡಿದ ಉಪಕಾರ ಮರೆಯಬೇಡ. ವಿದ್ಯಾಭ್ಯಾಸದಲ್ಲಿ ತಂದೆ- ತಾಯಿ ಸೇವೆ ಮರೆಯುತ್ತಾರೆ. ಹೆತ್ತವರನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಇಂತಹ ಸಂಸ್ಕೃತಿ ಕೊನೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕೆಲವರಿಗಂತೂ ಮೈಯೆ ನಗುವೇ. ಇನ್ನು ಕೆಲವರು ಎಲ್ಲರಿಗೂ ಗೊತ್ತಾಗಲೆಂದು ಎದ್ದೂ ಬಿದ್ದೂ ನಕ್ಕರೆ, ಮತ್ತೆ ಕೆಲವರು ಯಾರೂ ನೋಡಬಾರದೆಂದು ಕದ್ದೂ ಕದ್ದೂ ನಗುತ್ತಾರೆ. ಕೆಲವರದು ಮುಸಿ ಮುಸಿ, ಕೆಲವರದು ಕಿಸಿಕಿಸಿ. ಕೆಲ ಜನವಂತೂ ಶನಿವಾರ ಹೇಳಿದ ಜೋಕ್‌ಗೆ ಸೋಮವಾರ ನಗುತ್ತಾರೆ. ಕಾರಣ ಅವರ
ಮಧ್ಯಪ್ರದೇಶ (ಹೊಟ್ಟೆ) ಬೆಳೆದಷ್ಟು, ಉತ್ತರ ಪ್ರದೇಶ (ತಲೆ) ಬೆಳೆದಿರೋದಿಲ್ಲ. ಕೆಲವರಿಗೆ  ಗಲಿಕ್ಕೇ ಬರೋದಿಲ್ಲ. ಇಂತಹವರನ್ನು ಹಾಸ್ಯೋತ್ಸವಕ್ಕೆ ಕರೆಯೋಲ್ಲ. ಇನ್ನು ಕೆಲವರಿಗೆ ಅಳೋಕೆ ಬರೋದಿಲ್ಲ. ಇಂತಹವರನ್ನು ಸತ್ತವರ ಮನೆಗೆ ಕಳುಹಿಸೋದಿಲ್ಲ ಎಂಬ ಹಾಸ್ಯ ಪ್ರಸಂಗ ಹೇಳಿದರು.

ಹಾಸ್ಯದಲ್ಲಿ, ಅಪಹಾಸ್ಯ, ಪರಿಹಾಸ್ಯ, ತಿಳಿಹಾಸ್ಯ, ಕೆಟ್ಟ ಹಾಸ್ಯ ಪೋಲಿ ಹಾಸ್ಯ, ವ್ಯಂಗ್ಯ ವಿಡಂಬನೆ ಎಂಬ ನಾನಾ ಪ್ರಕಾರಗಳಿವೆ. ಅಪಹಾಸ್ಯವೆಂದರೆ, ಇತರರ ಮನ ನೋಯಿಸುವ ಹಾಸ್ಯ, ಉದಾಹರಣೆಗೆ ಮಹಾಭಾರತದಲ್ಲಿ ದ್ರೌಪದೀ ಸ್ವಯಂವರದಲ್ಲಿ ಪಾಲ್ಗೊಳ್ಳಲು ಅರಮನೆಗೆ ಬಂದಿದ್ದ ದುರ್ಯೋಧನನು, ಎದುರಿಗಿದ್ದ
ಮಾಯಾಜಲವನ್ನು, ಭೂಮಿಯೆಂದು ಭ್ರಮಿಸಿ, ಕಾಲುಜಾರಿ, ಕೊಳದೊಳಗೆ ಬಿದ್ದು ಬಿಡುತ್ತಾನೆ. ಅಂತಃಪುರದಿಂದ ಇದನ್ನು ನೋಡಿದ ದ್ರೌಪದಿ ಕಿಸಕ್ಕನೆ ನಕ್ಕು ’ಅಪ್ಪ ಮಾತ್ರ ಕುರುಡನೆಂದು ತಿಳಿದುಕೊಂಡಿದ್ದೆ, ಈಗ ನೊಡಿದರೆ, ಮಗನೂ ಕುರುಡನೇ!’ ಎಂದು ಅಪಹಾಸ್ಯ ಮಾಡುತ್ತಾಳೆ ಎಂದರು.

ಇದನ್ನು ಕೇಳಿ ಕೆಂಡವಾದ ದುರ್ಯೋಧನನು, ಪ್ರತೀಕಾರಕ್ಕೆ ಕಾದಿರುತ್ತಾನೆ. ದ್ರೌಪದಿ ವಸ್ತ್ರಾಪಹರಣಕ್ಕೆ ಇದೂ ಒಂದು ಕಾರಣವಾಯಿತು. ತಿಳಿ ಹಾಸ್ಯವೆಂದರೆ, ಯಾರಿಗೂ ನೋವಾಗದ, ನವಿರಾದ ಹಾಸ್ಯ. ಒಮ್ಮೆ ಒಂದು ಭಟ್ಟರ ಮನೆಯ ಎದುರು, ಒಂದು ಮುದಿಕತ್ತೆ ಸತ್ತುಬಿತ್ತು. ತಕ್ಷಣ ಭಟ್ಟರು ಪಾಲಿಕೆ ಅಧಿಕಾರಿ ಫೋನಾ ಯಿಸಿ ಅದನ್ನು ಸಾಗಿಸಲು ಏರ್ಪಾಡು ಮಾಡಿ ಎಂದರು. ಉತ್ತರವಾಗಿ ಹಾಸ್ಯಪ್ರಿಯರಾದ ಆ ಅಧಿಕಾರಿ, ’ಅ ಭಟ್ರೆ, ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡೋದು
ಪುರೋಹಿತ ರಾದ ನಿಮ್ಮ ಕೆಲಸ, ಅಲ್ಲಿ ನಮಗೇನು ಕೆಲಸ?’ ಎಂದರು.

ಭಟ್ರು ತಕ್ಷಣ, ’ಸತ್ತವರ ಹತ್ತಿರದ ಬಂಧು ಬಾಂಧವರಿಗೆ ತಿಳಿಸೋದು ನಮ್ಮ ಕರ್ತವ್ಯವಲ್ಲವೇ. ಅದಕ್ಕೇ ನಿಮಗೆ ಫೋನ್ ಮಾಡಿದೆ’ ಎಂದರಂತೆ ಎಂದು ತಿಳಿಸಿ ದರು. ಒಮ್ಮೆ ಮಾಡಿದ ಅಡುಗೆಯನ್ನು ಇನ್ನೊಮ್ಮೆ ಉಣಲಾರೆ ಎಂಬ ಗಂಡನ ಶಪಥಕ್ಕೆ, ಒಮ್ಮೆ ಉಟ್ಟ ಸೀರೆಯನ್ನು ಇನ್ನೊಮ್ಮೆ ಉಡಲಾರೆ ಎಂದು ಪತ್ನಿ ಶಪಥ ಮಾಡಿದರೆ, ಅದು ಹಾಸ್ಯಕ್ಕೊಂದು ದೃಷ್ಟಾಂತ. ಕರೋನಾ ಕಾಲದಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಸೋಂಕಿತ -ಶಂಕಿತನೆಂದು ನಾಮಕರಣ ಮಾಡಿದರೆ, ನವಿರಾದ ಹಾಸ್ಯ ಎಂದರು.

***

ಡಾ.ಕೆ.ಪಿ.ಪುತ್ತೂರಾಯ ಅವರು ಮಾತಿನಿಂದ, ತಿಳಿಹಾಸ್ಯದ ಮೂಲಕ ಜನಪ್ರಿಯ. ನಮ್ಮ ವಿಶ್ವವಾಣಿ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ. ಅವರ ಬರಹಗಳಲ್ಲಿ ಕುಟುಂಬ, ದಾಂಪತ್ಯ ವಿಷಯ ಒಳಗೊಂಡಿರುತ್ತವೆ. ೪೦ ವರ್ಷಗಳಿಗೂ ಹೆಚ್ಚು ಕಾಲ ’ಶರೀರ ಕ್ರಿಯಾಶಾಸ’ ಕುರಿತು ಬೋಧನೆ ಮಾಡಿದ್ದಾರೆ. ವೈದ್ಯಕೀಯ ವಿಭಾಗದಲ್ಲಿ ಅವರ 30ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳು ಪ್ರಕಟವಾಗಿದೆ. ಅನೇಕ ದೇಶಗಳಲ್ಲಿ ನಡೆದ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. 300ಕ್ಕೂ ಹೆಚ್ಚು ಲೇಖನ ಹಾಗೂ 15ಕ್ಕೂ ಹೆಚ್ಚು ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು

ಡಾ.ಕೆ.ಪಿ. ಪುತ್ತೂರಾಯರು ಜ್ಞಾನಿ, ಉತ್ತಮ ಭಾಷಣಕಾರರು. ಹಾಸ್ಯ ಪ್ರಸಂಗಗಳನ್ನು ಹೇಳುವ ಕಲೆ ಅವರದ್ದು. ಅನೇಕ ಭಾಷಣಗಳಲ್ಲಿ ಸಂದರ್ಭಕ್ಕೆ ಸೂಕ್ತವಾಗಿ ಹಾಸ್ಯಮಯ ಜಗತ್ತು ನಿರ್ಮಾಣ ಮಾಡುವ ಕೌಶಲ ಅವರದ್ದು.
– ಷಡಕ್ಷರಿ ಉದ್ಯಮಿ, ಅಂಕಣಕಾರರು

***

ಸಂತೋಷವಾಗಿರಲು ದಶ ಸೂತ್ರ
ಆರೋಗ್ಯವಂತರಾಗಿರಬೇಕು
ಸಕಾರಾತ್ಮಕ ಮನೋಭಾವ
ಅತಿಯಾಸೆ, ದುರಾಸೆ ಇರಬಾರದು.
ಹಣದಿಂದ ಎಲ್ಲಾ ಸುಖ ಸಂಪತ್ತು ಪಡೆಯಲು ಆಗಲ್ಲ
ಅಗತ್ಯ, ಅವಶ್ಯಕತೆ ಕಡಿಮೆ ಇರಬೇಕು, ಮಾಡಬೇಕು
ಅಪೇಕ್ಷೆ ನೀರಿಕ್ಷೆ ಕನಿಷ್ಠ ಪ್ರಮಾಣದಲ್ಲಿ ಇರಬೇಕು
ಅರ್ಹತೆಗೆ ಅನುಗುಣವಾಗಿ ನಿರೀಕ್ಷೆ ಇರಲಿ
ಸಂತೋಷವನ್ನು ಷರತ್ತುಗಳಿಗೆ ಒಳಪಡಿಸಬಾರದು
ತುಲನೆ ಮಾಡಿಕೊಳ್ಳಬಾರದು
ಒಣಪ್ರತಿಷ್ಠೆ, ಮೇಲು, ಕೀಳರಿಮೆ ಬೇಡ, ಸದಾಕ್ರಿಯಾಶಿಲರಾಗಿರಬೇಕು

Leave a Reply

Your email address will not be published. Required fields are marked *

error: Content is protected !!