Saturday, 27th July 2024

ಸೌಹಾರ್ದಕ್ಕೆ ಸಂಕಷ್ಟ ಒದಗದಿರಲಿ

ಲೋಕಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಹೀಗಾಗಿ ದೇಶದೆಲ್ಲೆಡೆ ಸೆಣಸಾಟದ ಅಖಾಡ ರಂಗೇರುತ್ತಿದೆ, ಹುರಿಯಾಳುಗಳೂ ಪರಸ್ಪರ ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಆಖೈರುಗೊಂಡ ನಂತರದಲ್ಲಿ ಈ ಚಟುವಟಿಕೆ ಮತ್ತಷ್ಟು ತೀವ್ರವಾಗಲಿದೆ. ಈ ವಾತಾ ವರಣಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಸಾರ್ವತ್ರಿಕ ಚುನಾವಣೆಯೆಂದರೆ ಹಾಗೆಯೇ; ಕಾರಣ ಅದು ಒಂದರ್ಥದಲ್ಲಿ ‘ಪ್ರಜಾಪ್ರಭುತ್ವದ ಹಬ್ಬ’. ಹಬ್ಬ-ಹರಿದಿನ ಎಂದ ಮೇಲೆ ಅದರ ಸಹಭಾಗಿಗಳಲ್ಲಿ ಸಂಭ್ರಮ ಮನೆಮಾಡುವುದು ಸಹಜವೇ.

ಇಂಥ ಸಂದರ್ಭದಲ್ಲಿ ತಮ್ಮವರ ಸಮರ್ಥನೆ, ಎದುರಾಳಿಗಳ ಗೇಲಿ ಮತ್ತು ಟೀಕೆ ಇವೆಲ್ಲ ಸಾಮಾನ್ಯವೇ. ಆದರೆ ಇದು ಚುನಾವಣಾ ಸ್ಪರ್ಧೆಗಷ್ಟೇ ಸೀಮಿತವಾಗಬೇಕೇ ವಿನಾ, ವೈಯಕ್ತಿಕ ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸುವ ಮಟ್ಟಕ್ಕೆ ಹೋಗಬಾರದು. ತಂತಮ್ಮ ಅಭ್ಯರ್ಥಿಗಳನ್ನೋ ಪಕ್ಷಗಳನ್ನೋ ಸಮರ್ಥಿಸಿಕೊಳ್ಳುವ ಭರದಲ್ಲಿ ಶ್ರೀಸಾಮಾನ್ಯರು ಪರಸ್ಪರ ದ್ವೇಷ ಮತ್ತು ಆಕ್ರೋಶಗಳಿಗೆ ಆಶ್ರಯ ನೀಡಬಾರದು. ಇದು ಹಳ್ಳಿಗಳಿಗೆ ನಿರ್ದಿಷ್ಟವಾಗಿ ಅನ್ವಯವಾಗಬೇಕಾದ ಮಾತು. ಕಾರಣ, ನಗರ ಅಥವಾ ಮಹಾನಗರಿಗಳಲ್ಲಿ ಬೇರೆಡೆಯಿಂದ ಬಂದವರೇ ಗಣನೀಯ ಸಂಖ್ಯೆಯಲ್ಲಿರುತ್ತಾರೆ; ಹೀಗಾಗಿ ಪರಸ್ಪರ ಪರಿಚಯ ವಿರಳವೇ.

ಆದರೆ ಹಳ್ಳಿಗಳ ವಿಷಯ ಹಾಗಲ್ಲ; ಇಲ್ಲಿ ಮನೆಮನೆಗಳ ನಡುವೆಯೂ ಕೊಡು-ಕೊಳ್ಳುವ ಸಂಬಂಧ ಹಾಗೂ ಮತ್ತೊಬ್ಬರ ಸಂಕಷ್ಟ-ಸಂಭ್ರಮದಲ್ಲಿ ಭಾಗಿಯಾಗುವ ಚಿತ್ತಸ್ಥಿತಿ ಹರಳುಗಟ್ಟಿರುತ್ತದೆ. ಚುನಾವಣಾ ಕಣದಲ್ಲಿರುವ ವಿಭಿನ್ನ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟದ ಕಾರಣಕ್ಕೆ ಹಳ್ಳಿ ಗಳಲ್ಲಿನ ಈ ಬಾಂಧವ್ಯದ ತಂತು ಕಡಿದುಹೋಗಬಾರದು ಅಥವಾ ಶಿಥಿಲಗೊಳ್ಳಬಾರದು. ಚುನಾವಣೆಯೆಂಬ ಹಬ್ಬದ ಸಂಭ್ರಮ ಮುಗಿದು, ಹೊರಗಿ ನವರು ತಮ್ಮ ಉದ್ದೇಶಿತ ನೆಲೆಯನ್ನು ಸೇರಿಕೊಂಡ ನಂತರ, ಹಳ್ಳಿಗಳಲ್ಲಿ ಉಳಿಯುವುದು ಅಲ್ಲಿನ ಮೂಲನಿವಾಸಿಗಳು ಮಾತ್ರವೇ.

ದಿನಬೆಳಗಾದರೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳಬೇಕಾದ ಹಾಗೂ ಹೆಗಲಿಗೆ ಹೆಗಲು ಕೊಟ್ಟು ನಡೆಯಬೇಕಾದ ಅನಿವಾರ್ಯತೆ
ಅಲ್ಲಿರುತ್ತದೆ. ಆದ್ದರಿಂದ, ಚುನಾವಣೆಯ ವೇಳೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹುಟ್ಟಿಕೊಳ್ಳುವ ವೈಷಮ್ಯ ಅಥವಾ ಅಭಿಪ್ರಾಯ ಭೇದಗಳು ಮಾನವ ಸಂಬಂಧಕ್ಕೆ ಸಂಚಕಾರ ತರದಂತೆ ನೋಡಿಕೊಳ್ಳುವುದು ಜನರ ಹೆಗಲ ಮೇಲಿನ ಹೊಣೆ.

Leave a Reply

Your email address will not be published. Required fields are marked *

error: Content is protected !!