Saturday, 27th July 2024

ಹೆಸರಿಗಷ್ಟೇ ಸೀಮಿತವಾಗದಿರಲಿ ವೈಭವ ಕಂಗೊಳಿಸಲಿ

ವಿಜಯನಗರ ಸಾಮ್ರಾಜ್ಯ ಎಂದೊಡನೆ ಎಲ್ಲರಿಗೂ ನೆನಪಿಗೆ ಬರುವುದು ಕೃಷ್ಣದೇವರಾಯನ ಆಡಳಿತದ ಅವಧಿ. ಅಂದಿನ ಸಂದರ್ಭದಲ್ಲಿ ವಜ್ರ, ವೈಡೂರ್ಯಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದಷ್ಟು ವೈಭವವಿತ್ತು ಎಂಬುದು ಇತಿಹಾಸ. ರಾಜ್ಯದಲ್ಲಿ ಇದೀಗ ಅದೇ ಹೆಸರಿನಲ್ಲಿ ಜಿಲ್ಲೆಯೊಂದನ್ನು ರಚಿಸುವ ಕಾರ್ಯಕ್ಕೆ ಮುಂದಾಗಿದೆ ರಾಜ್ಯ ಸರಕಾರ.

ಇದು ರಾಜ್ಯದ 31ನೇ ಜಿಲ್ಲೆಯಾಗಲಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆಗೊಳಿಸಿ, ವಿಜಯನಗರ ಜಿಲ್ಲೆೆ ಸ್ಥಾಪಿಸುವುದು ಸರಕಾರದ ಆಲೋಚನೆ. ಇದಕ್ಕಾಗಿ ಸಿದ್ಧತೆಗಳು ಸಹ ಸಾಗಿವೆ. ಈ ಹಿಂದೆ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರ್ಪಡೆಗೊಳಿಸಿ, ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ ಪುನಃ ಬಳ್ಳಾರಿಗೆ ಸೇರ್ಪಡೆಗೊಳಿಸಲಾಯಿತು. ಇದೀಗ ಈ ಜಿಲ್ಲೆಯ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ,ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿಯನ್ನು ವಿಂಗಡಿಸಿ ವಿಜಯನಗರ ಜಿಲ್ಲೆ ಯನ್ನು ಸ್ಥಾಪಿಸಲು ಸಿದ್ಧತೆಗಳು ಸಾಗಿವೆ.

ಒಟ್ಟು 11 ತಾಲೂಕುಗಳನ್ನು ಒಳಗೊಂಡಿದ್ದ ಬಳ್ಳಾರಿ ಜಿಲ್ಲೆಯಿಂದ ಇದೀಗ 6 ತಾಲೂಕುಗಳು ವಿಭಜನೆಗೊಳ್ಳಲಿದೆ. ಉಳಿದಂತೆ ಬಳ್ಳಾರಿಗೆ ಕೇವಲ 5 ತಾಲೂಕುಗಳು ಉಳಿಯಲಿವೆ. ಅವುಗಳೆಂದರೆ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಸಂಡೂರು ಮತ್ತು ಕೂಡ್ಲಿಗಿ. ನೂತನ ಜಿಲ್ಲೆೆಯ ಘೋಷಣೆಗೆ ಸಕಲ ಸಿದ್ಧತೆಗಳು ಸಾಗಿದ್ದು, ನವೆಂಬರ್ ಮಾಸದಲ್ಲಿ ರಾಜ್ಯೋತ್ಸವದ ಕೊಡುಗೆಯಾಗಿ ರಾಜ್ಯಕ್ಕೆ ವಿಜಯನಗರ ಜಿಲ್ಲೆ ಜಾರಿಗಿಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಇದನ್ನು ಕೇವಲ 31ನೇ ಜಿಲ್ಲೆಯಾಗಿ ಘೋಷಿಸು ವುದು ಮುಖ್ಯವಲ್ಲ, ಸಕಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಇಡೀ ರಾಜ್ಯದ ಮಾದರಿ ಜಿಲ್ಲೆೆಯನ್ನಾಗಿಸಬೇಕಿರುವುದು
ಅಗತ್ಯ.

ವಿಜಯ ನಗರ ಎಂದು ನಾಮಕರಣಗೊಳಿಸುತ್ತಿರುವುದರಿಂದ ರಾಜ್ಯದ ಜನತೆಯ ಕಲ್ಪನೆಯಲ್ಲಿ ಮೂಡಿರುವ ವಿಜಯನಗರ ವೈಭವದ ಕಲ್ಪನೆಯನ್ನು ಮತ್ತೊಮ್ಮೆ ಮರುಕಳಿಸುವಂಥ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಹೆಸರಿಗಷ್ಟೇ ವಿಜಯನಗರವಾಗದೇ, ಹಿಂದಿನ ರೀತಿಯಲ್ಲಿಯೇ ವೈಭವವೂ ಕಂಗೊಳಿಸುವಂತಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!