Friday, 26th July 2024

ಅರ್ಜುನನ ಸಾವಿಗೆ ನ್ಯಾಯ ಸಿಗಲಿ

ದಸರಾ ಆನೆ ಅರ್ಜುನನ ಸಾವು ಇಡೀ ಕನ್ನಡ ನಾಡಿನ ಜನತೆಯನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಈವರೆಗೆ ೨೨ ವರ್ಷಗಳ ಸುದೀರ್ಘ ಅವಧಿ ಯವರೆಗೆ ದಸರಾದಲ್ಲಿ ಭಾಗವಹಿಸಿದ್ದ, ಬರೋಬ್ಬರಿ ೮ ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ, ಕಾಡು ಹಾಗೂ ನಾಡಿನ ನಡುವಿನ, ಜಾನಪದ ಹಾಗೂ ಸಾಂಸ್ಕೃತಿ ಕ್ಷೇತ್ರಗಳ ರಾಯಭಾರಿಯಂತಿದ್ದ.

೬೫ರ ವಯಸ್ಸಿನ ಅರ್ಜುನ ‘ಕನ್ನಡ ಜನತೆ ರಕ್ಷಣೆಗಾಗಿ’ ಪಕ್ಕಾ ಗಡಿಯಲ್ಲಿನ ವೀರಯೋಧನಂತೆಯೇ ತಾನು ವೀರಾವೇಶದ ಕಾದಾಟ ನಡೆಸಿ ಪ್ರಾಣಾರ್ಪಣೆ ಮಾಡಿದ್ದಾನೆ. ಹಾಸನ ಜಿ ಸಕಲೇಶಪುರ ತಾಲೂಕಿನ ಯಸಳೂರು, ಬಾಳೆಕೆರೆ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ನಾಲ್ಕು ಪಳಗಿದ ಆನೆಗಳ ಜತೆಗೆ ಅರ್ಜುನನನ್ನೂ ಬಳಸಲಾಗಿತ್ತು. ಹೀಗಿzಗಲೇ ಆನೆ ಒಂದಕ್ಕೆ ಅರಿವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ಸಮಯದಲ್ಲಿ ಅರ್ಜುನನ ಮೇಲೆ ಒಂಟಿ ಸಲಗ ದಿಢೀರ್ ದಾಳಿ ಮಾಡಿದ್ದು, ಆ ವೇಳೆ ತೀವ್ರ ಗಾಯಗೊಂಡ ಅರ್ಜುನ ಸ್ಥಳದಲ್ಲೇ ಮೃತಪಟ್ಟ ಎಂದು ಇಲಾಖೆ ಮೂಲಗಳು ಹೇಳುತ್ತಿವೆ.

ಆದರೆ, ಅರ್ಜುನನ ಸಾವಿಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ಪರಿಣತರಲ್ಲದ, ಅನನುಭವಿ ವೈದ್ಯರ ಬಳಕೆ ಹಾಗೂ ಗುರಿತಪ್ಪಿ ಗುಂಡು ಹಾರಿಸಿದ ಸಿಬ್ಬಂದಿಯ ಬೇಜವಾಬ್ದಾರಿತನವೇ ಅರ್ಜುನನ ಸಾವಿಗೆ ಕಾರಣ ಎಂಬ ಆರೋಪ ದಟ್ಟವಾಗಿದ್ದು, ಈ ಸಂಬಂಧ ಪ್ರತಿಭಟನೆಯೂ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ರೋಶ ಭುಗಿಲೆದ್ದಿದೆ. ಮಕ್ಕಳಂತೆ ಆನೆಗಳನ್ನು ಸಾಕುವ ಮಾವುತರು, ಕಾವಾಡಿಗಳ ವಲಯದಲ್ಲೂ ದುಃಖಭರಿತ ಆಕ್ರೊಶ ಸಿಡಿದಿದೆ.

ವಯಸ್ಸಾದ ಆನೆಗೆ ಭಾರವನ್ನೇ ಹೊರಿಸುವಂತಿಲ್ಲ. ಇದೇ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೊರುವ ಹೊಣೆಯಿಂದ ನಿವೃತ್ತಿ ನೀಡಿದ್ದು, ಮದವೇರಿದ
ಕಾಡಾನೆ ಪಳಗಿಸಲು ೬೦ ದಾಟಿದ ಅರ್ಜುನನ್ನು ಬಳಸಿದ್ದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಕೇವಲ ಅನುಭವದ ಆಧಾರದ ಮೇಲೆ ಆತನ ವಯಸ್ಸು, ಆರೋಗ್ಯ ಪರಿಗಣಿಸದೇ ಹೋಗಿದ್ದು ಸೇರಿದಂತೆ ಇಡೀ ಕಾರ್ಯಾಚರಣೆಯಲ್ಲಿ ಯಾವುದೇ ನಿಯಮಾವಳಿ ಪಾಲಿಸಿಲ್ಲವೇಕೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ, ಬೇಜವಾಬ್ದಾರಿ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳು, ಸಿಬ್ಬಂದಿಗೆ ಶಿಕ್ಷೆ
ಆಗು ವಂತೆ ಮಾಡಬೇಕಿದೆ.

ರಾಜ್ಯ ಸರಕಾರ ತಕ್ಷಣವೇ ಈ ಬಗ್ಗೆ ತನಿಖೆಗೆ ಆದೇಶಿಸಬೇಕು. ಆ ಮೂಲಕ ಕಾಡಾನೆಗಳ ಹಾವಳಿಯಿಂದ, ನಾಡಿನ ಮನುಷ್ಯರ ಜೀವನ ಮತ್ತು ಜೀವ ಬದುಕಿಸಲು ಹೋಗಿ ಜೀವತೆತ್ತ ಬೆಲೆ ಕಟ್ಟಲಾಗದ ಆಸ್ತಿ, ದಸರಾ ಖ್ಯಾತಿಯ ಅರ್ಜುನನ ಜೀವತ್ಯಾಗಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ.

Leave a Reply

Your email address will not be published. Required fields are marked *

error: Content is protected !!