Friday, 26th July 2024

ಬೆಳ್ಳುಳ್ಳಿ ಬೆಲೆ ನಿಯಂತ್ರಣ ಮಾಡಿ

ಬೆಳ್ಳಿಯಂತೆ ಕಂಗೊಳಿಸುವ ಬೆಳ್ಳುಳ್ಳಿಗೆ ಇದೀಗ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ತರಕಾರಿ ಸೇರಿದಂತೆ ಇತರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿವೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಬೆಳ್ಳುಳ್ಳಿಯ ಬರೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ೪೫೦ ರುಪಾಯಿಗೆ ಮಾರಾಟವಾಗುತ್ತಿದ್ದು, ಜನಸಾಮಾನ್ಯರು ಮತ್ತು ಹೋಟೆಲ್ ಮಾಲೀಕರ ಜೇಬಿಗೆ ಹೊರೆಯಾಗಿದೆ. ಆ ಕಾರಣದಿಂದ ಹೋಟೆಲ, ರೆಸ್ಟೋರೆಂಟ್‌ಗಳ ಮಾಲೀಕರು ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಾವೇ ಭರಿಸಬೇಕೆ? ಗ್ರಾಹಕರಿಗೆ ವರ್ಗಾಯಿಸಬೇಕೇ ಎಂಬ ಚಿಂತೆಯಲ್ಲಿ ಮಗ್ನರಾಗಿದ್ದಾರೆ.

ಇನ್ನು ಹಲವೆಡೆ ಬೆಳ್ಳುಳ್ಳಿ ಬಳಸಿ ತಯಾರಿಸುವ ಪದಾರ್ಥಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟು, ಬೆಳ್ಳುಳ್ಳಿ ರಹಿತ ಆಹಾರ ಪದಾರ್ಥಗಳನ್ನು ಶೇ.೧೦ರಷ್ಟು
ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೆಳ್ಳುಳ್ಳಿ ಉತ್ಪಾದನೆ ಸಂಪೂರ್ಣ ಕುಸಿದಿದೆ.
ಕರ್ನಾಟಕಕ್ಕೆ ಹೆಚ್ಚಿನ ಬೆಳ್ಳುಳ್ಳಿ ತಮಿಳುನಾಡಿನಿಂದ ಆಮದಾಗುತ್ತಿದೆ. ಹವಾಮಾನ ವೈಪರೀತ್ಯವು ಈ ಬಾರಿ ಬೆಳ್ಳುಳ್ಳಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಬಾಗಲಕೋಟೆ, ಚಿಕ್ಕಮಗಳೂರು ಮತ್ತು ಹಾವೇರಿ, ಚಾಮರಾಜನಗರ ಜಿಗಳಲ್ಲಿ ಬೆಳ್ಳುಳ್ಳಿ ಬೆಳೆಯುತ್ತಾರೆ.

ಹೈಬ್ರಿಡ್ ಬೆಳ್ಳುಳ್ಳಿ ಮಧ್ಯಪ್ರದೇಶದಿಂದ ಪೂರೈಕೆಯಾಗುತ್ತದೆ. ಹೊಸ ಬೆಳ್ಳುಳ್ಳಿ ಇಳುವರಿ ಜನವರಿಯಲ್ಲಿ ಕಟಾವಿಗೆ ಬರಲಿದ್ದು, ಮಾರ್ಚ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿವೆ. ಅಲ್ಲಿವರೆಗೆ ಬೆಳ್ಳುಳ್ಳಿ ದರ ಏರುಮುಖಿ ಯಾಗಿರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪರಿಣತರು ತಿಳಿಸಿದ್ದಾರೆ. ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಬೆಳ್ಳುಳ್ಳಿಯ ಆವಕ ಹೆಚ್ಚಾಗಲಿದ್ದು, ಇದರಿಂದ ಬೆಲೆ ಕುಸಿಯಲಿದೆ ಎನ್ನಲಾಗಿದೆ. ಭೂಲೋಕದ ಅಮೃತ ಎಂದು ಕರೆಯಲಾಗುವ ಬೆಳ್ಳುಳ್ಳಿ ಅತಿ ಹೆಚ್ಚು ಔಷಽಯ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಹಲವಾರು ಕಾಯಿಲೆಗಳಿಗೆ ಅದು ಸಿದ್ಧೌಷಧವಾಗಿದೆ.

ದಿನನಿತ್ಯದ ಸಾರು, ಸಾಂಬಾರ್, ಪಲ್ಯ, ಚಟ್ನಿಯಂತಹವುಗಳ ತಯಾರಿಕೆ ಯಲ್ಲಿ ಬಳಸಲಾಗುವ ಬೆಳ್ಳುಳ್ಳಿಯನ್ನು ಮಾರ್ಚ್‌ವರೆಗೂ ಬಳಸದೇ ಇರದಿರಲು ಸಾಧ್ಯವಿಲ್ಲ. ಹೀಗಾಗಿ ಬೆಳ್ಳುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತು ಗಮನ ಹರಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!