Sunday, 8th September 2024

ರಾಜ್ಯದ ಹಿತವೇ ಆದ್ಯತೆಯಾಗಲಿ

ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಿಂದ ಆಯ್ಕೆಯಾದ ಸಂಸದರು ಮತ್ತು ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ “ರಾಜ್ಯದ ನೆಲ, ಜಲ, ಸಂಸ್ಕೃತಿ, ಸಂಪನ್ಮೂಲದ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಒಕ್ಕೊರಲಿನಿಂದ ಪ್ರಯತ್ನಿಸುವ ಅಗತ್ಯ ವಿದೆ. ಮೇಕೆದಾಟು, ಕಳಸಾಬಂಡೂರಿ ಸೇರಿದಂತೆ ಕೇಂದ್ರದ ಅನುಮೋದನೆ ಬಾಕಿ ಇರುವ ರಾಜ್ಯದ ಯೋಜನೆಗಳಿಗಾಗಿ ಪಕ್ಷಭೇದ ಮರೆತು ಶ್ರಮಿಸಬೇಕು” ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸಿಎಂ ಅವರ ಈ ಮನವಿಗೆ ಸಂಸದರೆಲ್ಲರೂ ಸಹಮತ ವ್ಯಕ್ತಪಡಿಸಿರುವುದು ಸಕಾರಾತ್ಮಕ ಬೆಳವಣಿಗೆ. ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರಲ್ಲದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಭಾಗವಹಿಸಿದ್ದ ಸಭೆಯಲ್ಲಿ ಸಿಎಂ, ರಾಜ್ಯಕ್ಕೆ ಆಗಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮಂಡಿಸಿದ್ದಾರೆ.

ಮುಖ್ಯವಾಗಿ ನಿರ್ಮಲಾ ಸೀತಾರಾಮನ್ ಅವರ ಸಮ್ಮುಖದಲ್ಲಿಯೇ ರಾಜ್ಯಕ್ಕೆ ಬರಬೇಕಿರುವ ಬರ ಪರಿಹಾರ ಮತ್ತು ಅನುದಾನ ಬಾಕಿಯನ್ನು ಪ್ರಸ್ತಾಪಿಸಿ ದ್ದಾರೆ. “ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ” ಎಂಬ ಸಿಎಂ ಹೇಳಿಕೆ ಇಂದಿನ ತ್ವೇಷಮಯ ರಾಜಕೀಯ ವಾತಾವರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುದಾನ ಮತ್ತು ನೀರಾವರಿ ಯೋಜನೆಗಳ ಅನುಮೋದನೆಗೆ ಸಂಬಂಧಿಸಿ ಕಾಂಗ್ರೆಸ್, ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು.

ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿದಿತ್ತು. ಜೊತೆಗೆ ಅನುದಾನ ವಿಚಾರದಲ್ಲಿ ರಾಜ್ಯ ಸರಕಾರ, ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈಗ ಚುನಾವಣೆಗಳ ಅಬ್ಬರ ಮುಗಿದ ಬಳಿಕ, ಸೌಹಾರ್ದತೆಯ ಹಳಿಗೆ ಮರಳಿರುವುದು ಶುಭ ಸೂಚನೆ. ರಾಜ್ಯದಿಂದ ಆಯ್ಕೆಯಾದ
ಜನಪ್ರತಿನಿಧಿಗಳಿಗೆ ರಾಜ್ಯದ ಹಿತರಕ್ಷಣೆಯೇ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ರಾಜಕಾರಣ ಬೆರೆಸದೆ ಒಂದಾಗಿ ಹೋರಾಟ ಮಾಡಿದರಷ್ಟೇ ದಿಲ್ಲಿಯಲ್ಲಿ ರಾಜ್ಯದ ಕೂಗಿಗೆ ಮಾನ್ಯತೆ ಸಿಗಲು ಸಾಧ್ಯ. ಮುಖ್ಯವಾಗಿ ನೆರೆ ರಾಜ್ಯಗಳು ಆಕ್ಷೇಪ ಎತ್ತಿರುವ ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ
ರಾಜ್ಯದ ಸಂಸದರೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಲೇಬೇಕು.

Leave a Reply

Your email address will not be published. Required fields are marked *

error: Content is protected !!