Friday, 26th July 2024

ಪರಿಹಾರಕ್ಕೂ ಮೊದಲು ತನಿಖೆ ಸಮಂಜಸವಲ್ಲವೇ?

ಪ್ರತಿಯೊಂದು ಕಾನೂನುಗಳನ್ನು ರೂಪಿಸುವುದು ಒಳ್ಳೆಯ ಉದ್ದೇಶದ ಕಾರಣಕ್ಕಾಗಿಯೆ. ಆದರೆ ಕೆಲವರು ಅಂಥ ಕಾನೂನು ದುರ್ಬಳಕೆ ಪಡಿಸಿಕೊಳ್ಳುವುದೂ ಸಹ ಉಂಟು. ಹಾಗೆಂದು ಕಾನೂನನ್ನೇ ಸರಿಯಿಲ್ಲ ಎಂದು ಜರಿಯುವುದು ಸಮಂಜಸವಲ್ಲ. ಸರಕಾರವು ಸಂಕಷ್ಟದಿಂದ ಆತ್ಮಹತ್ಯೆೆಗೊಳಗಾದ ರೈತರ ಸಾವಿಗಾಗಿ ಪರಿಹಾರ ನೀಡುವುದು ಒಳ್ಳೆಯ ಬೆಳವಣಿಗೆ.

ಯಾವ ರೈತರು ಸಹ ಪರಿಹಾರಕ್ಕಾಗಿಯೇ ಆತ್ಮಹತ್ಯೆೆಗೆ ಪ್ರಯತ್ನಿಸುವುದಿಲ್ಲ. ಆದರೆ ರೈತರ ಎಲ್ಲ ಸಾವುಗಳು ಸಹ ಆರ್ಥಿಕ ಸಂಕಷ್ಟದಿಂದಾಗಿಯೇ ಸಂಭವಿಸುತ್ತವೆ ಅನ್ನುವುದು ತರವಲ್ಲ. ಕೆಲವೊಂದು ಸಾವುಗಳಲ್ಲಿ ವೈಯಕ್ತಿಕ ಸಮಸ್ಯೆಗಳು ಸಹ ಅಡಗಿರುತ್ತವೆ. ಇವುಗಳನ್ನು ತನಿಖೆ ಮೂಲಕ ಪರಿಶೀಲಿಸುವುದು ಕಾನೂನಿನ ಕ್ರಮ. ಅದೇ ರೀತಿ ಇದನ್ನು ಗೌರವಿಸಬೇಕಿರುವುದು
ಸಾರ್ವಜನಿಕರ ಜವಾಬ್ದಾರಿ. ರೈತರ ಆತ್ಮಹತ್ಯೆ ಪ್ರಕರಣಗಳ ಪರಿಹಾರ ವಿತರಣೆಗೆ ತನಿಖೆ ಸರಿಯಲ್ಲ ಎಂದು ವಿರೋಧಿಸುವುದು ಎಷ್ಟು ಸರಿ? ಅನ್ನುವುದು ಇದೀಗ ಉಂಟಾಗಿರುವ ಗೊಂದಲ.

2019-20ನೇ ಸಾಲಿನಲ್ಲಿ ಸಂಭವಿಸಿರುವ 908 ರೈತರ ಆತ್ಮಹತ್ಯೆೆ ಪ್ರಕರಣಗಳಲ್ಲಿ 122 ಪ್ರಕರಣಗಳು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದಾಗಿ ಪರಿಹಾರ ನೀಡಲು ತಿರಸ್ಕರಿಸಲಾಗಿದೆ. ಇಂಥ ಕೆಲವು ನಿಯಮಗಳು ಸರಿಯಲ್ಲ ಎಂಬುದು ಕೇಳಿಬರುತ್ತಿರುವ ಆರೋಪ. 660 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹ ಎಂದು
ಘೋಷಿಸಲಾಗಿದ್ದು, 127 ಪ್ರಕರಣಗಳು ಪರಿಶೀಲನೆಯ ಹಂತದಲ್ಲಿವೆ. 42 ಪ್ರಕರಣಗಳು ಎಫ್‌ಎಸ್‌ಎಲ್ ಪರೀಕ್ಷೆೆಯ ಹಂತದಲ್ಲಿವೆ.
ರೈತರ ಸಾವುಗಳ ಪರಿಹಾರ ವಿತರಣೆಯಲ್ಲಿ ಪರಿಶೀಲನೆಯಂಥ ನಿಯಮಗಳು ಸಮಂಜಸವಲ್ಲ ಎಂಬುದು ಕೆಲವೆಡೆ ಕೇಳಿಬರುವ ಆರೋಪ. ಇಂಥ ಪರಿಶೀಲನೆ ಹಾಗೂ ನಿಯಮಗಳಿರುವುದು ನಿಜವಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಲುವಾಗಿಯೇ ಹೊರತು, ಪರಿಹಾರ ತಡೆಗಾಗಿ ಅಲ್ಲ. ಆದರೆ ಪ್ರತಿಯೊಂದು ರೈತರ ಆತ್ಮಹತ್ಯೆೆಯನ್ನು ಆರ್ಥಿಕ ಸಂಕಷ್ಟದ ಕಾರಣಕ್ಕಾಗಿಯೇ ಎಂದು ಬಿಂಬಿಸುವುದು ಸಮಂಜಸವೇ?

Leave a Reply

Your email address will not be published. Required fields are marked *

error: Content is protected !!