Saturday, 27th July 2024

ಯಾವತ್ತೋ ಆಗಬೇಕಿದ್ದ ಕೆಲಸ

ರಾಜ್ಯಾದ್ಯಂತ ಬೇಸಗೆಯ ಧಗೆ ಮತ್ತು ನೀರಿನ ಕೊರತೆ ಎರಡೂ ಹೆಚ್ಚಿವೆ. ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರಿಗೆ ಇದರ ಬಿಸಿ ಸ್ವಲ್ಪ ಹೆಚ್ಚೇ ಎನ್ನುವಂತೆ ತಟ್ಟಿದೆ. ನಗರದ ನೀರಿನ ಸಮಸ್ಯೆಗೆ ಲಗಾಮು ಹಾಕಲು ಬೆಂಗಳೂರು ಜಲಮಂಡಳಿಯು ಒಂದಷ್ಟು ಉಪಕ್ರಮಗಳಿಗೆ ಮುಂದಾಗಿರುವುದು ಶ್ಲಾಘನೀಯ.

ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಲಮಂಡಳಿಯು ೨೪ ಸಾವಿರ ಲೀಟರ್‌ಗೂ ಮೇಲ್ಪಟ್ಟ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳಿಗೂ ದರ ನಿಗದಿ ಮಾಡಿರುವುದು ಹಾಗೂ ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿದ್ದ ಜೊಂಡುಹುಲ್ಲಿನಂಥ ಕಳೆಯನ್ನು ಸಿಬ್ಬಂದಿಯ ನೆರವಿನಿಂದ ಸಮರೋಪಾದಿಯಲ್ಲಿ ನಿವಾರಿಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಟ್ಟಿದ್ದು ಇಂಥ ಒಂದೆರಡು ಉಲ್ಲೇಖನೀಯ ಉಪಕ್ರಮಗಳಾಗಿವೆ.

ಮತ್ತೊಂದೆಡೆ, ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ಕುಡಿಯುವುದಕ್ಕೆ ಹೊರತುಪಡಿಸಿ ವಾಹನಗಳು ಮತ್ತು ಮನೆಯಂಗಳವನ್ನು ತೊಳೆಯಲು, ಉದ್ಯಾನಗಳಿಗೆ ಬಳಸಲು ಪೋಲು ಮಾಡದಂತೆಯೂ ಜಲಮಂಡಳಿ ಆದೇಶಿಸಿದೆ. ಜತೆಗೆ, ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಅಂತರ್ಜಲದ ಮರುಪೂರಣಕ್ಕೆ ಮುಂದಾಗಿರುವ ಜಲಮಂಡಳಿಯ ಕ್ರಮವೂ ಶ್ಲಾಘನೀಯ. ಇವೆಲ್ಲಾ ಯಾವತ್ತೋ ಆಗಬೇಕಿದ್ದ ಕೆಲಸಗಳು. ಬೇಸಗೆ ಅವಧಿಯಲ್ಲಿ ನೀರಿಗೆ ಹಾಹಾಕಾರ ಉಂಟಾದಾಗ ಮಾತ್ರವೇ ಇಂಥ ಪರಿಹಾರೋಪಾಯಗಳಿಗೆ ಮುಂದಾಗುವ ಬದಲು, ಇವನ್ನು ಜಲಮಂಡಳಿಯು ತನ್ನ ವಾಡಿಕೆಯ ಕಾರ್ಯ ಸೂಚಿಯ ಅವಿಭಾಜ್ಯ ಅಂಗವಾಗಿಸಿಕೊಂಡರೆ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬುದರಲ್ಲಿ
ಎರಡು ಮಾತಿಲ್ಲ.

ಇಲ್ಲಿ ಬೆಂಗಳೂರಿನ ನಿದರ್ಶನವನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯಷ್ಟೇ. ಇಂಥ ಉಪಾಯಗಳನ್ನು ರಾಜ್ಯದೆಲ್ಲೆಡೆ
ಅನುಸರಿಸಿದಲ್ಲಿ, ನೀರಿನ ಕೊರತೆಯನ್ನು ಒಂದು ಮಟ್ಟಕ್ಕಾದರೂ ಎದುರಿಸಬಹುದು. ಹಿಂದಿನ ಕಾಲದಲ್ಲಿ ರಾಜ-ಮಹಾ ರಾಜರು, ಪುರಪಿತೃಗಳು ಊರೂರುಗಳಲ್ಲಿ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದುದೇಕೆ ಎಂಬುದು ಈಗ ಅರಿವಾಗುತ್ತಿದೆ. ಅಂತರ್ಜಲ ಮಟ್ಟವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಕೆರೆಗಳದ್ದು ಅನುಪಮ ಕೊಡುಗೆ. ಇಂಥ ಕೆರೆಗಳ ಒತ್ತುವರಿಯಾಗಿ, ಅವುಗಳ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ಎಗ್ಗಿಲ್ಲದೇ ತಲೆಯೆತ್ತಿದ್ದರಿಂದಲೇ ಸಾಕಷ್ಟು ಸಮಸ್ಯೆ ಸೃಷ್ಟಿಯಾದದ್ದು. ಆದರೆ ಯಾರಿಗೆ ಬುದ್ಧಿ ಹೇಳೋದು?!

Leave a Reply

Your email address will not be published. Required fields are marked *

error: Content is protected !!