Tuesday, 28th May 2024

ಕುಟುಂಬ ರಾಜಕಾರಣ ಅಗತ್ಯವೇ?

ಮದ್ಯ ಹಗರಣದ ಸಂಬಂಧವಾಗಿ ಸದ್ಯ ಜೈಲಿನಲ್ಲಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರು ಒಂದೊಮ್ಮೆ ರಾಜೀನಾಮೆ ನೀಡಬೇಕಾಗಿ ಬಂದರೆ ಮುಂದಿನ ಮುಖ್ಯಮಂತ್ರಿಯಾರಾಗ ಬೇಕು ಎಂಬ ಬಗ್ಗೆ ಈಗಾಗಲೇ ಮಾತುಕತೆ ಶುರುವಾಗಿದೆಯಂತೆ. ಆ ಸ್ಥಾನಕ್ಕೆ ಕೇಜ್ರಿವಾಲರ ಪತ್ನಿ ಸುನಿತಾ ಅವರನ್ನು ತರಬೇಕು ಎಂದೂ ಚರ್ಚೆಯಾಗುತ್ತಿದೆಯಂತೆ.

ಕುಟುಂಬ ರಾಜಕಾರಣದ ವಿಷಯ ಬಂದಾಗಲೆಲ್ಲ, ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಎಸ್‌ಪಿ ಮುಂತಾದ ರಾಜಕೀಯ ಪಕ್ಷಗಳ  ಹೆಸರು ಗಳನ್ನು ಎಳೆದು ತರುವುದು ವಾಡಿಕೆ. ದೆಹಲಿ ಗದ್ದುಗೆಗೆ ಒಂದೊಮ್ಮೆ ಸುನಿತಾ ಅವರು ಏರಿದಲ್ಲಿ, ಆಮ್ ಆದ್ಮಿ ಪಕ್ಷವೂ ಈ ಯಾದಿಗೆ ಹೊಸ ಸೇರ್ಪಡೆಯಾದಂತಾಗುತ್ತದೆ. ಸ್ವಜನ ಪಕ್ಷಪಾತವೆಂಬುದು ಢಾಳಾಗಿ ಗೋಚರಿಸುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯೊಳಗೆ ‘ಕುಟುಂಬ ರಾಜಕಾರಣ’ವೂ ತೂರಿಕೊಂಡು ಬಿಟ್ಟರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ವರ್ಷಾನುಗಟ್ಟಲೆ ಶ್ರಮಪಟ್ಟು, ಮಳೆ- ಬಿಸಿಲೆನ್ನದೆ ಊರೂರು ಸುತ್ತಿ ಪಕ್ಷವನ್ನು ಕಟ್ಟಿ ಬೆಳೆಸಿ ಅದಕ್ಕೊಂದು ಸ್ವೀಕಾರಾರ್ಹ ಸ್ಥಾನ ತಂದು ಕೊಡುವಲ್ಲಿ ಬೇರುಮಟ್ಟದ ಕಾರ್ಯಕರ್ತರು ಹಾಗೂ ಇತರ ಪದಾಽಕಾರಿಗಳ ಯೋಗದಾನ ಅಪಾರವಾಗಿರುತ್ತದೆ. ಪಕ್ಷ ಯಾವುದೇ ಇರಲಿ, ಯಾರದ್ದೇ ಇರಲಿ, ಇಂಥ ಪ್ರಾಮಾಣಿಕ ಕೆಲಸಗಾರರಿಗೆ ಅವರ ಶ್ರಮಕ್ಕೆ ತಕ್ಕಂಥ ಸ್ಥಾನಮಾನಗಳು ಸಿಗುವಂತಾಗಬೇಕು. ಆದರೆ, ಕುಟುಂಬಿಕರೇ ಪಕ್ಷದೊಳಗೆ ನಿರಂತರವಾಗಿ ತೂರಿಕೊಂಡು ಆಯಕಟ್ಟಿನ ಜಾಗಗಳನ್ನು ಅಪ್ಪುವಂತಾದರೆ, ಬೆವರು ಸುರಿಸಿದ ಕಾರ್ಯ ಕರ್ತರಿಗೆ ಹತಾಶೆ ಯಾಗುವುದರಲ್ಲಿ ಸಂದೇಹವಿಲ್ಲ. ಹಾಗೆಂದ ಮಾತ್ರಕ್ಕೆ, ರಾಜಕಾರಣಿಯೊಬ್ಬನ ಕುಟುಂಬದಲ್ಲಿ ಮತ್ತೊಬ್ಬ ಸಮರ್ಥನಿದ್ದರೆ ಅವನು ರಾಜಕೀಯಕ್ಕೆ ಪ್ರವೇಶಿಸಲೇಬಾರದು ಎಂಬುದು ಈ ಮಾತಿನ ಅರ್ಥ ವಲ್ಲ; ಆದರೆ ಅದಕ್ಕೊಂದು ಮಿತಿ ಮತ್ತು ಗತಿ ಇದ್ದರೆ ಒಳಿತು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಆವರಣದಲ್ಲಿ ತುಂಬಿಕೊಂಡಿರುವ ಕೆಲವೊಂದು ‘ಕುಟುಂಬಸ್ಥರು’ ರಾಜ್ಯವನ್ನು ಹೇಗೆಲ್ಲಾ ತಮ್ಮ ಕಬ್ಜಾ ಮಾಡಿಕೊಂಡಿದ್ದಾರೆ, ಅವರ ಠೇಂಕಾರ ಯಾವ ಮಟ್ಟಿಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ರಾಜಕೀಯ ಪಕ್ಷವೊಂದು ಒಂದೇ ಕುಟುಂಬದ ಪಾಳೇಪಟ್ಟು ಆಗಿ ಬಿಟ್ಟರೆ ಒದಗುವ ದುರಂತ. ಇದು ಮರುಕಳಿಸದಿರಲಿ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುವವರನ್ನು ಜನರೂ ಸಾರಾಸಗಟಾಗಿ ತಿರಸ್ಕರಿಸಬೇಕು. ಕಾರಣ ಇಂಥವರ ಪೈಕಿ ಹೆಚ್ಚಿನವರಲ್ಲಿ ಸ್ವಾರ್ಥಸಾಧನೆಯ ಬಯಕೆಯೇ ಕೆನೆಗಟ್ಟಿರು ತ್ತದೆಯೇ ವಿನಾ, ಜನಕಲ್ಯಾಣದ ಆಶಯವಲ್ಲ.

ಇಂಥ ಸ್ವಾರ್ಥಸಾಧಕರು ಜನರ ಕಣ್ಣಿಂದ ನುಣುಚಿಕೊಳ್ಳುವುದು ವಾಡಿಕೆ, ಹೀಗಾಗಿ ಅವರನ್ನು ಕಂಡುಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಹಾಗೆಂದ ಮಾತ್ರಕ್ಕೆ ಅದು ಅಸಾಧ್ಯವೇನಲ್ಲ. ಮತದಾರರು ಪ್ರಜ್ಞಾವಂತಿಕೆ ಯನ್ನು ರೂಢಿಸಿಕೊಂಡು ಮತದಾನದ ವೇಳೆ ಹೊಣೆಗಾರಿಕೆಯನ್ನು ಮೆರೆದರೆ ಇದು ಸಾಧ್ಯವಾದೀತು.

Leave a Reply

Your email address will not be published. Required fields are marked *

error: Content is protected !!