ನವದೆಹಲಿ: ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ನಿರ್ಣಯ ಕೈಗೊಂಡಿ ರುವ ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂ ದಂಡ ವಿಧಿಸಿದೆ.
ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಾಯುಯಾನ ನಿಯಂತ್ರಕ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಮಾತ್ರವಲ್ಲದೇ ಅಂದು ಘಟನೆ ನಡೆದ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್-ಕಮಾಂಡ್ ಪರವಾನಗಿಯನ್ನು ಕೂಡ ಅಮಾನತುಗೊಳಿಸಿದೆ.
ನವೆಂಬರ್ 26, 2022 ರಂದು ಸಂಭವಿಸಿದ ಈ ಘಟನೆಯಲ್ಲಿ, ವಾಚ್ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣಕ್ಕಾಗಿ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.