Friday, 20th September 2024

ಉಡ್ತಾ ಪಂಜಾಬ್ ಆಯ್ತು ಈಗ ಉಡ್ತಾ ಸ್ಯಾಂಡಲ್ ವುಡ್!

ಅಭಿವ್ಯಕ್ತಿ
ಗಣೇಶ್ ಶಾನಭಾಗ

2016ರಲ್ಲಿ ತೆರೆ ಕಂಡ ಡ್ರಗ್ಸ್‌ ಕುರಿತ ‘ಉಡ್ತಾ ಪಂಜಾಬ್’ಎಂಬ ಹಿಂದಿ ಚಲನಚಿತ್ರ ಭಾರತದಾದ್ಯಂತ ಭಾರೀ ಸಂಚಲನ ಮೂಡಿ ಸಿತ್ತು. ಈ ಚಿತ್ರವು ಪಂಜಾಬ್ ರಾಜ್ಯದ ಯುವ ಜನತೆ ಹೇಗೆ ಮಾದಕ ದ್ರವ್ಯ ಸೇವನೆ ಚಟಕ್ಕೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ತೋರಿಸಿತ್ತು.

ಯುವಜನರು ಡ್ರಗ್ಸ್‌‌ನಿಂದ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳಲು ಪಂಜಾಬ್‌ನಲ್ಲಿ ಹೇಗೆ ಪೂರಕ ವಾತಾವರಣವಿದೆ ಎನ್ನುವುದನ್ನೂ ಈ ಚಲನ ಚಿತ್ರದ ಮೂಲಕ ಹೇಳಲಾಗಿತ್ತು. ಪಂಜಾಬ್‌ನಲ್ಲಿ ಯುವ ಜನತೆ ಡ್ರಗ್ಸ್‌‌ಗೆ ಅಷ್ಟೊೊಂದು ಅಂಟಿ ಕೊಂಡಿರುವುದು ಪಾಕ್‌ನ ಕುಮ್ಮಕ್ಕೇ ಕಾರಣ. ಇದರಲ್ಲಿ ಸಂಶಯವೇ ಇಲ್ಲ. ನೇರವಾಗಿ ಯುದ್ಧ ಮಾಡಲಾಗದ ಕುಹಕ ಬುದ್ಧಿಯ ಪಾಕ್ ಭಾರತದಲ್ಲಿ ಡ್ರಗ್ಸ್‌ ಪೂರೈಕೆ, ಖೋಟಾ ನೋಟು ಮುದ್ರಿಸಿ ಬಿಡುಗಡೆ ಗೊಳಿಸುವುದು ಮುಂತಾದವನ್ನೆಲ್ಲ ತೆರೆ ಮರೆಯಲ್ಲಿ ಮಾಡುತ್ತಲೇ ಬರುತ್ತಿದೆ.

ಅದು ಉಡ್ತಾ ಪಂಜಾಬ್ ಆಯ್ತು, ಈಗ ನಮ್ಮದೇ ಕರ್ನಾಟಕದ ಸ್ಯಾಂಡಲ್ ವುಡ್ ‌ನಲ್ಲಿ ಡ್ರಗ್ಸ್‌ ಜಾಲದ ಸ್ಫೋಟವಾಗಿರುವುದು ‘ಉಡ್ತಾ ಸ್ಯಾಂಡಲ್ ವುಡ್’ ಎನ್ನುವಂತಾಗಿದೆ. ಕೆಲವು ವರ್ಷಗಳ ಹಿಂದೆ ಮಧುರ್ ಭಂಡಾರಕರ್ ಎಂಬ ಹಿಂದಿ ನಿರ್ದೇಶಕ ಕೂಡ ಫ್ಯಾಷನ್, ಪೇಜ್ – 3 ಮುಂತಾದ ಸಿನಿಮಾಗಳ ಮೂಲಕ ಸಮಾಜದಲ್ಲಿ ಶ್ರೀಮಂತ ವರ್ಗದ ಪಾರ್ಟಿಗಳಲ್ಲಿ ನಡೆಯುವ ಡ್ರಗ್ಸ್‌ ದಂಧೆ, ಅನೈತಿಕ ಚಟುವಟಿಕೆ ಮುಂತಾದ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಈಗ ಸ್ಯಾಂಡಲ್ ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಡೀಲ್ ಪ್ರಕರಣದ ಸಂಪೂರ್ಣ ತನಿಖೆಯಾಗಿ ಕಟು ಸತ್ಯ ಹೊರಬಂದು ಸಾರ್ವಜನಿಕರಿಗೆ ಅದರ ಕರಾಳ ಮುಖ ತಿಳಿಯಬೇಕಾಗಿದೆ.

ನಮ್ಮ ಭಾರತದಲ್ಲಿ 2014ರಿಂದೀಚೆಗೆ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಆದರೆ ಈ ಡ್ರಗ್ಸ್‌ ದಂಧೆ ಮಾತ್ರ ವ್ಯಾಪಕವಾಗಿ ಹರಡುತ್ತಲೇ ಇದೆ. ಈಗ ನಮ್ಮ ಬೆಂಗಳೂರಿನ ಸ್ಯಾಂಡಲ್ ವುಡ್ (ಕನ್ನಡ ಚಿತ್ರೋದ್ಯಮ)ದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ಡ್ರಗ್
್ಸದಂಧೆಯ ಸಂಪೂರ್ಣ ತನಿಖೆ ನಡೆದು, ಅಪರಾಧಿಗಳಿಗೆ ಶಿಕ್ಷೆಯಾಗಲೇ ಬೇಕು. ಇಲ್ಲವೆಂದಾದಲ್ಲಿ ಪ್ರತಿಭಾ ವ್ಯಕ್ತಿಗಳ ಕೈವಾಡ ವಿರುವುದು ಬೆಳಕಿಗೆ ಬರಲು ಸಾಧ್ಯವಿಲ್ಲ. ಭಾರತದಲ್ಲಿ ಈ ಹಿಂದೆ ನಡೆದ ಎಷ್ಟೂ ಪ್ರಕರಣಗಳು ನಿಷ್ಪಕ್ಷಪಾತ ತನಿಖೆಯಾಗದೇ ಅರ್ಧಕ್ಕೆ ಕೈಬಿಟ್ಟಿದ್ದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಪಂಜಾಬ್‌ನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ನಡೆಸಿದಾಗ ಶೇ.80ರಷ್ಟು ವಿದ್ಯಾರ್ಥಿಗಳಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.

ಸದ್ಯಕ್ಕೆ ಸ್ಯಾಂಡಲ್ ವುಡ್‌ನ ಪ್ರಖ್ಯಾತ ನಟಿಯರಾದ ರಾಗಿಣಿ, ಸಂಜನಾ ಬಂಧನವಾಗಿದೆ. ಪ್ರತಿದಿನವೂ ಡ್ರಗ್ಸ್‌ ಜಾಲದ ಕರಾಳ ಮುಖ ಅನಾವರಣವಾಗುತ್ತಲೇ ಇದೆ. ದಿನ ಕಳೆದಂತೆ ಡ್ರಗ್ಸ್ ‌‌ಜಾಲದಲ್ಲಿನ ಆರೋಪಿಗಳ ಪಟ್ಟಿಯೂ ಬೆಳೆಯುತ್ತಿದೆ. ಇದು ಇಷ್ಟಕ್ಕೆ ನಿಲ್ಲಬಾರದು. ಅದರ ಮೂಲ ಬೇರು ಎಲ್ಲಿಯ ತನಕ ಹೋಗಿದೆ ಎಂಬುದರ ಸಮಗ್ರ ತನಿಖೆಯೂ ಆಗಬೇಕು. ಆಗ ಮಾತ್ರ ನಮಗೆ ಈ ಡ್ರಗ್ಸ್ ಜಗತ್ತಿನ ಸಂಪೂರ್ಣ ಚಿತ್ರಣ ಅನಾವರಣವಾಗಲು ಸಾಧ್ಯ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇತ್ತೀಚೆಗೆ
ಆತ್ಮಹತ್ಯೆ ಮಾಡಿಕೊಂಡ ಎನ್ನಲಾದ ಹಿಂದಿ ಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವಾಗಲೂ ಈ ಡ್ರಗ್ಸ್ ಡೀಲ್ ಸಾಕಷ್ಟು ಸುದ್ದಿಮಾಡುತ್ತಿದೆ.

ಯುವ ಜನಾಂಗ ಇಂತಹ ಡ್ರಗ್ಸ್‌ ಚಟಕ್ಕೆ ಅಂಟಿಕೊಳ್ಳಲು ಈವರ್ಷ ಕೋವಿಡ್-19 ಪ್ರಮುಖ ಕಾರಣ ಎನ್ನಬಹುದು. ಏಕೆಂದರೆ ಲಾಕ್‌ಡೌನ್ ಸಮಯದಲ್ಲಿ ಸಾರಾಯಿ ಅಂಗಡಿಗಳನ್ನೂ ಒಂದರಿಂದ ಒಂದೂವರೆ ತಿಂಗಳು ಬಂದ್ ಮಾಡಲಾಗಿತ್ತು. ಅಲ್ಲದೆ ಉದ್ಯೋೋಗವೂ ಇರಲಿಲ್ಲ. ಯುವ ಜನಾಂಗಕ್ಕೆ ಓದಲು ಕಾಲೇಜುಗಳೂ ಇರಲಿಲ್ಲ.

Empty mind is devil’s work shop ಎನ್ನುವ ಆಂಗ್ಲ ನಾಣ್ನುಡಿಯಂತೆ ಸೆಲಿಬ್ರಿಟಿಗಳ ಖಾಲಿ ತಲೆಬುರುಡೆಯಲ್ಲಿ ಕೇವಲ ನಶೆಯದ್ದೇ ಚಿಂತೆ ಬರುತ್ತಿತ್ತೇನೋ. ಸಾಮಾನ್ಯವಾಗಿ ಯುವ ಜನರು ನೈಟ್ ಕ್ಲಬ್‌ಗೆ ತೆರಳಿ ಪಾರ್ಟಿ ಮಾಡುವಾಗ ಇಂತಹ ಡ್ರಗ್ ವಿತರಕರು ಪರಿಚಯವಾಗುತ್ತಾರೆ. ಕೆಲವೊಮ್ಮೆ ಡ್ರಗ್ಸ್‌‌ಗೆ ಹೊಸಬರಾಗಿರುವ ಯುವ ಜನತೆ ಅವರ ಸ್ನೇಹಿತರಿಂದಲೂ ಡ್ರಗ್ಸ್ ‌ ಚಟಕ್ಕೆ ಸುಲಭವಾಗಿ ಅಂಟಿಕೊಳ್ಳುತ್ತಾರೆ. ಮೊದಲು ಅವರ ಸ್ನೇಹಿತರು ‘ಏ ಇದು ಭಾರೀ ಮಜಾ ನೀಡುತ್ತದೆ, ಏನಾಗಲ್ಲ ಸ್ವಲ್ಪ
ತಗೊ’ ಎಂದು ಚಟ ಹತ್ತಿಸಿ ನಂತರ ಡ್ರಗ್ಸ್‌‌ಗೆ ದಾಸರಾಗುವಂತೆ ಸ್ನೇಹಿತರೇ ಪ್ರೇರೇಪಿಸುತ್ತಾರೆ.

ಇದು ಒಂದು ಮಾರ್ಕೆಟಿಂಗ್ ತರಹ ಡ್ರಗ್ಸ್‌ ಮಾರಾಟಗಾರರ ಒಂದು ಯೋಜನೆಯೂ ಆಗಿರಬಹುದು. ಹೆಚ್ಚು ಹೆಚ್ಚು ಡ್ರಗ್ಸ್ ಮಾರಾಟ ಮಾಡುವವರಿಗೆ ಹಣದ ಆಮಿಷ ಒಡ್ಡುವ ಡ್ರಗ್ ಮಾಫಿಯಾಗಳು ಯುವ ಜನಾಂಗಕ್ಕೆ ಮಾರಕವಾಗಿದ್ದಾರೆ. ಅಲ್ಲದೆ ಆರ್ಥಿಕವಾಗಿ ಶ್ರೀಮಂತರ ಮಕ್ಕಳೇ ಈ ಡ್ರಗ್ಸ್‌ ಚಟದ ದಾಸರಾಗುತ್ತಿರುವುದು ಸಾಮಾನ್ಯ.

ಡ್ರಗ್‌ಪೆಡ್ಲರ್‌ಗಳ ಮೂಲಕ ಡ್ರಗ್ಸ್‌ ನಿಮ್ಮ ಮನೆಯ ಮಕ್ಕಳ ತನಕವೂ ವ್ಯಾಪಿಸಿರಬಹುದು. ಈ ಡ್ರಗ್ಸ್‌ ಕೊಂಡುಕೊಳ್ಳುವಿಕೆ ಕೋಡ್ ವರ್ಡ್‌ಗಳ ಮೂಲಕ ನಡೆಯಬಹುದು. ಆದ್ದರಿಂದ ಮನೆಯಲ್ಲಿ ತಂದೆ – ತಾಯಿಗಳು ಮಕ್ಕಳ ಮೇಲೆ ತೀವ್ರ ನಿಗಾ ಇಡುವುದು ಅನಿವಾರ್ಯವಾಗಿದೆ. ಮನೆಯಲ್ಲಿ ಯುವ ಜನತೆಗೆ ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣ ಗಳನ್ನು ಬಳಸುವುದರಿಂದ, ಡ್ರಗ್ಸ್‌ ದೊರೆಯುತ್ತಿರುವುದು ಇನ್ನೂ ಸುಲಭವಾಗಿದೆ. ತಮ್ಮ ತಮ್ಮ ಮಕ್ಕಳ ಸ್ನೇಹಿತರ ಮೇಲೂ ಪಾಲಕರು ತೀವ್ರ ನಿಗಾ ಇಡಬೇಕಾಗಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ‘ಏ ಇದು ಕೇವಲ ಸಿಗರೇಟ್ ಕಣೊ’ ಎಂದು ಒಬ್ಬನ
ಸ್ನೇಹಿತ ಇನ್ನೊಬ್ಬನಿಗೆ ಮೋಸದಿಂದ ಸಿಗರೇಟ್‌ನಲ್ಲಿನ ತಂಬಾಕು ತೆಗೆದು, ಡ್ರಗ್ಸ್‌ ತುಂಬಿಸಿ ಕೊಟ್ಟು ಚಟ ಹತ್ತಿಸಲೂ ಬಹುದು. ಕೊನೆ ಕೊನೆಗೆ ಡ್ರಗ್ಸ್‌‌ಗೆ ಎಡಿಕ್‌ಟ್‌ ಆದವರು ತಮಗೆ ಡ್ರಗ್ಸ್‌ ಪಡೆದುಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ.

ಆರ್ಥಿಕವಾಗಿ ಸಬಲರಿರದಿದ್ದರೆ ತಮ್ಮ ಮನೆಯಲ್ಲಿ ಕಳ್ಳತನ ಮುಂತಾದ ಚಟುವಟಿಕೆಗಳಿಗೂ ಇಳಿಯುತ್ತಾರೆ. ಹೀಗೆ ಕೇವಲ ಸೆಲಬ್ರಿಟಿಗಳ ಪಾರ್ಟಿಗಳಿಗೆ ಸೀಮಿತವಾಗಿದ್ದ ಈ ಡ್ರಗ್ಸ್‌‌ ಪಾರ್ಟಿ ಸಮಾಜದ ಎಲ್ಲ ಕಡೆಗಳಲ್ಲೂ ವ್ಯಾಪಿಸದಂತೆ ತಡೆಗಟ್ಟುವುದು
ಅನಿವಾರ್ಯವಾಗಿದೆ. ಈ ಡ್ರಗ್ಸ್‌ ಪೆಡಂಭೂತ ಭಾರತ ದೇಶವನ್ನು ಹಾಳುಮಾಡುವ ಮೊದಲು, ಈ ದಂಧೆಯ ಸಂಪೂರ್ಣ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಲೂ ಬೇಕಾಗಿದೆ. ಅಲ್ಲದೆ ಡ್ರಗ್ಸ್‌ ಜಾಲ ಭಾರತದಾದ್ಯಂತ ವ್ಯಾಪಿಸದಂತೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕಾಗಿರುವುದೂ ಅನಿವಾರ್ಯವಾಗಿದೆ.

ಇಲ್ಲವೆಂದಾದಲ್ಲಿ ‘ಉಡ್ತಾ ಪಂಜಾಬ್’, ‘ಉಡ್ತಾ ಸ್ಯಾಂಡಲ್ ವುಡ್’ ನಂತರ ‘ಉಡ್ತಾ ಭಾರತ್’ ಎಂದಾಗಬಹುದು