Friday, 20th September 2024

ವೈದ್ಯಕೀಯ ಲೋಕಕ್ಕೆ ಮಸಿ ಬಳಿಯುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು

ಅವಲೋಕನ

ಉಷಾ ಜೆ.ಎಂ

ಪಿ.ವಿ. ನರಸಿಂಹರಾವ್‌ರವರು 1991ರಲ್ಲಿ ಪ್ರಧಾನಿಯಾದಾಗ ದೇಶ ಆರ್ಥಿಕ ದಿವಾಳಿಯ ಅಂಚಿನಲ್ಲಿತ್ತು. ಆಗ ಡಾ.
ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಿ, ಮಹತ್ವದ ಆರ್ಥಿಕ ಸುಧಾರಣೆಗಳನ್ನು ಘೋಷಿಸಿ
ದರು. ಲೈಸೆನ್ಸ್‌ ರಾಜ್ ತೆಗೆದು ಹಾಕಿ, ಸುಂಕ ಮತ್ತು ತೆರಿಗೆಯನ್ನು ಕಡಿತಗೊಳಿಸಿದರು. ವಿದೇಶಿ ಹೂಡಿಕೆಗೆ ಮಾರುಕಟ್ಟೆಯನ್ನು ಮುಕ್ತಗೊಳಿಸಿದರು.

ಅನೇಕ ನಿರ್ಬಂಧಗಳನ್ನು ತೆಗೆದು ಹಾಕಿ, ರಾಜಕೀಯ ಹಸ್ತಕ್ಷೇಪ ಕಡಿಮೆ ಮಾಡುವುದರ ಮೂಲಕ ಅನೇಕ ಉದ್ದಿಮೆಗಳನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದರು. ಈ ಸುಧಾರಣೆಗಳಿಂದ ವಿದೇಶಿ ಕಂಪನಿಗಳು ದೇಶಕ್ಕೆೆ ಕಾಲಿಟ್ಟವು. ಉದಾರೀಕರಣ ವಿಪ್ರೋ ಮತ್ತು ಇನ್ಫೋಸಿಸ್‌ನಂಥ ಅದೆಷ್ಟೋ ಭಾರತೀಯ ಕಂಪನಿಗಳ ಪ್ರಾರಂಭಕ್ಕೆ ನಾಂದಿ ಹಾಡಿತು. ಮೀಸಲಾತಿ ಇರುವವರ ಇಲ್ಲವೇ ರಾಜಕೀಯ ಪ್ರಭಾವ ಉಳ್ಳವರ ಪಾಲಾಗುತಿದ್ದ ಸರಕಾರಿ ಉದ್ಯೋಗವನ್ನು ಕಾಯುತ್ತಾ ಕುಳಿತುಕೊಳ್ಳುವುದನ್ನು ಬಿಟ್ಟು, ತಮ್ಮ ಪ್ರತಿಭೆಗೆ ಮತ್ತು ಆಸಕ್ತಿಗೆ ತಕ್ಕ ಖಾಸಗಿ ಕೆಲಸವನ್ನು ಆಯ್ಕೆ ಮಾಡುವ ಅವಕಾಶ ದೊರೆಯಿತು.

ವಿದೇಶ ಪ್ರಯಾಣ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಕಾಲವೊಂದಿತ್ತು. ಈ ಬೆಳವಣಿಗೆಯಿಂದಾಗಿ ಕೆಳ ಮತ್ತು ಮಧ್ಯಮ ವರ್ಗದ ಪದವೀಧರರು ಸಹ ದೇಶಕ್ಕೆ ಹೋಗಿ ಉದ್ಯೋಗ ಮಾಡುವ ಅವಕಾಶ ದೊರೆಯಿತು. ಕೇವಲ ಅಂಬಾಸೆಡರ್ ಮತ್ತು ಫಿಯೆಟ್ ಕಾರುಗಳನ್ನು ನೋಡಿದ್ದ ರಸ್ತೆಗಳು, ಐಶಾರಾಮಿ ಕಾರುಗಳನ್ನು ನೋಡುವಂತಾಯಿತು. ದೂರವಾಣಿ ಸಂಪರ್ಕ ಬೇಕೆಂದರೆ ವರ್ಷಗಳ ಕಾಲ ಕಾದು ಕುಳಿತುಕೊಳ್ಳಬೇಕಾಗಿದ್ದ ಕಾಲ ಹೋಗಿ ಮೊಬೈಲ್ ಮತ್ತು ಇಂಟರ್ನೆಟ್ ತಂತ್ರಜ್ಞಾನದಿಂದ ದೇಶದ ಮೂಲೆಮೂಲೆಗೂ ಮೊಬೈಲ್ ಸಂಪರ್ಕ ಸಿಗುವಂತಾಯಿತು.

ಅಲ್ಪಸಂಖ್ಯಾತ ಸರಕಾರದ ಪ್ರಧಾನಿಯಾಗಿದ್ದ ನರಸಿಂಹ ರಾವ್ ಅವರಿಗೆ ಆರ್ಥಿಕ ಸುಧಾರಣೆ ಮಾಡುವುದು ಅಂತಹ ಸುಲಭದ ಮಾತಾಗಿರಲಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದ ಒಳಿತನ್ನು ಬಯಸಿ, ತಮ್ಮ ದೂರದೃಷ್ಟಿಯಿಂದ ದೇಶ  ದಿವಾಳಿಯಾಗುವು ದನ್ನು ತಪ್ಪಿಸಿದಂಥ ಮಹನೀಯನನ್ನು ಒಂದು ಕುಟುಂಬದ ಸ್ವಾರ್ಥಕ್ಕಾಗಿ ಅವರ ಪಕ್ಷ ಮರೆತರೂ ದೇಶದ ಜನತೆಗೆ ಮಾತ್ರ ಇವರು ಎಂದಿಗೂ ಪ್ರಾಥಃ ಸ್ಮರಣೀಯರೆ.

ನರಸಿಂಹರಾವ್‌ರವರು ಉದಾರೀಕರಣದ ಬುನಾದಿ ಹಾಕಿದರೇನೋ ನಿಜ. ಆದರೆ ಅವರ ನಂತರದ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಅಗತ್ಯ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಖಾಸಗಿಯವರ ಕೈಸೇರಿ ಬಡವರು ಮತ್ತು ಮಧ್ಯಮ ವರ್ಗದವರು ನರಳಾಡುವಂತಾಗಿದೆ. ಸರಕಾರಿ ಶಾಲೆಗಳ ಕಡೆಗಿನ ಜನ ಪ್ರತಿನಿಧಿಗಳ ತಾತ್ಸಾರ ಮನೋಭಾವದಿಂದ ಸರಿಯಾದ ಅಭಿವೃದ್ಧಿ ಇಲ್ಲದೆ ಶಾಲೆಗಳು ಮುಚ್ಚುತ್ತಿವೆ. ಇದರಿಂದ ಖಾಸಗಿ ಶಾಲೆಗಳಿಗೆ ಹೋಗಲಾಗದ ಅದೆಷ್ಟೋ ಬಡ ಮಕ್ಕಳು
ಅನಕ್ಷರಸ್ಥರಾಗಿಯೇ ಉಳಿಯುವಂತಾಗಿದೆ. ಸಾರ್ವಜನಿಕ ಶಿಕ್ಷಣವನ್ನು ಸರಿಯಾಗಿ ಅಭಿವೃದ್ಧಿ ಪಡಿಸದೆ ಪರೋಕ್ಷವಾಗಿ
ಖಾಸಗಿ ಶಾಲೆಗಳನ್ನು ಸರಕಾರವೇ ಬೆಳೆಸುತ್ತಿದೆ.

ಒಂದು ಕಾಲದಲ್ಲಿ ರೋಗಿಗಳ ಸೇವೆ ಮಾಡಬೇಕು ಎನ್ನುವ ಮನಸ್ಥಿತಿ ಉಳ್ಳವರು ಅತೀ ಕಡಿಮೆ ಶುಲ್ಕದಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಲು ಸಾಧ್ಯವಿತ್ತು. ಬಹುತೇಕ ಪ್ರಖ್ಯಾತ ವೈದ್ಯರು ಬಡತನದ ಹಿನ್ನೆಲೆಯಿಂದಲೇ ಬಂದಿರುವುದು ಗಮನಿಸಬೇಕಾದ ಅಂಶವಾಗಿದೆ. ಯಾವಾಗ ಸರಕಾರ ಸರಿಯಾದ ಸೂತ್ರಗಳನ್ನು ಮಾಡದೆ ಖಾಸಗಿ ಕಾಲೇಜುಗಳಿಗೆ ಅನುಮತಿ ಕೊಟ್ಟಿತೋ ಅಲ್ಲಿಂದ
ವೈದ್ಯಕೀಯ ವೃತಿಯಲ್ಲಿರಬೇಕಾದ ಮೌಲ್ಯಗಳು ಕುಸಿಯುತ್ತಾ ಬಂದವು. ವೈದ್ಯಕೀಯ ಸೀಟುಗಳು ಕೋಟ್ಯಂತರ ರುಪಾಯಿಗಳಲ್ಲಿ ಮಾರಾಟವಾಗಲು ಶುರುವಾದವು. ವೈದ್ಯರಾಗಲು ಹೃದಯವಂತಿಕೆಯಾಗಲಿ, ಬುದ್ಧಿವಂತಿಕೆಯಾಗಲಿ ಇರದಿದ್ದರೂ ಶ್ರೀಮಂತಿಕೆ ಇದ್ದರೆ ಸಾಕು ಎನ್ನುವ ಕಾಲ ಬಂದಿರುವುದು ವಿಪರ್ಯಾಸ.

ಹೃದಯವಂತಿಕೆ ಇರುವವರನ್ನು ಆಕರ್ಷಿಸಬೇಕಾಗಿದ್ದ ವೈದ್ಯಕೀಯ ಶಿಕ್ಷಣ ಕೇವಲ ವ್ಯವಹಾರ ಕೌಶಲ್ಯತೆ ಇರುವವರನ್ನು ಆಕರ್ಷಿಸುತ್ತಿದೆ. ಇದಕ್ಕೆೆ ಸಾಕ್ಷಿ ಎಂಬಂತೆ ಇತ್ತೀಚಿಗೆ ನಮ್ಮ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ಸೇರಿದ ಮೆಡಿಕಲ್ ಕಾಲೇಜ್‌ನ ಸೀಟು ಹಂಚಿಕೆಯಲ್ಲಿ ಆದ ಅವ್ಯವಹಾರ ಮತ್ತು ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದ ಅನ್ಯಾಯ. ಎಷ್ಟೋ ಕಾಲೇಜುಗಳಲ್ಲಿ ಫ್ರೀ ಸೀಟ್‌ಗೆ ಸೇರಿದ ಪ್ರತಿಭಾವಂತರನ್ನು ಕಾಲೇಜಿನ ಆಡಳಿತ ಮಂಡಳಿಯವರು ಕಿರುಕುಳ ನೀಡಿ, ಓದನ್ನು
ಅರ್ಧಕ್ಕೆ ನಿಲ್ಲಿಸಿ ಹೋಗುವಂತೆ ಮಾಡಿದ ಘಟನೆಗಳು ನಡೆದಿವೆ.

ಇನ್ನು ಇಂತಹ ಕಾಲೇಜುಗಳಲ್ಲಿ ಓದಿದವರು ತಮ್ಮ ಓದಿಗೆ ಖರ್ಚು ಮಾಡಿದ ದುಡ್ಡನ್ನು ದುಡಿಯಲು ಸೇರುವುದೇ
ಕಾರ್ಪೋರೇಟ್ ಆಸ್ಪತ್ರೆಗಳನ್ನು. ಕಾರ್ಪೋರೇಟ್ ಆಸ್ಪತ್ರೆಗಳು ನೀಡಿದ ಗುರಿಯನ್ನು ಮುಟ್ಟಲು ರೋಗಿಗಳಿಗೆ ಅನಾವಶ್ಯಕವಾದ ತಪಾಸಣೆ, ಚಿಕಿತ್ಸೆ ಮತ್ತು ಔಷಧಗಳನ್ನು ವೈದ್ಯರು ಸೂಚಿಸುತ್ತಿದ್ದಾರೆ. ಸತ್ತು ಹೋದವರನ್ನು ವೆಂಟಿಲೇಟರ್‌ನಲ್ಲಿಟ್ಟು
ಹಣ ದೋಚಿದ ಘಟನೆಗಳು ನಡೆದಿವೆ.

ಕಾರ್ಪೋರೇಟ್ ಆಸ್ಪತ್ರೆಗಳ, ಫಾರ್ಮಾ ಸ್ಯುಟಿಕಲ್ ಕಂಪನಿಗಳ ಮತ್ತು ವೈದ್ಯರ ನಡುವಿನ ಜಾಲದಿಂದ ಮಧ್ಯಮ
ವರ್ಗದವರು ಬಡತನದ ರೇಖೆಗಿಂತ ಕೆಳಗಿಳಿಯುತ್ತಿದ್ದಾರೆ. ದುಬಾರಿ ವೆಚ್ಚದಲ್ಲಿ ವೈದ್ಯರಾದ ಇಂಥವರಲ್ಲಿ ಮಾನವೀಯತೆಯನ್ನು ನಿರೀಕ್ಷಿಸುವುದು ಸಹ ಸ್ವಲ್ಪ ದುಬಾರಿಯೇ ಸರಿ. ಇವರ ಧನದಾಹ ಕರೋನಾದಂಥ ಸಮಯದಲ್ಲೂ ಮುಂದುವರಿಯುತ್ತಿರುವುದು ವಿಪರ್ಯಾಸ. ಸರಕಾರ ನಿಗದಿಪಡಿಸಿದ ದರಕ್ಕಿಂತ ಅಧಿಕ ಬಿಲ್ ಮಾಡುವುದು, ಕರೋನಾ ಇದ್ದವ ರಿಗೂ ಇರದವರಿಗೂ ಚಿಕಿತ್ಸೆ ನಿರಾಕರಿಸುವುದು, ತಪ್ಪಾದ ವರದಿ ಕೊಡುವುದು ಅವ್ಯಾಹತವಾಗಿ ಮುಂದುವರಿಯುತ್ತಿದೆ. ಇವರಿಗೆ ಕಾನೂನಿನ ಮೇಲೆ ಕವಡೆ ಕಾಸಿನ ಬೆಲೆ ಇಲ್ಲ. ಇವರು ಬೆಲೆ ಕೊಡುವುದೇನಿದ್ದರೂ ಕುರುಡು ಕಾಂಚಾಣಕ್ಕೆ ಮಾತ್ರ. ಇವರನ್ನು ಪ್ರಶ್ನಿಸಿದವರಿಗೆ ಇವರು ತೋರಿಸುವುದು ವೈದ್ಯಕೀಯ ಸಿಬ್ಬಂದಿಯ ವೇತನದ ಕಡೆಗೆ. ಆದರೆ ಎಷ್ಟೋ ವೈದ್ಯಕೀಯ ಸಿಬ್ಬಂದಿಗೆ
ಸರಿಯಾದ ಸುರಕ್ಷತೆಯ ಕಿಟ್‌ನ್ನು ಸಹ ನೀಡುತ್ತಿಲ್ಲ ಎಂಬುದು ವಾಸ್ತವ. ಇಷ್ಟೆೆಲ್ಲಾ ನಡೆದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕನಂತೆ ನೋಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆಸ್ಪತ್ರೆೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಹೇಳಿಕೆ ಹೇಳಿಕೆಯಾಗಿಯೇ ಉಳಿದಿದೆ.

ತಂತ್ರಜ್ಞಾನದಲ್ಲಿ ನಮ್ಮ ದೇಶ ಎಷ್ಟೇ ಮುಂದುವರಿದಿದ್ದರೂ, ನಮ್ಮದು ಕೃಷಿ ಪ್ರಧಾನ ದೇಶ ಎಂಬುದು ಅಷ್ಟೇ ಸತ್ಯ. ದೇಶದ ಜನಸಂಖ್ಯೆೆಯಲ್ಲಿ ಕೆಳ ಮತ್ತು ಮಧ್ಯಮ ವರ್ಗದವರೇ ಹೆಚ್ಚು. ಈ ವರ್ಗಗಳಿಗೆ ವೈದ್ಯಕೀಯ ಸೇವೆ ಕೊಡುವುದು ಸರಕಾರದ ಕರ್ತವ್ಯ. ನಾಯಿ ಕೊಡೆಗಳಂತೆ ಖಾಸಗೀ ಆಸ್ಪತ್ರೆಗಳು ತಲೆ ಎತ್ತಿದ್ದರೂ ಅಧಿಕ ಆಸ್ಪತ್ರೆಗಳು ಸರಕಾರದ ಅಧೀನದಲ್ಲಿವೆ ಎಂಬುದು ವಾಸ್ತವ. ಅತ್ತ ಸಾರ್ವಜನಿಕ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸದೇ ಇತ್ತ ನಿಯಮ ಮೀರಿದ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಕ್ರಮ
ಕೈಗೊಳ್ಳದೇ ಸರಕಾರ ತನ್ನ ಬೇಜವಾಬ್ದಾಾರಿತನ ಪ್ರದರ್ಶಿಸುತ್ತಿದೆ.

ಅದೆಷ್ಟೋ ಸರಕಾರಿ ವೈದ್ಯರು ಅಲ್ಲಿನ ರಾಜಕೀಯಕ್ಕೆ ಒಗ್ಗಿಕೊಳ್ಳದೇ, ಹಿರಿಯ ಅಧಿಕಾರಿಗಳ ಕಿರುಕುಳ ತಾಳದೆ ಖಾಸಗಿ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ. ತಮಗೆ ಆರೋಗ್ಯ ಕೈಕೊಟ್ಟಾಗ ಮಾತ್ರ ಜನಪ್ರಧಿನಿಧಿಗಳು ಸರಕಾರಿ ಆಸ್ಪತ್ರೆಗೆ ದಾಖಲಾಗದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ನಾಚಿಕೆಗೇಡು. ಅಲೋಪತಿಯಲ್ಲಿ ಚಿಕಿತ್ಸೆ ಇಲ್ಲದ ಎಷ್ಟೋ ರೋಗಗಳಿಗೆ ನಮ್ಮ ನೆಲದ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಚಿಕಿತ್ಸೆ ಇದೆ. ಇದನ್ನರಿತ ಎಷ್ಟೋ ಜನ ಈಗ ಆಯುರ್ವೇದದ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ವಿಮಾ ಕಂಪನಿಗಳು ಆಯುರ್ವೇದ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡಲು ಮೀನ ಮೇಷ ಎಣಿಸುತ್ತಿವೆ.

ಆಯುರ್ವೇದವನ್ನು ಅಭಿವೃದ್ಧಿಪಡಿಸಲು ಸರಕಾರಗಳು ಕೈಗೊಂಡ ಕ್ರಮಗಳು ಕೂಡ ಅಷ್ಟಕಷ್ಟೇ. ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಸಹ ಒಳ್ಳೆಯವರೂ ಕೆಟ್ಟವರೂ ಇದ್ದಾರೆ. ಅದೆಷ್ಟೋ ವೈದ್ಯರು ಹಿಂದುಳಿದ ಪ್ರದೇಶಗಳಿಗೆ ಹೋಗಿ ಶುಲ್ಕ ತೆಗೆದುಕೊಳ್ಳದೆ ರೋಗಿಗಳಿಗೆ ಸರ್ಜರಿ ಮಾಡುತ್ತಿದ್ದಾರೆ. ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಆಸ್ಪತ್ರೆಗಳು ಜನರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕೊಡುತ್ತಿವೆ. ಸರಕಾರ ಕೇಳುವ ಮುಂಚಿತವಾಗಿ ಕೆಲವು ಖಾಸಗಿ ಆಸ್ಪತ್ರೆಗಳು ತಾವೇ ಮುಂದೆ ಬಂದು ಕರೋನಾ ಹೋರಾಟದಲ್ಲಿ ಕೈಜೋಡಿಸಿವೆ. ವೈದ್ಯೋ ನಾರಾಯಣೋ ಹರಿಃ ಎಂಬುದಕ್ಕೆ ಅನ್ವರ್ಥರಾಗಿ  ಬದುಕುತ್ತಿರುವ ಅನೇಕ ವೈದ್ಯರು ನಮ್ಮ ನಡುವೆ ಇದ್ದಾರೆ.

ಆದರೆ ಕಾರ್ಪೋರೇಟ್ ಆಸ್ಪತ್ರೆಗಳ ಜಾಲ ಇಡೀ ವೈದ್ಯಕೀಯ ಸಮುದಾಯಕ್ಕೆ ಮಸಿ ಬಳಿಯುತ್ತಿರುವುದು ಮಾತ್ರ ವಿಷಾದನೀಯ.