Saturday, 23rd November 2024

ಕಾರ್ಗಿಲ್ ಹುತಾತ್ಮರಿಗೆ ನಮಿಸೋಣ…

ತನ್ನಿಮಿತ್ತ

ಡಾ.ಮುರಲೀ ಮೋಹನ್ ಚೂಂತಾರು

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರ ಗೌರವಾರ್ಥ ಪ್ರತಿವರ್ಷ ಜುಲೈ ೨೬ರಂದು ‘ಕಾರ್ಗಿಲ್ ವಿಜಯ ದಿವಸ’ವನ್ನು ದೇಶಾದ್ಯಂತ ಆಚರಿಸ ಲಾಗುತ್ತದೆ. ಭಾರತ-ಪಾಕಿಸ್ತಾನದ ನಡುವೆ ೧೯೯೯ರ ಮೇ ೩ರಂದು ಶುರುವಾಗಿ ಜುಲೈ ೨೬ರಂದು ಭಾರತದ ವಿಜಯದೊಂದಿಗೆ ಅಧಿಕೃತವಾಗಿ ಮುಕ್ತಾಯ ಗೊಂಡ ಈ ಕಾರ್ಗಿಲ್ ಯುದ್ಧದಲ್ಲಿ ಭಾರತದ ೧೬೨೩ ಯೋಧರು ಗಾಯಗೊಂಡು, ೫೨೭ ಯೋಧರು ಹುತಾತ್ಮರಾದರು. ಈ ಯುದ್ಧ ಕಾರ್ಯಾಚರಣೆಗೆ ‘ಆಪರೇಷನ್ ವಿಜಯ’ ಎಂದು ಹೆಸರಿಸಲಾಗಿತ್ತು.

ಭಾರತದ ಭೂ, ವಾಯು ಮತ್ತು ನೌಕಾಸೇನೆಗಳ ನೆರವಿನಿಂದ ಪಾಪಿ ಪಾಕಿಸ್ತಾನದ ಸೇನೆಯನ್ನು ಹೊಸಕಿ ಹೊರದಬ್ಬಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮಗದೊಮ್ಮೆ ಭಾರತದ ತೆಕ್ಕೆಗೆ ಸೇರಿಸಿದ ಅವಿಸ್ಮರಣೀಯ ಯುದ್ಧವಿದು. ೧೯೭೧ರ ಭಾರತ-ಪಾಕ್ ಯುದ್ಧದ ನಂತರ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಸತತ ಸೋಲಿನಿಂದ ಹತಾಶಗೊಂಡಿದ್ದ ಪಾಕಿಸ್ತಾನ ಕಾಲುಕೆರೆದು ಜಗಳವಾಡಲು ತುದಿಗಾಲಲ್ಲಿ ನಿಂತಿದ್ದು, ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇತ್ತು. ೧೯೮೦ರ ಕಾಲಘಟ್ಟದಲ್ಲಿ ಗಡಿ ನಿಯಂತ್ರಣ ರೇಖೆಯ ಗುಂಟ ಸ್ಥಾಪಿಸ ಲಾದ ಸೇನಾ ಹೊರಠಾಣೆಗಳ ಕಾರಣದಿಂದ ಭಾರತ-ಪಾಕ್ ನಡುವೆ ಹಲವಾರು ಬಾರಿ ಮಿಲಿಟರಿ ಚಕಮಕಿ ಗಳು ನಡೆಯುತ್ತಲೇ ಇದ್ದವು.

೧೯೯೦ರ ದಶಕದ ವೇಳೆಗೆ ಪಾಕ್ -ಪ್ರಚೋದಿತ ಕಾಶ್ಮೀರದ ಪ್ರತ್ಯೇಕತಾವಾದಿ ಚಟುವಟಿಕೆಗಳು ನಿರಂತರ ಹೆಚ್ಚಾಗುತ್ತ, ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ- ಘರ್ಷಣೆ ಉಲ್ಬಣವಾಗುತ್ತಲೇ ಇದ್ದವು. ಆದರೆ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ನಿರಂತರ ಯತ್ನಿಸುತ್ತಲೇ ಇದ್ದ ಭಾರತದ ಆಗಿನ ಪ್ರಧಾನಿ ವಾಜಪೇಯಿಯವರು, ಭಾರತದಿಂದ ಲಾಹೋರ್‌ಗೆ ಬಸ್ ಸಂಚಾರವನ್ನು ಆರಂಭಿಸಿದ್ದರು, ಸ್ವತಃ ಲಾಹೋರಿಗೆ ತೆರಳಿ ಸ್ನೇಹಹಸ್ತ ಚಾಚಿದ್ದರು. ‘ಯುದ್ಧವಾಗಲು ಬಿಡುವುದಿಲ್ಲ’ ಎಂದು ವಚನವಿತ್ತಿದ್ದರು.

ಆದರೆ ಪಾಕಿಸ್ತಾನ ಹಳೇ ಚಾಳಿಯನ್ನು ಮುಂದುವರಿಸಿತ್ತು. ಪಾಕ್ ಸೇನೆಯ ಆಗಿನ ದಂಡನಾಯಕ ಪರ್ವೇಜ್ ಮುಷರಫ್ ಒಳಗೊಳಗೇ ಕುದಿಯುತ್ತಿದ್ದರು. ತಾರಕಕ್ಕೆ ಮುಟ್ಟಿದ್ದ ಉದ್ವಿಗ್ನತೆಯನ್ನು ನಿಯಂತ್ರಿಸುವ ಒಪ್ಪಂದವೊಂದಕ್ಕೆ ಎರಡೂ ದೇಶಗಳು ೧೯೯೯ರ -ಬ್ರವರಿಯಲ್ಲಿ ಸಹಿಹಾಕಿದವು. ಆದರೆ ಮೇಲ್ನೋಟಕ್ಕೆ ಸ್ನೇಹಿತನಂತೆ ನಟಿಸಿದ ಪಾಕ್ ನಂಬಿಕೆ ದ್ರೋಹಕ್ಕೆ ಮುಂದಾಗಿ, ‘ಆಪರೇಷನ್ ಬದ್ರ್’ ಹೆಸರಲ್ಲಿ ತನ್ನ ಸೇನಾಪಡೆಗಳನ್ನು ನುಸುಳುಕೋರರ ರೂಪದಲ್ಲಿ ಭಾರತದ
ಗಡಿನಿಯಂತ್ರಣಾ ರೇಖೆಯ ಭಾಗದಲ್ಲಿ ಒಳತೂರಿಸಿತು. ಕಾರ್ಗಿಲ್ ಪ್ರದೇಶವನ್ನು ತನ್ನ ಹತೋಟಿಗೆ ಪಡೆದು, ಅದರಿಂದ ಕಾಶ್ಮೀರವನ್ನು ಬೇರ್ಪಡಿಸುವ ಹುನ್ನಾರ ಈ ನುಸುಳುವಿಕೆಯ ಹಿಂದಿತ್ತು. ಆದರೆ ಭಾರತದ ಸೈನಿಕರಿಗೆ ಆರಂಭದಲ್ಲಿ ಇದ್ಯಾವುದರ ಮಾಹಿತಿಯೇ ಇರಲಿಲ್ಲ; ಇವರೆಲ್ಲ ಜಿಹಾದಿ ನುಸುಳುಕೋರರು ಎಂದೇ ಅವರು ಭಾವಿಸಿದ್ದರು.

ತರುವಾಯ ಇದು ಪಾಕ್ ಸೇನೆಯ ವ್ಯವಸ್ಥಿತ ಪಿತೂರಿ ಎಂದು ಗೊತ್ತಾಗಿ ಭಾರತ ಸರಕಾರ ೨ ಲಕ್ಷ ಸೈನಿಕರನ್ನು ಸಜ್ಜುಗೊಳಿಸಿ ‘ಆಪರೇಷನ್ ವಿಜಯ’
ಕಾರ್ಯಾಚರಣೆಯ ಮುಖಾಂತರ ಪ್ರತಿಕ್ರಿಯಿಸಿತು. ಮುಂದೆ ನಡೆದಿದ್ದು ಈಗ ಇತಿಹಾಸ. ಹಿಮಾಲಯ ಪರ್ವತಶ್ರೇಣಿಯಿಂದ ಆವೃತವಾಗಿರುವ ಕಾರ್ಗಿಲ್, ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ೭೦೫ ಕಿ.ಮೀ. ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೧ ಕಾರ್ಗಿಲ್
ಮುಖಾಂತರ ಹಾದುಹೋಗುತ್ತದೆ. ಅಲ್ಲದೆ, ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿಕೊಂಡಿರುವ ಸಿಯಾಚಿನ್‌ಗೆ ಕಾರ್ಗಿಲ್ ಮುಖಾಂತರ ಸಂಪರ್ಕ ಕಲ್ಪಿಸುತ್ತದೆ. ತನ್ನ ಈ ಹುನ್ನಾರದ ನೆರವಿನಿಂದ ಕಾಶ್ಮೀರ ಮತ್ತು ಕಾರ್ಗಿಲ್ ನಡುವಿನ ಸಂಪರ್ಕ ಕಡಿದುಹೋದಲ್ಲಿ, ಸಿಯಾಚಿನ್ ಪ್ರದೇಶದಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗುತ್ತದೆ.

ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿವಾದಕ್ಕೆ ಹೆಚ್ಚಿನ ಒತ್ತಡ ಹಾಕಿ, ಕ್ಷಿಪ್ರವಾಗಿ ಇತ್ಯರ್ಥವಾಗುವಂತೆ ಮಾಡಬಹುದು ಎಂದು ಪಾಕ್ ಸೇನೆ
ಬಲವಾಗಿ ನಂಬಿತ್ತು. ಇಂಥ ದುರಾಲೋಚನೆಯೊಂದಿಗೇ ಪಾಕ್ ಸೇನೆ ಪೂರ್ವಸಿದ್ಧತೆಯೊಂದಿಗೆ ನುಸುಳುಕೋರರ ವೇಷದಲ್ಲಿ ಭಾರತದೊಳಗೆ ನುಗ್ಗಿ ಕಾರ್ಗಿಲ್ ಕದನಕ್ಕೆ ನಾಂದಿಹಾಡಿತು. ಆದರೆ ಭಾರತದ ವೀರಯೋಧರ ಮುಂದೆ ಪಾಕ್ ಸೈನಿಕರ ಆಟ ನಡೆಯಲಿಲ್ಲ.

ತಾನೇ ದೊಣ್ಣೆ ಕೊಟ್ಟು ಪೆಟ್ಟು ತಿಂದು, ಬಾಲಸುಟ್ಟ ಬೆಕ್ಕಿನಂತೆ ಸೋತು ಸುಣ್ಣವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡು ಇದ್ದ ಅಲ್ಪಸ್ವಲ್ಪ ಮರ್ಯಾದೆಯನ್ನೂ ಪಾಕಿಸ್ತಾನ ಹರಾಜು ಹಾಕಿಕೊಂಡಿತು ಎಂದರೆ ಅತಿಶಯೋಕ್ತಿಯಲ್ಲ. ಕಾರ್ಗಿಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ತಾಪಮಾನವು ಮೈನಸ್ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವುದರಿಂದ ಇಲ್ಲಿ ಗಡಿ ಕಾಯುವುದು ಸವಾಲಿನ ಕೆಲಸ. ಈ ಕಾರಣದಿಂದಲೇ ಉಭಯ ದೇಶಗಳ ಸೈನಿಕರು ಚಳಿಗಾಲದಲ್ಲಿ ಸ್ಥಳಾಂತರ ಗೊಳ್ಳುವುದು ವಾಡಿಕೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಮೋಸದಿಂದ ಒಳನುಗ್ಗಿ ಯುದ್ಧಕ್ಕೆ ಕಾರಣವಾಗಿದ್ದು ಪಾಕಿಸ್ತಾನದ ದುರ್ಬುದ್ಧಿಗೆ ಹಿಡಿದ ಕೈಗನ್ನಡಿ. ಪಾಕಿಸ್ತಾನದ ಈ ಮೋಸದಾಟ ತಿಳಿಯದ ಭಾರತದ ಸೈನಿಕರು ಯಾವುದೇ ಸಂದೇಹ ಪಡದೆ ಕರ್ತವ್ಯದಲ್ಲಿ ನಿರತರಾಗಿದ್ದರು.

ಕೆಲವು ಕುರಿಗಾಹಿಗಳು ನಮ್ಮ ಯೋಧರಿಗೆ ಅಸಲಿಯತ್ತನ್ನು ತಿಳಿಸಿದ ನಂತರವಷ್ಟೇ ಅವರು ಜಾಗೃತರಾಗಿದ್ದು. ಈ ನುಸುಳುವಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು ಹೋದ ಭಾರತೀಯ ಯೋಧರನ್ನು ಪಾಕಿಗಳು ಸೆರೆಹಿಡಿದು ಚಿತ್ರಹಿಂಸೆ ನೀಡಿ ಕೊಂದರು. ಈ ಘಟನೆಯಲ್ಲಿ ಭಾರತದ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತು ಇತರ ನಾಲ್ವರು ಹುತಾತ್ಮರಾದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ತಕ್ಷಣವೇ ಸೈನ್ಯವನ್ನು ಸಜ್ಜುಗೊಳಿಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ವನ್ನೇ ನೀಡಿತು.

ಅತ್ಯಾಧುನಿಕ ಫಿರಂಗಿ, ಮಿಗ್ ಶ್ರೇಣಿಯ ಯುದ್ಧ ವಿಮಾನಗಳನ್ನು ಒಳಗೊಂಡಿದ್ದ ಭಾರತೀಯ ಸೇನೆಯ ಎದುರು ಪಾಕ್ ಯೋಧರ ಆಟ ಹೆಚ್ಚು ದಿನ ನಡೆಯಲಿಲ್ಲ.
‘ಆಪರೇಷನ್ ಸ-ದ್ ಸಾಗರ್’ ಮತ್ತು ‘ಆಪರೇಷನ್ ತಲ್ವಾರ್’ ಮುಖಾಂತರ ಪಾಕ್ ಸೇನೆಯನ್ನು ಬಗ್ಗುಬಡಿಯಲಾಯಿತು. ಜುಲೈ ೨೪ರಂದೇ ಯುದ್ಧ ಕೊನೆಗೊಂಡು ಕಾರ್ಗಿಲ್ ಪ್ರದೇಶವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡರೂ ಪ್ರಧಾನಿ ವಾಜಪೇಯಿಯವರು ಅಽಕೃತವಾಗಿ ಜುಲೈ ೨೬ರಂದುಯುದ್ಧ ಮುಕ್ತಾಯವನ್ನು ಘೋಷಿಸಿದರು. ಈ ವರ್ಷ ಕಾರ್ಗಿಲ್ ವಿಜಯ್ ದಿವಸದ ೨೪ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ.

ಯುದ್ಧದ ಸಮಯ ಬಂದಾಗ ಸೈನಿಕರನ್ನು ಹೊಗಳಿ ಅಟ್ಟಕ್ಕೇರಿಸಿ, ಯುದ್ಧದ ತರುವಾಯ ಅವರನ್ನು ನಿರ್ಲಕ್ಷಿಸುವ ಪರಿಪಾಠ ಇಲ್ಲವಾಗ ಬೇಕು. ಭಾರತದ ಅಸ್ಮಿತೆ ಮತ್ತು ಅಖಂಡತೆ ನಿಂತಿರುವುದು ನಮ್ಮ ಸೇನಾಬಲ, ಭಾರತೀಯರ ಸ್ವಾಭಿಮಾನ ಮತ್ತು ದೇಶಭಕ್ತಿಯ ಅಡಿಗಲ್ಲಿನ ಮೇಲೆ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಈ ಹಿನ್ನೆಲೆಯಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಎಲ್ಲ ಯೋಧರಿಗೂ ನಮಿಸುತ್ತಾ, ‘ನಮ್ಮ ದೇಶಕ್ಕೆ ನಮ್ಮಿಂದಾದ ಸೇವೆ ಸಲ್ಲಿಸುತ್ತೇವೆ’ ಎಂದು ಸಂಕಲ್ಪಿಸೋಣ. ಅದುವೇ ನಾವು ಈ ಹುತಾತ್ಮರಿಗೆ ಮತ್ತು ದೇಶಕ್ಕೆ ನೀಡುವ ಬಹುದೊಡ್ಡ ಗೌರವ.