ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನಮ್ಮ ತಂದೆಗೆ ನಾವು ನಾಲ್ಕು ಮಕ್ಕಳು. ಮೂರು ಗಂಡು ಒಂದು ಹೆಣ್ಣು. ಮೂರು ಗಂಡಿನ ಮೇಲೆ ಒಂದು ಹೆಣ್ಣು ಹುಟ್ಟಬಾರ ದಂತೆ, ಕಷ್ಟದ ಜೀವನವಂತೆ, ಹಡೆದ ತಂದೆಗೋ, ಹುಟ್ಟಿದ ಕೊನೆಯ ಹೆಣ್ಣಿಗೋ ಇನ್ನ ಸ್ಪಷ್ಟವಾಗಿಲ್ಲ.
ಮೂರು ಗಂಡು ಮಕ್ಕಳಲ್ಲಿ ಎರಡನೆಯವನೇ ನಾನು, ಬಣ್ಣದಲ್ಲಿ ಕಪ್ಪು, ವಿದ್ಯೆಯಲ್ಲಿ 35 ಮಾರ್ಕ್ಸಿನವನು, ಆಟಗಳಲ್ಲಿ ಅಷ್ಟ ಕಷ್ಟೆೆ, ಸಂಗೀತ, ನಾಟಕ, ಸಿನಿಮಾಗಳಲ್ಲಿ ತೀವ್ರ ಆಸಕ್ತಿ ಭಾವನಾ ಜೀವಿ, ಮಿದುಕಲ ಸ್ವಭಾವದ ಅಳದೇಕಿ ಎಂದೇ ಪ್ರಸಿದ್ಧಿ ಪಡೆ ದವ.
ಬಾಲ್ಯ, ಯೌವ್ವನಗಳಲ್ಲಿ ರೋಗಿಷ್ಟ, ಪ್ರಾಣಾಂತಿಕ ಕಾಯಿಲೆ ಗಳಿರುತ್ತಿರಲಿಲ್ಲವಾದರೂ ಸದಾ ಅಜೀರ್ಣ, ಜ್ವರ, ತೆಳ್ಳಗಿನ, ಸಪೂರ, ಪಚ್ಚುಗಲ್ಲದ ನೀಳಕಾಯ, ಕೋಳಿ ಕಾಲಿನವ ಎಂದೇ ಅರವತ್ತರ ಅಂಚಿನ ಇಂದಿನವರೆಗೂ ಅನಿಸಿಕೊಳ್ಳುತ್ತಿರುವವ. ಬದುಕಿನ ಮೂವತ್ತು ವರ್ಷಗಳವರೆಗೆ ಪರಾವಲಂಬಿ, ಹಣಗಳಿಸುವುದೇ ಗೊತ್ತಿಲ್ಲವೆಂಬಂತೆ ಬದುಕಿದವ, ನಿಶ್ಚಯ ವಾದ ವರಮಾನ ಇಲ್ಲದಿದ್ದರೂ, ವಯಸ್ಸಿಗೆ ಅನುಗುಣವಾಗಿ ವರ ಎನಿಸಿಕೊಂಡು ಮದುವೆಯನ್ನು ಮಾಡಿಕೊಂಡವ, ತಂದೆ, ತಮ್ಮ, ಅಣ್ಣನ ದುಡಿಮೆ ಇದೆ, ಊಟಕ್ಕೇನೂ ಕೊರತೆಯಿಲ್ಲ ಎಂದು ಎರಡು ಮಕ್ಕಳ ತಂದೆಯೂ ಆದವ 1961ರಲ್ಲಿ ಹುಟ್ಟಿದವನು 1996ರ ಹೊತ್ತಿಗೆ ಅಂದರೆ ಹುಟ್ಟಿ ಮೂವತ್ತೈದು ವರ್ಷಗಳ ಮೇಲೆ, ಎಲ್ಲರಿಂದ ಥೂ, ಛೀ ಎಂದು ಬೈಸಿಕೊಳ್ಳುತ್ತಲೇ ಸಾಹಿತ್ಯ ಓದುತ್ತಿದ್ದು, ಅದೇ ಸಾಹಿತ್ಯದ ಆಶೀರ್ವಾದವೋ ಎಂಬಂತೆ ಹಾಸ್ಯ ಸಾಹಿತ್ಯದ ಅದರಲ್ಲು ಬೀಚಿಸಾಹಿತ್ಯದ ಹಾಸ್ಯದಿಂದಲೇ, ನನ್ನನ್ನು ನೋಡಿ ನಗಾಡುತ್ತಿದ್ದವರ ನಡುವೆಯೇ ಜನರನ್ನು ನಗಿಸುವ ಕಾಯಕ ಹಿಡಿದು, ನಗಾಡುವವರೇ ಗಂಭೀರವಾಗಿ ನನ್ನನ್ನೇ ದಿಟ್ಟಿಸಿ ನೋಡು ವಂತೆ ಓದುವ ಗೀಳಿನಿಂದಲೇ ದುಡಿಯಲು ಶುರುಮಾಡಿದವ ಈ ನಿಮ್ಮ ಗಂಗಾವತಿ ಪ್ರಾಣೇಶ.
ನನ್ನ ಬದುಕೇ ನನಗೆ, ಬೇರೆಯವರಿಗೆ ಭಾರವಾಗಿದ್ದ ದಿನಗಳಿಂದ ಹಿಡಿದು ಇಂದಿನವರೆಗಿನ ಜೀವನಾವಲೋಕನ ವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ. ಹೀಗೇ ಬದುಕಬೇಕು, ಹೀಗೇ ಬಾಳಬೇಕೆಂಬ ಇಂಥದೇ ಓದು ಓದಬೇಕು, ಇಂಥದೇ ಮನೆ ಹೆಣ್ಣು ತರಬೇಕು ಎಂಬ ಬ್ರಾಂಡೆಡ್ ವಂಶ ನಮ್ಮದಲ್ಲ, ನಮ್ಮ ಹಿರಿಯರಿಗೂ ಇಂಥ ಕನಸ್ಸೂ ಸಹ ಬಿದ್ದಿರಲಿಕ್ಕಿಲ್ಲ.
8-9-1961 ಈ ದಿನಾಂಕದಂದು ಎಲ್ಲಿ ಯಾವ ಎಮ್ಮೆ ಈದಿತ್ತೋ, ಎಲ್ಲಿಯಾವ ನಾಯಿ ಮರಿಹಾಕಿತ್ತೋ, ಎಲ್ಲಿ ಯಾವ ಕೋಳಿ ಮರಿ ತತ್ತಿಯಿಂದ ಹೊರಬಂದಿತ್ತೋ, ಎಲ್ಲಿ ಯಾವ ಕತ್ತೆ, ಹಂದಿ, ಕೋತಿ ಮರಿಗಳನ್ನು ಹಾಕಿತ್ತೋ ಹಾಗೆ, ಗಂಗಾವತಿ ಎಂಬ ಊರಲ್ಲಿ ತಾತ ಶ್ಯಾಮರಾಯನ ಮನೆ ಅಂದರೆ ನನ್ನ ತಾಯಿ ತವರು ಮನೆಯಲ್ಲಿ, ನಮ್ಮ ತಾಯಿ ನನ್ನನ್ನು ಹಡೆದಳು, ಭೂಮಿಗೆ ಬಿದ್ದೆ ಅಷ್ಟೆ. ಹುಟ್ಟಿದಾಗ ಚರ್ಮ ಕೆಂಪಗಿತ್ತಂತೆ, ಕೂಸು ಮುಂದೆ ಕಪ್ಪಾಗುತ್ತದೆ. ತಂದಿ ಹಂಗೆ ಕರ‌್ರಗಾಗ್ತದೆ ಎಂದು ಭವಿಷ್ಯ ನುಡಿದು ಕೆಂಪಗೆ, ಬೆಳ್ಳಗೆ ತೆಳ್ಳಗಿದ್ದ ನಮ್ಮ ತಾಯಿನ್ನ ಅಂಗಿಸಿದಾಕಿ ನಮ್ಮ ತಾಯಿಯ ಅಕ್ಕ ಮಡಿ ಹೆಂಗಸು ಅಂಬಕ್ಕ, ಆಕಿದೇ ಬಾಣಂತನದ ಕೆಲಸ ಎಲ್ಲ.
ಹುಟ್ಟಿದ ಸಮಯ ಮಧ್ಯರಾತ್ರಿ ದಾಟಿದ್ದ, ಬೆಳಗಾಗದ ಆದರೂ ಬೆಳಗಿನ ಜಾವವೇ ಎನಿಸಿಕೊಂಡ 2-35. ಮಿಥುನ ಲಗ್ನ- ಕರ್ಕ ರಾಶಿಯಲ್ಲಿ ಹುಟ್ಟಿದೆ. ಮಿಥುನ – ಕರ್ಕ ಲಗ್ನಗಳ ಸಂಧಿಕಾಲವಂತೆ ಅದು ಹೀಗಾಗಿ ನಾನು ಜೀವನದುದ್ದಕ್ಕೂ ನನ್ನ ಭವಿಷ್ಯ ಓದಿಕೊಳ್ಳುವಾಗ ಮಿಥುನ ಲಗ್ನ ಸಂಜಾತರ ವಿಶೇಷಣಗಳು, ಕರ್ಕರಾಶಿಯವರ ಗುಣ ಸ್ವಭಾವಗಳು ಹೀಗೆ ಎರಡೆರೆಡನ್ನು ಓದಿಕೊಳ್ಳುತ್ತೇನೆ. ಎರಡರಲ್ಲಿ ನನಗೆ ಒಳ್ಳೆಯದಾಗುವುದನ್ನೆ ಹುಡುಕಿ ಓದಿ ನಂಬುತ್ತಿರುತ್ತೇನೆ, ಸಮಾಧಾನ ಮಾಡಿಕೊಳ್ಳುತ್ತಿರು ತ್ತೇನೆ.
ನಾನು ಹುಟ್ಟಿದಾಗ ಬರೆಸಿದ ನನ್ನ ಜಾತಕವನ್ನು ಬರೆದವರು. ಶ್ರೀ ಹನುಮಂತ ಗೋವಿಂದ ಕಟ್ಟಿ ರಿಟಾಯರ್ಡ್ ಅಸಿಸ್ಟೆೆಂಟ್ ಡೆಪ್ಯೂಟಿ ಎಜುಕೇಶನಲ್ ಇನ್ಸಪೆಕ್ಟರ, ರಾಂಭಟ್ ಚಾಳ್ , ದೇಶ ಪಾಂಡೆ ನಗರ ಹುಬ್ಬಳ್ಳಿ. ಆ ಜಾತಕದ ಹಾಳೆಯನ್ನು ಇಂದಿಗೂ ಜೋಪಾನ ವಾಗಿರಿಸಿದ್ದೇನೆ. ವಸ್ತು, ವ್ಯಕ್ತಿ, ಘಟನೆಗಳನ್ನು ಕಾದಿರಿಸುವಲ್ಲಿ, ನೆನಪಿಟ್ಟುಕೊಳ್ಳುವಲ್ಲಿ ನಾನು ನಮ್ಮ ತಾತ ಶಾಮ ರಾಯನನ್ನೆ ಹೋತಿದ್ದೆನೆಂದು ನಮ್ಮ ತಾಯಿ ಸದಾ ಅನ್ನುತ್ತಿರುತ್ತಾಳೆ. ಆತ ಬರೆಸಿದ ಆ ಜಾತಕ ಎಷ್ಟೋ ವರ್ಷ ಆತನ ಬಳಿಯಿದ್ದು, ಆತನಿಗೆ ವೃದ್ಯಾಪ್ಯ, ಮರೆವು ಬಂದಮೇಲೆ ನಮ್ಮ ತಾಯಿ ಅದನ್ನು ಪಡೆದಳು, ನನಗೆ ತಿಳಿವಳಿಕೆ ಬಂದ ಮೇಲೆ ಅದು ನನಗೆ ಬಂದಿತು. ನಾನು ಹುಟ್ಟಿದ 8-10 ದಿನದಲ್ಲೇ ಬರೆಸಿದ ಆ ಜಾತಕ ನನಗೆ ಅರವತ್ತೆನಯ ವರ್ಷದಲ್ಲೂ ಜೀರ್ಣವಾಗಿ ಪ್ಲಾಸ್ಟಿಕ್ ಕವರ್ ಹೊದಿಕೆಯಲ್ಲಿ ಇನ್ನೂ ನನ್ನ ಬಳಿಯಿದೆ.
ಒಪ್ಪಿಸಲು ತಾತನದು ಯಾವ ನಗ, ನಟ್ಟು, ಒಡವೆ, ಜಹಾಗೀರು ಪತ್ರಗಳಿಲ್ಲದ್ದಕ್ಕೆ ನಮ್ಮ ಜಾತಕದ ಹಾಳೆಗಳನ್ನೇ ಆತ ತಾಯಿಗೆ ಒಪ್ಪಿಸಿದ ನಮ್ಮ ತಾಯಿ ನನಗೊಪ್ಪಿಸಿದಳು, ನಾನು? ಇನ್ನಾರಿಗೂ ಒಪ್ಪಿಸಲು ಸಾಧ್ಯವಿಲ್ಲ, ಒಪ್ಪಿಸಿದರೂ ಅವರು ಕಾಳಜಿಯಿಂದ ಕಾಯಲು ಸಾಧ್ಯವಿಲ್ಲ, ಇನ್ನೂ ಮಕ್ಕಳಿಗೆ ಒಪ್ಪಿಸಲೇ ಇಲ್ಲ. ಏಕೆಂದರೆ ಅವರು ನಾನು ಇದ್ದಾಾಗಲೇ ಈಗ ನನ್ನ ಜನ್ಮ ಜಾಲಾಡು ತ್ತಿದ್ದಾರೆ.
ನಾನು ಸತ್ತ ಮೇಲೆ ಜಾಲಾಡಲು ಏನಿದೆ ಅಲ್ಲವೆ? ನನ್ನ ಜಾತಕದ ಬಗ್ಗೆ ಇಷ್ಟೇಕೆ ಹೇಳುತ್ತಿದ್ದೇನೆಂದರೆ, ಅದರಲ್ಲಿರುವ ಮಾಹಿತಿ ಗಳಲ್ಲಿ ಶೇ.90 ನಿಜವಾಗಿದ್ದುದರಿಂದ, ನಾನು ಜಾತಕ ಜ್ಯೋತಿಷ್ಯ ನಂಬಲು ಇಂಬು ಕೊಟ್ಟಿದೆ. ಜಾತಕದಲ್ಲಿ ಬರೆದಿರುವಂತೆ, ಲಲಿತ ಕಲೆಗಳಾದ ಸಾಹಿತ್ಯ ಸಂಗೀತಗಳಲ್ಲೇ ನನ್ನ ಬದುಕು 60ಕ್ಕೆ ಬಂದು ತಲುಪಿತು. ಶಾಲಾ ವಿದ್ಯೆಯಲ್ಲಿ ಸಹಜ ಸೆಕೆಂಡ್ ಕ್ಲಾಸ್ ಪಾಸಾಗುವುದು ಎಂದಂತೆ ಪಿ.ಯು.ಸಿ. , ಬಿ.ಕಾಂಗಳಲ್ಲಿ ಸೆಕೆಂಡ್ ಕ್ಲಾಸ್‌ನಲ್ಲೇ ಪಾಸಾಗಿದ್ದೇನೆ. ‘ನನಗಿಷ್ಟು ಹೆಸರು, ಖ್ಯಾತಿ ಇದ್ದುದ ಕಂಡು ಎಲೆಕ್ಷನ್‌ಗೆ ನಿಂತು ಕೊಳ್ಳಿ ಅಂತ ನೂರು ಮಂದಿ ಹುರುದುಂಬಿಸಿದ್ದಾರೆ.
ಆದರೆ, ನಾನು ರಾಜಕೀಯದೆಡೆ ಎಡಕಣ್ಣನ್ನೂ ಹೊರಳಿಸಲಾರೆ ಕಾರಣ? ಜಾತಕದಲ್ಲಿ ಹೀಗೆ ಸ್ಪಷ್ಟ ಬರೆಯಲಾಗಿದೆ. ‘ಈತ ಎಲೆಕ್ಷನ್‌ಗೆ ನಿಲ್ಲಲಾರ ನಿಂತರೂ ಆರಿಸಿ ಬರಲಾರನೆಂದು ಅಲ್ಲದೇ ನನಗೆ ಅನಿಸಿದಂತೆ ರಾಜಕಾರಣಿಗಳಿಗೆ ಈಗ ಆಗುತ್ತಿರುವ ಅಪಮಾನಗಳು ಅವರನ್ನು ಸುತ್ತುವರಿದ ಆ ವೈರಿಗಳು, ಗೂಂಡಾಗಳು, ಇದಲ್ಲದೆ ಅವರಲ್ಲಿರುವ ಅಜ್ಞಾನ ಕಂಡು ರಾಜಕೀಯಕ್ಕೆ ಎಂದೂ ಇಳಿಯಬಾರದೆಂದೇ ನಿರ್ಧರಿಸಿದ್ದೇನೆ.
ಇದಲ್ಲದೇ ಜಾತಕದಲ್ಲಿ ಈತ ಮುಂದೆ ಸಂಸಾರದ ಕೋಟಲೆಗಳಿಗೆ ಬೇಸತ್ತು ಸಾಧು ಸನ್ಯಾಸಿಗಳ ಬೆನ್ನು ಹತ್ತಬಹುದು, ಮಠಾಧಿಪತಿ ಯೂ ಆಗಬಹುದು ಎಂದು ಕೂಡಾ ಇದೆ. ಇದನ್ನು ಕಾದು ನೋಡುತ್ತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ, ನಾನು 15 ದಿನವೋ , ತಿಂಗಳೋ ಮಗುವಾಗಿದ್ದ ಬರೆದ ಈ ಜಾತಕದಲ್ಲಿ ಶ್ರೀ ಹನುಮಂತ ಗೋವಿಂದ ಕಟ್ಟಿ ಹುಬ್ಬಳ್ಳಿಯವರು ಮುಂದೊಂದು ದಿನ ಈತ ಎಲ್ಲ ವಾರ್ತಾ ಮಾಧ್ಯಮಗಳ ಕೇಂದ್ರ ಬಿಂದುವಾಗುತ್ತಾನೆ ಎಂದು ಬರೆದಿರುವುದಂತೂ ಅಕ್ಷರಶಃ ನಿಜವಾಗಿದೆ, ಒಂದು ಟಿ.ವಿ, ಚಾನಲ್ಲೇ? ಒಂದು ವಾಟ್ಸಪ್‌ಗಳೇ? ಫೇಸ್ ಬುಕ್ಕುಗಳೇ ಎಲ್ಲ ಕಡೆಯೂ ಅಧಿಕೃತ ಅನಧಿಕೃತ ನನ್ನ ಕಾರ್ಯಕ್ರಮದ ವಿಡಿಯೋ ಗಳು ಟ್ರೋಲ್‌ಗಳು, ತಾವು ಹೇಳಿ ಹೇಳಿದ್ದನ್ನು ನಾನು ಹೇಳಿದ್ದೇನೆಂದು ಮಾಧ್ಯಮಗಳಲ್ಲಿ ಹರಿಯಲು ಬಿಟ್ಟು ನನ್ನನ್ನು ಮುಜು ಗುರುಕ್ಕೀಡು ಮಾಡುವುದೂ ನಡದೇ ಇದೆ.
ಇದೆಲ್ಲವೂ 1961ನೇ ಇಸವಿಯಲ್ಲಿ ನಾನು ಹುಟ್ಟಿ ಹದಿನೈದು ದಿನದ ಕೂಸಿದ್ದಾಗಲೇ ಬರೆದಿರುವುದು ನನಗೆ ಸಖೇದಾಶ್ಚರ್ಯದ ಜತೆಗೆ ಜಾತಕಗಳನ್ನು ನಂಬುವ ಮನಸ್ಥಿತಿಯನ್ನು ನಿರ್ಮಾಣಮಾಡಿದೆ. ಜಾತಕಗಳನ್ನು ನಂಬದವರೆಂದರೆ ಸಾದಾ ಸೀದಾ ರಸ್ತೆ ಯಲ್ಲೋ, ಟಾರ್ ರೋಡಿನ ಮೇಲೋ ಬಿದ್ದರೂ ಸೈ, ಎದ್ದರೂ ಸೈ ಎಂದು ನಡೆದು ದಾರಿ ಸಾಗಿದರೆ ಗುರಿ ಮುಟ್ಟುತ್ತಾರೆ. ಇಲ್ಲವೇ ಮಧ್ಯದಲ್ಲಿಯೇ ಪಯಣ ನಿಲ್ಲಿಸುತ್ತಾರೆ. ಈ ಜಾತಕ, ಜ್ಯೋತಿಷ್ಯ ನಂಬಿದವರು ಕೆಸರು ತುಂಬಿದ ಗದ್ದೆೆಯಲ್ಲೋ, ಕೆಸರುಮಯ ವಾದ ರಸ್ತೆಯಲ್ಲೋ ಯೋಚಿಸಿ ಯೋಚಿಸಿ ಮೆಲ್ಲಗೆ ಹೆಜ್ಜೆ ಇಡುವವರಂತೆ, ಸಾವಕಾಶವಾಗಿಯಾದರೂ ಗುರಿ ತಲುಪುತ್ತಾರೆ.
ಆದರೆ. ಇವರಲ್ಲಿ ಶೌರ್ಯ, ಸಾಹಸದ ಮಾತಿಲ್ಲ, ದೈವಕೃಪೆ ಜಾತಕದಲ್ಲಿ ಹೀಗೆ ಬರೆದಿದೆ, ಹೀಗೆ ಆಗುತ್ತದೆ ಎಂದು ಜಾತಕ ಬರೆದ ಜ್ಯೋತಿಯನ್ನು ಪ್ರಶಂಸಿಸುತ್ತಲೇ ತಮ್ಮ ಲಿಮಿಟೇಶನ್‌ಗಳನ್ನು ತಾವೇ ನಿರ್ಧರಿಸಿ ಬಿಡುತ್ತಾರೆ, ಇದು ನನ್ನ ಮನಸ್ಥಿತಿಯೂ ಹೌದು. ಇದು, ಕೂಸಿದ್ದಾಗ ಬರೆಸಿದ ನನ್ನ ಜಾತಕದ ಹಣೆಬರಹ ವಾದರೆ, ನನಗೆ ತಿಳಿವಳಿಕೆ ಬಂದ ಮೇಲೆ 1980-1990ರ ದಶಕದಲ್ಲಿ ಧಾರವಾಡದ ಶ್ರೀ ವಾಮನಾಚಾರ್ಯ ತಡಸ್ ಎಂಬ ಯುವ ಸ್ನೇಹಿತರೊಬ್ಬರು ನಮ್ಮ ಗಂಗಾವತಿಗೆ ಬಂದು ನಮ್ಮ ಮನೆಯ ಲ್ಲಿಯೇ ತಮ್ಮ ಬಿಡುನ ವೇಳೆ ಕಳೆಯುತ್ತಿದ್ದರು. ಅವರದೂ ಜ್ಯೋತಿಷ್ಯದಲ್ಲಿ ಮಹಾ ಪಾಂಡಿತ್ಯ, ಅವರು ನನಗೆ ಜಾತಕದಲ್ಲಿಯೇ ಮಹಾರ್ದಶಾ, ದಶಾಭುಕ್ತಿಗಳನ್ನು ಹಾಕಿಕೊಟ್ಟು ಯಾವ ಯಾವ ವರ್ಷದಲ್ಲಿ ನನಗೆ ಗಜಕೇಸರಿ ಯೋಗವಿದೆ, ಗಂಡಾಂತರಗಳಿವೆ ಎಂದೆಲ್ಲ ಹಾಕಿಕೊಟ್ಟರು ಇಂದಿನವರೆಗೆ ಹಾಗೇ ನಡೆದಿದೆ, ಹೀಗಾಗಿ ಜಾತಕ, ಜೋತಿಷ್ಯ ನಂಬುವಂತಾಗಿದೆ.
ನನ್ನ ಕಿರಿಯ ತಮ್ಮ ಸ್ವಾಮಿಗೆ ಅವನ ಮೂವತ್ತನೆಯ ವಯಸ್ಸಲ್ಲಿ ನೀರಿನಗಂಡಾಂತರ ವಿದೆಯೆಂದು ಹೇಳಿದಂತೆ ನಮ್ಮ ತಮ್ಮ ಅದರಂತೆಯೇ ತೀರಿಯೂ ಹೋದ. ಹೀಗೆ ಜೋತಿಷ್ಯ, ಜಾತಕಗಳನ್ನು ನಾನು ನಂಬುವಂತಾಗಿದೆ ಎಂದರೂ ಕಂಡ ಕಂಡವ ರನ್ನೆಲ್ಲ, ಹಾದಿಬೀದಿ ಜ್ಯೋತಿಷಿ ಗಳನ್ನು ನಾನು ನಂಬುವುದಿಲ್ಲ ‘ಪಂಚಭವತಿ ಪಂಚ ನಭವತಿ’ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ದಿನ ಪತ್ರಿಕೆಗಳಲ್ಲಿ ಬರುವ ದಿನ ಭವಿಷ್ಯವನ್ನು ಮಾತ್ರ ನಂಬುವುದಿಲ್ಲ. ಏಕೆಂದರೆ, ಗುರುಗಳಾದ ಬೀಚಿಯವರು ದಿನ ಭವಿಷ್ಯವೆಂಬುದು ರೆಡಿಮೇಡ್ ಅಂಗಿಯಿದ್ದಂತೆ ದೊಗಳೆ ಆಗಲೂ ಬಹುದು, ಬಿಗಿ ಆಗಲೂ ಬಹುದು ಹಿಡಿಸಿ ಹಾಕಿಕೊಳ್ಳಲು ರೆಡಿಯಿದ್ದರೆ ಮಾತ್ರ ಅದು ರೆಡಿ, ಮೇಡ್ ಫಾರ್ ಯು ಎಂದಿದ್ದಾರೆ.
ಎಷ್ಟು ನಿಜವಲ್ಲವೆ? ‘ಜಾತಸ್ಯ ಮರಣದೃವಂ’ ಎಂದಿದ್ದಾರೆ, ಅಂದರೆ ಹುಟ್ಟಿದ ವ್ಯಕ್ತಿಗೆ ಸಾವು ತಪ್ಪದು ಎಂದು. ನಮ್ಮ ಚಿಕ್ಕಪ್ಪ ದಿ॥ ನಾರಾಯಣಾಚಾರ್ ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ‘ಶೋಭಾ ಆಟ್ರ್ರ್ಟ್ಸ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಅವರು ಅಪ್ಪಟ ಕಾಯಕ ನಿಷ್ಠೆಯ ಕರ್ಮ ಯೋಗಿ, ಅವರೆಂದೂ ಇನ್ನೊಬ್ಬರನ್ನು ಬೇಡಿ ಬದುಕಲಿಲ್ಲ, ದುಡಿದೇ ಬದುಕಿದರು. ಅವರೆದುರಿಗೆ ಜ್ಯೋೋತಿಷ್ಯ ಜಾತಕ, ಟೈಂ ಸರಿಯಿಲ್ಲ ಎಂದರೆ, ಅವರನ್ನು ಎದ್ದು ಒದ್ದೇ ಬಿಡುತ್ತಿದ್ದರು, ಅವರೆದುರಿಗೆ ಒಮ್ಮೆ ‘ಜಾತಸ್ಯ ಮರಣಂ ದೃವಂ’ ಅರ್ಥಕೇಳಿದ್ದೆೆ, ಅದಕ್ಕವರು ‘ಜ್ಯೋತಿಷ್ಯ ಜಾತಕ ನೋಡುತ್ತಾ ಬದುಕಿದರೆ, ಮರಣ ಗ್ಯಾರಂಟಿ’ ಎಂದೇ ಅದರ ಅರ್ಥಹೇಳುತ್ತಿದ್ದರು.
ಒಟ್ಟಿನಲ್ಲಿ, ಜಾತಕ, ಜ್ಯೋತಿಷ್ಯಗಳ ಒಂದು ಅಗೋಚರ ಶಕ್ತಿ ಇದೆಯಾದರೂ, ಅವನ್ನೇ ನಂಬಿ ಬದುಕುವ ಹಾಗಿಲ್ಲ, ಬದುಕು ಸಾಗಿಸುತ್ತಿರಬೇಕು, ಜ್ಯೋತಿಷ್ಯ ಈಗಿನ ಜಿ.ಪಿ.ಎಸ್. ಇದ್ದಂತೆ ಹೈ ವೇ ಗಳಲ್ಲಿ ಚೆನ್ನಾಗಿ ಮಾರ್ಗದರ್ಶನ ನೀಡುತ್ತವೆ. ಸಂದಿಗೊಂದಿ ಗಳಲ್ಲಿರುವ ನಮ್ಮ ನೆಂಟರ, ಗೆಳೆಯರ ಮನೆಗಳನ್ನ ಅದು ಹೇಗೆ ತೋರಿಸುವದಿಲ್ಲವೋ ಹಾಗೆ ನಮ್ಮ ಕರ್ಮ ಮಾಡಿದ ಪಾಪಗಳ ಫಲವನ್ನು ಉಣ್ಣಲೇಬೇಕಾಗುತ್ತದೆ.
ಡಿ.ವಿ.ಜಿಯವರು ಹೇಳಿದಂತೆ ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ವಿಹಿತವಾಗಿಹುವುದದರ ಗತಿ ಸೃಷ್ಠಿ ವಿಧಿಯಂ ॥ ಸಹಿಸದಲ್ಲದೇ ಮುಗಿಯದಾವ ದಸೆಬಂದೊಡಂ ಸಹನೆ ವಜ್ರದ ಕವಚ ಮಂಕುತಿಂಮ ॥ ಇದು ತ್ರಿಕಾಲ ಸತ್ಯ.