ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಶುರುವಾಗಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ ಗೆ ಅಮೆರಿಕ ಹಾಗೂ ಯುರೋಪ್ ಖಂಡಗಳ ನ್ಯಾಟೋ ಸದಸ್ಯ ರಾಷ್ಟ್ರಗಳು ಬೆಂಬಲವಾಗಿ ನಿಂತಿದ್ದರೆ, ರಷ್ಯಾಗೆ ಇರಾನ್‌ನಿಂದ ಹಲವು ರೀತಿಯ ನೆರವು ಸಿಗುತ್ತಿದೆ.
ಇತ್ತ ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ೧೦೦ ದಿನಗಳನ್ನು ಪೂರೈಸಿದೆ. ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡಿದ್ದರೆ, ಹಮಾಸ್ ಉಗ್ರರಿಗೆ ಇರಾನ್ ಪರೋಕ್ಷವಾಗಿ ಬೆಂಬಲ ನೀಡಿದೆ. ಸಿರಿಯಾ ಹಾಗೂ ಲೆಬನಾನ್ ದೇಶಗಳ ಉಗ್ರರು ಇಸ್ರೇಲ್ ವಿರುದ್ಧ ನೇರ ಸಂಘರ್ಷದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಯೆಮನ್‌ನ ಹೌತಿ ಉಗ್ರರೂ ಹಮಾಸ್ ಬೆಂಬಲಕ್ಕೆ ನಿಂತು ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆ ಹಡಗು ಗಳಿಗೆ ಅಡಚಣೆ ಮಾಡುತ್ತಿದ್ದಾರೆ. ಯೆಮನ್‌ನ ಹೌತಿ ಉಗ್ರರಿಗೂ ಇರಾನ್ ಬೆಂಬಲವಿದೆ. ಜಗತ್ತಿನ ಬಹುಪಾಲು ದೇಶಗಳು ಸಂಘರ್ಷದಲ್ಲೇ ಮುಳುಗಿರುವ ಇಂತಹ ಹೊತ್ತ ಇರಾನ್ ಸೇನಾ ಪಡೆಯು ಪಾಕಿಸ್ತಾನ, ಸಿರಿಯಾ ಹಾಗೂ ಇರಾಕ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.
ಸದ್ಯದ ಜಾಗತಿಕ ಸ್ಥಿತಿಗತಿ ವೀಕ್ಷಿಸಿದರೆ ಏಷ್ಯಾ, ಯುರೋಪ್, ಅಮೆರಿಕ ಹಾಗೂ ಮಧ್ಯ ಪ್ರಾಚ್ಯಗಳ ಹಲವು ರಾಷ್ಟ್ರಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷ ವಾಗಿ ಸಂಘರ್ಷ ಪೀಡಿತವಾಗಿವೆ. ಈ ಎಲ್ಲ ಸಂಘರ್ಷ ಗಳಲ್ಲೂ ಇರಾನ್ ಕೇಂದ್ರ ಸ್ಥಾನದಲ್ಲಿ ನಿಂತಿದೆ. ಹೀಗಾಗಿ, ೩ನೇ ವಿಶ್ವ ಯುದ್ಧದತ್ತ ಜಗತ್ತು ಮುಖ ಮಾಡುತ್ತಿದೆಯೇ ಎನ್ನುವ ಭೀತಿ ಎದುರಾಗಿದೆ. ಜಗತ್ತಿನ ಇಷ್ಟೆಲ್ಲ ರಾಷ್ಟ್ರಗಳ ನಡುವೆ ಯುದ್ಧ ನಡೆಯಲು ಮುಖ್ಯ ಕಾರಣವೇ ಭಯೋತಾದನೆ. ಆರಂಭದಲ್ಲಿ ಭಯೋತ್ಪಾದನೆಯನ್ನು ಪೋಷಿಸಿದ್ದ ರಾಷ್ಟ್ರಗಳೇ ಇದೀಗ ಅದಕ್ಕೆ ಆಹುತಿಯಾಗುತ್ತಿವೆ.
ಯುದ್ಧಪೀಡಿತ ದೇಶಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ, ಸಾಮಾಜಿಕವಾಗಿ ಕಂಗೆಟ್ಟಿವೆ, ಆ ದೇಶಗಳಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗುತ್ತಿದೆ. ಶಿಕ್ಷಣ, ಸದೃಢ ಆರ್ಥಿಕತೆ, ಮುಕ್ತ ಮಾರುಕಟ್ಟೆ ಇತ್ಯಾದಿಗಳತ್ತ ಯೋಚಿಸಬೇಕಾದ ಬಲಿಷ್ಠ ರಾಷ್ಟ್ರಗಳು ಕೂಡ ಯುದ್ಧಗಳಿಗೆ ಬೆಂಬಲ ನೀಡುತ್ತಿದ್ದು, ಈ ವಿದ್ಯಮಾನವು ಪ್ರಪಂಚದ ವಿನಾಶಕ್ಕೆ ಕಾರಣವಾಗುತ್ತಾ ಎಂಬ ಸಂಶಯ ಶುರುವಾಗಿದೆ.