Saturday, 23rd November 2024

ಭಾರತದ ಕೀರ್ತಿ ವಿಶ್ವದಲ್ಲಿ ಪಸರಿಸಲು ಶಿಕ್ಷಕರ ಶ್ರಮ ಅಪಾರ: ಸಚಿವ ಶಿವಾನಂದ ಪಾಟೀಲ್ 

ಕೊಲ್ಹಾರ: ವಿಶ್ವದ ಮೂಲೆ ಮೂಲೆಗಳಲ್ಲಿ ಭಾರತೀಯ ವಿಜ್ಞಾನಿಗಳು, ವೈದ್ಯರು, ಇಂಜಿನಿಯರಗಳು ಹರಡಿಕೊಂಡು ಭಾರತದ ಕೀರ್ತಿಯನ್ನು ವಿಶ್ವದ ಉದ್ದಗಲಕ್ಕೂ ಹರಡಿದ್ದಾರೆ ಇದರ ಶ್ರೇಯಸ್ಸು ದೇಶದ ಶಿಕ್ಷಕರಿಗೆ ಸಲ್ಲಬೇಕು ಎಂದು ಎಪಿಎಂಸಿ, ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ. ಎಸ್ ಪಾಟೀಲ್ ಹೇಳಿದರು.
ಪಟ್ಟಣದ ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉಸ್ಮಾನ್ ಪಟೇಲ್ ಅವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನ ನೀಡಿದ್ದಾರೆ ಆ ಎಲ್ಲಾ ಕೊಡುಗೆಗಳಲ್ಲಿ ಮುಖ್ಯವಾಗಿ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಅವರಿಗೆ ಅಪಾರವಾದ ಕೀರ್ತಿ ಜೊತೆಗೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದರು.
ಭಾರತ ದೇಶದ ಮಹೋನ್ನತ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಸ್ಥಾಪಸಿರುವ ಶಿಕ್ಷಣ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಉಸ್ಮಾನ ಪಟೇಲ್‌ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಮಾಜ ಸೇವೆಯ ದೃಷ್ಟಿಯಿಂದ ಪಟ್ಟಣದಲ್ಲಿ ಸುಸಜ್ಜಿತ ಪಟೇಲ್ ಆಸ್ಪತ್ರೆ ಹಾಗೂ ಎಪಿಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆ ತೆರೆಯಲಾಗಿದೆ ಎಂದರು. ನನ್ನ ಈ ಜನಪರ ಕಾರ್ಯಕ್ಕೆ ಸಚಿವ ಶಿವಾನಂದ ಪಾಟೀಲರು ಸದಾಕಾಲ ಬೆನ್ನೆಲುಬಾಗಿ ನಿಂತಿದ್ದಾರೆ ಅವರ ಸಹಾಯ ಸಹಕಾರ ಮರೆಯಲಾಗದು ಎಂದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ರಫಿ ಭಂಡಾರಿ ಹಾಗೂ ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಡಾ. ಕೈಲಾಸನಾಥ ಶ್ರೀಗಳು, ಖಾನ್ ಕಾಯೇ ಗಪ್ಫಾರೀಯಾ ಗುರುಕುಲದ ಪೀಠಾಧಿಪತಿಗಳಾದ ಡಾ‌. ಬಕ್ತಿಯಾರಖಾನ ಪಠಾಣ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಉಸ್ಮಾನ ಪಟೇಲ್‌ಖಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ರಫಿ ಭಂಡಾರಿ, ಮಕ್ಕಳ ಸಾಹಿತಿ ಪ.ಗು. ಸಿದ್ದಾಪುರ, ಅತಿಥಿಗಳಾಗಿ ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಹಸನಸಾಬ ಚೌಧರಿ, ನಬಿಸಾಬ ಹೊನ್ಯಾಳ, ಮೋದಿನಪಟೇಲ್ ಖಾನ್, ಡೊಂಗ್ರಿಸಾಬ ಗಿರಗಾಂವಿ, ಆಯ್.ಎನ್ ತಹಶೀಲ್ದಾರ್, ಪ ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ಎಸ್.ಬಿ ಪತಂಗಿ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಹೆಚ್.ಕೆ ಮಕಾನದಾರ, ಬಿ.ಎಸ್ ಹಂಗರಗಿ, ಬಾಬುಸಾಬ ಕೂಡಗಿ, ಸಿ.ಎಂ ಗಣಕುಮಾರ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.