ಸಾರ್ವತ್ರಿಕ ಚುನಾವಣೆಗಳು ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯಬೇಕೆಂಬುದು ದೇಶದ ಪ್ರಜ್ಞಾವಂತರ ನಿರೀಕ್ಷೆ. ಇದು ಭಾರತದ ಚುನಾವಣಾ ಆಯೋಗದ ಆಶಯವೂ ಹೌದು. ಜತೆಗೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ದುಡ್ಡು-ಕಾಸು ಹಂಚಿ ಪ್ರಲೋಭನೆಯೊಡ್ಡಿ ಪ್ರಭಾವಿಸು ವಂತಾಗಬಾರದು ಎಂಬುದೂ ಆಯೋಗದ ಆಶಯದಲ್ಲಿ ಸೇರಿದೆ.
ಆದರೆ, ನಿಯಮದ ಉಲ್ಲಂಘನೆಯನ್ನೇ ಉಸಿರಾಗಿಸಿಕೊಂಡಿರುವವರ ದಪ್ಪಚರ್ಮಕ್ಕೆ ಇಂಥ ಸದಾಶಯಗಳು ನಾಟುತ್ತಿಲ್ಲ. ಕಾಲಾನುಕಾಲಕ್ಕೆ ನಡೆಯುವ ಚುನಾವಣೆಗಳ ಆಸುಪಾಸಿನಲ್ಲಿ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ನಡೆಸುವ ತಪಾಸಣೆಯಲ್ಲಿ ಹಣ, ವಿವಿಧ ಬಗೆಯ ಕೊಡುಗೆಗಳು, ಅಕ್ರಮ ಮದ್ಯ, ಚಿನ್ನಾಭರಣ ಇತ್ಯಾದಿಗಳು ಸಿಕ್ಕಿಬೀಳುವುದೇ ಈ ಅಭಿಪ್ರಾಯಕ್ಕೆ ಕಾರಣ. ಈ ಸಲದ ಲೋಕಸಭಾ ಚುನಾವಣೆಯೂ ಈ ಪರಿಪಾಠಕ್ಕೆ ಹೊರತಾಗಿಲ್ಲ. ವಿಜಯಪುರ, ಮಂಡ್ಯ, ಹುಬ್ಬಳ್ಳಿ, ಕೋಲಾರ, ಬಾಗಲಕೋಟೆ, ಗಂಗಾವತಿ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಗಳಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ಹೀಗೆ ನಡೆಸಲಾದ ತಪಾಸಣೆಗಳಲ್ಲಿ ಹಣದ ಭರ್ಜರಿ ಬೇಟೆಯಾಗಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.
ಹೀಗೆ ಮತದಾರರಿಗೆ ಹಣದ ಆಮಿಷವೊಡ್ಡಿ ಚುನಾವಣೆಯಲ್ಲಿ ಗೆದ್ದು ಸಿಂಹಾಸನ ಏರುವವರಿಂದ ಭ್ರಷ್ಟಾಚಾರರಹಿತ ಮತ್ತು ಕಳಂಕರಹಿತ ಆಡಳಿತವನ್ನು ನಿರೀಕ್ಷಿಸಲಾಗುತ್ತದೆಯೇ? ಮತದಾರರಿಗೆ ಹಂಚಲೆಂದು ಒಂದು ಪ್ರಮಾಣದ ಇಡುಗಂಟನ್ನು ವಿನಿಯೋಗಿಸಿದ ಮಹಾಶಯರು ಅಧಿಕಾರಕ್ಕೇರುತ್ತಿದ್ದಂತೆ ಅದರ ಹಲವು ಪಟ್ಟು ಹೆಚ್ಚು ಗಂಟು ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಖಾತ್ರಿಯೇನು? ಇಂಥದೊಂದು ರೋಗಗ್ರಸ್ತ ಪರಿಪಾಠದ ಮೂಲೋತ್ಪಾಟನೆಯಾಗುವುದು ಯಾವಾಗ? ಈ ಚಾಳಿಯಲ್ಲಿ ಜನರದ್ದೂ ಕೊಂಚ ಪಾಲಿದೆ ಎನ್ನಬೇಕು. ಮತಗಳಿಗಾಗಿ ಹೀಗೆ ಆಮಿಷವೊಡ್ಡುವವರು ಬಂದಾಗ ಅವರನ್ನು ನಿರ್ಲಕ್ಷಿಸುವುದರ ಜತೆಗೆ, ಅಂಥ ಪ್ರಲೋಭನೆಗಳನ್ನು ಜನರು ಸಾರಾಸಗಟಾಗಿ ತಿರಸ್ಕರಿಸಬೇಕು.
ಇಂಥ ಪ್ರತಿರೋಧ ಎದುರಾಗುವವರೆಗೂ ಭ್ರಷ್ಟ ಪುಢಾರಿಗಳು ರಕ್ತಬೀಜಾಸುರರಂತೆ ಹೆಚ್ಚುತ್ತಲೇ ಇರುತ್ತಾರೆ, ತನ್ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೂ ಮಾರಕ ವಾಗಿ ಪರಿಣಮಿಸುತ್ತಾರೆ. ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡಿರುವ, ದಕ್ಷತೆಯನ್ನು ಮೈಗೂಡಿಸಿಕೊಂಡಿರುವ ಸಮರ್ಥ ವ್ಯಕ್ತಿಯನ್ನು ಚುನಾಯಿಸಲು ಮತದಾರರು ಒಮ್ಮೆ ಸಂಕಲ್ಪಿಸಿದಲ್ಲಿ, ಇಂಥ ಅಪಸವ್ಯಗಳು ತಾನೇತಾನಾಗಿ ತೆರೆಮರೆಗೆ ಸರಿಯುತ್ತವೆ. ಅಂಥ ಕಾಲ ಇನ್ನಾದರೂ ಬರಲಿ.