ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಇಂದು ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ.
ಐಪಿಎಲ್ 2024 ರ ಲೀಗ್ ಹಂತವು ಅಂತಿಮ ಘಟ್ಟದತ್ತ ತಲುಪಿದೆ. ಎಲ್ಲಾ ತಂಡಗಳು 11 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಈ ರೇಸ್‌ನಲ್ಲಿ ಮುನ್ನಡೆಯಲ್ಲಿದೆ.
ಉಳಿದ ಎರಡು ಸ್ಥಾನಗಳಿಗಾಗಿ ಕನಿಷ್ಠ 7 ತಂಡಗಳ ನಡುವೆ ಕಠಿಣ ಹೋರಾಟವಿದೆ. ಬುಧವಾರ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಡಿಸಲಾಗಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಗುರುವಾರ ಆರ್ಸಿಬಿ ಮತ್ತು ಪಂಜಾಬ್ ಮುಖಾಮುಖಿ ಆಗಲಿದೆ. ಲಕ್ನೋ ವಿರುದ್ಧ ಹೈದರಾ ಬಾದ್ ತಂಡ ಗೆಲುವು ಸಾಧಿಸಿದ ಪರಿಣಾಮ ಇಂದಿನ ಪಂದ್ಯ ಉಭಯ ತಂಡಗಳಿಗೂ ನಾಕೌಟ್ ಆಗಿದೆ.
ಉಭಯ ತಂಡಗಳು 11-11 ಪಂದ್ಯಗಳನ್ನು ಆಡಿದ್ದು, ಪ್ರಸ್ತುತ 8-8 ಅಂಕಗಳನ್ನು ಹೊಂದಿವೆ.
ಸದ್ಯ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಹೇಗಿದೆಯೆಂದರೆ ಉಳಿದ ತಂಡಗಳ ಪೈಕಿ ಒಂದಲ್ಲ ಒಂದು ಟೀಮ್ 14 ಅಂಕಗಳನ್ನು ತಲುಪುತ್ತದೆ. ಹೀಗಿರುವಾಗ ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದ ಹೊರಬೀಳುವುದು ಖಚಿತ.
ಆರ್ಸಿಬಿ ಉತ್ತಮ ಸ್ಥಿತಿಯಲ್ಲಿದೆ. ಪಂದ್ಯಾವಳಿಯ ಮೊದಲ 8 ಪಂದ್ಯಗಳಲ್ಲಿ (ಸತತ 6) 7 ರಲ್ಲಿ ಸೋತಿರುವ ಫಾಫ್ ಪಡೆ, ಪುಟಿದೇಳುವ ಮೂಲಕ ನಂತರದ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.