ಕೊಲ್ಹಾರ: ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಚಿಮಣಿ ಮೇಲಿಂದ ಬಿದ್ದು ಉತ್ತರ ಪ್ರದೇಶ ಮೂಲದ ಕಿಶನ್ ಕುಮಾರ್ ಭಾರದ್ವಾಜ್ ಮಂಗಳ ವಾರ ಮೃತಪಟ್ಟ ಹಿನ್ನೆಲೆಯಲ್ಲಿ ಎನ್.ಟಿ.ಪಿ.ಸಿ ಯಿಂದ ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ ಎಂದು ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.
ಮುಂಜಾನೆಯಿಂದಲೇ ಕಾರ್ಮಿಕರು ಕರ್ತವ್ಯ ನಿರ್ವಹಿಸದೆ ಎನ್.ಟಿ.ಪಿ.ಸಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲದಂತಾ ಗಿದೆ. ಉಷ್ಣ ವಿದ್ಯುತ್ ಸ್ಥಾವರದಲ್ಲಿ ಪದೇ ಪದೇ ಇಂತಹ ದುರ್ಘಟನೆಗಳು ಜರುಗುತ್ತಿದ್ದು ಕಾರ್ಮಿಕರ ಹಿತರಕ್ಷಣೆಗಾಗಿ ಮುಂಜಾಗೃತವಾಗಿ ಅನುಸರಿಸ ಬೇಕಾದ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಸಂಧಾನ: ಪ್ರತಿಭಟನಾ ನಿರತ ಕಾರ್ಮಿಕರೊಂದಿಗೆ ಎನ್.ಟಿ.ಪಿ.ಸಿ ಅಧಿಕಾರಿಗಳು ಸಂಧಾನಕ್ಕೆ ಯತ್ನಿಸಿದ ಸಂದರ್ಭ ಕಾರ್ಮಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.
ಮೃತ ಕಾರ್ಮಿಕನಿಗೆ ಎನ್.ಟಿ.ಪಿ.ಸಿ ಹಾಗೂ ಗುತ್ತಿಗೆ ಪಡೆದ ಕಂಪನಿ ಸೂಕ್ತ ಪರಿಹಾರ ಕಲ್ಪಿಸಬೇಕು, ಮುಂದೆ ಈ ರೀತಿಯ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಶರತ್ತು ವಿಧಿಸಿದರು ಅಧಿಕಾರಿಗಳು ಶರತ್ತಿಗೆ ಒಪ್ಪಿದ ನಂತರ ಕಾರ್ಮಿಕರು ಪ್ರತಿಭಟನೆ ಹಿಂಪಡೆದುಕೊಂಡರು.
*
ಮುಂಜಾಗೃತ ಕ್ರಮ ಕೈಗೊಂಡಿದ್ದರು ಕೂಡ ಅನಾಹುತ ಸಂಭವಿಸಿದೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು.
ಗುಲ್ಷನ್ ಟೋಪೊ ಎನ್.ಟಿ.ಪಿ.ಸಿ ಜಿ.ಎಂ
ಎನ್.ಟಿ.ಪಿ.ಸಿ ಹಾಗೂ ಗುತ್ತಿಗೆ ಪಡೆದ ಕಂಪನಿಯವರು ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯ ಮಾಡಲಾಗಿದೆ. ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ.
ಆರೀಫ ತಾಳಿಕೋಟಿ. ಗ್ರಾ.ಪಂ ಸದಸ್ಯರು ಹಾಗೂ ಎನ್.ಟಿ.ಪಿ.ಸಿ ಗುತ್ತಿಗೆ ಕಾರ್ಮಿಕರ ಸಂಘಟನಾ ಕಾರ್ಯದರ್ಶಿ ಕೂಡಗಿ.