ಮೂರ್ತಿಪೂಜೆ
ಕರ್ನಾಟಕದಲ್ಲಿ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ರಾಧಾಮೋಹನ ದಾಸ್ ಅಗರ್ವಾಲ್ ಅವರು ಮೊನ್ನೆ ಪಕ್ಷದ ಹಿರಿಯ ನಾಯಕರೊಬ್ಬ ರನ್ನು ಸಂಪರ್ಕಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಇರುವ ಪ್ಲಸ್ಸು, ಮೈನಸ್ಸುಗಳ ಬಗ್ಗೆ ಕೇಳಿzರೆ. ಅಂದ ಹಾಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿಗೆ ಅಂತ ಕರ್ನಾಟಕಕ್ಕೆ ಬಂದ ರಾಧಾ ಮೋಹನದಾಸ್ ಅಗರ್ವಾಲ್ ಅವರ ಬಗ್ಗೆ ಮೋದಿ-ಅಮಿತ್ ಶಾ ಜೋಡಿಗೆ ವಿಪರೀತ ನಂಬಿಕೆ ಬಂದಿದೆ. ಕಾರಣ? ಕರ್ನಾಟಕದಲ್ಲಿ ಪಕ್ಷ ಸ್ವಯಂ ಆಗಿ ಹದಿನೆಂಟು ಸೀಟುಗಳ ಗಡಿ ದಾಟುವುದಿಲ್ಲ ಅಂತ ಅವರು ಮೋದಿ-ಶಾ ಅವರಿಗೆ ರಿಪೋರ್ಟು ಕಳಿಸಿದ್ದರಂತೆ.
ಅಷ್ಟೇ ಅಲ್ಲ, ಸ್ಪರ್ಧಿಸಿರುವ ಇಪ್ಪತ್ತೈದು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳನ್ನು ಹೇಗೆ ಕಳೆದುಕೊಳ್ಳುತ್ತೇವೆ. ಇದಕ್ಕೆ ತಮ್ಮ ಪಕ್ಷದ ನಾಯಕರು ಹೇಗೆ ಕಾರಣರಾಗಲಿದ್ದಾರೆ ಅಂತ ಹೇಳಿದ್ದಾರೆ. ಹೀಗೆ ಅವರು ಕೊಟ್ಟ ರಿಪೋರ್ಟಿನ ಪ್ರಕಾರವೇ ಕರ್ನಾಟಕದಲ್ಲಿ ರಿಸಲ್ಟು ಬಂದ ಮೇಲೆ ಮೋದಿ-ಶಾ ಜೋಡಿಗೆ ಅಗರ್ವಾಲ್ ಎಂದರೆ ಅಪಾರ ನಂಬಿಕೆ. ಮೂಲಗಳ ಪ್ರಕಾರ, ಈಗ ಮೋದಿ-ಶಾ ಜೋಡಿ ಅಗರ್ವಾಲ್ ಅವರಿಗೆ ಹೊಸ ಟಾಸ್ಕು ಕೊಟ್ಟಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ಹಿಡಿಯಲು ಏನು ಸಿದ್ಧತೆ ಮಾಡಿಕೊಳ್ಳಬೇಕು? ಅಂತ ರಿಪೋರ್ಟು ಕೊಡುವುದೇ ಈ ಟಾಸ್ಕು. ಹಾಗಂತಲೇ ಅಗರ್ವಾಲ್ ಅವರು ಅನುಭವಿ ನಾಯಕರಿಂದ ಫೀಡ್ ಬ್ಯಾಕು ಪಡೆಯತೊಡಗಿzರೆ. ಮೊನ್ನೆ ಕರ್ನಾಟಕ ಬಿಜೆಪಿಯ ಹಿರಿಯ ನಾಯಕರೊಬ್ಬರನ್ನು ಅವರುಸಂಪರ್ಕಿ ಸಿದಾಗ ಸದರಿ ನಾಯಕರು ಎತ್ತಿದ ಮಾತಿಗೆ, ‘ಸಾರ್ ನಾವು ಮುಂದಿನ ಚುನಾವಣೆಯ ಹೊತ್ತಿಗೆ ಏಕತೆಯಿಂದ ಮುನ್ನುಗ್ಗಿದರೆ ಸಾಕು, ನಿಶ್ಚಿತವಾಗಿ ಗೆಲ್ಲುತ್ತೇವೆ.
ಯಾಕೆಂದರೆ ಇಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹೋಗುತ್ತಿರುವ ದಾರಿಯೇ ಹಾಗಿದೆ. ಮೊದಲನೆಯದಾಗಿ ವರ್ಷ ಕಳೆಯುವರಲ್ಲಿ ಸರಕಾರ ಹಲವು ಹಗರಣಗಳಲ್ಲಿ ಸಿಲುಕಿಕೊಂಡಿದೆ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಹಗರಣಗಳಿಗೆ ಸಿಲುಕಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವದ ವಿಷಯ ದಲ್ಲಿ ಶುರುವಾಗಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಂತ ಹೈಕಮಾಂಡ್ ಲೆವೆಲ್ಲಿನಲ್ಲಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆಯಾದರೂ ವಾಸ್ತವದಲ್ಲಿ ಅಧಿಕಾರ ಬಿಟ್ಟುಕೊಡಲು ಸಿದ್ದರಾಮಯ್ಯ ಬಿಲ್ ಕುಲ್ ತಯಾರಿಲ್ಲ.
ಸಿದ್ದರಾಮಯ್ಯ ಕ್ಯಾಂಪಿನ ಹಲ ನಾಯಕರು ಈಗಾಗಲೇ ಈ ವಿಷಯದಲ್ಲಿ ಫರ್ಮ್ ಆಗಿ ಮಾತನಾಡತೊಡಗಿದ್ದು ಇದರ ಪರಿಣಾಮವಾಗಿ ಡಿಕೆಶಿ ಬಣ ಸಿಟ್ಟಿನಲ್ಲಿದೆ. ಇಂತಹ ಪರಿಸ್ಥಿತಿ ಮುಂದುವರಿದು ಡಿಕೆಶಿಗೆ ಅಧಿಕಾರ ಬಿಟ್ಟು ಕೊಡಲ್ಲ ಅಂತ ಸಿದ್ದರಾಮಯ್ಯ ಪಟ್ಟು ಹಿಡಿದರೆ ಕಾಂಗ್ರೆಸ್ ಹೈಕಮಾಂಡ್
ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಈಗಿರುವ ಮಾಹಿತಿಗಳ ಪ್ರಕಾರ, ಇಬ್ಬರಿಗೂ ಬೇಡ, ಮೂರನೆಯವರೊಬ್ಬರು ಸಿಎಂ ಆಗಲಿ ಅಂತ ಹೈಕಮಾಂಡ್ ಹೇಳಿದರೆ, ಆ ಸಮಯಕ್ಕೆ ಸರಿಯಾಗಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಸಧ್ಯದ ವಾತಾವರಣವನ್ನು
ಗಮನಿಸಿದರೆ ಖರ್ಗೆಯವರಿಗೂ ಸಿಎಂ ಖುರ್ಚಿ ಬಿಟ್ಟು ಕೊಡಲು ಸಿದ್ದರಾಮಯ್ಯ ತಯಾರಿಲ್ಲ.
ಯಾವಾಗ ಈ ಬೆಳವಣಿಗೆ ನಡೆಯುತ್ತದೋ? ಆಗ ಕಾಂಗ್ರೆಸ್ ಅಂತಃಕಲಹ ದಿಂದ ತಲ್ಲಣಿಸುತ್ತದೆ. ಆ ಮೂಲಕ ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸೈನ್ಯ ಒಗ್ಗೂಡುತ್ತದೆ. ಒಂದು ಪ್ರಮಾಣದಲ್ಲಿ ದಲಿತ, ಹಿಂದುಳಿದ ವರ್ಗಗಳ ಮತವೂ ಕನ್ ಸಾಲಿಡೇಟ್ ಆಗುವುದರಿಂದ ಮೈತ್ರಿಕೂಟ ನಿರಾಯಾಸ ವಾಗಿ ನೂರೈವತ್ತು ಸೀಟು ಗೆಲ್ಲುತ್ತದೆ. ಆದರೆ ಹಾಗಾಗ ಬೇಕೆಂದರೆ ಮೊದಲು ನಮ್ಮಲ್ಲಿ ಒಗ್ಗಟ್ಟಿರಬೇಕು. ಅಂದ ಹಾಗೆ ಒಗ್ಗಟ್ಟಿನ ಕೊರತೆ ಇದ್ದರೂ ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ೧೪೨ ಅಸೆಂಬ್ಲಿ ಸೆಗ್ಮೆಂಟಿನಲ್ಲಿ ಮೈತ್ರಿಕೂಟ ಬಹುಮತ ಪಡೆದಿದೆ.
ಇದನ್ನು ಮನಸ್ಸಿನಲ್ಲಿಟ್ಟುಕೊಂಡು ರಣತಂತ್ರ ರೂಪಿಸಬೇಕು ಸಾರ್’ ಅಂತ ಈ ನಾಯಕರು ರಾಧಾಮೋಹನ ದಾಸ್ ಅಗರ್ವಾಲ್ ಅವರಿಗೆ ವಿವರಿಸಿದ್ದಾರೆ.
ಹೀಗೆ ಮುಚ್ಚು ಮರೆಯಿಲ್ಲದೆ ಆ ನಾಯಕರು ವಿವರಿಸಿದ್ದನ್ನು ಕೇಳಿದ ರಾಧಾಮೋಹನದಾಸ್ ಅಗರ್ವಾಲ್ ‘ಬಹುತ್ ಅಚ್ಚಾ, ಬಹುತ್ ಅಚ್ಚಾ’ ಎಂದ ರಂತೆ.
ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಕಾಶೆಂಪೂರ್?
ಈ ಮಧ್ಯೆ ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷರಾಗಿ ಬಂಡೆಪ್ಪ ಕಾಶೆಂಪೂರ್ ನೇಮಕವಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದ ನಂತರ ಇಲ್ಲಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ ಯಾದರೂ ಪಕ್ಷದ ಬಹುತೇಕ ನಾಯಕರಿಗೆ ಇದು ಇಷ್ಟವಿಲ್ಲ. ಕಾರಣ? ಇವತ್ತಿನ ಸ್ಥಿತಿಯಲ್ಲಿ ನಿಖಿಲ್ ಅಧ್ಯಕ್ಷರಾದರೆ ಪುನಃ ಕುಟುಂಬ ರಾಜಕಾರಣದ
ಆರೋಪ ಎದುರಾಗುತ್ತದೆ. ಹೀಗಾಗಿ ನಿಖಿಲ್ ಬದಲು ಹಿರಿಯ ನಾಯಕರೊಬ್ಬರು ಪಕ್ಷದ ಚುಕ್ಕಾಣಿ ಹಿಡಿಯಲಿ. ಅದರಲ್ಲೂ ಒಕ್ಕಲಿಗೇತರ ನಾಯಕರಿಗೆ ಪ್ರಾಮಿನೆನ್ಸು ಸಿಗಲಿ ಎಂಬುದು ಬಹುತೇಕ ನಾಯಕರ ಮಾತು.
ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಕುರುಬ ಸಮುದಾಯದ ಬಂಡೆಪ್ಪ ಕಾಶೆಂಪೂರ್ ಹೆಸರು ಮುನ್ನೆಲೆಗೆ ಬಂದಿದೆ. ಇದೇ ರೀತಿ ವಿಧಾನಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಕುಮಾರಸ್ವಾಮಿಯವರಿಗೆ ಪಕ್ಷ ಅಧಿಕಾರ ನೀಡಿದೆಯಾದರೂ ಸುರೇಶ್ ಬಾಬು ಹೆಸರು ಮುಂಚೂಣಿಯಲ್ಲಿದೆ. ಕೆಲ ದಿನ ಗಳ ಹಿಂದೆ ಈ ಸ್ಥಾನಕ್ಕೆ ಹಿರಿಯ ನಾಯಕ ಜಿ.ಟಿ.ದೇವೇಗೌಡರ ಹೆಸರು ಕೇಳಿ ಬಂದಿತ್ತು. ಆದರೆ ಮೈಸೂರಿನ ಮೂಡಾ ಹಗರಣದಲ್ಲಿ ಜಿ.ಟಿ.ದೇವೇಗೌಡರ ಹೆಸರು ಕೇಳಿಸಿರುವುದರಿಂದ ಕುಮಾರಸ್ವಾಮಿ ಧರ್ಮಸಂಕಟದಲ್ಲಿದ್ದಾರೆ.
ಹಾಗಂತಲೇ ಕಳೆದ ಶನಿವಾರ ಪಕ್ಷದ ಕಚೇರಿಯಲ್ಲಿ ತಮ್ಮ ಆಪ್ತರ ಬಳಿ ದುಗುಡ ತೋಡಿಕೊಂಡ ಕುಮಾರದ್ವಾಮಿ, ಈಗ ಶಾಸಕಾಂಗ ನಾಯಕನ ಸ್ಥಾನಕ್ಕೆ ಜಿ.ಟಿ.ದೇವೇಗೌಡ, ಸುರೇಶ್ ಬಾಬು, ಎ.ಮಂಜು ಮತ್ತು ವೆಂಕಟಶಿವಾರೆಡ್ಡಿ ಹೆಸರುಗಳಿವೆ. ಏನು ಮಾಡಬೇಕೋ ಹೇಳಿ ಅಂತ ಕೇಳಿದ್ದರಾದರೂ ಆಯ್ಕೆ
ಹೊಣೆಗಾರಿಕೆಯನ್ನು ಅವರಿಗೇ ವಹಿಸಲು ಪಕ್ಷ ನಿರ್ಧರಿಸಿದೆ. ಜೆಡಿಎಸ್ ಮೂಲಗಳ ಪ್ರಕಾರ, ಇವತ್ತಿನ ಸ್ಥಿತಿಯಲ್ಲಿ ಶಾಸಕಾಂಗ ನಾಯಕನ ಸ್ಥಾನಕ್ಕೆ ಸುರೇಶ್ ಬಾಬು ಬಂದು ಕೂರುವ ಸಾಧ್ಯತೆ ಜಾಸ್ತಿ.
ಅಶೋಕ್ ಪದಚ್ಯುತಿ ಸದ್ಯಕ್ಕಿಲ್ಲ
ಕಳೆದ ವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ನಡೆಯಿತಲ್ಲ? ಆ ಸಂದರ್ಭದಲ್ಲಿ ಕಾಫಿ ಬ್ರೇಕ್ ಸಿಕ್ಕಾಗ ಹಲವು ಶಾಸಕರು ಯಡಿಯೂರಪ್ಪ ಅವರನ್ನು ಮುತ್ತಿ ಕೊಂಡಿzರೆ. ‘ಸಾರ್, ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಅಶೋಕ್ ಅವರನ್ನು ಕೆಳಗಿಳಿಸಿ, ಪರಿಷತ್ತಿನಲ್ಲಿ ಸಿ.ಟಿ.ರವಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಅಂತ ಸುದ್ದಿ ಹಬ್ಬಿದೆಯಲ್ಲ. ಇದು ನಿಜವಾ?’ ಅಂತ ಕೇಳಿದ್ದಾರೆ.
ಆಗೆಲ್ಲ ನಿರ್ವಿಕಾರ ಚಿತ್ತರಾಗಿ ಮಾತನಾಡಿದ ಯಡಿಯೂ ರಪ್ಪ, ‘ನೋಡ್ರೀ ಯಾರನ್ನು ಬೇಕಾದ್ರೂ ಕೆಳಗಿಳಿಸಲಿ. ಯಾರನ್ನು ಬೇಕಾದ್ರೂ ಮೇಲೆ ಕೂರಿಸಲಿ. ನನ್ನ ಅಬ್ಜೆಕ್ಷನ್ ಏನೂ ಇಲ್ಲ. ಏನೇ ಮಾಡಿದರೂ ಒಟ್ಟಿನಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗಬೇಕು ಅಷ್ಟೇ’ ಎಂದಿದ್ದಾರೆ. ಯಾವಾಗ ಯಡಿಯೂರಪ್ಪ ಈ ಮಾತು ಹೇಳಿದರೋ? ಅಗ ಅಲ್ಲಿದ್ದವರಿಗೆ ವಿಸ್ಮಯವಾಗಿದೆ. ಕಾರಣ? ಅಶೋಕ್ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಂದು ಕೂರುವುದರ ಹಿಂದೆ ಯಡಿಯೂರಪ್ಪ ಅವರ ಬೆಂಬಲವಿದ್ದುದು ರಹಸ್ಯವೇನಲ್ಲ.
ಹೀಗಿರುವಾಗ ಇದ್ದಕ್ಕಿದ್ದಂತೆ, ಯಾರನ್ನು ಬೇಕಾದ್ರೂ ಕೆಳಗಿಳಿಸಲಿ ಅಂತ ಯಡಿಯೂರಪ್ಪ ವೈರಾಗ್ಯ ಭಾವ ತೋರಿಸುತ್ತಿದ್ದಾರೆ ಅಂದರೆ ಅರ್ಥವೇನು? ಎಂಬ ಪ್ರಶ್ನೆ ಶುರುವಾಗಿದೆ. ಇದಾದ ನಂತರ ಯಡಿಯೂರಪ್ಪ ವಾಪಸ್ ಹೋಗಿದ್ದಾರೆ.ಅವರು ಆ ಕಡೆ ಹೋಗುತ್ತಿದ್ದಂತೆಯೇ ಇತ್ತ ಅವರ ಆಪ್ತ ನಾಯಕರೊಬ್ಬರು: ರೀ ಅಶೋಕ್ ಕೆಳಗಿಳಿಯುವುದೂ ಇಲ್ಲ. ಸಿ.ಟಿ.ರವಿ ಮೇಲೇರುವುದೂ ಇಲ್ಲ.
ಯಾಕೆಂದರೆ ಅಸೆಂಬ್ಲಿಯಲ್ಲಿ ಒಕ್ಕಲಿಗರಿಗೆ ಕೊಟ್ಟ ನಾಯಕತ್ವವನ್ನು ಕಿತ್ತು, ಕೌನ್ಸಿಲ್ಲಿನಲ್ಲಿ ಕೊಟ್ಟರೆ ಬ್ಯಾಲೆ ಆಗಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈಗಾಗಲೇ ಕುಮಾರಸ್ವಾಮಿ ಅವರಿಂದಲೇ ಹಳೆ ಮೈಸೂರು ಪಾಕೀಟಿನಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ ಎಂಬ ಮೆಸೇಜು ಹೋಗಿದೆ. ಹೀಗಿರುವಾಗ ಇಲ್ಲಿ ಅಶೋಕ್ ಅವರನ್ನು ಕೆಳಗಿಳಿಸಿದರೆ ಒಕ್ಕಲಿಗ ಮತಬ್ಯಾಂಕಿನ ಮೇಲೆ ಜೆಡಿಎಸ್ಸಿಗೆ ಮಾತ್ರ ಕಂಟ್ರೋಲು. ಹೀಗಾಗಿ ಬಿಜೆಪಿಯಲ್ಲಿ ಒಕ್ಕಲಿಗರಿಗೆ ಪ್ರಾಮಿನೆನ್ಸು ಇಲ್ಲ ಎಂಬ ಮಾತು ಶುರುವಾಗುತ್ತದೆ.
ಇದು ಇನ್ನೂ ಡೇಂಜರು. ಅಂದ ಹಾಗೆ ಅಶೋಕ್ ಅವರ ವಿಷಯದಲ್ಲಿ ಪಕ್ಷದ ಹಲವು ಶಾಸಕರಿಗೆ ಸಮಾಧಾನವಿಲ್ಲ ಎಂಬುದು ನಿಜ. ಅದೇ ಕಾಲಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಅಶೋಕ್ ವಿಫಲರಾಗಿದ್ದಾರೆ ಎಂಬುದೂ ನಿಜ. ಆದರೆ ಇದೇ ಕಾರಣಕ್ಕೆ ಅವರ ಪದಚ್ಯುತಿ ಅಗುತ್ತದೆ ಎಂಬುದು ಮಾತ್ರ ಸುಳ್ಳು ಅಂತ ಅಲ್ಲಿದ್ದವರಿಗೆ ವಿವರಿಸಿದ್ದಾರೆ. ರೀ ಎಂಟ್ರಿಗೆ ಈಶ್ವರಪ್ಪ ಕರಾರು ಅಂದ ಹಾಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಂಡಾಯವೆದ್ದು ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರ ವಿರುದ್ದ ಸ್ಪರ್ಧಿಸಿದ್ದ, ಮತ್ತದೇ ಕಾರಣಕ್ಕಾಗಿ ಬಿಜೆಪಿಯಿಂದ ಉಚ್ಚಾಟಿತ ರಾಗಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಬುಲಾವ್ ಬಂದಿದೆ.
ಮೊನ್ನೆ ಅವರಿಗೆ ಕರೆ ಮಾಡಿದ್ದದ ಅಮಿತ್ ಶಾ ಆಪ್ತರೊಬ್ಬರು: ‘ಈಶ್ವರಪ್ಪಾಜೀ, ಆಗಿzಯಿತು. ಎಲ್ಲವನ್ನೂ ಮರೆತು ಬಿಜೆಪಿಗೆ ವಾಪಸ್ಸಾಗಿ ಬಿಡಿ. ಅಮಿತ್ ಶಾಜೀ ಕೂಡಾ, ಈಶ್ವರಪ್ಪ ಅವರ ಸಿಟ್ಟು ಕಡಿಮೆ ಆಗಿದೆಯಾ ನೋಡಿ. ಎಷ್ಟೇ ಆದರೂ ಕರ್ನಾಟಕದಲ್ಲಿ ಪಕ್ಷ ಕಟ್ಟಲು ಅವರ ಶ್ರಮವೂ ಇದೆ ಅಂತ ಹೇಳಿದ್ದಾರೆ. ನೀವು ವಾಪಸ್ಸು ಬರಲು ರೆಡಿ ಅಂದರೆ ನಾನು ಅವರಿಗೆ ಮೆಸೇಜು ಪಾಸ್ ಮಾಡುತ್ತೇನೆ’ ಎಂದಿದ್ದಾರೆ. ಆದರೆ ಅವರ ಮಾತು ಕೇಳಿದ ಈಶ್ವರಪ್ಪ, ‘ಯೇ ಇಲ್ಲ, ಇಲ್ಲ, ನಾನು ಬಂಡಾಯವೆದ್ದಿದ್ದಕ್ಕೆ ಒಂದು ಸಿದ್ಧಾಂತ ಕಾರಣ, ಇವತ್ತು ಪಕ್ಷ ಅಪ್ಪ-ಮಕ್ಕಳ ಕೈಯಲ್ಲಿ ಸಿಲುಕಿಕೊಂಡಿದೆ. ಅವರ ಮುಷ್ಟಿಯಿಂದ ಪಕ್ಷ ಬಿಡುಗಡೆಯಾಗ ಬೇಕು ಎಂಬುದು ನನ್ನ ವಾದವಾಗಿತ್ತು’ ಎಂದಿದ್ದಾರೆ.
ಹಾಗೆಯೇ ಮುಂದುವರಿದು ‘ಇನ್ನು ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಪದಾಽಕಾರಿಗಳಿಂದ ಹಿಡಿದು ಜಿಲ್ಲಾಧ್ಯಕ್ಷರವರೆಗೆ ಎಲ್ಲ ಹಂತಗಳಲ್ಲಿ ಅಪ್ಪ-ಮಕ್ಕಳ ಆಪ್ತರಿಗೆ ಆದ್ಯತೆ ನೀಡಲಾಗಿದೆ. ಇದೇ ರೀತಿ ಹಿಂದುಳಿದವರಿಗೆ, ಅದರಲ್ಲೂ ವಿಶೇಷವಾಗಿ ಕುರುಬರಿಗೆ ಪಕ್ಷದಲ್ಲಿ ಅನ್ಯಾಯ ವಾಗಿದೆ. ಇನ್ನು ಹಿಂದುತ್ವದ ವಿಷಯದಲ್ಲಿ ಆದ್ಯತೆ ಕಡಿಮೆ ಯಾಗಿದೆ. ಇದೆಲ್ಲ ಸರಿಯಾಗಬೇಕು ಎಂಬುದು ನನ್ನ ವಾದ ವಾಗಿತ್ತು. ಹಾಗಂತಲೇ ನಾನು ಬಂಡಾಯವೆದ್ದು ಸ್ಪರ್ಧಿಸಿದೆ.
ಹೀಗೆ ಸ್ಪರ್ಧಿಸಿದ ಕೂಡಲೇ ಗೆದ್ದು ಬಿಡುತ್ತೇನೆ ಎಂಬ ಭ್ರಮೆಯೇನೂ ನನಗಿರಲಿಲ್ಲ. ಆದರೆ ಆ ಸ್ಪರ್ಧೆಯ ಮೂಲಕ ಯಾವ ಮೆಸೇಜು ಕೊಡ ಬೇಕಿತ್ತೋ ಅದನ್ನು ಕೊಟ್ಟಿದ್ದೇನೆ. ಪಕ್ಷದ ಬಹು ಸಂಖ್ಯಾತರು ಏನನ್ನು ಹೇಳಲು ಹಿಂಜರಿಯುತ್ತಿದ್ದರೋ? ಅದನ್ನು ನಾನು ಹೇಳಿದ್ದೇನೆ. ಆದರೆ, ಅವತ್ತು ಯಾವ
ವಿಷಯವನ್ನು ಮುಂದಿಟ್ಟು ಕೊಂಡು ನಾನು ಹೋರಾಡಿದೆನೋ? ಆ ವಿಷಯದಲ್ಲಿ ಇವತ್ತೂ ಬದಲಾವಣೆಯಾಗಿಲ್ಲ. ಅಪ್ಪ-ಮಕ್ಕಳ ಹಿಡಿತ ಇನ್ನೂ ಮುಂದುವರಿದಿದೆ. ಇದೆಲ್ಲ ಯಾವಾಗ ಇದು ಬದಲಾಗುತ್ತದೋ? ಆಗ ನಾನು ಪಕ್ಷಕ್ಕೆ ಬರಲು ರೆಡಿ. ಇಲ್ಲದಿದ್ದರೆ ಮಾತುಕತೆಗೆ ನಾನು ತಯಾರಿಲ್ಲ’ ಅಂತ ಖಡಕ್ಕಾಗಿ ಹೇಳಿದ್ದಾರೆ.
ಲಾ ಸಿಪ್
ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಕಾರು ಶೋ ರೂಮಿನ ಮಾಲೀಕರೊಬ್ಬರು ಹೆದರಿ ದುಬೈಗೆ ಹೋಗಿದ್ದಾರಂತೆ. ಕಾರಣ? ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಹಗರಣ ನಡೆಯಿತಲ್ಲ? ಆ ಹಗರಣ ನಡೆದ ಸಂದರ್ಭದಲ್ಲಿ ನಾಯಕರೊಬ್ಬರು ಇವರ ಬಳಿ ತಲಾ ಮೂರು ಕೋಟಿ ರೂಪಾಯಿ ಮೌಲ್ಯದ ಒಂದು ಜೀಪು, ಎರಡು ಕಾರು ಖರೀದಿಸಿದ್ದರಂತೆ.
ಖರೀದಿಸಿದ್ದೇನೋ ಓಕೆ. ಆದರೆ ಹಗರಣ ಬಯಲಿಗೆ ಬಂದಾಗ ಈ ನಾಯಕರೂ ತಗಲಿಕೊಂಡಿದ್ದಾರೆ. ಅದೇ ಈ ಕಾರು ಶೋ ರೂಮಿನ ಮಾಲೀಕರ ಸಮಸ್ಯೆ. ಯಾಕೆಂದರೆ ಈ ಹಗರಣದ ದುಡ್ಡಿನಿಂದಲೇ ಆ ನಾಯಕರು ಕಾರು ಖರೀದಿಸಿದ್ದರೆ? ತನಿಖೆ ನಡೆಸುತ್ತಿರುವವರು ತಮ್ಮನ್ನು ಬಂಧಿಸುವುದು ಗ್ಯಾರಂಟಿ ಎಂಬುದು ಇವರ ಆತಂಕ. ಹಾಗಂತಲೇ ವಿಮಾನ ಹತ್ತಿ ದುಬೈಗೆ ಹೋಗಿರುವ ಈ ಕಾರು ಶೋ ರೂಮಿನ ಮಾಲೀಕರು ವಾಪಸ್ಸು ಬರಲು ತಯಾರೇ ಇಲ್ಲವಂತೆ.