ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಭಾರತದ ಧ್ಯೇಯವಾಕ್ಯ ‘ಸತ್ಯಮೇವ ಜಯತೆ’. ಜಗತ್ತಿನ ಎಲ್ಲ ದೇಶಗಳಿಗೂ ಹೀಗೆ ಒಂದು ಧ್ಯೇಯವಾಕ್ಯ ಅಥವಾ ಮೋಟೋ ಇರುತ್ತದೆಯೆ? ಎಲ್ಲ
ದೇಶಗಳಿಗೂ ಒಂದು ಬಾವುಟ ಇದೆ, ರಾಷ್ಟ್ರ ಗೀತೆ ಇದೆ. ಕೆಲವು ದೇಶಗಳ ರಾಷ್ಟ್ರಗೀತೆಯಲ್ಲಿ ಅಕ್ಷರಗಳಿಲ್ಲ, ಆದರೆ ರಾಷ್ಟ್ರಗೀತೆ ಅಥವಾ ಒಂದು ಟ್ಯೂನ್
ಇz ಇದೆ. ಆದರೆ ಈ ಧ್ಯೇಯ ವಾಕ್ಯದ ಕಥೆ ಸುಲಭವಲ್ಲ. ಕೆಲವು ದೇಶಗಳು ಇವುಗಳನ್ನು ಹೊಂದಿದೆ.
ಕೆಲವು ದೇಶಗಳು ಯಾವುದೇ ಅಫಿಷಿಯಲ್ ವಾಕ್ಯವನ್ನು ಹೊಂದಿಲ್ಲ. ಅಮೆರಿಕ ಇನ್ ಗಾಡ್ ವೀ ಟ್ರಸ್ಟ್ ಎನ್ನುವ ವಾಕ್ಯವನ್ನು ಹೊಂದಿದೆ. ಸಿಂಗಪೂರ್, ಆನ್‌ವರ್ಡ್ ಸಿಂಗಪೂರ್ ಎನ್ನುವ ಹೇಳಿಕೆಯನ್ನು ಹೊಂದಿದೆ. ಸ್ಪೇನ್ ಫರ್ದರ್ ಅಂಡ್ ಬಿಯಾಂಡ್ ಎನ್ನುವ ವಾಕ್ಯವನ್ನು ಹೊಂದಿದ್ದಾರೆ. ನಮ್ಮೆಲ್ಲ ಮಿತಿಗಳನ್ನು ಮೀರಿ ಮುಂದಕ್ಕೆ ಹೋಗಬೇಕು ಒಂದಷ್ಟು ರಿ ತೆಗೆದುಕೊಳ್ಳಬೇಕು ಎನ್ನುವ ಅರ್ಥವನ್ನು ಸ್ಪೇನ್ ಧ್ಯೇಯ ವಾಕ್ಯ ಹೇಳುತ್ತದೆ. ಸ್ಪ್ಯಾನಿಶರು ಮೂಲತಃ ಸೈಲರ್ಸ್.
ಅವರು ಜಗತ್ತನ್ನು ಅನ್ವೇಷಣೆ ಮಾಡಿಕೊಂಡು ಹೊರಟಿದ್ದರ ಫಲವನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಸ್ಪ್ಯಾನಿಶರ ನಡುವೆ ೧೮ ವರ್ಷ ಬದುಕಿದ
ಮೇಲೆ ಕಥೆಗಳಿಗೇನು ಕಡಿಮೆ ಅಲ್ಲವೇ ? ಯೂರೋಪಿನ ಇತರ ದೇಶಗಳಿಗಿಂತ ಸ್ಪೇನ್‌ನಲ್ಲಿ ಬದುಕುವುದು ಬಹಳ ಸುಲಭ. ಅದಕ್ಕೆ ಪ್ರಮುಖ ಕಾರಣ ಇಲ್ಲಿನ ಜನ. ಅಲ್ಪಸ್ವಲ್ಪ ಸ್ಪ್ಯಾನಿಷ್ ಭಾಷೆಯನ್ನ ಕಲಿತು ಸಂವಹನ ಮಾಡಲು ಶುರು ಮಾಡಿ ದರೆ ಸಾಕು ಇವರು ನಿಮ್ಮನ್ನು, ತಮ್ಮವನು ಎಂದು
ಪರಿಗಣಿಸಿ ಬಿಡುತ್ತಾರೆ. ಅಂದು ಇಂದು ರೇಸಿಸಂ ಪ್ರಕರಣಗಳು ಇದ್ದೇ ಇರುತ್ತವೆ. ಯಾವುದಾ ದರೂ ಕಾರಣ ಹೇಳಿ ವ್ಯಕಿಯಿಂದ ವ್ಯಕ್ತಿಗೆ ಬೇರ್ಪಡಿಸುವ, ಬೇರೆ ರೀತಿಯಲ್ಲಿ ಕಾಣುವ ಎಲ್ಲವೂ ರೇಸಿಸಂ ಅಡಿಯ ಬರುತ್ತದೆ ಎನ್ನುವುದು ನನ್ನ ನಂಬಿಕೆ. ನನ್ನ ಅನುಭವದ ಪ್ರಕಾರ ಬ್ರಿಟಿಷರು ಮತ್ತು ಆಸ್ಟ್ರೇಲಿ ಯನ್ನರು ಹೆಚ್ಚು ಈ ರೀತಿಯ ಮನೋಭಾವ ಹೊಂದಿದವರು.
ಇಂಗ್ಲೆಂಡ್‌ನ ರಸ್ತೆಗಳಲ್ಲಿ ಇಂತಹ ಕೆಟ್ಟ ಮನಸುಳ್ಳವರ ವಾಗ್ದಾಳಿಗೆ ನಾನು ಕೂಡ ಗುರಿಯಾಗಿದ್ದೇನೆ. ಏನಾದರೂ ಸರಿಯೇ ಇಲ್ಲಿ ನೆಲಸುವುದಿಲ್ಲ ಎನ್ನುವ ಶಪಥ ಮಾಡಿದ್ದೂ ಕೂಡ ಇದೆ ಕಾರಣಕ್ಕೆ, ಆಸ್ಟ್ರೇಲಿಯಾ ಕೂಡ ಇಂದಿಗೂ ಒಮ್ಮೆಯೂ ಭೇಟಿ ನೀಡದೆ ಇರಲು ಅಲ್ಲಿನ ಜನರ ಉಡಾಫೆ ಮತ್ತು ಇತರರನ್ನು ನಿಕೃಷ್ಟರನ್ನಾಗಿ ಕಾಣುವ ಗುಣ ಕಾರಣ. ಯಾರೋ ಒಂದಿಬ್ಬರು ಮಾಡಿದ ಕಾರಣಕ್ಕೆ ಇಡೀ ದೇಶವನ್ನ ಹೀಗೆ ಜನರಲೈಸ್ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಹಲವಾರು ಜನರ ಮನಸ್ಸಿನಲ್ಲಿ ಬಂದಿರುತ್ತದೆ.
ನನ್ನ ಅನುಭವದ ಮಾತು ಒತ್ತಟ್ಟಿಗಿರಲಿ, ನೀವು ಕೂಡ ಒಂದಷ್ಟು ಗ್ರೌಂಡ್‌ವರ್ಕ್ ಮಾಡಿ ನೋಡಿ, ಸುಖಾಸುಮ್ಮನೆ ಜಗತ್ತಿನಲ್ಲಿ ಯಾರೂ ಯಾರಿಗೂ
ಹಣೆಪಟ್ಟಿ ಕಟ್ಟುವುದಿಲ್ಲ, ಅದಕ್ಕೊಂದು ಬಲವಾದ ಕಾರಣ ಇದ್ದೇ ಇರುತ್ತದೆ. ಬ್ರಿಟಿಷರಿಗೆ ಮತ್ತು ಆಸ್ಟ್ರೇಲಿಯನ್ನರಿಗೆ ನಾವು ಬೆ ಎನ್ನುವ ಹುಂಬುತನ
ಇರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಯೂರೋಪಿನಲ್ಲಿ ಅತ್ಯಧಿಕ ಮೌಲ್ಯವಿರುವ ಡಿನಾಮಿನೇಷನ್ ಎಂದರೆ ಅದು ೫೦೦ ಯುರೋ ನೋಟು. ಸ್ಪೇನ್, ಬಾರ್ಸಿಲೋನಾದಲ್ಲಿ ಈ ನೋಟಿಗೆ ಬಿನ್ ಲಾಡೆನ್ ಎನ್ನುವ ಹೆಸರನ್ನು ಇಟ್ಟಿದ್ದರು, ಇನ್ಫ್ಯಾಕ್ಟ್ ಈಗಲೂ ಅದು ಚಾಲನೆಯಲ್ಲಿದೆ.
ಈ ಹೆಸರು ಅದೇಕೆ ಇಟ್ಟಿದ್ದಾರೆ ಎನ್ನುವ ಕುತೂಹಲದಿಂದ ಗೆಳೆಯ ಮಾರ್ಕೋನಿಗೆ ಕೇಳಿದೆ. ಅವನ ಉತ್ತರ ಅದೆಷ್ಟು ಸಮಂಜಸವಾಗಿತ್ತು ಎಂದರೆ ಅದನ್ನ ನನಗೆ ಕೇಳಿದವರಿಗೆಲ್ಲ ಹೇಳಿಕೊಂಡು ಬರುವಷ್ಟು. ಬಿನ್ ಲಾಡೆನ್ ಹೆಸರನ್ನ ಎಲ್ಲರೂ ಕೇಳಿರುತ್ತಾರೆ ಆದರೆ ನೋಡಿದವರ ಸಂಖ್ಯೆ ಎಷ್ಟು? ಹಾಗೆಯೇ ೫೦೦ ರ ನೋಟು ಇದೆಯೆಂದು ಎಲ್ಲರಿಗೂ ಗೊತ್ತು ಆದರೆ ಅದನ್ನ ನೋಡಿದವರೆಷ್ಟು? ಸಮಾಜದಲ್ಲಿ ಇದರ ಚಲಾವಣೆ ಕಡಿಮೆ, ಇಲ್ಲಿ ಕೂಡ
ಸಾಹುಕಾರರು, ಕಾಳದಂಧೆಕೋರರು ಈ ಐನೂರರ ನೋಟನ್ನ ಸಂಗ್ರಹಿಸುವ ಕೆಲಸದಲ್ಲಿ ಮಗ್ನರು.
ಹೀಗಾಗಿ ಜನ ಸಾಮಾನ್ಯರು ಈ ನೋಟನ್ನ ನೋಡುವ ಸಾಧ್ಯತೆ ಕಡಿಮೆ ಎನ್ನುವ ಅರ್ಥದಲ್ಲಿ ಬಿನ್ ಲಾಡೆನ್ ಹೆಸರನ್ನ ಈ ನೋಟಿಗೆ ಇಲ್ಲಿನ ಜನ
ಸಾಮಾನ್ಯ ಇಟ್ಟಿದ್ದಾನೆ. ನಿಮಗೆ ಗೊತ್ತಿರಲಿ, ಹೀಗೆ ಐನೂರರ ನೋಟು ಕೈಲಿಡಿದು ನೀವು ವ್ಯಾಪಾರಕ್ಕೆ ಹೊರಟರೆ ಮುಕ್ಕಾಲು ಪಾಲು ಅಂಗಡಿಯವರು ಅದಕ್ಕೆ ಚೇಂಜ್ ಇಲ್ಲ ಎಂದು ಸಾಗಹಾಕುತ್ತಾರೆ. ೫೦೦ ಯುರೋ ಭಾರತದ ರುಪಾಯಿಗೆ ೪೨ ಸಾವಿರ ರುಪಾಯಿ ಮೀರಿದ ಮೌಲ್ಯ ಹೊಂದಿದೆ. ನೀವು ಸಾವಿರ ರುಪಾಯಿ ವ್ಯಾಪಾರ ಮಾಡಿ ೪೨ ಸಾವಿರ ಮೌಲ್ಯದ ನೋಟು ಕೊಟ್ಟರೆ ಅದಕ್ಕೆ ಚಿಲ್ಲರೆ ಯಾರು ತಂದಾರು ಅಲ್ಲವೇ? ಹೀಗಾಗಿ ಐನೂರರ ನೋಟಿಗೆ ಚಿಲ್ಲರೆ ಬೇಕೆಂದರೆ ನೀವು ಬ್ಯಾಂಕಿಗೆ ಹೋಗಬೇಕು.
ಅಲ್ಲಿ ನಿಮ್ಮ ಐಡಿ ಕಾರ್ಡ್ ತೋರಿಸಿ ಚಿಲ್ಲರೆ ಪಡೆಯಬೇಕು. ಕೆಲವೊಂದು ಬ್ಯಾಂಕುಗಳಲ್ಲಿ ಐಡಿ ನೋಡದೆ ಕೂಡ ಚಿಲ್ಲರೆ ನೀಡುತ್ತಿದ್ದರು. ಹೀಗೆ ಒಂದು ದಿನ ಐಡಿ ಕೇಳದ ಬ್ಯಾಂಕಿಗೆ ಐನೂರರ ನೋಟು ಕೈಲಿಡಿದು ಚಿಲ್ಲರೆ ಕೇಳಲು ಹೋಗಿದ್ದೆ. ನನ್ನ ಸ್ಪ್ಯಾನಿಷ್ ಉಚ್ಚಾರಣೆ ಇಲ್ಲಿನ ಜನರಂತೆ ಇರುವುದರಿಂದ
ಫೋನ್‌ನಲ್ಲಿ ಮಾತನಾಡಿದರೆ ಮುಕ್ಕಾಲು ಪಾಲು ಜನರಿಗೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೆ ಎದು ರಿಗೆ ಕಂಡಾಗ ನನ್ನ ಮುಖವನ್ನು, ಚರ್ಮದ ಬಣ್ಣ
ವನ್ನು ಹೇಗೆ ಬದಲಾಯಿಸುವುದು. ಎಷ್ಟಾದರೂ ನಾನು ನಾನೇ ಅಲ್ಲವೇ? ಕ್ಯಾಶಿಯರ್ ಕೆಲಸದಲ್ಲಿ ಮುಖ ಹುದುಗಿಸಿಕೊಂಡು ‘ಕೆ ಕಿಯರೆಸ್’ ಅಂದರೆ
‘ಏನು ಬೇಕು’ ಎಂದ.
ನಾನು ಐನೂರಕ್ಕೆ ಚಿಲ್ಲರೆ ಎಂದೇ, ಆತ ಸರಿ ಹಣವನ್ನ ಕೊಡು ಎಂದು ನೋಟನ್ನ ಪಡೆಯಲು ತಲೆ ಎತ್ತಿದವನು ನನ್ನ ಮುಖ ನೋಡಿದ ತಕ್ಷಣ ‘ಪರ್ದೋನ ನೋ ಲೋ ತೆಂಗೊ ಕಾಂಬಿಯೊ’ ಎಂದ. ಅಂದರೆ ‘ಕ್ಷಮಿಸಿ ಚಿಲ್ಲರೆ ಇಲ್ಲ’ ಎನ್ನುವ ಅರ್ಥ. ನನಗೆ ತಕ್ಷಣ ಕೋಪ ಬಂದಿತು. ‘ಕೆ ಪೋರ್ ದಿಸೆಸ್ ನೋ ಹಾಯ್ ಕಕಾಂಬಿಯೊ? ಪೋರ್ ಕೆ ಸೊಯ್ ಮೊರೆನೊ?’ ಎಂದೆ, ‘ಚಿಲ್ಲರೆ ಇಲ್ಲವೆಂದು ಏಕೆ ಹೇಳುತ್ತಿದ್ದೀರಿ? ನಾನು ಕಂದು ಬಣ್ಣದವನು ಎಂದಲ್ಲವೇ?’ ಎನ್ನುವ ಅರ್ಥದಲ್ಲಿ ಹೇಳಿದೆ. ಬಹಳಷ್ಟು ಜನ ಪಾಕಿಸ್ತಾನಿಗಳ ಕಾರ್ಯ ನಮಗೂ ಇಂತಹ ಸನ್ನಿವೇಶವನ್ನ ತಂದಿಟ್ಟಿತ್ತು.
ಕ್ಯಾಶಿಯರ್ ತಕ್ಷಣ ಇಲ್ಲ ಖಂಡಿತ ಹಾಗೇನಿಲ್ಲ ಎಂದು ತನ್ನ ಸ್ಥಾನದಿಂದ ಎದ್ದು ಬಂದು ನನ್ನ ಜೊತೆಗೆ ಸಾಮಾನ್ಯ ಮಾತಿಗೆ ಇಳಿದ. ಅವನಿಗೆ ನಾನು ಭಾರತೀಯ ಎಂದು ಹೇಳಿದ ಮೇಲೆ ಅವನ ಮುಖದ ಭಾವ ಬದಲಾಯಿತು, ಚಿಲ್ಲರೆಯೂ ಸಿಕ್ಕಿತು. ಇನ್ನೊಂದು ದಿನ ಮೆಟ್ರೋದಲ್ಲಿ ಪಯಣಿಸುವಾಗ ಕೂಡ ಪೆಡ್ಡೆಹುಡುಗನ ಜತೆಗೆ ವಾಗ್ವಾದಕ್ಕೆ ಸಿಲುಕಿದ್ದ ನೆನಪು ಇನ್ನೂ ಹಸಿರಾಗಿದೆ. ವಿನಾಕಾರಣ ನಾಲ್ಕೈದು ಜನರ ಹುಡುಗರ ಗುಂಪು ಇಲ್ಲ ಸಲ್ಲದ
ಕೆಟ್ಟ ಮಾತುಗಳನ್ನ ಆಡತೊಡಗಿದರು. ಭಾಷೆ ಚೆನ್ನಾಗಿ ಬರುತ್ತಿದ್ದ ಕಾರಣ ಅವು ನನ್ನ ಕುರಿತು ಹೇಳುತ್ತಿರುವುದು ಎನ್ನುವುದು ತಿಳಿಯಿತು. ನಾನು
ಹುಡುಗರ ಗುಂಪನ್ನ ಸಮೀಪಿಸಿ, ಭಾಷೆಯ ಮೇಲೆ ನಿಯಂತ್ರಣವಿರಲಿ ಎನ್ನುವ ಎಚ್ಚರಿಕೆ ನೀಡಿದೆ.
ಅವರಿಗೆ ನನ್ನ ಸ್ಪ್ಯಾನಿಷ್ ಅಚ್ಚರಿ ತಂದಿತು ಎನ್ನಿಸುತ್ತದೆ. ನಿನಗೆ ಸ್ಪ್ಯಾನಿಷ್ ಬಂದರೆ ಸಾಲದು ಇದು ಕತಲೂನ್ಯ ನಿನಗೆ ಕತಲಾನ್ ಬರುತ್ತದೆಯೇ ಎನ್ನುವ ಧೀಮಾಕಿನ ಮಾತನ್ನ ಆಡಿದರು. ಹೌದು ಬರುತ್ತದೆ, ನಾನು ಈ ನೆಲದಲ್ಲಿ ಇಷ್ಟು ವರ್ಷದಿಂದ ಇದ್ದೇನೆ ಮತ್ತು ನಾನು ಇಲ್ಲಿ ತೆರಿಗೆಯನ್ನ ಕಟ್ಟುತ್ತಿರುವ ನಾಗರಿಕ ಎಂದು ಹೇಳುವಷ್ಟು ಕತಲಾನ್ ಕೂಡ ಬರುತ್ತಿತ್ತು, ಅಷ್ಟೂ ಹೇಳಿದೆ. ಅವರು ಇವ್ಯಾನಾರೋ ಸಿಕ್ಕನಲ್ಲ ಎನ್ನುವ ಮುಖಭಾವ ಮಾಡಿಕೊಂಡು ಸುಮ್ಮನಾದರು. ಮೆಟ್ರೋದಲ್ಲಿ ಸಾಕಷ್ಟು ಜನರಿದ್ದರು, ಹೀಗಾಗಿ ಸುಮ್ಮನಾದರು ಎನ್ನುವುದು ನನ್ನ ಅನಿಸಿಕೆ.
ಇಲ್ಲದಿದ್ದರೆ ಏನಾಗುತ್ತಿತ್ತು ಎನ್ನುವುದನ್ನ ಊಹಿಸಿಕೊಳ್ಳಲು ಹೋಗುವುದಿಲ್ಲ. ಹೀಗೆ ೧೭ ವರ್ಷದ ಬದುಕಿನಲ್ಲಿ ಒಂದೆರೆಡು ಘಟನೆ ಬಿಟ್ಟರೆ, ಬಾರ್ಸಿಲೋನಾ ಸುಖವಾಗಿ ಕಂಡಿತು. ಮೊದಲೇ ಹೇಳಿದಂತೆ ಜನರು ಬೇರೆಲ್ಲ ಯೂರೋಪಿಯನ್ನರಿಗಿಂತ ಬಹಳ ಮೃದು ಮತ್ತು ಒಳ್ಳೆಯ ಸ್ವಭಾವ ದವರು. ನೀವು ಸ್ಪೇನ್‌ಗೆ ಪ್ರವಾಸಕ್ಕೆ ಹೋಗುವರಿದ್ದರೆ ಮುಖ್ಯವಾದ ಒಂದೈದು ವಾಕ್ಯ ಕಲಿತು ಹೋಗುವುದು ಒಳಿತು. ಎಲ್ಲಕ್ಕೂ ಮೊದಲು ‘ನೋ ಕೊಂಪ್ರೆಂದೋ’ ಅಥವಾ ‘ನೋ ಲೋ ಇಂತಿಯಂದು’ ಎನ್ನುವುದನ್ನ ಕಲಿಯುವುದು ಅತಿ ಮುಖ್ಯ. ಅಂದರೆ ನನಗೆ ಅರ್ಥ ವಾಗುತ್ತಿಲ್ಲ ಎನ್ನುವ ಅರ್ಥ. ಸಾಮಾನ್ಯವಾಗಿ ಇಲ್ಲಿನ ಜನ ನಿಮಗೆ ಸ್ಪ್ಯಾನಿಷ್ ಬರುತ್ತದೆಯೇ ಇಲ್ಲವೇ ಎನ್ನುವ ಗೋಜಿಗೆ ಹೋಗುವುದಿಲ್ಲ, ಒಮ್ಮೆಲೇ ಸ್ಪ್ಯಾನಿಷ್ ಭಾಷೆಯಲ್ಲಿ ಸಂವಹನ ಶುರು ಮಾಡಿಬಿಡುತ್ತಾರೆ.
ಹೀಗಾಗಿ ನೋ ಕೊಂಪ್ರೆಂದೋ ಅಥವಾ ನೋ ಲೋ ಇಂತಿಯಂದು ಎಂದರೆ, ಆಗ ಅವರು ಮಾತನ್ನ ನಿಲ್ಲಿಸಿ, ಹಾವಭಾವದಿಂದ ನಿಮಗೆ ಅರ್ಥ
ಮಾಡಿಸಲು ಪ್ರಯತ್ನಿಸುತ್ತಾರೆ. ಇದರ ಜತೆಗೆ ಹೆಬ್ಲೋ ಮುಯ್ ಪೊಕೊ ಎನ್ನುವುದನ್ನ ಕೂಡ ಸೇರಿಸಿದರೆ ನಿಮಗೆ ಇನ್ನೊಂದು ಚಿಟಿಕೆ ಹೆಚ್ಚಿನ ಗೌರವ ಗ್ಯಾರಂಟಿ. ಅಂದರೆ ಸ್ವಲ್ಪ ಮಾತನಾಡಲು ಬರುತ್ತದೆ ಎನ್ನುವ ಅರ್ಥ. ಎರಡನೆಯದಾಗಿ ದೊಂದೆ ಹಾಯ್ ಎನ್ನವುದನ್ನು ಚೆನ್ನಾಗಿ ಕಲಿತುಕೊಳ್ಳುವುದು ಕೂಡ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ದೊಂದೆ ಹಾಯ್ ಎಂದರೆ ಎಲ್ಲಿದೆ ಎಂದರ್ಥ. ಇದನ್ನ ಎಲ್ಲ ಕಡೆ ಬಳಸಬಹುದು. ಉದಾಹರಣೆಗೆ ‘ದೊಂದೆ ಹಾಯ್ ಬಾನ್ಯೊ’ ಎಂದರೆ ಟಾಯ್ಲೆಟ್ ಎಲ್ಲಿದೆ ಎಂದರ್ಥ.
ಹೀಗೆ ಮೆಟ್ರೋ ಸ್ಟೇಷನ್ ಎಲ್ಲಿದೆ? ಮ್ಯೂಸಿಯಂ ಎಲ್ಲಿದೆ? ಹೀಗೆ ಎಲ್ಲಕ್ಕೂ ‘ದೊಂದೆ ಹಾಯ್’ ಸೇರಿಸಿಕೊಂಡು ಕೇಳುತ್ತ ಹೋಗಬಹುದು. ಮೂರನೆಯ ದಾಗಿ ಯಾವುದೇ ದೇಶಕ್ಕೆ ಹೋಗಲಿ ಅಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ ‘ಕ್ವಾನ್ತೋ ಕ್ವೆಸ್ತಾ’ ಎನ್ನುವ ಪದವನ್ನ ಕೂಡ ಕಲಿತು ಹೋಗುವುದು ಒಳ್ಳೆಯದು. ಕ್ವಾನ್ತೋ ಕ್ವೆಸ್ತಾ ಎಂದರೆ ಇದರ ಬೆಲೆಯೆಷ್ಟು ಎಂದು ಕೇಳುವುದಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೊಳ್ಳುವ ಮುನ್ನ ಹೀಗೆ ಲೋಕಲ್ ಭಾಷೆಯಲ್ಲಿ ಕೇಳಿದಾಗ ಅವರು ಹೇಳುವ ಬೆಲೆ ಜಾಸ್ತಿ ಆಗುವ ಸಾಧ್ಯತೆ ಕಡಿಮೆ. ಅಂದರೆ
ಜಗತ್ತಿ ನಾದ್ಯಂತ ವಿದೇಶಿ ವ್ಯಕ್ತಿ, ಭಾಷೆ ಬಾರದವನು ಎಂದ ತಕ್ಷಣ ವ್ಯಾಪಾರಿಗಳು ನಾಲ್ಕು ಪೈಸೆ ಹೆಚ್ಚು ವಸೂಲಿ ಮಾಡಲು ನೋಡುವುದು ಸಾಮಾನ್ಯ
ಎಂದಾಯ್ತು. ಅದು ಹೌದು ಕೂಡ.
ನಾಲ್ಕನೆಯದಾಗಿ ಎದುರಿಗೆ ಸಿಕ್ಕವರಿಗೆ ಮುಗುಳ್ನಗುವುದು, ಬೊನಸ್, ಅಥವಾ ಬೊನಸ್ ದಿಯಾಸ್ ಎನ್ನುವುದು ಕೂಡ ಮಾಡಬೇಕಾದ ಸಂಪ್ರದಾಯ.
ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಗೆ ಏನ್ನೆನುತ್ತಾರೆ ಎನ್ನುವ ಸಂಶಯ ಇzಗ ದಿನದ ಯಾವುದೇ ವೇಳೆಯ ಆಗಿರಲಿ, ಓಲಾ, ಬೊನಸ್ ಅಥವಾ ಓಲಾ ಮುಯ್ ಬೊನಸ್ ಎನ್ನುವುದು ಸಂಪ್ರದಾಯ. ಇದು ಹೊಸ ಜನರ ನಡುವೆ ಐಸ್ ಬ್ರೇಕ್ ನಂತೆ ಕಾರ್ಯ ನಿರ್ವಹಿಸುತ್ತದೆ.
ಕೊನೆಯದಾಗಿ, ಹಸ್ತ ಲ್ವೇಗೂ ಎನ್ನುವುದು ಕೂಡ ಅತ್ಯಂತ ಅವಶ್ಯಕ ಪದವಾಗಿದೆ. ಇದು ಇಂಗ್ಲಿಷ್‌ನ ಸಿ ಯು ಲೇಟರ್ ಎನ್ನುವುದಕ್ಕೆ ಸಮವಾಗಿದೆ. ಇವಿಷ್ಟೇ ಅಂತಲ್ಲ ಹೀಗೆ, ಸಾರೀ ಎನ್ನುವುದಕ್ಕೆ, ಲೋಸಿತೊ ಎನ್ನುತ್ತೇವೆ. ಎಕ್ಸ್‌ಕ್ಯೂಸ್ ಮಿ ಎನ್ನುವುದಕ್ಕೆ ಪೆರ್ದೋನ್ ಹೀಗೆ ಒಂದಷ್ಟು ಬೇಸಿಕ್ ಕಲಿತು
ಹೋದರೆ ಮತ್ತು ಅದನ್ನ ಬಳಸಿದರೆ ಬೇಗ ಇಲ್ಲಿನ ಜನರಿಗೆ ಹತ್ತಿರವಾಗಬಹುದು. ಅಂದಹಾಗೆ ನೀವು ಉಚ್ಚಾರಣೆ ತಪ್ಪು ಮಾಡಿದರೂ ಕೂಡ ಇಲ್ಲಿನ ಜನ ನೀವು ಪ್ರಯತ್ನ ಪಟ್ಟಿದ್ದಕ್ಕೆ ನಿಮಗೆ ಶಹಬ್ಬಾಸ್ ಹೇಳುತ್ತಾರೆ. ನಿಮ್ಮನ್ನ ನಿಮ್ಮ ಉಚ್ಚಾರಣೆಗೆ ಮತ್ತು ಭಾಷೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಎಂದಿಗೂ ಕಿಚಾಯಿಸಿ ನಗುವುದಿಲ್ಲ. ಇದೆ ಮಾತನ್ನ ಬ್ರಿಟಿಷರ ಕುರಿತು ನಾನು ಹೇಳಲಾರೆ.
ಸ್ಪ್ಯಾನಿಷ್ ನಲ್ಲಿ ಬಾಯ್‌ಗೆ ಅದಿಯೋಸ್ ಎನ್ನುತ್ತಾರೆ, ಆದರೆ ಚಾವ್ ಎನ್ನುವ ಪದವನ್ನ ಕೂಡ ಬಾಯ್ ಹೇಳಲು ಜನ ಬಳಸುತ್ತಾರೆ. ಮುಂದಿನವಾರ ಇನ್ನೊಂದಿಷ್ಟು ಅನುಭವ, ನೆನಪುಗಳನ್ನ ಬರೆಯುವೆ ಅಲ್ಲಿಯವರೆಗೆ ಚಾವ್ !