ಅಭಿಮತ
ರಮಾನಂದ ಶರ್ಮಾ
ಬ್ಯಾಂಕುಗಳು ಸುಮಾರು ೧೫ ಲಕ್ಷಕೋಟಿ ರು. ಸಾಲವನ್ನು ರೈಟ್ ಅಫ್ ಮಾಡಿವೆ ಎಂದು ಸಂಸತ್ತಿನಲ್ಲಿ ಹೇಳಿದ್ದು, ಈ ಬಗೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಪತ್ರಕರ್ತರು ಪ್ರಶ್ನಿಸಲು, ರೈಟ್ ಆಫ್ ಎಂದರೆ ಮನ್ನಾ ಅಲ್ಲ. ಇದು ಬ್ಯಾಂಕುಗಳಲ್ಲಿ ಒಂದು ಪುಸ್ತಕದಿಂದ ಇನ್ನೊಂದು ಪುಸ್ತಕಕ್ಕೆ ವರ್ಗಾಯಿಸುವುದು ಮತ್ತು ಸಾಲ ವಸೂಲಿಯ ಎಲ್ಲ ಪ್ರಕ್ರಿಯೆಗಳೂ ಮುಂದುವರೆಯುತ್ತದೆ, ನೀಡಿದ ಎಲ್ಲ ಸೆಕ್ಯುರಿಟಿಗಳು ಮತ್ತು ಗ್ಯಾರಂಟಿಗಳು ಹಾಗೆಯೇ ಇರುತ್ತವೆ ಎಂದು ಸಮಾಜಾಯಿಸಿ ನೀಡಿ ಜನ ತೆಯ ಭಯವನ್ನು ನಿವಾವರಿಸಲು ಯತ್ನಿಸಿದ್ದರು.
ಜನಸಾಮಾನ್ಯರು ಮತ್ತು ಬ್ಯಾಂಕಿಂಗ್ ವ್ಯವಹಾರದ ಅಂತರಿಕ ಸಮೀಕರಣವನ್ನು ತಿಳಿಯದವರು ಸಾಲ ರೈಟ್ ಆಫ್ (ಬರ್ಖಾಸ್ತ್) ಮತ್ತು ಸಾಲ ಮನ್ನಾ (ವೇವರ್) ವನ್ನು ಒಂದೇ ತಕ್ಕಡಿಯಲ್ಲಿ ತೂಗು ತ್ತಿದ್ದು, ಬ್ಯಾಂಕುಗಳ ಬಗೆಗೆ ಗೊಂದಲಕಾರಿ ಅಭಿಪ್ರಾಯಗಳು ಕೇಳುತ್ತಿವೆ. ಹಾಗಿದ್ದರೆ ರೈಟ್ ಆಫ್ ಮತ್ತು ಮನ್ನಾಗಳ ವಾಸ್ತವ ಏನು? ರೈಟ್ ಆಫ್ (ಬರ್ಖಾಸ್ತ) ಎಂದರೇನು?: ಮೇಲು ನೋಟಕ್ಕೆ ರೈಟ್ ಆಫ್ (ಬರ್ಖಾತ್) ಮತ್ತು ಸಾಲ ಮನ್ನಾ ((loan waiver)ದಲ್ಲಿ ವ್ಯತ್ಯಾಸ ಕಾಣುವುದಿಲ್ಲ.
ಎರಡೂ ಒಂದೇ ರೀತಿಯಲ್ಲಿ ಕಾಣುತ್ತವೆ. ಜನಸಾಮಾನ್ಯರು ಎರಡನ್ನೂ ಒಂದೇ ದೃಷ್ಟಿ ಕೋನದಲ್ಲಿ ನೋಡುತ್ತಾರೆ. ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನವಿದ್ದ ವರೂ ಇದರ ವ್ಯತ್ಯಾಸ ತಿಳಿಯದೇ ಗೊಂದಲಕ್ಕೀಡಾಗುತ್ತಾರೆ. ಸಾಮಾನ್ಯವಾಗಿ ರೈಟ್ ಆಫ್ ಎಂದರೆ, ಸಾಲಗಾರನ ಸಾಲವು ಬ್ಯಾಂಕ್‌ನ ಪುಸ್ತಕದಿಂದ ಮತ್ತು ದಾಖಲೆಯಿಂದ ಇಲ್ಲವಾಯಿತು ಮತ್ತು ಸಾಲಗಾರನು ಸಾಲ ಮುಕ್ತ ಅಥವಾ ಋಣ ಮುಕ್ತನಾದನೆಂದು ತಿಳಿಯುತ್ತಾರೆ. ಸಾಲ ಬಾಕಿ ಇರಿಸಿ ಕೊಂಡವನು ತಾನು ಸಾಲ ಬಾಕಿದಾರನಲ್ಲವೆಂದೂ ಭಾವಿಸುತ್ತಾನೆ. ಅಂತೆಯೇ ಬ್ಯಾಂಕುಗಳ ವಿರುದ್ಧ ಮತ್ತು ಸರಕಾರದ ವಿರುದ್ಧ ಜನತೆ ಅಕ್ರೋಶ ವ್ಯಕ್ತ ಮಾಡುತ್ತಾರೆ ಮತ್ತು ಒಳ ವ್ಯವಹಾರವನ್ನು ಶಂಕಿಸುತ್ತಾರೆ.
ಬ್ಯಾಂಕುಗಳು ಸಾಲ ವಸೂಲಿ ಮಾಡುವ ಎಲ್ಲ ಮಾರ್ಗ ಗಳಲ್ಲಿ ನಿರೀಕ್ಷಿತ ಫಲ ದೊರಕದಿರುವಾಗ, ಈ ಮಾರ್ಗಗಳಿಂದ ವಸೂಲಿ ಇನ್ನೂ ವಿಳಂಬ ವಾದಾಗ ಬ್ಯಾಂಕ್ ಬ್ಯಾಲೆನ್ಸ್ ಶೀಟನ್ನು ಕ್ಲೀನ್ ಮಾಡುವ ಅನಿವಾರ್ಯತೆ ಎದುರಾದಾಗ, ಈ ಮಾರ್ಗವನ್ನು ಹಿಡಿಯುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲ ವನ್ನು ಮುಖ್ಯ ಸಾಲ ಪುಸ್ತಕದಿಂದ ಹೊರತೆಗೆದು ಬೇರೆ ಪುಸ್ತಕಕ್ಕೆ ವರ್ಗಾಯಿಸುತ್ತಿದ್ದು, ಬ್ಯಾಲೆನ್ಸ್‌ಶೀಟ್‌ನಲ್ಲಿ ಅನುತ್ಪಾ ದಕ ಅಸ್ತಿಯ ಹೊರೆಯನ್ನು ಕಡಿಮೆಮಾಡಲಾಗುತ್ತದೆ.
ಆದರೆ, ಸಾಲಗಾರ ಋಣ ಅಥವಾ ಸಾಲ ಮುಕ್ತನಾಗುವುದಿಲ್ಲ. ಬ್ಯಾಂಕುಗಳ ಪುಸ್ತಕದಲ್ಲಿ ಮತ್ತು ದಾಖಲೆಗಳಲ್ಲಿ ಅವನು ಸಾಲಗಾರನಾಗಿಯೇ ಮುಂದು ವರೆಯುತ್ತಾನೆ. ಸಾಲ ಮರು ಪಾವತಿ ಮಾಡುವ ಸಾಲಗಾರನ ಬದ್ಧತೆ ಹಾಗೆಯೇ ಇರುತ್ತದೆ. ಹಾಗೆಯೇ ಜಾಮೀನುದಾರನ ಬದ್ಧತೆ ಮತ್ತು ಹೊಣೆಗಾರಿಕೆ ಕೂಡಾ ಹಾಗೆಯೇ ಇರುತ್ತದೆ. ಸಾಲಗಾರನು ನೀಡಿದ ಸೆಕ್ಯುರಿಟಿಗಳನ್ನು ಕೈಬಿಡುವುದಿಲ್ಲ ಅಥವಾ ಹಿಂತಿರುಗಿಸು ವುದಿಲ್ಲ, ಸಾಲ ವಸೂಲಾತಿಯ ಎಲ್ಲಾ
ಪ್ರಕ್ರಿಯೆಗಳು ನಿಲ್ಲದೇ ಎಂದಿನಂತೆ ಮುಂದುವರೆಯುತ್ತವೆ.
ಸಾಲ ವಸೂಲಾತಿಯ ನಿಟ್ಟಿನಲ್ಲಿ ನಡೆಯುತ್ತಿರುವ ಕಾನೂನಾತ್ಮಕ ಕ್ರಮಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಮತ್ತು ಅವು ನಿರಾತಂಕವಾಗಿ ನಡೆಯುತ್ತವೆ. ಸಾಲಗಳನ್ನು ರೈಟ್ ಆಫ್ ಮಾಡಿದ ನಂತರವೂ ಸಾಲ ವಸೂಲಾದ ಸಾಕಷ್ಟು ದಾಖಲೆಗಳಿವೆ. ಇದರಲ್ಲಿ ಸಾಲಗಾರನಿಗೆ ಯಾವುದೇ ರೀತಿಯ ವಿನಾಯಿತಿ ನೀಡುವ ಸಾಧ್ಯತೆಗಳಿಲ್ಲ. ಈ ರೀತಿಯ ರೈಟ್ ಆಫ್ ಗಳು ಬ್ಯಾಂಕಿಂಗ್ ಉದ್ಯಮದಲ್ಲಿ ಹೊಸ ಬೆಳವಣಿಗೆಯಾಗಿರದೇ, ಲಾಗಾಯ್ತಿ ನಿಂದ ಇದೆ. ಇದೊಂದು ನಿರಂತರ ಪಕ್ರಿಯೆ. ಇತ್ತೀಚೆಗೆ ಸ್ವಲ್ಪದೊಡ್ಡ ಪ್ರಮಾಣದ ಮೊತ್ತ ಈ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದರಿಂದ ಇದು ದೊಡ್ಡ ಸುದ್ದಿ
ಯಾಗಿದೆ. ರೈಟ್ ಆಫ್ ಒಂದು ರೀತಿಯಲ್ಲಿ Accounting Jugglery ಮತ್ತು ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗಳನ್ನು ಪಾಲಿಸುವ ಅನಿವಾರ್ಯತೆ ಯಾಗಿರುತ್ತದೆ.
ಬ್ಯಾಂಕುಗಳು ಏಕೆ ರೈಟ್ ಆಫ್ ಮಾಡುತ್ತವೆ?: ಬ್ಯಾಂಕು ಗಳು ತಮ್ಮ ಬ್ಯಾಲೆನ್ಸ ಶೀಟ್‌ನ್ನು ಸದೃಢವಾಗಿ ತೋರಿಸಲು ಮತ್ತು ಸರಕಾರಕ್ಕೆ ನೀಡುವ ತೆರಿಗೆ ಹೊರೆಯನ್ನು ತಗ್ಗಿಸಿ ಕೊಳ್ಳಲು ಸಾಮಾನ್ಯವಾಗಿ ರೈಟ್ ಆ-ಗೆ ಮೊರೆ ಹೋಗುತ್ತವೆ. ಹಾಗೆಯೇ ಅನುತ್ಪಾದಕ ಅಸ್ತಿಗಳ ಆಯುಷ್ಯ ಹೆಚ್ಚಾದಂತೆ
ಅದಕ್ಕೆ ಬ್ಯಾಂಕಿನ ಒಟ್ಟಾರೆ ಲಾಭದಿಂದ ವರ್ಗಾಯಿಸುವ ಪ್ರಾವಿಷನ್ ಕೂಡಾ ಹೆಚ್ಚಾಗುತ್ತಿದ್ದು ಬ್ಯಾಂಕ್‌ನ ನಿವ್ವಳ ಲಾಭ ದಲ್ಲಿ ಕಡಿತವಾಗುತ್ತದೆ.
ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿ ಹೆಚ್ಚಾದಂತೆ, ಆ ಬ್ಯಾಂಕು, ರಿಸರ್ವ್ ಬ್ಯಾಂಕ್‌ನ ಕಾಯಕಲ್ಪ ಚಿಕಿತ್ಸೆಗೆ ಒಳಗಾಗುವ ಭಯ ಇರುತ್ತದೆ. ಕಾಯಕಲ್ಪ ಚಿಕಿತ್ಸೆ ಎಂದರೆ ಬ್ಯಾಂಕ್‌ನ ಅರ್ಥಿಕ ಆರೋಗ್ಯವನ್ನು ಸದೃಢ ಗೊಳಿಸಲು ರಿಸರ್ವ ಬ್ಯಾಂಕ್ ದುರ್ಬಲ ಬ್ಯಾಂಕುಗಳನ್ನು ಸಾಲ ನೀಡಿಕೆ, ಹೊಸ ನೇಮಕಾತಿ, ಸಿಬ್ಬಂದಿಗಳಿಗೆ ಬಡ್ತಿ, ಹೆಚ್ಚಿನ ಹಣಕಾಸು ಸೌಲಭ್ಯ ಅನುತ್ಪಾದಕ ಸಾಲ ಮತ್ತು ಸಾಲ ವಸೂಲಾತಿಯ ನಿಟ್ಟಿನಲ್ಲಿ ಹಲವಾರು ನಿರ್ದೇಶನ, ನಿಯಂತ್ರಣ ಮತ್ತು ಕಟ್ಟಳೆಗಳಿಗೆ ಒಳಪಡಿಸುತ್ತದೆ. ಅಂತೆಯೇ ಬ್ಯಾಂಕುಗಳು ರೈಟ್ ಆಫ್ ಗೆ ಮುಂದಾಗುತ್ತವೆ. ಈ ನಿಟ್ಟಿನಲ್ಲಿ ರಿಸರ್ವ ಬ್ಯಾಂಕ್
ನಿರ್ದೇಶನ ಮತ್ತು ನಿಯಮಾವಳಿಗಳು ವಿಸ್ತೃತವಾಗಿ ಇರುತ್ತವೆ. ಬ್ಯಾಂಕುಗಳು ಮನಬಂದಂತೆ ರೈಟ್ ಆಫ್ ಮಾಡುವಂತಿಲ್ಲ.
ರೈಟ್ ಆಫ್ ಮಾಡುವುದರಿಂದ ಬ್ಯಾಂಕುಗಳ ಅನುತ್ಪಾದಕ ಅಸ್ತಿಯಲ್ಲಿ ಇಳಿತ ಕಂಡು ಬರುತ್ತಿದ್ದು, ಇದು ಬ್ಯಾಂಕುಗಳಿಗೆ ಸರಕಾರದಿಂದ ಹೆಚ್ಚಿನ ಬಂಡ
ವಾಳ ಪಡೆಯಲು ಅನುಕೂಲವಾಗುತ್ತದೆ. ರೈಟ್ ಆಫ್ ಆದ ಸಾಲ ಅಂತಿಮವಾಗಿ ನೂರಕ್ಕೆ ನೂರರಷ್ಟು ವಸೂಲಾಗಬಹುದೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ.
ಸಾಲಮನ್ನಾ ಎಂದರೇನು?: ಸಾಲಮನ್ನಾ ಪ್ರಕ್ರಿಯೆ ಸಾಲ ರೈಟ್ ಆಫ್ ಗಿಂತ ತೀರಾಭಿನ್ನ ವಾಗಿರುತ್ತದೆ. ಸಾಲ ಮನ್ನಾದಲ್ಲಿ ಸಾಲ ಬ್ಯಾಂಕ್ ಪುಸ್ತಕ ದಿಂದ ಮತ್ತು ದಾಖಲೆಯಿಂದ ಸಂಪೂರ್ಣವಾಗಿ ಹೊರಹೋಗು ತ್ತದೆ. ಸಾಲಗಾರನಿಗೆ ಬ್ಯಾಂಕ್‌ನಿಂದ ಋಣ ಮುಕ್ತ ಅಥವಾ ಸಾಲ ಮುಕ್ತ ಪತ್ರ
ದೊರೆಯುತ್ತದೆ. ಸಾಲಗಾರ ಸಾಲವನ್ನು ಮರುಪಾವತಿ ಮಾಡಬೇಕಾಗಿಲ್ಲ. ಬ್ಯಾಂಕುಗಳು ಆ ಕ್ಷಣದಿಂದ ಸಾಲ ವಸೂಲಿಯ ಎಲ್ಲ ಪ್ರಕ್ರಿಯೆಗಳನ್ನು ನಿಲ್ಲಿಸುತ್ತವೆ. ಬ್ಯಾಂಕ್ ಸುಸ್ತಿದಾರ ಪಟ್ಟಿಯಿಂದ ಆ ಸಾಲಗಾರನ ಹೆಸರನ್ನು ತೆಗೆಯಲಾಗುತ್ತದೆ. ಸಾಲಗಾರ ನೀಡಿದ ಸೆಕ್ಯುರಿಟಿಯನ್ನು ಹಿಂತಿರುಗಿಸ ಲಾಗುತ್ತದೆ.
ಹಾಗೆಯೇ ಸಾಲಕ್ಕೆ ಗ್ಯಾರಂಟಿ ನೀಡಿದವರೂ ಕಟ್ಟಳೆಯಿಂದ ಮುಕ್ತರಾಗುತ್ತಾರೆ. ರೈಟ್ ಆಫ್ ಬ್ಯಾಂಕುಗಳನ್ನು ಸಂಕಷ್ಟದಿಂದ ಪಾರು ಮಾಡಿದರೆ, ಮನ್ನಾ ಇದು ಸಾಲಗಾರರನ್ನು ಸಾಲದ ಶೂಲದಿಂದ ರಕ್ಷಿಸಿ ಅರ್ಥಿಕ ಸಂಕಷ್ಟದಿಂದ ಪಾರುಮಾಡುವ ಪ್ರಕ್ರಿಯೆ. ಸಾಮಾನ್ಯವಾಗಿ ಸಾಲ ಮನ್ನಾ ವಿಷಯ ನೈಸರ್ಗಿಕ ವಿಪತ್ತುಗಳಾದ ನೆರೆ, ಬರ, ಅಧಿಕ ಮಳೆ ಮತ್ತು ಬೆಳೆ ವೈಫಲ್ಯದಿಂದಾಗಿ ಸಂಕಷ್ಟದಲ್ಲಿರುವ ರೈತರ ನಿಟ್ಟಿನಲ್ಲಿ ಹೆಚ್ಚಾಗಿ ಕೇಳಬರುತ್ತದೆ. ಈ ಸಂಕಷ್ಟಗಳಿಗೆ ಸ್ಪಂದಿಸಿ ಸರಕಾರ ಸಾಲ ಮನ್ನಾವನ್ನು ಘೋಷಿಸಿದಾಗ, ರೈತರ ಬಾಕಿ ಸಾಲವನ್ನು ರೈತ ರ ಬದಲಿಗೆ ಸರಕಾರವೇ ಮರು ಪಾವತಿಸುತ್ತದೆ.
ಹೆಚ್ಚಾಗಿ ರೈತರು ಸಹಕಾರಿ ಸಂಘಗಳಿಂದ, ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳಿಂದ ಸಾಲ ಪಡೆಯತ್ತಿದ್ದು, ಸರಕಾರವು ಅವುಗಳಿಗೆ ಅವರು ಮನ್ನಾ ಮಾಡಿದ ಮೊತ್ತ ವನ್ನು ಮರುಪೂರಣ (reimbursement) ಮಾಡುತ್ತದೆ. ರೈತರು ಸಹಕಾರಿ ಸಂಘಗಳಿಂದ ಸಾಲ ಪಡೆದಿದ್ದರೆ, ಅವರು ಕೇಂದ್ರ ಸಹಕಾರಿ ಬ್ಯಾಂಕುಗಳಿಂದ, ರಾಜ್ಯ ಅಪೆಕ್ಸ್ ಬ್ಯಾಂಕುಗಳಿಂದ ಮತ್ತು ಅಪೆಕ್ಸ್ ಬ್ಯಾಂಕುಗಳು ಸರಕಾರ ದಿಂದ ಸಹಾಯ ಪಡೆಯುತ್ತವೆ. ರೈತರ ಸಾಲದ ವಿಚಾರ ದಲ್ಲಿ ನಬಾರ್ಡ್ ಬ್ಯಾಂಕ್‌ನ ಸಹಾಯವೂ ಇರುತ್ತದೆ.
ಸಾಲ ರೈಟ್ ಆಫ್ ಸಾಲ ಮನ್ನಾವಲ್ಲದಿದ್ದರೂ, ಸಾಲ ವಸೂಲಾತಿ ಪ್ರಕ್ರಿಯೆ ಜಾರಿ ಇದ್ದರೂ, ವಸೂಲಾತಿ ನಿರೀಕ್ಷೆಯ ಮಟ್ಟದಲ್ಲಿ ಇರದಿರುವುದು ಅತಂಕಕಾರಿ ಎನ್ನಲಾಗುತ್ತದೆ. ೨೦೧೪-೧೫ರಿಂದ ೨೦೨೨-೫೨೩ವರೆಗಿನ ಹಣಕಾಸು ವರ್ಷಗಳಲ್ಲಿ ೧೦.೪೨ ಲಕ್ಷ ಕೋಟಿ ರೈಟ್ ಆಫ್ ಮಾಡಿದ್ದು, ಕೇವಲ
೧.೬೧ ಲಕ್ಷ ಕೋಟಿ ವಸೂಲಾಗಿದ್ದು, ಇದು ಈ ವರೆಗೆ ರೈಟ್ ಆಫ್ ಮಾಡಿದ ಸಾಲದಲ್ಲಿ ಶೇ.೧೫.೪೫ ರಷ್ಟು ಮಾತ್ರ ಎನ್ನಲಾಗುತ್ತದೆ. ಅಂತೆಯೆ ರೈಟ್ ಅಫ್ ವಾಸ್ತವದಲ್ಲಿ ಸಾಲ ಮನ್ನಾದಂತೆ ಎನ್ನುವ ಟೀಕೆ ಕೇಳುತ್ತದೆ. ಒಮ್ಮೆ ರೈಟ್ ಆಫ್ ಅದರೆ, ವಾಸೂಲಾತಿ ಪ್ರಕ್ರಿಯೆ ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ.
ಸಾಲಮನ್ನಾ ರೈತರಿಗೆ ಹೆಚ್ಚು ಅನುಕೂಲವಾಗಿದ್ದರೆ, ರೈಟ್ ಆಫ್ ದೊಡ್ಡ ಉದ್ಯಮಿಗಳಿಗೆ ವರದಾನ ವಾಗಿದೆ ಎನ್ನುವ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳುತ್ತಿದೆ. ಇತ್ತೀಚೆಗೆ ತೆಲಂಗಾಣ ಸರಕಾರವು ರೈತರ ೨ ಲಕ್ಷದವರೆಗಿನ ಸಾಲವನ್ನು ಮನ್ನಾಮಾಡಲು ಮುಂದಾಗಿದೆ. ಅರ್ಥಿಕ ಸಂಕಷ್ಟವು ಕೇವಲ ಉದ್ಯಮಿಗಳಿಗೆ ಮತ್ತು ರೈತರಿಗೆ ಸೀಮಿತವೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಇವರಂತೆ ಇತರ ಸಾಲ ಗ್ರಾಹಕರೂ ಅರ್ಥಿಕ ಸಂಕಷ್ಟದಲ್ಲಿದ್ದು, ಅವರಿ ಗೇಕೆ ಸಾಲ ಮನ್ನಾ ಭಾಗ್ಯ ಇಲ್ಲ ಎನ್ನುವ ಮಾತೂ ಕೇಳುತ್ತಿದೆ.
(ಲೇಖಕರು: ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)