ಬಹಳ ದೊಡ್ಡ ಶ್ರೀಮಂತನೊಬ್ಬನಿದ್ದ.ಅವನಿಗೆ ಸಂಪತ್ತನ್ನು ಅತಿಯಾಗಿ ಕೂಡಿಡುವ ಅಭ್ಯಾಸ. ತನ್ನ ಸಂಪತ್ತಿನ ಲೆಕ್ಕವನ್ನು ಇಡುತಿದ್ದ, ಲೆಕ್ಕಿಗನನ್ನು ಕರೆದು, ತನ್ನ ಆಸ್ತಿ ಎಷ್ಟಿರಬಹುದೆಂಬುದರ ಲೆಕ್ಕಾಚಾರ ವನ್ನು ಮಾಡುವಂತೆ ಅವನಿಗೆ ಹೇಳಿದ. ಶ್ರೀಮಂತನ ಆಸ್ತಿಯ ಎಲ್ಲ ಲೆಕ್ಕಾಚಾರವನ್ನು ಮಾಡಿದ ಅವನ ಕಾರ್ಯದರ್ಶಿ ನೀವೇನೂ ಚಿಂತಿಸುವಂತಿಲ್ಲ, ನಿಮ್ಮ ಆಸ್ತಿ, ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ.
ಆಗ ಶ್ರೀಮಂತ, ಏನೋ ಆದವನಂತೆ, ತಲೆಯ ಮೇಲೆ ಕೈ ಹೊತ್ತು ಕುಳಿತು ಹತ್ತು ತಲೆ ಮಾರಿನವರೇನೋ ಕುಳಿತು ತಿನ್ನಬಹುದು, ಆದರೆ ಅದರ
ಮುಂದಿನ ತಲೆಮಾರಿನವರು ಏನು ಮಾಡಬೇಕು? ಎಂದು ಚಿಂತಿಸತೊಡಗಿದ. ಅದೇ ಚಿಂತೆಯಲ್ಲಿ ಅವನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ
ಬಂದಿತು. ಹೀಗೆ ಇವನು ಚಿಂತಿಸುತ್ತಿರುವಾಗ, ಸಂತರೊಬ್ಬರು ಆ ಊರಿಗೆ ಬಂದರು. ಶ್ರೀಮಂತ ಸಂತರ ಬಳಿಗೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆಗ ಅವರು ಮುಗುಳ್ನಗುತ್ತಾ, ‘ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇದೆ, ನೀನು ಒಂದು ಕೆಲಸ ಮಾಡು ಇದೇ ದಾರಿಯಲ್ಲಿ ಮುಂದೆ ಹೋ
ದರೆ, ಅಂದು ಗುಡಿಸಲು ಸಿಗುತ್ತದೆ. ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ಇದ್ದಾಳೆ.
ಅಲ್ಲಿ ಹೋಗಿ ನೀನು ಅರ್ಧ ಸೇರು ಅಕ್ಕಿಯನ್ನು ದಾನ ಮಾಡಿ ಬಿಡು, ದೇವರ ಕೃಪೆಯಿಂದ ಎಲ್ಲವೂ ಸರಿ ಹೋಗುತ್ತದೆ’ ಎಂದು ಹೇಳಿದರು. ಆಗ ಶ್ರೀಮಂತ ಬಹಳ ಖುಷಿಯಿಂದ ‘ಇಷ್ಟೇ ತಾನೇ? ಅರ್ಧ ಸೇರು ಯಾಕೆ, ಒಂದು ಮೂಟೆ ಅಕ್ಕಿಯನ್ನೇ ಕೊಡುತ್ತೇನೆ’ ಎಂದು ಅಕ್ಕಿ ಮೂಟೆಯನ್ನು
ತೆಗೆದುಕೊಂಡು ಮುದುಕಿಯ ಮನೆಗೆ ಹೋದ. ಆಕೆಯ ಗುಡಿಸಲಿಗೆ ಹೋಗಿ ಮುದುಕಿಯನ್ನು ಕರೆದು, ‘ನಾನೊಬ್ಬ ಮಹಾದಾನಿ, ಒಂದು ಮೂಟೆ ಅಕ್ಕಿಯನ್ನು ನಿಮಗಾಗಿ ತಂದಿದ್ದೇನೆ, ತೆಗೆದುಕೊಳ್ಳಿ’ ಎಂದ. ‘ನನ್ನದು ಆಗಲೇ ಊಟವಾಯಿತಲ್ಲಪ್ಪ, ಈ ಅಕ್ಕಿ ತೆಗೆದುಕೊಂಡು ನಾನೇನು ಮಾಡಲಿ?’ ಎಂದಳು.
‘ಇಟ್ಟುಕೊಳ್ಳಿ ಅಜ್ಜಿ, ಒಂದು ತಿಂಗಳ ತನಕ ಬರುತ್ತದೆ’ ಎಂದ ಶ್ರೀಮಂತ. ಅದನ್ನು ತೆಗೆದುಕೊಳ್ಳಲು ಮುದುಕಿ ಒಪ್ಪಲಿಲ್ಲ, ‘ಹೋಗಲಿ, ಅರ್ಥ ಸೇರು ಅಕ್ಕಿಯನ್ನಾದರೂ ಇಟ್ಟುಕೊಳ್ಳಿ ನಾಳೆಗಾಗುತ್ತದೆ’ ಎಂದ ಶ್ರೀಮಂತ. ಆಗ ಮುದುಕಿ, ನೋಡಪ್ಪಾ, ಇವತ್ತಿನ ವ್ಯವಸ್ಥೆ ಮುಗಿದಿದೆ, ನಾಳಿನ ಚಿಂತೆಯನ್ನು ನಾನೇಕೆ ಮಾಡಲಿ? ನಾಳೆ ನಾನು ಉಳಿದರೆ ಆ ಭಗವಂತನೇ ಏನೋ ಒಂದು ವ್ಯವಸ್ಥೆ ಮಾಡುತ್ತಾನೆ, ದಯವಿಟ್ಟು ನೀನು ಇದನ್ನೆಲ್ಲ ಇಲ್ಲಿಂದ ತೆಗೆದು ಕೊಂಡು ಹೋಗು ಎಂದಳು.
ಆಗ ಶ್ರೀಮಂತನಿಗೆ, ಸಂತರು ತನ್ನನ್ನು ಇಲ್ಲಿಗೆ ಯಾಕೆ ಕಳಿಸಿದರೆಂದು ಅರ್ಥವಾಯಿತು. ಸಂಪತ್ತನ್ನು ಕೂಡಿಡುವ ತನ್ನ ಬುದ್ಧಿಯನ್ನು ನೆನೆದು ಅವನಿಗೆ ತನ್ನ ಬಗ್ಗೆಯೇ ಬೇಸರವಾಯಿತು. ಮನುಷ್ಯರಾಗಿ ನಾವು ಇಂದು ಕೊನೆ ಮೊದಲಿಲ್ಲದೆ ಹಣವನ್ನು ಕೂಡಿಡುವ ಹುಚ್ಚಿಗಿಳಿದಿದ್ದೇವೆ. ಒಮ್ಮೆ ಈ ಆಸೆ ಪ್ರಾರಂಭವಾಯಿತು ಎಂದರೆ, ಅದಕ್ಕೆ ಕೊನೆ ಮೊದಲೆ ಇಲ್ಲ. ಇಷ್ಟು ಕೂಡಿ ಇಟ್ಟರೆ ಮತ್ತಷ್ಟು ಮಾಡಬೇಕೆನ್ನುವ ಆಸೆ, ಅಷ್ಟು ಕೂಡಿಟ್ಟರೆ ಮತ್ತಷ್ಟರ ಆಸೆ. ಈ ಆಸೆಯ ಜಾಲದಲ್ಲಿ ಸಿಕ್ಕು ಮನೆ ಮಠ ಮಕ್ಕಳು ಎಲ್ಲರನ್ನೂ ಮರೆಯುತ್ತೇವೆ. ಅವರಿಗಾಗಿ ನಾವು ಎಲ್ಲ ಮಾಡುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ, ಅವರನ್ನೇ ಉಪೇಕ್ಷಿಸುತ್ತಾ ಬದುಕಿ ಬಿಡುತ್ತೇವೆ.
ಕೊನೆಗೆ ನಮಗೆ ಜ್ಞಾನೋದಯವಾಗುವ ಹೊತ್ತಿಗೆ ಬಂದು ಅವರು ನಮ್ಮ ನಗಲಿ ಇರುತ್ತಾರೆ ಅಥವಾ ನಾವೇ ಇಲ್ಲವಾಗಿರುತ್ತೇವೆ. ನಾಲ್ಕು ದಿನಗಳ ಬದುಕು
ಇದ್ದಷ್ಟು ದಿನ ಸಂತೃಪ್ತಿಯಿಂದ ಬದುಕುವ, ಪ್ರತಿ ದಿನದ ಪ್ರತಿ ಕ್ಷಣದ ಮಹತ್ವವನ್ನು ತಿಳಿದವರಿಗೆ ಬದುಕು ಸುಂದರವಾಗಿರುತ್ತದೆ. ನಾವು ಯಾವುದನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲವೋ ಅಂತಹ ಬೆಲೆಕಟ್ಟಲಾಗದ ಆಸ್ತಿಯನ್ನು ಗಳಿಸಬೇಕು. ಅವು ಪ್ರೀತಿ, ವಿಶ್ವಾಸ ಸಂಬಂಧ, ನಮ್ಮವರ ಒಡನಾಟಗಳು. ಇಂತಹ ಅಗಣಿತ ಸಂಪತ್ತು ನಿಮ್ಮದಾಗಲಿ ಎನ್ನುವ ಹಾರೈಕೆ.