Sunday, 10th November 2024

Ranjith H Ashwath Special Column: ಪ್ರಶ್ನೆ ಅದಲ್ಲ, ಎನ್ನುತ್ತಲೇ ಉತ್ತರಿಸುತ್ತಿದ್ದ ನಾಡಿಗೇರರು

ರಂಜಿತ್ ಎಚ್. ಅಶ್ವತ್ಥ
ತಲೆಯ ಹಿಂದಕ್ಕೆ ಕೈ ಹೋಗಿ ‘ಪ್ರಶ್ನೆ ಅದಲ್ರಿ’…! ಇದು ಪಕ್ಕಾ ವಸಂತ್ ನಾಡಿಗೇರ್ ಅವರ ಶೈಲಿ. ಈ ರೀತಿ ಒಂದು ವೇಳೆ ರಾಗಾ ಎಳೆ ದರೂ ಎಂದರೆ ಮುಂದಿದ್ದ ವ್ಯಕ್ತಿಗೆ ಏನೋ ಕಾದಿದೆ ಎಂದರ್ಥ. ಯಾವುದೇ ತಪ್ಪಾಗಿದ್ದರೂ ಅದನ್ನು ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಎಂದೂ ಜೋರು ಧ್ವನಿಯಲ್ಲಿ ಮಾತನಾಡದಿದ್ದರೂ, ಅವರ ಸರಣಿ ಪ್ರಶ್ನೆಗಳಿಗೆ ಉತ್ತರಿಸಲು ಹಲವು ಬಾರಿ ನಮ್ಮ ಬಳಿ ಉತ್ತರವಿರುತ್ತಿರಲಿಲ್ಲ. ಸುದ್ದಿಮನೆಯ ಅಂಗಳದಲ್ಲಿ ಈ ಉತ್ತರ ಹುಡುಕಾಟದಲ್ಲಿ ಅವರೊಂದಿಗೆ ಕಳೆದ ಸುಮಾರು ಮೂರು ವರ್ಷ ಮರೆಯಲಾಗದ ನೆನಪುಗಳು.
ವಿಶ್ವವಾಣಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸುಮಾರು ಮೂರರಿಂದ ಮೂರುವರೆ ವರ್ಷ ಕಾರ್ಯ ನಿರ್ವಹಿಸಿದ ನಾಡಿಗೇರ್ ಅವರಲ್ಲಿನ ಪದ ಪ್ರೀತಿ ಹಾಗೂ ಪ್ರತಿಯೊಂದರಲ್ಲಿಯೂ ಪನ್ ಮಾಡುವ, ಹೊಸಬರಿಗೆ ಪತ್ರಿಕೋದ್ಯಮ ಕಲಿಸುವ ರೀತಿ ಈಗಲೂ ನೆನಪಿದೆ.

ಪ್ರತಿಯೊಂದು ಸುದ್ದಿಯನ್ನು ತಮ್ಮದೇಯಾದ ವಿಶ್ಲೇಷಣೆಯೊಂದಿಗೆ ನೋಡುತ್ತಿದ್ದ ಅವರು, ಎಂದಿಗೂ ಸುಲಭಕ್ಕೆ ಯಾವುದನ್ನು ಒಪ್ಪುತ್ತಿರಲಿಲ್ಲ.

ನಿತ್ಯ ಕಚೇರಿಗೆ ಕಾಲಿಡುವಾಗಲೇ, ವಿಶೇಷವೇನಿದೆ ಎನ್ನುವುದನ್ನು ಯೋಚಿಸಿಕೊಂಡು ಕಾಲಿಡುತ್ತಿದ್ದರು. ಯಾವು
ದನ್ನೂ ಸುಲಭಕ್ಕೆ ಒಪ್ಪದೇ, ‘ಪ್ರಶ್ನೆ ಅದು ಅಲ್ಲರೀ’ ಎನ್ನುತ್ತಲೇ ಸುದ್ದಿಮನೆಯ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಿದ ‘ಗೈಡ್’ ಆಗಿದ್ದರು. ಇನ್ನು ಅವರಲ್ಲಿ ನಾನು ಕಂಡ ಮತ್ತೊಂದು ಗುಣ ವೆಂದರೆ, ಸುದ್ದಿಮನೆಗೆ ಬರುವ ಹೊಸ ಪತ್ರಕರ್ತರಿಗೆ ಕಲಿಸುವ ರೀತಿ. ಪತ್ರಿಕೋದ್ಯಮದ ಬಗ್ಗೆ ಗೊತ್ತಿಲ್ಲದೇ, ಕನ್ನಡದ ಬಗ್ಗೆ ಗೊತ್ತಿದ್ದರೆ ಅಂತಹ ವರನ್ನು ಆರು ತಿಂಗಳಲ್ಲಿ ಟ್ರೇನ್ ಮಾಡಬಹುದು ಎನ್ನುವ ಮಾತನ್ನು ಹೇಳುತ್ತಿದ್ದ ಅವರು, ತಮ್ಮ ಸುದೀರ್ಘ ಪತ್ರಿಕೋ ದ್ಯಮದಲ್ಲಿ ನೂರಾರು ಮಂದಿಗೆ ಕಲಿಸುವ ಮೂಲಕ ಹಲವರಿಗೆ ‘ಗುರು’ವಾಗಿದ್ದಾರೆ.

ನಾಡಿಗೇರ್ ಅವರಲ್ಲಿ ಸಾಮಾಜಿಕ ಕಳಕಳಿಯಿತ್ತು. ಹ್ಯೂಮನ್ ಇಂಟರೆ ಸ್ಟೋರಿಗಳು ಸಿಕ್ಕರೆ ಅದಕ್ಕೆ ಚೆಂದದ ಇಂಟ್ರೋ, ಹೆಡ್‌ಲೈನ್ ಕೊಟ್ಟು ಅದಕ್ಕೊಂದು ಆಂಗಲ್ ಕೊಟ್ಟು ಸುದ್ದಿಗೊಂದು ಮೌಲ್ಯವನ್ನು ಕೊಡು
ತ್ತಿದ್ದರು. ಇದರೊಂದಿಗೆ ರಾಷ್ಟ್ರೀಯ, ಕ್ರೀಡೆ, ಸಿನಿಮಾ ವಿಷಯಗಳ ಬಗ್ಗೆ ಆಳವಾದ eನವನ್ನು ಹೊಂದಿದ್ದರು.
ಊರಿನ ಹೆಸರು, ಬೇರೆ ರಾಜ್ಯಗಳ ಜನರ ಹೆಸರುಗಳನ್ನು ಬರೆಯುವ ವಿಷಯದಲ್ಲಿ ಎಂದಿಗೂ ರಾಜಿಯಾಗಿದ್ದೇ ಇಲ್ಲ.

ಮೂರು ವರ್ಷದಲ್ಲಿ ನೂರು ಪ್ರಯೋಗ: ಹಾಗೇ ನೋಡಿದರೆ ನಾಡಿಗೇರ್ ಸರ್ ಜತೆ ವಿಶ್ವವಾಣಿಯಲ್ಲಿ ಕಳೆದ ಮೂರು ವರ್ಷದಲ್ಲಿ ನೂರಾರು ಹೊಸ ಹೊಸ ಪ್ರಯೋಗಗಳನ್ನು ಮಾಡಿzಯಿತು. ಪ್ರಮುಖವಾಗಿ ಕರೋನಾ ಸಮಯದಲ್ಲಿ ಟೈಮ್ಲಿ ಎಂದು ನಿತ್ಯ ಸಂಜೆ ಆರು ಗಂಟೆಗೆ ಇ-ಪೇಪರ್ ಅನ್ನು ಪ್ರಕಟಿಸುವುದು ಇರಬಹುದು, ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆಯ ದಿನ ಇಡೀ ಸಂಪುಟವನ್ನು ರಾಮಮಂದಿರದ ವಿಶೇಷ ಸಂಚಿಕೆಯನ್ನಾಗಿ ರೂಪಿಸಿದ್ದಿರಬಹುದು. ಮಹಾತ್ಮ ಗಾಂಧಿ ಅವರ ೧೫೧ನೇ ವರ್ಷ ಜನ್ಮದಿನದ ನಿಮಿತ್ತ ಗಾಂಧಿ ಕುರಿತಾದ ೧೫೧ ಪ್ರಸಂಗಗಳು ಎನ್ನುವ ಐದು ಪುಟಗಳ ವಿಶೇಷ ಸಂಚಿಕೆ, ದೇವೇಗೌಡರು ಪ್ರಧಾನಿಯಾಗಿ ೨೫ ವರ್ಷ ಸಂದ ಹಿನ್ನಲೆಯಲ್ಲಿ ವಿಶೇಷ ಸಂಪುಟ ಸೇರಿದಂತೆ ಹತ್ತು ಹಲವು ಪ್ರಯೋಗಗಳು ಮುಂದಿನ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯಲಿದೆ ಎಂದರೆ ತಪ್ಪಾಗುವುದಿಲ್ಲ.

ಕೆಲಸದ ವಿಷಯದಲ್ಲಿ ಅವರೊಂದಿಗೆ ವಾದ ಮಾಡಿದ್ದು ಒಂದೆರಡು ಬಾರಿಯಲ್ಲ. ಹಾಗೆಂದು, ಎಂದಿಗೂ ಈ ವಾದಗಳನ್ನು ವೈಯಕ್ತಿಕವಾಗಿ ಕ್ಯಾರಿ ಫಾರ್ವರ್ಡ್ ಮಾಡಿದ ಉದಾಹರಣೆ ವಸಂತ್ ನಾಡಿಗೇರ್ ಅವರ ಬಳಿಯಿರಲಿಲ್ಲ. ಅನೇಕ ಬಾರಿ, ಕೋಪಿಸಿಕೊಂಡು ಅವರ ಕ್ಯಾಬಿನ್‌ನಿಂದ ಎಂದು‌ ಬಂದರೂ, ಕೆಲ ಹೊತ್ತಿನ ಬಳಿಕ ಟೀಗೆ ಕರೆದುಕೊಂಡು ಹೋಗಿ ಆ ಕ್ಷಣದ ಬೇಸರವನ್ನು ಮರೆಸುವ ವ್ಯಕ್ತಿತ್ವ ಅವರದ್ದಾಗಿತ್ತು. ಈ ಎಲ್ಲವನ್ನು ಮೀರಿ ನಾಡಿಗೇರ್ ಅವರಲ್ಲಿ ನಾನು ಕಂಡ ಶ್ರೇಷ್ಠ ಗುಣವೆಂದರೆ, ಮತ್ತೊಬ್ಬರನ್ನು ಬೆಳೆಸುವುದಾಗಿತ್ತು. ಜತೆಯಲ್ಲಿ ಕೆಲಸ
ಮಾಡುತ್ತಿರಲಿ, ಮಾಡದೇ ಇರಲಿ ಸಂಬಂಧಗಳನ್ನು ಉಳಿಸುವ ಶ್ರೇಷ್ಠ ಗುಣವಿತ್ತು.

ತಮ್ಮ ಸಮಸ್ಯೆಯನ್ನು ಮತ್ತೊಬ್ಬರ ಮೇಲೆಂದು ಹಾಕದೇ, ತಪ್ಪನ್ನು ತಿದ್ದುವಾಗಲೂ ಎದುರಿಗಿದ್ದ ವ್ಯಕ್ತಿಗೆ ಬೇಸರ ವಾಗದಂತೆ ಮಾತನಾಡುತ್ತಿದ್ದರು. ಕೊನೆಗೂ ತಮ್ಮ ಅನಾರೋಗ್ಯದ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳದೇ ಕೊನೆಯವರೆಗೂ ಖುಷಿಯನ್ನೇ ಹಂಚಿ, ಚಿರನಿದ್ರೆಗೆ ಜಾರಿದ್ದಾರೆ.

ನನ್ನ ಅಂಕಣಕ್ಕೆ ನಾಮಕರಣ ಮಾಡಿದ್ದೇ ಅವರು

ಕಳೆದ ಮೂರು ವರ್ಷಗಳ ಹಿಂದೆ ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ನನಗೆ ಅಂಕಣ
ಬರೆಯಲು ಅವಕಾಶ ಕೊಟ್ಟರು. ಪ್ರತಿವಾರದ ಅಂಕಣಕ್ಕೆ ಮೊದಲ ಎರಡು ವಾರ ಬೇರೆ ಅಂಕಣದ ಹೆಸರಲ್ಲಿ ಪ್ರಕಟ
ವಾಗಿತ್ತು. ಮೂರನೇ ವಾರದ ಹೊತ್ತಿಗೆ, ವಸಂತ್ ನಾಡಿಗೇರ್ ಅವರೇ ಕರೆದು, ‘ನಿಮ್ಮ ಅಂಕಣಕ್ಕೊಂದು ಹೆಸರಿಡಿ’
ಎಂದರು. ನೀವೇ ಒಂದೆರೆಡು ಹೆಸರು ಕೊಡಿ ಸರ್, ಆಮೇಲೆ ಒಂದು -ನಲ್ ಮಾಡೋಣ ಎಂದು ಹೇಳಿ ನನ್ನ ಕುರ್ಚಿ ಬರುವ ಹೊತ್ತಿಗೆ ಕೊಟ್ಟ ಹೆಸರೇ ‘ಅಶ್ವತ್ಥಕಟ್ಟೆ’. ಇದರೊಂದಿಗೆ ಇನ್ನು ಎರಡು ಹೆಸರಲ್ಲಿ ಹೇಳಿದ್ದರು. ಆದರೆ
ಕೊನೆಗೆ ಅಶ್ವತ್ಥಕಟ್ಟೆಯೇ ಇರಲಿ ಎಂದು ಅಂತಿಮಗೊಳಿಸಿದ್ದರು.

ವ್ಯಕಿ, ಊರಿನ ಹೆಸರಿನ ಬಗ್ಗೆ ವಿಶೇಷ ಆಸಕ್ತಿ

ಇನ್ನು ನಾಡಿಗೇರ್ ಅವರಿಗೆ ವ್ಯಕ್ತಿ, ಊರುಗಳ ಬಗ್ಗೆ ವಿಶೇಷ ಪ್ರೀತಿಯಿತ್ತು. ಯಾವುದೇ ಊರು, ಹೆಸರು ಹಾಗೂ ಸರ್‌ನೇಮ್‌ಗಳು ಸುಮ್ಮನೆ ಬಂದಿರುವುದಿಲ್ಲ. ಅದಕ್ಕೊಂದು ಹಿನ್ನಲೆಯಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅದ ರಲ್ಲಿ ತಪ್ಪು ಮಾಡಬಾರದು ಎನ್ನುವುದು ಅವರ ನಿಲುವಾಗಿತ್ತು. ಒಮ್ಮೆ ‘ಬಸನಗೌಡ ಪಾಟೀಲ್’ ಬರೆಯಲು
ಹೋಗಿ ‘ಬಸವನ ಗೌಡ ಪಾಟೀಲ್’ ಎಂದು ಬರೆಯಲಾಗಿತ್ತು. ಸುದ್ದಿಯಲ್ಲಿ ವ್ಯಾಕರಣ ಹೋದರೂ ತಪ್ಪಿಲ್ಲ. ಆದರೆ ಯಾವುದೇ ಕಾರಣಕ್ಕೂ ಹೆಸರನ್ನು ತಪ್ಪು ಬರೆಯಬಾರದು. ಹೆಸರು ತಪ್ಪು ಬರೆದರೆ, ಆ ವ್ಯಕ್ತಿಗೆ ಮಾತ್ರವಲ್ಲದೇ ವ್ಯಕ್ತಿತ್ವಕ್ಕೆ ಅಪಮಾನ ಮಾಡಿದಂತೆ ಎನ್ನುವುದು ಅವರ ಗಟ್ಟಿ ನಿಲುವು. ಇನ್ನು ಕರ್ನಾಟಕದ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಥ್ ಅಥವಾ ಗೆಹ್ಲೋಟ್ ಎನ್ನುವ ವಿಷಯಕ್ಕೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದು, ಅವರಿಗೆ ಹೆಸರುಗಳ ಮೇಲಿದ್ದ ವಿಶೇಷ ಪ್ರೀತಿಗೆ ಒಂದು ಉದಾಹರಣೆ!