Friday, 20th September 2024

Akshay Kumar Mudda Column: ಕನ್ನಡದ ಈ ಅಧೋಗತಿಗೆ ಹೊಣೆ ಯಾರು ?

ಕಳಕಳಿ

ಅಕ್ಷಯ ಕುಮಾರ್‌ ಮುದ್ದಾ

ಒಂದು ಸಮೃದ್ಧ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಭಾಷೆ ಅತ್ಯಂತ ಪ್ರಭಾವಶಾಲಿ ಯಾಗಿರಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ, ಆಡುವ ಭಾಷೆ ಕನ್ನಡ. ಆದರೆ ಬರೆಯುವ, ಓದುವ, ಕಲಿಯುವ ಬುನಾದಿ ಶಿಕ್ಷಣವೂ ಕನ್ನಡದ್ದೇ ಆಗಿರಬೇಕಲ್ಲವೇ? ಮಾತೃಭಾಷೆ ಎಂಬುದು ಕನಿಷ್ಠಪಕ್ಷ 5ನೇ ತರಗತಿ ಯವರೆಗಾದರೂ ಕಡ್ಡಾಯವಾದರೆ ಮಕ್ಕಳಿಗೆ ತಮ್ಮ ತಾಯ್ನಾಡಿನ ಭಾಷೆಯ ಅರಿವು ಮೂಡಲು ಸಾಧ್ಯ.

ಏಕೆಂದರೆ, ಇಂಗ್ಲಿಷ್ ವ್ಯಾಮೋಹವಿಂದು ಪ್ರತಿಷ್ಠೆಯಾಗಿ ಪರಿಣಮಿಸಿದೆ. ಪೋಷಕರು ಎಲ್‌ಕೆಜಿ ಹಂತದಿಂದಲೇ ಆಂಗ್ಲಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದರಿಂದ ಕನ್ನಡ ಶಾಲೆಗಳಿಗೆ ಮತ್ತು ಕನ್ನಡಕ್ಕೆ ಕುತ್ತು ಬಂದಿದೆ. ಗುಣಮಟ್ಟದ ಕನ್ನಡ ಕಲಿಸುವ ಶಾಲೆಗಳು ಸರಕಾರದ ಆಶ್ರಯವಿಲ್ಲದೇ ಸೊರಗಿಹೋಗಿವೆ, ಅನೇಕ ಖಾಸಗಿ ಕನ್ನಡ ಶಾಲೆಗಳು ಸಂಪೂರ್ಣವಾಗಿ ಮುಚ್ಚಿವೆ. ಅಲ್ಲಲ್ಲಿ ಒಂದಷ್ಟು ಕನ್ನಡ ಶಾಲೆಗಳು ಉಳಿದಿದ್ದರೂ ಸರಕಾರದ ಅನುದಾನ-ಸಹಾಯ- ಸಹಕಾರ ಇಲ್ಲದೆ ಅವು ಕೂಡ ಉಸಿರು ಹಿಡಿದುಕೊಂಡೇ ಬೋಧನೆ ಮಾಡು ವಂತಾಗಿದೆ.

ಇದನ್ನೂ ಓದಿ: Kannada Film Industry: ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯ; ತನಿಖಾ ಸಮಿತಿ ರಚಿಸಲು ಸಿಎಂಗೆ ಕನ್ನಡದ ಪ್ರಮುಖ ಕಲಾವಿದರ ಪತ್ರ

ಅತ್ಯಂತ ಪ್ರಾಚೀನ ಭಾಷೆಯಾಗಿರುವ ಕನ್ನಡವನ್ನು ಉಳಿಸಬೇಕಿರುವ ಸರಕಾರವೇ ತಾತ್ಸಾರ ಮಾಡಿದರೆ ಹೇಗೆ? ಕೇವಲ ಸರಕಾರಿ ಶಾಲೆಗಳಿಂದ ಗುಣಮಟ್ಟದ ಕನ್ನಡ ಬೋಧನೆ ಮತ್ತು ರಕ್ಷಣೆ ಸಾಧ್ಯವೇ? ಈ ಬಾಬತ್ತಿನಲ್ಲಿ ಖಾಸಗಿ ಕನ್ನಡ ಶಾಲೆಗಳು ಬೇಡವೇ? ಹೀಗಾದರೆ ಕನ್ನಡ ಉಳಿಯಲು ಸಾಧ್ಯವೇ? 1994ರಿಂದಲೂ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅನುದಾನ/ಆರ್ಥಿಕ ಸಹಾಯ ನೀಡಿಲ್ಲ, ಶಿಕ್ಷಕರ ಅನುಮೋದನೆ ನೀಡಿಲ್ಲ. ಈಗ ಕನ್ನಡ ದೆಡೆಗೆ ಮತ್ತು ಕನ್ನಡ ಶಾಲೆಗಳೆಡೆಗೆ ಪಾಲಕರ ಆಸಕ್ತಿಯೂ ಕಡಿಮೆಯಾಗಿರುವುದರಿಂದ ಶಾಲಾ ಶುಲ್ಕವೂ ಬರುತ್ತಿಲ್ಲ.
ಹೀಗಾಗಿ ಶಾಲಾ ನಿರ್ವಹಣೆ, ಶಿಕ್ಷಕರ ವೇತನ, ವಾಹನ ಖರ್ಚುಗಳು ಹೆಚ್ಚಾಗಿವೆ; ಮೇಲೆ ಉಲ್ಲೇಖಿಸಿದಂತೆ ಖಾಸಗಿ ಕನ್ನಡ ಶಾಲೆಗಳು ಬಹುತೇಕ ಮುಚ್ಚುವ ಹಂತಕ್ಕೆ ಬಂದಿವೆ.

ಬಹಳ ವರ್ಷಗಳ ಹಿಂದೆ ಕನ್ನಡ ಶಾಲೆಗಳಲ್ಲಿ ಮೆಟ್ರಿಕ್ ಪಾಸಾದ ಶಿಕ್ಷಕರೇ ಇದ್ದರೂ, ಮಕ್ಕಳಿಗೆ ಕನ್ನಡವನ್ನು ತಪ್ಪಿಲ್ಲದೆ ಕಲಿಸುತ್ತಿದ್ದರು. ಕಾಗುಣಿತ/ಒತ್ತಕ್ಷರ, ಪತ್ರಲೇಖನ, ಪ್ರಬಂಧ ಹೀಗೆ ಶುದ್ಧಬರಹವನ್ನು ಕಲಿಸುವ ನಿಟ್ಟಿನಲ್ಲಿ ಇನ್ನಿಲ್ಲದಂತೆ ಶ್ರಮಿಸುತ್ತಿದ್ದರು, ಆಸ್ಥೆ ತೋರುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಮಕ್ಕಳ ಮುಂದೆ ಧೈರ್ಯ ದಿಂದ ನಿಂತು ಪಾಠಮಾಡುವ ಸ್ಥಿತಿಯಲ್ಲಿ ಪ್ರಶಿಕ್ಷಕರಿಲ್ಲ, ಏಕೆಂದರೆ ಕನ್ನಡ ಶಾಲೆಗಳಿಗೆ ಈಗ ಸರಕಾರದ ಸಹಕಾರ ವಿಲ್ಲದೆ ಮುಚ್ಚಬೇಕಾಗಿರುವ ಸ್ಥಿತಿ ಬಂದಿರುವುದರಿಂದ ಅವರೆಲ್ಲರ ಸ್ಥಿತಿ ಚಿಂತಾಜನಕವಾಗಿದೆ.

ಹೀಗಾಗಿ, ಪ್ರಮಾಣ ಪತ್ರಗಳು, ಅಂಕಪಟ್ಟಿಗಳಲ್ಲಿ ಅಗ್ರ ಶ್ರೇಯಾಂಕ ಪಡೆದ ಬಹುತೇಕ ಮಕ್ಕಳಿಗೆ ಕನ್ನಡವನ್ನು ತಪ್ಪಿಲ್ಲದೆ ಓದಲು ಮತ್ತು ಬರೆಯಲು ಬರುತ್ತಿಲ್ಲ. ಕನ್ನಡ ಎಂಬುದು ಬರೀ ಸಮ್ಮೇಳನದ ಭಾಷಣಗಳಿಗೆ ಸೀಮಿತ ವಾಗಿಬಿಟ್ಟಿದೆ. ಅಲ್ಲಿಯೂ ಕೇಳುಗರ ಸಂಖ್ಯೆ ಕಡಿಮೆ ಇರುತ್ತದೆ ಎನ್ನಿ. ಇದು ಕನ್ನಡ ಚಿತ್ರರಂಗದ ಮೇಲೂ ಕೆಟ್ಟ ಪರಿಣಾಮ ಬೀರಿ, ಒಳ್ಳೆಯ ಕನ್ನಡ ಚಿತ್ರಗಳನ್ನು ವೀಕ್ಷಿಸಲು ಕನ್ನಡಿಗರೆನಿಸಿಕೊಂಡವರೇ ಬರುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಂತೂ ಬಹುತೇಕ ಬಡಾವಣೆಗಳಲ್ಲಿ ಮುಖಕ್ಕೆ ರಾಚುವಂತೆ ಕಾಣುವುದು ಇಂಗ್ಲಿಷ್ ಶಾಲೆಗಳೇ. ಕನ್ನಡ ಶಾಲೆಗಳು ಹೀಗೆ ಕ್ರಮೇಣ ಕಣ್ಮರೆಯಾಗುತ್ತಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಹೀಗಾದರೆ ಕನ್ನಡವನ್ನು ಉಳಿಸಿ ಬೆಳೆಸುವವರು ಯಾರು? ಸರಕಾರಿ ವ್ಯವಸ್ಥೆಯ ಅಧೀನದಲ್ಲೇ ಇರುವ ಕೆಪಿಎಸ್‌ಸಿ ಯವರು ನಡೆಸಿದ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಕಂಡು ಬಂದ ತಪ್ಪುಗಳು ಮತ್ತು ಅಧ್ವಾನ ಗಳ ಬಗ್ಗೆ ಈಗ ಮತ್ತೊಮ್ಮೆ ಬಿಡಿಸಿ ಹೇಳಬೇಕಿಲ್ಲ. ಪದವಿ ಗಳಿಸಿ ಡಿ.ಎಡ್, ಬಿ.ಎಡ್ ಪ್ರಶಿಕ್ಷಣ ಪಡೆದು ಶಿಕ್ಷಕರಾಗಲು ಹೊರಟವರಿಗೆ ಅರ್ಹತಾ ಪರೀಕ್ಷೆ ನಡೆಸಿದರೆ ಸಾಕಷ್ಟು ಮಂದಿ ಉತ್ತೀರ್ಣರಾಗುವಲ್ಲೂ ವಿಫಲರಾಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ತಪ್ಪಿಲ್ಲದೆ ಮತ್ತು ಕ್ರಮಬದ್ಧವಾಗಿ ಅರ್ಜಿ ಬರೆಯುವುದಕ್ಕೂ ಬಾರದಂಥ ಪ್ರಶಿಕ್ಷಕರು ಬಹಳಷ್ಟು ಕಡೆಗಳಲ್ಲಿ ಇರುವುದು ದುರದೃಷ್ಟಕರ. ಇಂಥವರನ್ನೇ ಪ್ರಮಾಣಪತ್ರಗಳ ಆಧಾರದ ಮೇಲೆ ರಾಜ್ಯದ ಸಾಕಷ್ಟು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನಾಗಿ ನಿಯೋಜಿಸಿ ಮಕ್ಕಳಿಗೆ ಬೋಽಧಿಸ ಲಾಗುತ್ತಿದೆ. ಇಂಥ ಪರಿಪಾಠ ದಿಂದ ಗುಣಮಟ್ಟದ ಶಿಕ್ಷಣ ದಕ್ಕುವುದು ಸಾಧ್ಯವೇ? ಹೀಗಾದಲ್ಲಿ ಮಾತೃಭಾಷೆ ಉಳಿದೀತೇ? ಇದರ ಕೆಟ್ಟ ಪರಿಣಾಮವು ಸಮಾಜದ ಹಲವು ರಂಗಗಳ ಮೇಲೂ ಆಗುತ್ತಿರುವುದನ್ನು ತಳ್ಳಿ ಹಾಕ ಲಾಗದು.

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಮಾತೃಭಾಷೆಯನ್ನು ಸಮರ್ಥವಾಗಿ ಕಲಿಸಿದರೆ ಮಾತ್ರವೇ ಅವರು ಉಳಿದ ಭಾಷೆ ಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯ. ಕಾರಣ, ಬುನಾದಿ ಭದ್ರವಾಗಿದ್ದರೆ ಮಾತ್ರವೇ ಕಟ್ಟಡವು ದೀರ್ಘಾ ವಧಿಯವರೆಗೆ ನಿಲ್ಲುತ್ತದೆ. ಹಾಗೆಯೇ ಮಗುವಿಗೆ ಬುನಾದಿ ಶಿಕ್ಷಣವು (1ರಿಂದ 5ನೇ ತರಗತಿವರೆಗೆ) ಮಾತೃಭಾಷೆ ಯಲ್ಲೇ ಸಿಗಬೇಕು. ಆಗ ಮಾತ್ರವೇ ಮಕ್ಕಳಲ್ಲಿ ಮಾತೃಭಾಷೆಯ ಬಗೆಗಿನ ಸಮರ್ಥ ಅರಿವು, ಅಭಿಮಾನ, ಸ್ವಾಭಿಮಾನ ಮೂಡಿ ಬೆಳೆಯುತ್ತವೆ. ನಮ್ಮ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಳಲ್ಲಿ ಅಲ್ಲಿನ ಮಾತೃಭಾಷೆಯ ಕಲಿಕೆಗೆ ಸರಕಾರದಿಂದ ಸಹಾಯ, ಅನುದಾನ ಮತ್ತು ಉತ್ತೇಜನ ಆರಂಭದಿಂದಲೇ ದೊರೆಯುತ್ತಿದೆ. ನಮ್ಮಲ್ಲೂ ಈ ಮಾದರಿಯ ಅನುಸರಣೆ ಆಗಬೇಕಲ್ಲವೇ? ಆಳುಗ ಸರಕಾರದ ತಪ್ಪು ನಿರ್ಧಾರ ಗಳನ್ನು ಎತ್ತಿ ತೋರಿಸಲು ಸಮರ್ಥವಾದ ವಿರೋಧ ಪಕ್ಷ ಇರಬೇಕಾಗುತ್ತದೆ.

ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳಿಗೆ ಸಂಬಂಧಿಸಿದ ಇಂಥ ನಿರ್ಧಾರಗಳಿಗೂ ಈ ಮಾತು ಅನ್ವಯ. 2014ರಲ್ಲಿ ಕನ್ನಡ ಮಾಧ್ಯಮದ ಅನೇಕ ಶಾಲೆಗಳಿಗಿದ್ದ ಅನುಮತಿಗಳನ್ನು ವಾಪಸ್ ಪಡೆದು, ಅವುಗಳ ಬದಲಾಗಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡುವ ಮೂಲಕ ಮಾತೃಭಾಷಾ ಶಿಕ್ಷಣಕ್ಕೆ ಕೊಳ್ಳಿ ಇಡಲಾಯಿತು. ಸರಕಾರದ ಈ
ತಪ್ಪು ನಿರ್ಧಾರವನ್ನು ಕನ್ನಡ ಪರ ಸಂಘಟನೆಗಳು ವಿರೋಧಿಸಿದ್ದು ಕಮ್ಮಿ ಎನ್ನಬೇಕು. ಈಗ ಸರಕಾರಿ ಶಾಲೆ ಗಳಲ್ಲಿಯೂ ‘ಕರ್ನಾಟಕ ಪಬ್ಲಿಕ್ ಶಾಲೆ’ ಎಂಬ ಹೆಸರಿನಲ್ಲಿ ಆಂಗ್ಲಮಾಧ್ಯಮದ ಶಾಲೆಗಳನ್ನು ತೆರೆಯ ಲಾಗುತ್ತಿದೆ. ಹೀಗಾದರೆ ನಮ್ಮ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳು ಉಳಿಯಲು ಸಾಧ್ಯವೇ? ‘ತಾಯಿಯ ಮೊಲೆಹಾಲೇ ವಿಷವಾಗಿ ಕೊಂದರೆ ಇನ್ನಾರಿಗೆ ದೂರಲಿ?’ ಎಂಬರ್ಥದಲ್ಲಿ ಬಸವಣ್ಣನವರು ತಮ್ಮ ವಚನ ವೊಂದರಲ್ಲಿ ಪ್ರಶ್ನಿಸಿ ದ್ದಾರೆ. ಈಗ ಕರ್ನಾಟಕದಲ್ಲಿ ಅಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ? ಈ ದುಸ್ಥಿತಿ ಯನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಆಸಕ್ತಿ ತೋರಲಿ.

(ಲೇಖಕರು ಹವ್ಯಾಸಿ ಬರಹಗಾರರು)