Thursday, 19th September 2024

Shikhar Dhawan: ನಿವೃತ್ತಿಯಾದರೂ 360 ಡಿಗ್ರಿಯಲ್ಲಿ ಬ್ಯಾಟ್‌ ಬೀಸಿದ ಶಿಖರ್ ಧವನ್

Shikhar Dhawan

ಮುಂಬಯಿ: ಟೀಮ್‌ ಇಂಡಿಯಾ ಕಂಡ ಟ್ಯಾಲೆಂಟೆಡ್‌ ಎಡಗೈ ಬ್ಯಾಟರ್‌ ಶಿಖರ್‌ ಧವನ್‌ (Shikhar Dhawan) ಅವರು ಇತ್ತೀಗೆಚೆ ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ಧವನ್‌ ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಟೂರ್ನಿಗೆ(Legends League Cricket) ಅಭ್ಯಾಸ ಆರಂಭಿಸಿದ್ದಾರೆ. ನೆಟ್ಸ್‌ನಲ್ಲಿ ಬ್ಯಾಟಿಂಗ್‌ ನಡೆಸುತ್ತಿರುವ ಫೋಟೊ ಮತ್ತು ವಿಡಿಯೊ ವೈರಲ್‌ ಆಗಿದೆ.

ಸೆಪ್ಟೆಂಬರ್ 20 ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ವಿಶ್ವ ಕ್ರಿಕೆಟ್‌ನ ಅನೇಕ ದಿಗ್ಗಜ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಜಹೀರ್ ಖಾನ್ ಸೇರಿದಂತೆ ಹಲವು ಟೀಮ್ ಇಂಡಿಯಾ ಆಟಗಾರರನ್ನು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದೀಗ ಧವನ್‌ ಕೂಡ ಸೇರ್ಪಡೆಗೊಂಡಿದ್ದಾರೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಕೂಡ ಧವನ್‌ ಐಪಿಎಲ್‌ನಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ. ಪ್ರಸ್ತುತ ಅವರು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದಾರೆ. ಈ ಬಾರಿ ನಡೆಯುವ ಮೆಗಾ ಹರಾಜಿನಲ್ಲಿ ಅವರು ಯಾವ ತಂಡದ ಪಾಲಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಧವನ್ ನೆಟ್ಸ್‌ನಲ್ಲಿ 360 ಡಿಗ್ರಿಯಲ್ಲಿ, ರಿವರ್ಸ್ ಶಾಟ್ ಹೀಗೆ ಹಲವು ಕ್ರಿಕೆಟ್‌ ಶಾಟ್‌ಗಳನ್ನು ಹೊಡೆದು ಮಿಂಚಿದರು. ಧವನ್‌ ಬ್ಯಾಟಿಂಗ್‌ ಕಂಡು ಅವರ ಅಭಿಮಾನಿಗಳು ಕೂಡ ಸಂತಸಗೊಂಡಿದ್ದಾರೆ. ಗಬ್ಬರ್‌ ಈಸ್‌ ಬ್ಯಾಕ್‌ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ Barinder Sran: ಪದಾರ್ಪಣ ಪಂದ್ಯದಲ್ಲೇ 10 ರನ್‌ಗೆ 4 ವಿಕೆಟ್‌ ಕಿತ್ತ ಟೀಮ್‌ ಇಂಡಿಯಾ ವೇಗಿ ಕ್ರಿಕೆಟ್‌ಗೆ ವಿದಾಯ

ಶಿಖರ್​ ಧವನ್​ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್​ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್​ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್​ 68 ಪಂದ್ಯ ಆಡಿ 1759 ರನ್​ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ. ಶಿಖರ್‌ ಧವನ್‌ ಅವರು 2022ರಲ್ಲಿ ಬಾಂಗ್ಲಾದೇಶ ವಿರುದ್ದ ಕೊನೆಯದಾಗಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.