Sunday, 10th November 2024

Vishwavani Editorial: ಏಕಕಾಲದ ಚುನಾವಣೆ ಸವಾಲಿನ ಕೆಲಸ

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ಚುನಾವಣೆ ನಡೆಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ (Ex President Ramnath Kovind led Committee) ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮೋದಿ ಸರಕಾರ ಸ್ವೀಕರಿಸಿದೆ.

ಈ ಪ್ರಸ್ತಾಪ ಸಂಸತ್ತಿನ ಅನುಮೋದನೆ ಪಡೆದು ಜಾರಿಗೆ ಬಂದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಚುನಾವಣಾ ಪ್ರಕ್ರಿಯೆ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ.

ಮುಂದಿನ ಅಧಿವೇಶನದಲ್ಲಿಯೇ ಈ ಸಂಬಂಧ ವಿಧೇಯಕ ಮಂಡಿಸುವುದಾಗಿ ಗೃಹಸಚಿವ ಅಮಿತ್ ಶಾ(AMit shah) ತಿಳಿಸಿದ್ದಾರೆ. ಆದರೆ ಇದು ಕೇವಲ ಪ್ರಚಾರ ಗಿಮಿಕ್ ಆಗಿದ್ದು, ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಸರಕಾರ ಇದನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ‘ಇಂಡಿಯ’ ಒಕ್ಕೂಟದ ಪ್ರತಿಪಕ್ಷ ನಾಯಕರ ವಾದ. ಏಕಕಾಲದ ಚುನಾವಣೆ ಭಾರತಕ್ಕೆ ಹೊಸದೇನೂ ಅಲ್ಲ. ಸ್ವಾತಂತ್ರ್ಯಾನಂತರ 1952ರಲ್ಲಿ ದೇಶದಲ್ಲಿ ನಡೆದ ಮೊದಲ ಚುನಾವಣೆ ಯಿಂದ ಹಿಡಿದು 1967ರ ಚುನಾವಣೆಯ ತನಕವೂ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು.

ಆದರೆ ಸ್ವಾತಂತ್ರ್ಯೋತ್ತರ ದಿನಗಳ ಅಂದಿನ ಆದರ್ಶ ಇಂದಿಲ್ಲ. ಇಂದು ಗ್ರಾಮ ಪಂಚಾಯಿತಿ ಚುನಾವಣೆಗೂ ಅಭ್ಯರ್ಥಿಗಳು ಲಕ್ಷಾಂತರ ರು. ವ್ಯಯಿಸುವ ಸನ್ನಿವೇಶವಿದೆ. 4 ತಿಂಗಳ ಹಿಂದಷ್ಟೇ ನಡೆದ ಲೋಕಸಭೆ ಚುನಾವಣೆಗೆ ಬರೋಬ್ಬರಿ 1.35 ಲಕ್ಷ ಕೋಟಿ ರು ವ್ಯಯಿಸಲಾಗಿದೆ. ಇನ್ನು ಎಲ್ಲ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಖರ್ಚನ್ನು ಲೆಕ್ಕಹಾಕಿದರೆ ನಮ್ಮ ಒಂದು ವರ್ಷದ ಕೇಂದ್ರ ಬಜೆಟ್ ಮೊತ್ತವನ್ನು ಮೀರುವುದು ಖಚಿತ. ಅಂದರೆ 5 ವರ್ಷಗಳ ಅವಧಿಗೆ ಜನಪ್ರತಿನಿಧಿಗಳನ್ನು ಆರಿಸಲು ಸಂಪನ್ಮೂಲದ ಬಹು ಭಾಗ ವ್ಯಯವಾಗುತ್ತಿದೆ. ಆದರೆ 150 ಕೋಟಿ ಜನಸಂಖ್ಯೆಯ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು, ಇದಕ್ಕೆ ಅಗತ್ಯವಿರುವ ಮತಯಂತ್ರಗಳು, ಭದ್ರತೆ, ಚುನಾವಣೆ ಉಸ್ತುವಾರಿ ಸಿಬ್ಬಂದಿ ಯನ್ನು ಒದಗಿಸುವುದು ಸುಲಭದ ಕೆಲಸವಲ್ಲ.

ಮುಖ್ಯವಾಗಿ ಸಂಸತ್ತಿನಲ್ಲಿ ಈ ವಿಧೇಯಕ ಅಂಗೀಕಾರಗೊಳ್ಳಬೇಕಾದರೆ 365ನೇ ವಿಧಿ ಸೇರಿ ಕನಿಷ್ಠ 5 ಸಂವಿಧಾನ
ತಿದ್ದುಪಡಿ ಪ್ರಸ್ತಾವಗಳಿಗೆ ಸಂಸತ್ತಿನ ಒಪ್ಪಿಗೆ ಅಗತ್ಯ. ಮೋದಿ ಸರಕಾರಕ್ಕೆ ಇದು ಸಾಧ್ಯವಾಗಲಿದೆಯೇ ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ: One Nation One Election: ʼಒಂದು ರಾಷ್ಟ್ರ ಒಂದು ಚುನಾವಣೆʼ ಪ್ರಸ್ತಾವನೆಯ ಮುಂದಿದೆ ಹಲವು ಸವಾಲು!