Friday, 20th September 2024

Vishwavani Club House: ವಿಶ್ವವಾಣಿ ಕ್ಲಬ್‌ʼಹೌಸ್‌ ಈ ಕಾಲದ ಅನುಭವ ಮಂಟಪ

ಕಳೆಗಟ್ಟಿದ ಸಾವಿರದ ಸಂಭ್ರಮದ ಒಮ್ಮತದ ದನಿ

ಕೇಳುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಿದೆ: ವಿಶ್ವೇಶ್ವರ ಭಟ್ ಅಭಿಮತ

ಕ್ಲಬ್‌ ಹೌಸ್‌ ಸಂವಾದ- 1000

ಬೆಂಗಳೂರು: ವಿಶ್ವವಾಣಿ ಕ್ಲಬ್ ಹೌಸ್ ಒಂದು ರೀತಿಯ ಅನುಭವ ಮಂಟಪ. ಶರಣ ಚಳವಳಿಯ ಕಾಲದ ಅನುಭವ ಮಂಟಪದ ಬಗ್ಗೆ ನಾವು ಕೇಳಿದ್ದೇವೆ. ವಿಶ್ವವಾಣಿ ಕ್ಲಬ್‌ಹೌಸ್ ಕೂಡ ಅದೇ ರೀತಿ ಆಧುನಿಕ ಕಾಲದ ಮಾತಿನ ಮಂಟಪವಾಗಿ ಹೊರ ಹೊಮ್ಮಿದೆ.

ಇಂದು ಇದರ ಮೂಲಕ ಕೇಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ ಎಂಬುದು ಈ ಕ್ಲಬ್‌ಹೌಸ್‌ನ ಪ್ರವರ್ತಕ, ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಮಾತು. ಗುರುವಾರ ನಡೆದ ವಿಶ್ವವಾಣಿ ಕ್ಲಬ್‌ಹೌಸ್‌ನ ಸಹಸ್ರ ಎಪಿಸೋಡ್‌ಗಳ ಸಂಭ್ರಮದಲ್ಲಿ ಅವರು ಈ ಕ್ಲಬ್‌ಹೌಸ್ ಸಾಂಗತ್ಯ ಸಾಗಿಬಂದ ದಾರಿಯನ್ನು ಬಿಚ್ಚಿಟ್ಟರು. ಸಾವಿರ ಎಪಿಸೋಡ್‌ಗ ಳಲ್ಲಿ ಚರ್ಚೆಯಾಗದೇ ಇರುವ ವಿಷಯಗಳೇ ಇಲ್ಲ. ಇಂದು ನೋಡಿದರೆ ಇಷ್ಟೆಲ್ಲ ವಿಷಯಗಳನ್ನು ನಾವು ಕವರ್ ಮಾಡಿದೆವಾ ಎಂದು ಆಶ್ಚರ್ಯವಾಗುತ್ತದೆ. ಇಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆ, ವಿಚಾರ ವಿನಿಮಯ, ಸಂವಾದ ಆಗಿವೆ. ಜ್ಞಾನ ವಿನಿಮಯ ಆಗಿದೆ. ಅನುಭವ ಮಂಟಪ ಇಲ್ಲಿ ಸಾಕ್ಷಾತ್ಕಾರವಾಗಿದೆ ಎಂದರು.

ಶ್ರವಣಶಕ್ತಿಗೆ ವಿಶೇಷ ಹೊಳಪು: ಕೋವಿಡ್ ಕಾಲದಲ್ಲಿ ಸಕ್ರಿಯವಾಗಿ ಆರಂಭಗೊಂಡ ಕ್ಲಬ್‌ಗಳು ನಿಧಾನವಾಗಿ ನಿಷ್ಕ್ರಿಯಗೊಂಡವು. ಆಗ ನಾನು ಅವುಗಳನ್ನು ಉಳಿಸಿಕೊಳ್ಳಲು ಕೇಳಿಕೊಳ್ಳುತ್ತಿದ್ದೆ. ಯಾಕೆಂದರೆ ನಾವು ಕೇಳಿಸಿ ಕೊಳ್ಳುವುದನ್ನು ಹೆಚ್ಚು ಮಾಡಬೇಕಿದೆ. ಇದನ್ನು ಕ್ಲಬ್‌ಹೌಸ್ ಸಾಧ್ಯ ಮಾಡಿತ್ತು. ಇಂದು ರೀಲ್ಸ್ ಯುಗ. ಅವುಗಳನ್ನು ನೋಡ್ತಾ ಇದ್ದರೆ ಅಂತಿಮವಾಗಿ ನಮಗೆ ಏನೂ ಸಿಗುವುದಿಲ್ಲ. ಆ ಸಮಯ ನಿರ್ಥಕವಾಗುತ್ತದೆ.

ರೀಲ್ಸ್ ನಮ್ಮ ಓದುವ, ಕೇಳುವ‌ ಆಸಕ್ತಿಯನ್ನು ಕೊಲ್ಲುತ್ತಿದೆ. ಟಿವಿ, ಯುಟ್ಯೂಬ್ ನೋಡಲು ಏನೂ ಶ್ರಮ ಬೇಕಿಲ್ಲ. ಕೇಳಲು ಭಾಷೆ, ವಾಕ್ಯ ಗೊತ್ತಿರಬೇಕು. ಒಂದು ವಾಕ್ಯ ಬಿಟ್ಟುಹೋದರೆ ಮುಂದಿನದು ಅರ್ಥವಾಗುವುದಿಲ್ಲ. ಕ್ಲಬ್‌ ಹೌಸ್ ಶ್ರವಣಶಕ್ತಿಗೆ ವಿಶೇಷ ಹೊಳಪನ್ನು ತಂದುಕೊಟ್ಟಿತು ಎಂದು ವಿಶ್ವೇಶ್ವರ ಭಟ್ ಗುರುತಿಸಿದರು.

ಅಸಂಖ್ಯ ಜನರಿಗೆ ಜ್ಞಾನ ಹಂಚಿಕೆ: ಸಾವಿರ ಕ್ಲಬ್‌ಹೌಸ್ ಎಪಿಸೋಡ್‌ಗಳನ್ನು ನಡೆಸಿಕೊಡುತ್ತಾ ನಾನೂ ಬದಲಾಗಿದ್ದೇನೆ. ಒಂದು ಬಗೆಯ ಮಾಗಿದ ಮನಸ್ಥಿತಿ ನನ್ನದಾಗಿದೆ. ಇದರಿಂದ ತುಂಬಾ ಜನರ ಸಾಂಗತ್ಯ ದೊರೆತಿದೆ. ಸಾವಿರಾರು ಮಂದಿಯ ಜ್ಞಾನವನ್ನು ಹಂಚಿಕೊಳ್ಳುವ ಭಾಗ್ಯ ನಮ್ಮದಾಗಿದೆ. ಇಂದು ನಾನೂ ಬೆಳೆದಿದ್ದೇನೆ. ಯಾವುದೇ ಕ್ಷಣದಲ್ಲಿ ಯಾವುದೇ ವಿಷಯ ನೀಡಿದರೂ ಮಾತನಾಡುವ, ಕಾರ್ಯಕ್ರಮವನ್ನು ಯಾವುದೇ ಎಡವ ಟ್ಟಿಲ್ಲದೆ ನಿರ್ವಹಿಸುವ ಛಲ ಹಾಗೂ ಸಾಮರ್ಥ್ಯವನ್ನು ಇದು ನೀಡಿದೆ ಎಂದು ಲೇಖಕಿ, ನಿರೂಪಕಿ ರೂಪಾ
ಗುರುರಾಜ್ ಹೇಳಿದರು.

ಎತ್ತರಕ್ಕೆ ಬೆಳೆದಿದೆ: ವಿಶ್ವವಾಣಿ ಕ್ಲಬ್‌ಹೌಸ್ ಎಲ್ಲ ಬಗೆಯ ಕೇಳುಗರಲ್ಲಿ ಮಾತನಾಡುವ ಉತ್ಸಾಹ, ಸಾಮರ್ಥ್ಯ ವನ್ನು ತುಂಬಿದೆ. ಇದು ಒಂದು ದೊಡ್ಡ ಸಾಧನೆ. ಸಣ್ಣದಾಗಿ ಆರಂಭವಾದ ಈ ಕ್ಲಬ್ ಇಂದು ಸಾವಿರದ ಎತ್ತರಕ್ಕೆ ಬೆಳೆದು ನಿಂತಿದೆ. ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮಗಳನ್ನು ಕೊಟ್ಟಿದೆ ಎಂದು ನಂಜನ ಗೂಡು ಮೋಹನ್ ಹೇಳಿದರು. ನಟಿ ಜಯಮಾಲ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬಂದು ಮಾತನಾಡಿದ ಗಣ್ಯರನ್ನು ಸ್ಮರಿಸಿಕೊಂಡು, ಅವರಿಂದ ಪಡೆದ ತಿಳಿವಳಿಕೆ ಹಾಗೂ ಇದನ್ನು ನಡೆಸಿಕೊಂಡು ಬಂದವರ ಕರ್ತೃತ್ವ ಶಕ್ತಿ, ಸ್ಪೂರ್ತಿ ಗಳನ್ನು ಸ್ಮರಿಸಿಕೊಂಡರು.

ಛಲಬಿಡದ ತ್ರಿವಿಕ್ರಮ: ಕರೋನಾ ನಂತರ ತುಂಬಾ ಮಂದಿ ಕ್ಲಬ್‌ಹೌಸ್‌ನಲ್ಲಿ ಆಸಕ್ತಿ ಕಳೆದುಕೊಂಡರು. ಆದರೆ ವಿಶ್ವವಾಣಿ ಛಲಬಿಡದ ತ್ರಿವಿಕ್ರಮನಂತೆ ಬೆನ್ನಟ್ಟಿ ಹೋಗಿ ಸಾವಿರ ಎಪಿಸೋಡ್ ಸಾಧಿಸಿರುವುದು ದೊಡ್ಡ ಸಾಧನೆ ಯೇ ಸರಿ. ಇಷ್ಟು ದಿನ, ಇಷ್ಟು ಮಂದಿ ಆಸಕ್ತಿ ಇರುವ ಕೇಳುಗರನ್ನು ಉಳಿಸಿಕೊಂಡಿರುವುದು ಬಹಳ ಕಷ್ಟದ ಸಾಧನೆ. ರೀಲ್ಸ, ಟಿವಿ ಎಲ್ಲ ಇತರ ಆಮಿಷ, ಅಡೆತಡೆಗಳ ನಡುವೆ ಇಷ್ಟು ಕೇಳುಗರನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ಸಾಧನೆ ಎಂದು ಕತೆಗಾರ, ಪತ್ರಕರ್ತ ಜೋಗಿ ಅಭಿನಂದಿಸಿದರು.

ಸಿಎಂ ಎಪಿಸೋಡ್ ಹೃದಯಸ್ಪರ್ಶಿ
ವಿಶ್ವವಾಣಿ ಕ್ಲಬ್‌ಹೌಸ್‌ಆರಂಭದ ನೂರು ಕಾರ್ಯಕ್ರಮಗಳು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂಥವು. ಆ ಸಂದರ್ಭದಲ್ಲಿ ಒಂದು ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಲಾಗಿತ್ತು. ಅವರು ಸಂಜೆ ಏಳು ಗಂಟೆಗೆ ಬಂದು ಹನ್ನೊಂದು ಗಂಟೆಯವರೆಗೆ ಸತತ ನಾಲ್ಕು ಗಂಟೆ ಮಾತನಾಡಿದರು. ಅವರ ಬಾಳಿನ ಎಲ್ಲ ಕತೆಯನ್ನೂ
ಬಿಚ್ಚಿಟ್ಟರು. ಅದನ್ನು ದಾಖಲಿಸಿದರೆ ಒಂದು ಹೃದಯಸ್ಪರ್ಶಿ ಪುಸ್ತಕ ಆಗುತ್ತದೆ. ಅದು ವಿಶ್ವವಾಣಿ ಇತಿಹಾಸದ ಅತಿ ದೀರ್ಘಕಾಲದ ಎಪಿಸೋಡ್ ಎಂದು ವಿಶ್ವೇಶ್ವರ ಭಟ್ ಗುರುತಿಸಿದರು.

ಕೇಳುಗರ ಪ್ರೋತ್ಸಾಹ ಹಿರಿದು
ಈ ಕ್ಲಬ್‌ಹೌಸ್ ಎಪಿಸೋಡ್‌ಗಳು ಸಾವಿರ ಕಂತು ಕಾಣುವಲ್ಲಿ ನೆರವು ನೀಡಿದ ರೂಪಾ ಗುರುರಾಜ, ಕಿರಣ್ ಉಪಾ ಧ್ಯಾಯ, ಶಿರ್ಸಿ ಹೆಗ್ಡೆ ಹಾಗೂ ನಂಜನಗೂಡು ಮೋಹನ್ ಅವರ ಕೊಡುಗೆಯನ್ನು ಭಟ್ ಸ್ಮರಿಸಿಕೊಂಡರು. ಈ ಕ್ಲಬ್‌ಗೆ ಕೇಳುಗರಿಂದ ಸಿಕ್ಕ ಪ್ರೋತ್ಸಾಹ ದೊಡ್ಡದು. ರಾಜ್ಯದಿಂದ ಹಿಡಿದು ವಿದೇಶಗಳವರೆಗೆ ನಮ್ಮ ಕೇಳುಗರು ಹಬ್ಬಿ ದ್ದಾರೆ. ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಒಬ್ಬರು ಅವರ ಅನುಭವ ಹಂಚಿಕೊಂಡರು.
ಕರ್ನಾಟಕದ ಅವರು ಲಂಡನ್‌ನಲ್ಲಿದ್ದು, ಹಿಂದಿನ ದಿನದ ವಿಶ್ವವಾಣಿ ಕ್ಲಬ್‌ಹೌಸ್ ಎಪಿಸೋಡ್‌ನ ರಿಪ್ಲೇ ಕೇಳುತ್ತಾ ರಂತೆ. ಆಗ ನನ್ನ ಊರಿನಲ್ಲಿ ಇದ್ದ ಭಾವನೆ ಬರುತ್ತದೆ ಎಂದು ಹಂಚಿಕೊಂಡರು ಎಂದರು.

ಅಗಲಿದ ಗಣ್ಯರಿಗೆ ನಮನ
ವಿಶ್ವವಾಣಿ ಕ್ಲಬ್‌ಹೌಸ್‌ನ ಎಪಿಸೋಡ್‌ಗಳಲ್ಲಿ ಭಾಗವಹಿಸಿ, ಈಗ ಅಗಲಿರುವ ಅಪರ್ಣಾ ವಸ್ತಾರೆ, ಕೆ.ಸಿ.ರಘು, ಭುಜಂಗ ಶೆಟ್ಟಿ ಮುಂತಾದ ಗಣ್ಯರು, ಸಂಪನ್ಮೂಲ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೂಪಾ ಗುರುರಾಜ, ಕಿರಣ್ ಉಪಾಧ್ಯಾಯ, ಶಿರ್ಸಿ ಹೆಗ್ಡೆ ಕಾರ್ಯಕ್ರಮ ನಡೆಸಿಕೊಟ್ಟರು. ಮೇರ್ಜ ಗಣಪತಿ, ಕ್ಯಾಪ್ಟನ್ ಸುದರ್ಶನ್ ಮುಂತಾದ ವರು ಮಾತನಾಡಿದರು.

ಕ್ಲಬ್ ಹೌಸ್‌ನಲ್ಲಿ ಚರ್ಚೆಯಾಗದ ವಿಷಯಗಳೇ ಇಲ್ಲ ನಿರಂತರ ಚರ್ಚೆ, ವಿಚಾರ, ಜ್ಞಾನ ವಿನಿಮಯ ಕರೋನಾ ವೇಳೆ ಇತರ ಕ್ಲಬ್‌ಹೌಸ್‌ಗಳು ನಿಷ್ಕ್ರಿಯಗೊಂಡರೂ ವಿಶ್ವವಾಣಿ ಕ್ಲಬ್ ಸಕ್ರಿಯ ರೀಲ್ಸ್ ಯುಗ ಕೇಳುಗರ ಆಸಕ್ತಿಗೆ ಮಾರಕ ಶ್ರವಣಶಕ್ತಿಗೆ ಕ್ಲಬ್‌ಹೌಸ್‌ನಿಂದ ವಿಶೇಷ ಶಕ್ತಿ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದಗಳಲ್ಲಿ ಪಾಲ್ಗೊಂಡ ಗಣ್ಯರಿಂದ ಗುಣಗಾನ ಶ್ರೋತೃಗಳ ಮನಮುಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಪಿಸೋಡ್ ಇದೊಂದು ಸಾವು ಇರದ ಕಾರ್ಯಕ್ರಮ. ವಿಶ್ವೇಶ್ವರ ಭಟ್ ಅವರು ಇದಕ್ಕಾಗಿ ತಮ್ಮ ಸಮಯ, ಇಡೀ ದಿನದ ಕಾರ್ಯಕ್ರಮ ಗಳನ್ನು ಇದಕ್ಕಾಗಿ ಶೆಡ್ಯೂಲ್ ಮಾಡುವ ರೀತಿ ಇದನ್ನೆಲ್ಲ ಕಂಡು ಬೆರಗಾಗಿದ್ದೇನೆ. ಇದರ ಅನೇಕ ಹಳೆಯ ಎಪಿಸೋಡ್‌ಗಳು ಜ್ಞಾನದ ಖನಿಗಳಾಗಿವೆ.

-ರವಿಹೆಗಡೆ, ಕನ್ನಡಪ್ರಭ ಸಂಪಾದಕ

ಸದ್ಗುರು ಜಗ್ಗಿ ವಾಸುದೇವ್ ಅವರು ಬಂದಾಗ ಕ್ಲಬ್‌ಹೌಸ್ ಕೇಳುಗರ ಮಿತಿಮೀರಿತ್ತು. ಅದು ಅತಿ ಕಡಿಮೆ ಹೊತ್ತು,
ಅಂದರೆ ಒಂದು ಗಂಟೆಗಿಂತ ಕಡಿಮೆ ಕಾಲ ನಡೆದ ಕಾರ್ಯಕ್ರಮ. ಸಾಹಿತಿ ಎಸ್.ಎಲ್.ಭೈರಪ್ಪ, ಸುಧಾಮೂರ್ತಿ ಅವರು ಬಂದಾಗಲೂ ಎರಡೂವರೆ, ಮೂರು ಗಂಟೆ ಮಾತುಕತೆ ನಡೆದಿತ್ತು.
ವಿಶ್ವೇಶ್ವರ ಭಟ್, ವಿಶ್ವವಾಣಿ ಪತ್ರಿಕೆ ಸಂಪಾದಕ

ಇದನ್ನೂ ಓದಿ: ಅಲ್ಲಿ ಒಂದು ಮರ ಕಡಿದಿದ್ದಕ್ಕೆ ಶಿಕ್ಷೆ, ಇಲ್ಲಿ ಸಾವಿರ ಕಡಿದರೂ ಕೇಳುವವರಿಲ್ಲ !