Sunday, 22nd September 2024

Rishabh Pant: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್‌

Rishabh Pant

ಮುಂಬಯಿ: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ(IPL 2025) ರಿಷಭ್​ ಪಂತ್(Rishabh Pant)​ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ತೊರೆದು ಚೆನ್ನೈ ಸೂಪರ್​ ಕಿಂಗ್ಸ್​ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆದಿತ್ತು. ಆದರೆ, ರಿಷಭ್‌ ಪಂತ್‌ ಅವರನ್ನು ಡೆಲ್ಲಿ ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ಐಪಿಎಲ್‌ನಲ್ಲಿ ಪಂತ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿಕೊಳ್ಳಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಬಿಸಿಸಿಐ ಇನ್ನೂ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದರೆ ರಿಷಭ್‌ ಪಂತ್‌, ಡೆಲ್ಲಿಯಲ್ಲೇ ಉಳಿಯುವ ಆಟಗಾರರ ಯಾದಿಯ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪಂತ್‌ ಸದ್ಯ ಪ್ರಚಂಡ ಪಾರ್ಮ್‌ನಲ್ಲಿದ್ದಾರೆ. ಬರೋಬ್ಬರಿ 20 ತಿಂಗಳ ಬಳಿಕ ಟೆಸ್ಟ್‌ಗೆ ಮರಳಿದ್ದ ಪಂತ್‌ ತಮ್ಮ ಹಿಂದಿನ ಶೈಲಿಯಲ್ಲೇ ಬ್ಯಾಟಿಂಗ್‌ ನಡೆಸಿ ಶತಕ ಬಾರಿಸಿ ಮಿಂಚಿದ್ದರು.

ಈ ಬಾರಿ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಆಟಗಾರರು ಮೂಲ ತಂಡವನ್ನು ತೊರೆದು ಬೇರೆ ತಂಡದ ಪರ ಆಡಲು ಬಯಸಿದರೆ ಇದಕ್ಕೆ ಫ್ರಾಂಚೈಸಿ ಕೂಡ ಒಪ್ಪಿಗೆ ನೀಡಬೇಕು ಎಂಬ ನಿಯಮ ಚಾಲ್ತಿಯಲ್ಲಿರುವ ಕಾರಣ ಕೆಲ ಆಟಗಾರರು ತಮ್ಮನ್ನು ಸಂಪರ್ಕಿಸಿದ ತಂಡ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Rishabh Pant: ಶತಕದ ಮೂಲಕ ಧೋನಿ ದಾಖಲೆ ಸರಿಗಟ್ಟಿದ ಪಂತ್‌

ಕೆಲ ಫ್ರಾಂಚೈಸಿಗಳು 6-8 ಆಟಗಾರರನ್ನೂ ರಿಟೇನ್​ ಮಾಡಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಐಪಿಎಲ್​ ಮತ್ತು ಬಿಸಿಸಿಐ ಕೇವಲ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ. ಒಂದೊಮ್ಮೆ 6-8 ಆಟಗಾರರ ರಿಟೇನ್​ಗೆ ಅವಕಾಶ ಕೊಟ್ಟರೆ ಸ್ಟಾರ್​ ಆಟಗಾರರು ಕೆಲ ಸೀಮಿತ ತಂಡದಲ್ಲಿಯೇ ಉಳಿದುಕೊಳ್ಳುತ್ತಾರೆ. ಹೀಗಾಗಿ 3 ರಿಟೇನ್​ಗೆ ಮಾತ್ರ ಅವಕಾಶ ಸಿಗಬಹುದು.

ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು. ಈ ಸಲವೂ ಮಧ್ಯಪ್ರಾಚ್ಯ ದೇಶದಲ್ಲೇ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ. ಗಲ್ಫ್​ ನಗರಗಳಾದ ದೋಹಾ, ಮಸ್ಕತ್​ ಅಥವಾ ಅಬುಧಾಬಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ.